ಬಜೆಟ್‍ನಲ್ಲಿ ಕೋಲಾರ ಜಿಲ್ಲೆಗೆ ವಿದರ್ಭ ಪ್ಯಾಕೇಜ್ ಬೇಕು, ರೈತ ವಿರೋದಿ ಕಾಯ್ದೆ ವಾಪಸ್ ಪಡೆಯಿರಿ, ಕೃಷಿ ಸಾಲ, ಬೆಂಬಲ ಬೆಲೆ ನೀಡಿ

ವರದಿ: ಶಬ್ಬೀರ್ ಅಹ್ಮದ್, ಶ್ರೀನಿವಾಸಪುರ

ಕೋಲಾರ,ಫೆ-25, ರಾಜ್ಯ ಬಜೆಟ್‍ನಲ್ಲಿ ಕೋಲಾರ ಜಿಲ್ಲೆಗೆ ವಿದರ್ಭ ಪ್ಯಾಕೇಜ್ ಘೋಷಣೆ ಮಾಡುವ ಜೊತೆಗೆ ರೈತ ವಿರೋದಿ ಎ.ಪಿ.ಎಂ.ಸಿ.ಕಾಯ್ದೆ ವಾಪಸ್ ಪಡೆದು ಕನಿಷ್ಠ ಬೆಂಬಲ ಬೆಲೆ ಕೃಷಿ ಸಾಲ ನೀತಿ ಬದಲಾವಣೆ ತರುವಂತೆ ರೈತ ಸಂಘದಿಂದ ತಾಲ್ಲೂಕು ಕಛೇರಿ ಮುಂದೆ ಉಚಿತ ತರಕಾರಿ ಹಂಚಿ ತಹಸೀಲ್ದಾರ್ ಮುಖಾಂತರ ಸರ್ಕಾರಕ್ಕೆ ಮನವಿ ನೀಡಿ ಆಗ್ರಹಿಸಲಾಯಿತು.
ಬಿ.ಜೆ.ಪಿ ಶಾಸಕರಿಲ್ಲದ ಕೋಲಾರ ಜಿಲ್ಲೆಯಲ್ಲಿ ರಾಜ್ಯ ಸರ್ಕಾರ ಸಂಪೂರ್ಣವಾಗಿ ನಿರ್ಲಕ್ಷ ಮಾಡುತ್ತಿದೆ. ಹತ್ತಾರು ವರ್ಷಗಳಿಂದ ಮಾರುಕಟ್ಟೆಯ ಜಾಗದ ಸಮಸ್ಯೆ ಬಗೆಹರಿಸಬೇಕು. ಹಾಗೂ ಕೆ.ಸಿ.ವ್ಯಾಲಿ ಮೂರನೇ ಹಂತದ ಶುದ್ದೀಕರಣ ಮತ್ತು ರೈತ ನಿದ್ದೆಗೆಡಿಸುತ್ತಿರುವ ನಕಲಿ ಬಿತ್ತನೆ ಬೀಜ, ಔಷಧಿ, ರಸಗೊಬ್ಬರಗಳ ಕಂಪನಿಗಳ ವಿರುದ್ದ ಕ್ರಮ ಕೈಗೊಳ್ಳಲು ಪ್ರಭಲ ಕಾನೂನು ಜಾರಿ ಮಾಡುವ ಜೊತೆಗೆ ಜ್ವಲಂತ ಸಮಸ್ಯೆಗಳಿಗೆ ಮುಕ್ತಿಕೊಡಿಸುವಲ್ಲಿ ರಾಜ್ಯ ಸರ್ಕಾರ ಬಜೆಟ್‍ನಲ್ಲಿ ಕೋಲಾರ ಜಿಲ್ಲೆಯನ್ನು ವಿಶೇಷ ಜಿಲ್ಲೆಯನ್ನಾಗಿ ಪರಿಗಣಿಸಿ ವಿದರ್ಭ ಪ್ಯಾಕೇಜ್ ನೀಡಬೇಕೆಂದು ರೈತ ಸಂಘದ ಮಹಿಳಾ ಜಿಲ್ಲಾಧ್ಯಕ್ಷೆ ಎ.ನಳಿನಿಗೌಡ ರಾಜ್ಯ ಸರ್ಕಾರವನ್ನು ಒತ್ತಾಯ ಮಾಡಿದರು.
ಕೊರೋನ ಸಂಕಷ್ಟದಲ್ಲಿ ರೈತರು ತೀವ್ರ ಸಂಕಷ್ಟ ಅನುಭವಿಸುತ್ತಿರುವ ಕಾರಣ ಕೃಷಿ ಜಮೀನುಳ್ಳ ಎಲ್ಲಾ ರೈತರಿಗೆ ಬರಿ ಪಹಣಿ ಮಾತ್ರ ಆಧರಿಸಿ ಕನಿಷ್ಠ 3 ಲಕ್ಷ ಆಧಾರ ರಹಿತ ಬಡ್ಡಿ ಇಲ್ಲದ ಸಾಲ ಕೊಡಿಸುವ ಯೋಜನೆ ಎಲ್ಲಾ ಬ್ಯಾಂಕ್‍ಗಳಲ್ಲಿ ಜಾರಿಯಾಗಬೇಕು. ವನ್ಯ ಜೀವಿ ಸಂರಕ್ಷಣೆ ಕಾಯ್ದೆ ತಿದ್ದುಪಡಿ ಮಾಡಲು ಕೇಂದ್ರ ಸರ್ಕಾರಕ್ಕೆ ಒತ್ತಾಯ ಮಾಡುವ ಜೊತೆಗೆ ಅಮೃತ ರೈತ ಉತ್ಪಾದಕ ಸಮಸ್ಯೆಗಳಲ್ಲಿ ಶೇಕಡ 50 ರಷ್ಟು ಮಹಿಳಾ ಸದಸ್ಯರಿಗೆ ಸದಸ್ಯತ್ವ ಮೀಸಲಿಟ್ಟು ವಿಶೇಷವಾಗಿ ಹೆಚ್ಚಿನ ಅನುದಾನ ನೀಡುವ ಮೂಲಕ ಮಹಿಳಾ ಸ್ವ-ಸಹಾಯ ಸಂಘಗಳಿಗೆ ಬಜೆಟ್‍ನಲ್ಲಿ ಆದ್ಯತೆ ನೀಡಬೇಕೆಂದು ಒತ್ತಾಯ ಮಾಡಿದರು.
ಜಿಲ್ಲಾಧ್ಯಕ್ಷ ಐತಂಡಹಳ್ಳಿ ಮಂಜುನಾಥ ಮಾತನಾಡಿ ಕೆರೆ, ಸರ್ಕಾರಿ ಶಾಲೆ, ಅಂಗನವಾಡಿ ಅಭಿವೃದ್ದಿಗೆ ಆಧ್ಯತೆ ನೀಡುವ ಜೊತೆಗೆ ಕೃಷಿ ತೊಟಗಾರಿಕೆ, ರೇಷ್ಮೆ ಇಲಾಖೆಗೆ ಹೆಚ್ಚಿನ ಅನುದಾನ ನೀಡಿ ಕೃಷಿ ಆದಾರಿತ ಹಾಗೂ ಮಾವು ಸಂಸ್ಕರಣ ಘಟಕಗಳಿಗೆ ಬಜೆಟ್‍ನಲ್ಲಿ ನೀಡಬೇಕು ಹಾಗೂ ಎಲ್ಲಾ ಕೃಷಿ ಉತ್ಪಾದನ ಬೆಳೆಗಳಿಗೆ ಬೆಳೆ ವಿಮೆ ಜಾರಿಯಾಗಬೇಕು. ಅತಿವೃಷ್ಟಿ ಪ್ರಕೃತಿ ವಿಕೋಪ ಬೆಳೆ ನಷ್ಟಕ್ಕೆ ವಿಮೆ ಪರಿಹಾರ ಸಂಪೂರ್ಣ ನಷ್ಟ ಸಿಗುವಂತಾಗಬೇಕು. ಕೃಷ್ಟಿ ಉತ್ಪನ್ನಗಳಿಗೆ ಎ.ಪಿ.ಸಿ.ಎಂ.ಸಿಯಲ್ಲಿ ಅಡಮಾನ ಸಾಲ ಯೊಜನೆ ಸದೃಡಗೊಳಿಸಬೇಕು. ರೈತರಿಗೆ ಅನುಕೂಲವಾಗುವ ಈ ಯೋಜನೆಗೆ ಹೆಚ್ಚು ಅನುದಾನವನ್ನು ಮೀಸಲಿಡಬೇಕು. ಕೃಷಿಗೆ ಬಳಿಸುವ ಕೀಟನಾಶಕ ರಸಗೊಬ್ಬರ ಹನಿನೀರಾವರಿ ಉಪಕರಣಗಳು ಟ್ರಾಕ್ಟರ್ ಬಿಡಿಬಾಗಗಳ ಮೇಲಿನ ಜಿ.ಎಸ್.ಟಿ ರದ್ದುಗೊಳಿಸಬೇಕೆಂದು ಒತ್ತಾಯ ಮಾಡಿದರು.
ಮನವಿ ಸ್ವೀಕರಿಸಿ ಮಾತನಾಡಿದ ತಹಸೀಲ್ದಾರ್ ರವರು ತಮ್ಮ ಮನವಿಯನ್ನು ಜಿಲ್ಲಾಧಿಕಾರಿಗಳ ಮುಖಾಂತರ ಸರ್ಕಾರಕ್ಕೆ ಕಳುಹಿಸುವ ಭರವಸೆಯನ್ನು ನೀಡಿದರು.
ಹೋರಾಟದಲ್ಲಿ ರಾಜ್ಯ ಉಪಾಧ್ಯಕ್ಷ ಕೆ.ನಾರಾಯಣಗೌಡ ಜಿಲ್ಲಾ ಸಂಚಾಲಕ ಕೆ.ಶ್ರೀನಿವಾಸಗೌಡ ಬಂಗವಾದಿ ನಾಗರಾಜಗೌಡ, ಶ್ರೀನಿವಾಸಪುರ ತಾಲ್ಲೂಕು ಅಧ್ಯಕ್ಷ ತೆರ್ನಹಳ್ಳಿ ಆಂಜಿನಪ್ಪ, ಮಾಲೂರು ತಾ.ಅ.ಪೆಮ್ಮದೊಡ್ಡಿ ಯಲ್ಲಮ್ಮ, ಹರೀಶ್, ಮರಗಲ್ ಮುನಿಯಪ್ಪ, ಜಿಲ್ಲಾ ಕಾರ್ಯಧ್ಯಕ್ಷ ವಕ್ಕಲೇರಿ ಹನುಮಯ್ಯ, ಮಂಗಸಂದ್ರ ತಿಮ್ಮಣ್ಣ, ಅಶ್ವತಪ್ಪ, ಯಾರಂಘಟ್ಟ ಗೀರೀಶ್, ಕೋಲಾರ ತಾಲ್ಲೂಕು ಅಧ್ಯಕ್ಷ ಈಕಂಬಳ್ಳಿ ಮಂಜುನಾಥ, ಮುಳಬಾಗಿಲು ತಾಲ್ಲೂಕು ಅಧ್ಯಕ್ಷ ಪ್ರಭಾಕರ್, ಹ.ಸೇ.ಜಿ.ಅ.ಕಿರಣ್, ಚಾಂದ್‍ಪಾಷ, ಮುನ್ನ, ಮುದುವಾಡಿ ಚಂದ್ರಪ್ಪ, ಮುಂತಾದವರು ಇದ್ದರು.