ವರದಿ: ಶಬ್ಬೀರ್ ಅಹ್ಮದ್, ಶ್ರೀನಿವಾಸಪುರ
ಕೆ.ಜಿ.ಎಫ್; ಆರ್ಥಿಕ ಹೊರೆ ನೆಪದಲ್ಲಿ ಕೆ.ಜಿ.ಎಪ್ ಜಿಲ್ಲಾ ಪೊಲೀಸ್ ಕಛೇರಿಯನ್ನು ವಿಜಯನಗರ ಜಿಲ್ಲೆಗೆ ವರ್ಗಾವಣೆ ಮಾಡುವ ಆದೇಶವನ್ನು ಕೂಡಲೇ ವಾಪಸ್ಸು ಪಡೆದು ಹದೆಗೆಡುವ ಕಾನೂನು ಸುವ್ಯವಸ್ಥೆಯನ್ನು ಕಾಪಾಡಬೇಕೆಂದು ರೈತ ಸಂಘದಿಂದ ಸೂರಜ್ಮಾಲ್ ಸರ್ಕಲ್ನಲ್ಲಿ ತಲೆಯ ಮೇಲೆ ಕಲ್ಲು ಇಟ್ಟುಕೊಂಡು ಹೋರಾಟ ಮಾಡಿ ಉಪ ತಹಸೀಲ್ದಾರ್ ಸುರೇಶ್ರವರ ಮುಖಾಂತರ ಮುಖ್ಯ ಮಂತ್ರಿಗಳಿಗೆ ಮನವಿ ನೀಡಿ ಆಗ್ರಹಿಸಲಾಯಿತು.
ಕೆ.ಜಿ.ಎಫ್ ಪೊಲೀಸ್ ಜಿಲ್ಲಾ ಕಚೇರಿಯ ಆದೇಶವನ್ನು ವಾಪಸ್ಸು ಪಡೆಯದೇ ಹೋದರೆ ಸಾವಿರಾರು ಟ್ರಾಕ್ಟರ್ ಜಾನುವಾರುಗಳೊಂದಿಗೆ ವಿಧಾನಸೌಧ ಮುತ್ತಿಗೆ ಹಾಕುವ ಎಚ್ಚರಿಕೆಯನ್ನು ರಾಜ್ಯ ಸರ್ಕಾರಕ್ಕೆ ಜಿಲ್ಲಾಧ್ಯಕ್ಷ ಐತಂಡಹಳ್ಳಿ ಮಂಜುನಾಥ ನೀಡಿದರು.
ಹೋರಾಟದಲ್ಲಿ ಭಾಗವಹಿಸಿ ಮಾತನಾಡಿದ ರವರು ನೂರು ವರ್ಷಗಳ ಇತಿಹಾಸ ಇರುವ ರಾಜ್ಯದಲ್ಲಿಯೇ ಪ್ರಥಮ ಸೂಪರಿಡೆಂಟ್ ಆಫ್ ಪೊಲೀಸ್ ಹುದ್ದೆಯನ್ನು ಸೃಷ್ಟಿ ಮಾಡಿರುವ ಕೆ.ಜಿ.ಎಫ್ ಜಿಲ್ಲಾ ಪೊಲೀಸ್ ಕಛೇರಿಯನ್ನು ನೂತನವಾಗಿ ನಿರ್ಮಾಣವಾಗಿರುವ ವಿಜಯನಗರ ಜಿಲ್ಲೆಗೆ ವರ್ಗಾವಣೆ ಮಾಡುವ ಆದೇಶದಿಂದ ಕೆ.ಜಿ.ಎಫ್, ಬಂಗಾರಪೇಟೆ ವ್ಯಾಪ್ತಿಯಲ್ಲಿ ಹೆಚ್ಚಿನ ಅಕ್ರಮವಗಳಿಗೆ ದಾರಿಯಾಗುವ ಜೊತೆಗೆ ಜನ ಸಾಮಾನ್ಯರ ನೆಮ್ಮದಿಯಿಂದ ಜೀವನ ಮಾಡಲು ಕಷ್ಟವಾಗುವ ಹಿನ್ನಲೆಯಲ್ಲಿ ವರ್ಗಾವಣೆ ಮಾಡುವ ಮುಂದಾಗಿರುವ ಸಕಾರದ ವಿರುದ್ದ ಆಕ್ರೋಷ ವ್ಯಕ್ತಪಡಿಸಿದರು.
ತಮಿಳುನಾಡಿ ಆಂಧ್ರ ಗಡಿಭಾಗಕ್ಕೆ ಹೊಂದಿಕೊಂಡಿರುವ ಕೆ.ಜಿ.ಎಫ್ ಪೊಲಿಸ್ ವರಿಷ್ಠಾದಿಕಾರಿಗಳ ಕಚೇರಿ ವರ್ಗಾವಣೆಯಾದರೆ ಅಪರಾದ ಪ್ರಕರಣಗಳು ಹಾಗೂ ಪುಡಿರೌಡಿಗಳ ಅಟ್ಟಹಾಸ ಮಾದಕ ವಸ್ತುಗಳ ಮಾರಾಟ ಜಾಲ ತನ್ನ ಹಳೆ ಬೇರನ್ನು ಬಿಟ್ಟುಕೊಡುವ ಮುಖಾಂತರ ಕಾನೂನು ಸುವ್ಯವಸ್ಥೆ ಹದೆಗೆಡುತ್ತದೆ. ಈ ಹಿನ್ನಲೆಯಲ್ಲಿ ತಜ್ಞರ ಸಲಹೆ ಪಡೆದು ಯಾವುದೇ ಕಾರಣಕ್ಕೂ ಇಲಾಖೆಯನ್ನು ವರ್ಗಾವಣೆ ಮಾಡಬಾರದೆಂದು ಸರ್ಕಾರಕ್ಕೆ ಕಿವಿ ಮಾತು ಹೇಳಿದರು.
ರೈತ ಸಂಘದ ರಾಜ್ಯ ಉಪಾಧ್ಯಕ್ಷ ಕೆ.ನಾರಾಯಣಗೌಡ ಮಾತನಾಡಿ ಜಿಲ್ಲೆಯ ಸಂಸದರಾದ ಮುನಿಶಾಮಿ ರವರು ಪೊಲೀಸ್ ಕೇಂದ್ರ ಕಛೇರಿ ವರ್ಗಾವಣೆ ಬಗ್ಗೆ ತುಟಿ ಬಿಚುತ್ತಿಲ್ಲ. ಆದರೆ ಸ್ಥಳೀಯ ಶಾಸಕರಾದ ರೂಪಶಶಿದರ ರವರು ಸರ್ಕಾರದ ಮೇಲೆ ಒತ್ತಡ ಹಾಕಿ ಯಾವುದೇ ಕಾರಣಕ್ಕೂ ಪೊಲೀಸ್ ಕೇಂದ್ರ ಕಛೇರಿ ವರ್ಗಾವಣೆಯಾಗಬಾರದು ವರ್ಗಾವಣೆಯಾದರೆ ಕಾನೂನು ಸುವ್ಯವಸ್ಥೆ ಹದಗೆಡುವ ಜೊತೆಗೆ ಈಗಾಗಲೇ 950 ಎಕರೆ ಕೈಗಾರಿಕ ಪ್ರದೇಶಕ್ಕೆ ಮೀಸಲಿಟ್ಟು ಬರುವ ಕೈಗಾರಿಕಾ ಉದ್ದಿಮೆಗಳಿಗೆ ರಕ್ಷಣೆಯ ಅವಶ್ಯಕತೆ ಇದೆ. ಅದರ ಜೊತೆಗೆ ಚಿನ್ನದ ಗಣಿ ಸಮಸ್ಯೆ ಇರುವುದರಿಂದ ಪೊಲೀಸ್ ಕಛೇರಿಯನ್ನು ಇಲ್ಲಿಯೇ ಉಳಿಸಬೇಕೆಂಬ ಉದ್ದೇಶ ಸರ್ಕಾರ ಕೈಗೊಂಡು ಜನ ಸಾಮಾನ್ಯರ ರಕ್ಷಣೆಗೆ ನಿಲ್ಲಬೇಕಾಗಿದೆ. ಪೊಲೀಸ್ ಕಛೇರಿಯನ್ನು ವರ್ಗಾವಣೆ ಮಾಡಿದರೆ ನೂರಾರು ಕುಟುಂಬಗಳ ಬದುಕು ಚಿದ್ರವಾಗುತ್ತದೆ. ವಯಸ್ಸಾದ ತಂದೆ-ತಾಯಿ ಮಕ್ಕಳ ವಿದ್ಯಾಭ್ಯಾಸಕ್ಕೆ ತೊಂದರೆಯಾಗುವುದರಿಂದ ಕಛೇರಿ ವರ್ಗಾವಣೆಗೆ ಪೊಲೀಸ್ ಸಿಬ್ಬಂದಿ ಕುಟುಂಬಸ್ಥರ ವಿರೋದವು ಇರುವುದರಿಂದ ಸರ್ಕಾರ ವರ್ಗಾವಣೆ ನಿರ್ಧಾರವನ್ನು ಕೈಬಿಡಬೇಕೆಂದು ಮನವಿ ಮಾಡಿದರು.
ಒಂದುವೇಳೆ ಸರ್ಕಾರ ಮಾನವೀಯತೆ ಕಳೆದುಕೊಂಡು ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿಗಳ ಕಛೇರಿಯನ್ನು ವರ್ಗಾವಣೆ ಮಾಡಿದರೆ, ಕಾನೂನು ಜನಸಾಮಾನ್ಯರೆ ಕೈಗೆತ್ತುಕೊಳ್ಳುವ ಜೊತೆಗೆ ಸಾವಿರಾರು ಟ್ರಾಕ್ಟರ್ ಜಾನುವಾರುಗಳ ಸಮೇತ ಮುಖ್ಯ ಮಂತ್ರಿ ಮನೆ ಮುತ್ತಿಗೆ ಹಾಕುವ ಎಚ್ಚರಿಕೆಯನ್ನು ನೀಡಿದರು.
ಮನವಿ ಸ್ವೀಕರಿಸಿ ಮಾತನಾಡಿದ ಉಪ ತಹಸೀಲ್ದಾರ್ ಸುರೇಶ್ ರವರು ನಿಮ್ಮ ಮನವಿಯನ್ನು ಸರ್ಕಾರಕ್ಕೆ ಕಳುಹಿಸುವ ಭರವಸೆಯನ್ನು ನೀಡಿದರು.
ಹೋರಾಟದಲ್ಲಿ ಕೆ.ಜಿ.ಎಫ್ ತಾ.ಅದ್ಯಕ್ಷ ಮಂಜುನಾಥ, ಮಹಿಳಾ ಜಿಲ್ಲಾದ್ಯಕ್ಷ ಎ.ನಳಿನಿಗೌಡ, ತಾ.ಪ್ರಧಾನ ಕಾರ್ಯದರ್ಶಿ ರಾಮಸಂದ್ರ ವೇಣುಗೋಪಾಲ್, ಕೋಲಾರ ತಾ.ಅಧ್ಯಕ್ಷ ಈಕಂಬಳ್ಳಿ ಮಂಜುನಾಥ, ತೆರ್ನಹಳ್ಳಿ ವೆಂಕಿ, ಸಂದೀಪ್, ಶ್ರೀನಿವಾಸರೆಡ್ಡಿ, ಮನೋಹರ್, ರಾಮಚಂದ್ರಪ್ಪ , ರಮೇಶ್ಬಾಬು, ಪ್ರವೀಣ್ ಆರ್, ಆಂಜಿನಪ್ಪ, ರಾಮಚಂದ್ರ, ಸುರೇಶ್ಬಾಬು, ತಾ.ಗೌರವಾಧ್ಯಕ್ಷ ಮರಗಲ್ ಮುನಿಯಪ್ಪ, ಚೌಡಮ್ಮ, ರಾಮಕ್ಕ, ರಾಧಮ್ಮ, ವೀಣಾ, ಬೂದಿಕೋಟೆ ನಾಗಯ್ಯ, ಬೀಮಗಾನಹಳ್ಳಿ ಮುನಿರಾಜು ಇನ್ನು ಮುಂತಾದವರು ಇದ್ದರು.