

ದಾವಣಗೆರೆ: ಗೃಹಲಕ್ಷ್ಮೀ ಯೋಜನೆ ಹಣ ತರಲು ಬ್ಯಾಂಕ್ಗೆ ಹೋಗಿದ್ದ ಪತ್ನಿಯನ್ನು ಪತಿ ಕೊಲೆ ಮಾಡಿರುವ ಘಟನೆ ದಾವಣಗೆರೆ ಜಗಳೂರು ತಾಲೂಕಿನ ಉಜ್ಜಪ್ಪರ ಒಡೆರಹಳ್ಳಿ ಗ್ರಾಮದಲ್ಲಿ ನಡೆದಿದೆ. ಉಸಿರುಗಟ್ಟಿಸಿ ಪತ್ನಿ ಸತ್ಯಮ್ಮಳನ್ನು ಕೊಲೆಮಾಡಿ ಪತಿ ಅಣ್ಣಪ್ಪ ಪರಾರಿಯಾಗಿದ್ದಾನೆ. ದಂಪತಿ 12 ವರ್ಷದ ಹಿಂದೆ ಪ್ರೀತಿಸಿ ಮದುವೆ ಆಗಿದ್ದರು. ದಂಪತಿಗೆ ಒಂದು ಹೆಣ್ಣು, ಒಂದು ಗಂಡು ಇದೆ. ಪತಿ ಅಣ್ಣಪ್ಪ ನಿತ್ಯ ಕುಡಿದು ಬಂದು ಪತ್ನಿ ಸತ್ಯಮ್ಮರಿಗೆ ಹಣಕ್ಕಾಗಿ ಕಿರುಕುಳ ನೀಡುತ್ತಿದ್ದನು. ಇದರಿಂದ ಬೇಸತ್ತ ಸತ್ಯಮ್ಮ ತವರು ಮನೆ ಸೇರಿದ್ದರು. ಆದ್ರೆ, ಗೃಹ ಲಕ್ಷ್ಮಿ ಹಣ ಡ್ರಾ ಮಾಡಿಕೊಳ್ಳಲು ಒಡೆರಹಳ್ಳಿ ಗ್ರಾಮಕ್ಕೆ ಬಂದಿದ್ದಾಳೆ. ಈ ವೇಳೆ ಪತಿ ಅಣ್ಣಪ್ಪ ಕೊಲೆ ಮಾಡಿದ್ದಾನೆ.
ಗೃಹಲಕ್ಷ್ಮೀ ಯೋಜನೆ ಹಣ ಪಡೆಯಲು ಸತ್ಯಮ್ಮ ಮಂಗಳವಾರ ಜಗಳೂರು ತಾಲೂಕಿನ ಅಸಗೋಡ್ ಬ್ಯಾಂಕ್ಗೆ ಬಂದಿದ್ದರು. ಇದೇ ವೇಳೆ ಬ್ಯಾಂಕ್ಗೆ ಬಂದ ಪತಿ ಅಣ್ಣಪ್ಪ ಪತ್ನಿ ಸತ್ಯಮ್ಮಳನ್ನ ಮನವೊಲಿಸಿ ಜಮೀನಿಗೆ ಕರೆದೊಯ್ದು ಹಲ್ಲೆ ಮಾಡಿದ್ದಾನೆ. ಬಳಿಕ ಉಸಿರುಗಟ್ಟಿಸಿ ಕೊಲೆ ಮಾಡಿದ್ದಾನೆ. ಬಿಳಿಚೋಡು ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಇನ್ನು ಸಿದ್ದರಾಮಯ್ಯ ನೇತೃತ್ವದ ಕಾಂಗ್ರೆಸ್ ಸರ್ಕಾರ ಜಾರಿಗೆ ತಂದಿರುವ ಈ ಗೃಹಲಕ್ಷ್ಮೀ ಹಣದಿಂದ ಹಲವು ಮಹಿಳೆಯರಿಗೆ ಅನುಕೂಲವಾಗಿದೆ. ಈ ಯೋಜನೆಯ ಹಣದಿಂದ ಮಹಿಳೆಯರು ಒಳ್ಳೆ ಕೆಲಸಗಳಿಗೆ ಉಪಯೋಗಿಸಿಕೊಂಡಿದ್ದಾರೆ. ದುರ್ವೈವ ಇದೇ ಗೃಹಲಕ್ಷ್ಮೀ ಹಣ ತರಲು ಹೋದ ಮಹಿಳೆ ಗಂಡನ ಹಣದ ದಾಹಕ್ಕೆ ಹೆಣವಾಗಿದ್ದಾಳೆ.