ರಚನೆ:- ಬಿ.ಆರ್. ರವೀಂದ್ರ, ವಕೀಲರು ಮತ್ತು ಸಾಹಿತಿಗಳು ಕೋಲಾರ.
ಡಿವಿಜಿ ಎಂಬ ಹೆಸರು ಕೇಳಿದ ತಕ್ಷಣ ನಮಗೆ ನೆನಪಾಗುವುದು ಅವರ “ಮಂಕುತಿಮ್ಮನ ಕಗ್ಗ” ಆ ಗ್ರಂಥಕ್ಕೆ ಈ ಹೆಸರು ಇಡುವಲ್ಲಿ ಅವರ ಜಾಣ್ಮೆಯನ್ನು ನಾವು ಕಾಣಬಹುದು. ಡಿವಿಜಿ ರವರು ಅದ್ಭುತ ವಿಚಾರವಂತರು, ಜ್ಞಾನಿಗಳು, ಅವರು ಸಾಹಿತ್ಯದಲ್ಲಿ ಕೈಯಾಡಿಸದೆ ಬಿಟ್ಟ ಪ್ರಕಾರವಿಲ್ಲ. ಶೈಕ್ಷಣಿಕವಾಗಿ ಅವರ ವಿದ್ಯಾಭ್ಯಾಸ ಮೆಟ್ರಿಕ್ಯುಲೇಷನ್ ಪರೀಕ್ಷೆಯಲ್ಲಿ ಉತ್ತೀರ್ಣರಾಗದಿದ್ದರೂ ಸಹ ಕನ್ನಡ ಭಾಷೆಯ ಜೊತೆಗೆ ಅವರು ಇಂಗ್ಲಿಷ್ ಮತ್ತು ಸಂಸ್ಕೃತ ಭಾಷೆಯಲ್ಲಿ ಅದ್ಭುತ ಪಾಂಡಿತ್ಯವನ್ನು ಪಡೆದಿದ್ದವರು. ಕನ್ನಡ ಸಾಹಿತ್ಯಕ್ಕೆ ಅವರ ಕೊಡುಗೆ ಅಪಾರ. ಈ ಕಾರಣದಿಂದಲೇ ಶಿವರಾಮ ಕಾರಂತರನ್ನು ಕನ್ನಡದ ಅತ್ಯುತ್ತಮ ಕವಿ ಯಾರು ಎಂದು ಕೇಳಿದಾಗ ಅವರು “ಡಿವಿಜಿ” ಎಂದು ತಟ್ಟನೆ ಹೇಳಿದ್ದಾರೆ.
ಆಧುನಿಕ ಭಾರತೀಯ ಸಾಹಿತ್ಯದ ಒಂದು ಅಶ್ವತ್ಥ ವೃಕ್ಷ ಎಂಬ ಗೌರವಕ್ಕೆ ಪಾತ್ರರಾದವರು ಡಿವಿಜಿ ರವರು. ಅವರು ಸ್ವಾತಂತ್ರ್ಯ ಪೂರ್ವದ ಮತ್ತು ಸ್ವಾತಂತ್ರ್ಯಾನಂತರದ ಭಾರತವನ್ನು ಕಂಡವರು, ಅವರ ಜೀವಿತ ಕಾಲದಲ್ಲಿ ರಾಜಪ್ರಭುತ್ವವನ್ನು ಹಾಗೂ ಪ್ರಜಾಪ್ರಭುತ್ವವನ್ನು ಅಂದರೆ ಎರಡೂ ಸನ್ನಿವೇಶಗಳಲ್ಲಿನ ರಾಜಕೀಯ, ಸಾಮಾಜಿಕ ಹಾಗೂ ಆರ್ಥಿಕ ವ್ಯವಸ್ಥೆಗಳನ್ನು ಕಂಡವರು. ಹಾಗೆಯೇ ಜನರ ಕಷ್ಟ ನಷ್ಟವನ್ನು ಬಿಂಬಿಸುವ, ಸಮಾಜವನ್ನು ಬಹಳ ಹತ್ತಿರದಿಂದ ಕಾಣುವ ಪತ್ರಿಕೋದ್ಯಮದಲ್ಲಿ ದುಡಿದು ಸಾರ್ವಜನಿಕ ಜೀವನದಲ್ಲಿ ತಮ್ಮನ್ನು ತಾವು ತೊಡಗಿಸಿಕೊಂಡವರು. ಅವರು ಕನ್ನಡ ಭಾಷೆಯ ಪತ್ರಿಕೆಗಳನ್ನಷ್ಟೇ ಅಲ್ಲದೆ “ಹಿಂದೂ” ಮತ್ತು”ಇಂಡಿಯನ್ ಪೇಟ್ರಿಯಟ್” ಮುಂತಾದ ಹಲವು ಇಂಗ್ಲಿಷ್ ಭಾಷೆಯ ಪ್ರಸಿದ್ಧ ಪತ್ರಿಕೆಗಳಿಗೆ ಲೇಖನಗಳನ್ನು ಬರೆದಿರುವುದಲ್ಲದೆ ಹಲವು ಪತ್ರಿಕೆಗಳನ್ನು ಮುನ್ನಡೆಸಿದ ಕೀರ್ತಿ ಸಹ ಡಿವಿಜಿ ರವರಿಗೆ ಸಲ್ಲುತ್ತದೆ. ಇಂತಹ ಅದ್ಭುತವಾದ ಜೀವನಾನುಭವ ಪಡೆದ ಡಿವಿಜಿಯವರು ತಮ್ಮ ಜೀವನಾನುಭವವನ್ನು ಕೇಂದ್ರ ಸಾಹಿತ್ಯ ಅಕಾಡೆಮಿ ಪ್ರಶಸ್ತಿ ಪುರಸ್ಕೃತ ಕೃತಿ “ಜೀವನ ಧರ್ಮ ಯೋಗ” ಎಂಬ ಕೃತಿಯಲ್ಲಿ ಹಲವಾರು ವಿಚಾರಗಳನ್ನು ಹಂಚಿಕೊಂಡಿದ್ದಲ್ಲದೆ, ನಾಟಕಗಳನ್ನು ಬರೆದಿದ್ದಾರೆ, ಇಂಗ್ಲೀಷ್ ನ ಶೇಕ್ಸ್ ಪಿಯರ್ ನಾಟಕಗಳನ್ನು ಅನುವಾದ ಮಾಡುವುದರ ಜೊತೆಗೆ ಅನುವಾದ ಸಾಹಿತ್ಯವನ್ನು ರಚನೆ ಮಾಡಿದ್ದಾರೆ, ಶಿಶು ಸಾಹಿತ್ಯವನ್ನು ರಚನೆ ಮಾಡಿದ್ದಾರೆ, ರಾಜ್ಯಶಾಸ್ತ್ರದ ಬಗ್ಗೆ ಬರೆದಿದ್ದಾರೆ, ಹಲವಾರು ವಿಷಯಗಳ ಕುರಿತಾಗಿ ಪ್ರೌಢ ಲೇಖನಗಳನ್ನು ಬರೆದಿದ್ದಾರೆ, ಕಾವ್ಯದಲ್ಲಿ ಕೈಯಾಡಿಸಿದ್ದಾರೆ, ತಾತ್ವಿಕ ಚಿಂತನೆಯ ತತ್ವಶಾಸ್ತ್ರದಿಂದ ಹಿಡಿದು ಜೀವನ ಧರ್ಮಯೋಗದ ಬಗ್ಗೆ ವಿಚಾರ ಧಾರೆಯನ್ನು ಹರಿಸಿದ್ದಾರೆ, ಹಲವಾರು ವ್ಯಕ್ತಿಗಳ ಕುರಿತು ಬೆಳಕು ಚೆಲ್ಲುವ ನೆನಪಿನ ಚಿತ್ರಗಳ ಬಗ್ಗೆ ಬರೆದಿದ್ದಾರೆ, ಅವರ ಸಾಹಿತ್ಯದಲ್ಲಿ ಮುಖುಟಪ್ರಾಯವಾಗಿ ನಿಲ್ಲುವ, ಎಲ್ಲರ ಮನೆ ಮಾತಾಗಿರುವ “ಮಂಕುತಿಮ್ಮನ ಕಗ್ಗ” ಎಂಬ ಛಂದೋಬದ್ಧ ಶ್ರೇಷ್ಠ ಕೃತಿಯನ್ನು ಸಹ ರಚನೆ ಮಾಡಿದ್ದು ಆ ಕೃತಿಗೆ ಹೆಸರು ಸೂಚಿಸುವಾಗ ತಾವು ಎಷ್ಟೇ ಜ್ಞಾನಿಗಳಾಗಿದ್ದರೂ ಸಹ ತಮ್ಮನ್ನು ತಾವು ಮಂಕುತಿಮ್ಮ ಎಂದು ಸಂಬೋಧಿಸುತ್ತಾ ಸಾಮಾಜಿಕ ವ್ಯವಸ್ಥೆಯನ್ನು ಪ್ರತಿಬಿಂಬಿಸುವ ವೈಚಾರಿಕ ವಿಚಾರಗಳ ಅದ್ಭುತ ಜೀವನ ಸಂದೇಶ ಸಾರುವ ಸಾಹಿತ್ಯವನ್ನು ಡಿವಿಜಿ ರವರು ರಚನೆ ಮಾಡಿದ್ದಾರೆ.
ಮಂಕುತಿಮ್ಮನ ಕಗ್ಗ ಒಂದೇ ವಿಚಾರದ ಬಗ್ಗೆ ಬರೆದ ಪದ್ಯಗಳಲ್ಲ, ಒಂದೇ ವಿಷಯವನ್ನು ಹೊಂದಿದ ರಚನೆಯಲ್ಲ, ಬದಲಾಗಿ ಜೀವನದ ವಿವಿಧ ಸ್ತರಗಳಲ್ಲಿ ನಾವು ಎದುರಿಸುವ ಹಲವಾರು ಸಮಸ್ಯೆಗಳಿಗೆ ಹಣತೆಯೋಪಾದಿಯಲ್ಲಿ ಬೆಳಕು ಚೆಲ್ಲುವ ಒಂದೊಂದು ಪದ್ಯ ಒಂದೊಂದು ಅಣಿಮುತ್ತು. ಈ ಅಣಿಮುತ್ತುಗಳ ಬಗ್ಗೆ ಹಲವಾರು ಉಪನ್ಯಾಸಗಳು, ವ್ಯಾಖ್ಯಾನಗಳು, ಕಂಠಪಾಠಗಳು ನಡೆದಿರುವುದಲ್ಲದೆ ಗಮಕ ಹಾಗೂ ಸುಗಮ ಸಂಗೀತದ ಹಾಡುಗಾರಿಕೆಗಳ ಮೂಲಕ ಮತ್ತಷ್ಟು ಜನಪ್ರಿಯತೆ ಕಂಡಿವೆ. ಪ್ರತಿದಿನ ಓದುವ ಸುಭಾಷಿತಗಳಾಗಿ ಇಂದಿನ ಸಾಮಾಜಿಕ ಮಾಧ್ಯಮದಲ್ಲಿ ಡಿವಿಜಿ ರವರ ಮಂಕುತಿಮ್ಮನ ಕಗ್ಗದ ಪದ್ಯಗಳು ಹರಿದಾಡುವುದನ್ನು ನಾವು ಕಾಣಬಹುದು. ಈ ಕೃತಿ, ಹಿಂದಿ, ಇಂಗ್ಲಿಷ್, ಪ್ರೆಂಚ್ ಭಾಷೆಗಳಿಗಲ್ಲದೆ ಹಲವಾರು ಭಾಷೆಗಳಿಗೆ ಅನುವಾದಗೊಂಡಿರುವುದು ಈ ಕೃತಿಯ ಘನತೆಯನ್ನು ಎತ್ತಿ ಹಿಡಿಯುತ್ತದೆ.
ಡಿವಿಜಿಯವರ ಮಂಕುತಿಮ್ಮನ ಕಗ್ಗ ಮಾತ್ರಾಗಣ ಆಧಾರದ ಮೇಲೆ ರಚನೆಯಾಗಿರುವ ದ್ವಿತೀಯಾಕ್ಷರ
ಪ್ರಾಸವನ್ನು ಹೊಂದಿರುವ ನಾಲ್ಕು ಸಾಲಿನ ಕಾವ್ಯನಾಮ ಹೊಂದಿರುವ ಅದ್ಭುತ ಕಾವ್ಯಾಲಂಕಾರವನ್ನು ಹೊಂದಿರುವ ಕೃತಿ. ಹೀಗಾಗಿಯೇ ಕುವೆಂಪುರವರು ಮಂಕುತಿಮ್ಮನ ಕಗ್ಗದ ಬಗ್ಗೆ ಈ ಕೆಳಕಂಡಂತೆ ನಾಲ್ಕು ಸಾಲಿನ ಕವನದ ಮೂಲಕ ತಮ್ಮ ಪ್ರಶಂಸೆಯನ್ನು ವ್ಯಕ್ತಪಡಿಸಿದ್ದಾರೆ.
ಹಸ್ತಕ್ಕೆ ಬರಿ ನಕ್ಕೆ ಓದುತ್ತ ಓದುತ್ತ
ಮಸ್ತಕಕ್ಕಿಟ್ಟು ಗಂಭೀರನಾದೆ ।
ವಿಸ್ತರದ ದರುಶನಕೆ ತುತ್ತತುದಿಯಲಿ ನಿನ್ನ
ಪುಸ್ತಕಕ್ಕೆ ಕೈಮುಗಿದೆ ಮಂಕುತಿಮ್ಮ ।।
ಪ್ರತಿ ದಿನ ಬಾಯಿಯಿಂದ ಬಾಯಿಗೆ ಹರಿದಾಡುವ ಕೆಲವೇ ಕೆಲವು ಜನಪ್ರಿಯ ಮುಕ್ತಕಗಳು ಅಥವಾ ಪದ್ಯಗಳನ್ನು ಹೊರತುಪಡಿಸಿ ಜೀವನ ಎಂದರೆ ಹೇಗಿರಬೇಕು, ಎಂತಹ ಕ್ಲಿಷ್ಟ ಪರಿಸ್ಥಿತಿಯಲ್ಲಿ ಸಹ ಹೇಗೆ ನಾವು ಆತ್ಮವಿಶ್ವಾಸದಿಂದ ಜೀವನ ಮಾಡಬೇಕು ಎಂಬ ಬಗ್ಗೆ ಡಿವಿಜಿ ರವರು ಗಾಢವಾದ ಜೀವನಾನುಭವ ಹೊಂದಿರುವ ಹಲವಾರು ಪದ್ಯಗಳನ್ನು ಬರೆದಿದ್ದು ಆ ಪದ್ಯಗಳ ಬಗ್ಗೆ ಒಂದಷ್ಟು ಬೆಳಕು ಚೆಲ್ಲುವ ನಿಟ್ಟಿನಲ್ಲಿ ಕೆಲವೊಂದು ಪದ್ಯ ಮತ್ತು ಅವುಗಳ ಅರ್ಥ ಹೀಗಿದೆ.
ಒಂದು ಕೊಂಬೆಯು ಬಾಡಲಿನ್ನೊಂದು ಚಿಗುರುವುದು
ಸಂದಿಹುದು ಚಿರನವತೆಯಶ್ವತ್ಥಮರಕೆ||
ಎಂದೆಂದುಮಂತಿರುವುದೀ ವಿಶ್ವವೃಕ್ಷವದು
ರೊಂದು ರೆಂಬೆಯೊ ನೀನು- ಮಂಕುತಿಮ್ಮ||
ಜೀವನವನ್ನು ಜೀವನದ ಪಾತ್ರಗಳನ್ನು ಅಶ್ವತ್ಥ ವೃಕ್ಷಕ್ಕೆ ಹೋಲಿಸುವ ಡಿವಿಜಿ ರವರು. ಇಲ್ಲಿ ಯಾರೂ ಯಾರಿಗೂ ಶಾಶ್ವತವಲ್ಲ, ನಮ್ಮ ಜೀವನದಲ್ಲಿ ಕೆಲವು ಪಾತ್ರಗಳು ಬರುತ್ತವೆ, ಕೆಲವು ಪಾತ್ರಗಳು ಹೊರಡುತ್ತವೆ, ಹೇಗೆ ಅಶ್ವತ್ಥ ವೃಕ್ಷದ ಒಂದು ಕೊಂಬೆ ಬಾಡಿದರೆ ಮತ್ತೊಂದು ರೆಂಬೆ ಚಿಗುರಿ ನಳನಳಿಸುವುದೋ ಹಾಗೆಯೇ ಯಾವುದೇ ಮೋಹಕ್ಕೆ ಒಳಗಾಗದೆ ನಿರ್ಲಿಪ್ತ ಭಾವದಿಂದ ಬರುವ ಒಂದೊಂದು ಪಾತ್ರಗಳನ್ನು ಸ್ವೀಕರಿಸುತ್ತಾ ಅರ್ಥಪೂರ್ಣ ಜೀವನ ನಡೆಸಬೇಕು ಎಂದು ಹೇಳಿದ್ದಾರೆ.
ಪುರುಷಯೋಚನೆಯೆಲ್ಲ ಮುರಿದು ಮಣ್ಣಹದೆಂದು
ಕೊರಗದಿರು; ಕೆಟ್ಟೆನೆಂದೆಂದುಮೆನ್ನದಿರು||
ಶರಧಿಯೊಳು ಮೀನೊಂದು ಪುಟ್ಟಲೇಂ ಸಾಯಲೇಂ?
ಪರವೆಯೇನಿಲ್ಲವೆಲೋ – ಮಂಕುತಿಮ್ಮ||
ಬಹಳಷ್ಟು ಕನಸುಗಳನ್ನು ಕಾಣುತ್ತೇವೆ, ಬಹಳಷ್ಟು ಯೋಜನೆಗಳನ್ನು ಹಾಕಿಕೊಳ್ಳುತ್ತೇವೆ, ಆದರೆ ಕೆಲವೊಮ್ಮೆ ನಮ್ಮ ಯೋಚನೆ, ಆಲೋಚನೆ, ಕನಸುಗಳು ಫಲಿಸದೆ ಹೋಗಬಹುದು, ಹಾಗೆಂದು ಧೃತಿಗೆಡುವ ಅಗತ್ಯವಿಲ್ಲ ಮರಳಿ ಯತ್ನವ ಮಾಡಬೇಕು ಹೊಸ ಕನಸು ಕಾಣಬೇಕು, ಯಾವ ರೀತಿಯಲ್ಲಿ ಕಡಲಿನಲ್ಲಿ ಒಂದು ಮೀನು ಹುಟ್ಟಿದರೂ, ಒಂದು ಮೀನು ಸತ್ತರೂ, ಕಡಲಿನಲ್ಲಿ ಯಾವ ವ್ಯತ್ಯಾಸವೂ ಕಾಣುವುದಿಲ್ಲವೋ ಹಾಗೆ ನಮ್ಮ ಗುರಿ, ಕನಸು ನನಸಾಗದಿದ್ದಾಗ ಹತಾಶರಾಗದೆ ಮರಳಿ ಯತ್ನವ ಮಾಡಬೇಕು ಎಂದು ಹಿತಬೋಧನೆ ಮಾಡಿದ್ದಾರೆ.
ಮಹಾಭಾರತದಲ್ಲಿ ಒಂದು ಉಲ್ಲೇಖವಿದೆ
ಅತಿಕ್ರಾನ್ತಂ ಹಿ ಯತ್ಕಾರ್ಯಂ ಪಶ್ಚಾಚ್ಚಿನ್ತತೇ ನರ: |
ತಚ್ಚಾಸ್ಯ ನ ಭವೇತ್ಕಾರ್ಯಂ ಚಿನ್ತಯಾ ಚ ವಿನಶ್ಯತಿ||
ಅಂದರೆ ಮನುಷ್ಯ ಕಳೆದುಹೋದ ಘಟನೆಯ ಬಗ್ಗೆ ಬಹಳ ಚಿಂತಿಸುತ್ತಾನೆ, ಹೀಗೆ ಕಳೆದುಹೋದ ವಿಷಯಗಳ ಕುರಿತು ಚಿಂತಿಸಿ ಚಿಂತಿಸಿ ತನ್ನ ಸುಂದರವಾದ ಭವಿಷ್ಯವನ್ನು ಮರೆತು ವಿನಾಶವನ್ನು ಹೊಂದುತ್ತಾನೆ ಎಂದು ಅದರ ಅರ್ಥ. ಹೀಗೆಯೇ ಡಿವಿಜಿಯವರು ಸಹ ಮನುಷ್ಯ ಹತಾಶರಾಗದೆ ಧೈರ್ಯದಿಂದ ಹೋರಾಡಲು ಹೇಳುತ್ತಾರೆ.
ಹೋರಾಡು ಬೀಳ್ವನ್ನವೊಬ್ಬಂಟಿಯಾದೊಡಂ
ಧೀರಪಥವನೆ ಬೆದಕು ಸಕಲಸಮಯದೊಳಂ||
ದೂರದಲಿ ಗೊಣಗುತ್ತ ಬಾಳ್ವ ಬಾಳ್ಗೇನು ಬೆಲೆ?
ಹೋರಿ ಸತ್ವವ ಮೆರೆಸು – ಮಂಕುತಿಮ್ಮ||
ಕೆಲವೊಮ್ಮೆ ನಾವು ಒಂಟಿ, ಏಕಾಂಗಿ ನಮ್ಮಿಂದ ಏನೂ ಸಾಧಿಸಲು ಸಾಧ್ಯವಿಲ್ಲ ಎಂಬ ನಿರುತ್ಸಾಹ ಮೂಡುತ್ತದೆ, ಆದರೆ ಯಾವತ್ತೂ ನಾವು ಏಕಾಂಗಿ ಎಂಬ ಭಾವನೆ ತೊರೆದು ಧೈರ್ಯದಿಂದ ಇರುವಷ್ಟು ದಿನ ಹೋರಾಡಬೇಕು, ಸೆಣಸುವ ಮುನ್ನವೇ ಸೋಲನ್ನು ಒಪ್ಪಿಕೊಳ್ಳದೆ ಎಲ್ಲಾ ಸಮಯದಲ್ಲೂ ಧೀರನಾಗಿ ಹೋರಾಡಬೇಕು. ತಾನು ಏಕಾಂಗಿ, ತಾನು ಅಬಲ ತನ್ನಿಂದ ಏನೂ ಸಾಧ್ಯವಿಲ್ಲ ಎಂದು ಗೊಣಗುತ್ತಾ ಕುಳಿತರೆ ಅಂತಹ ಬದುಕಿಗೆ ಅರ್ಥವೇನು ಎಂದು ಡಿವಿಜಿಯವರು ನಮ್ಮಲ್ಲಿ ಜೀವನೋತ್ಸಾಹವನ್ನು ತುಂಬಿದ್ದಾರೆ.
ಕುವೆಂಪು ರವರು ತಮ್ಮ ಪಾಂಚಜನ್ಯದಲ್ಲಿ
ನಡೆ ಮುಂದೆ, ನಡೆ ಮುಂದೆ,
ನುಗ್ಗಿ ನಡೆ ಮುಂದೆ!
ಜಗ್ಗದೆಯೆ, ಕುಗ್ಗದೆಯೆ,
ಹಿಗ್ಗಿ ನಡೆ ಮುಂದೆ!
ಎಂದು ಹೇಳಿದಂತೆ ಡಿವಿಜಿ ರವರು ಸಹ ತಮ್ಮ ಮಂಕುತಿಮ್ಮನ ಕಗ್ಗದಲ್ಲಿ ಈ ಹೋರಾಟದ ಬದುಕಿನಲ್ಲಿ ಒಂದೊಂದು ಹೆಜ್ಜೆಯನ್ನು ಧೈರ್ಯದಿಂದ ಇಡಬೇಕೆಂದು ಹೇಳುತ್ತಾರೆ.
ಸತ್ತನೆಂದನಬೇಡ: ಸೋತೆನೆಂದೆನಬೇಡ
ಬತ್ತಿತೆನ್ನೊಳು ಸತ್ತವದೂಟೆಯೆನಬೇಡ||
ಮೃತ್ಯುವೆನ್ನುವುದೊಂದು ತೆರೆಯಿಳಿತ; ತೆರೆಯೇರು
ಮತ್ತೆ ತೋರ್ಪುದು ನಾಳೆ – ಮಂಕುತಿಮ್ಮ||
ಜೀವನದಲ್ಲಿ ಸಂಪೂರ್ಣವಾಗಿ ಹತಾಶೆ ಹೊಂದಿ ತಾನು ಸೋತೆ, ತಾನು ಸತ್ತೆ ಎಂಬ ಋಣಾತ್ಮಕ ಭಾವನೆಯನ್ನು ಎಂದೂ ಹೊಂದಬೇಡ, ಸೋಲುಗೆಲುವುಗಳು ಸಾಗರದ ಅಲೆಗಳಂತೆ ಒಮ್ಮೆ ಮೇಲೆ ಎದ್ದರೆ ಮತ್ತೆ ಕೆಳಗೆ ಬೀಳುತ್ತವೆ ಹಾಗೆ ಜೀವನದಲ್ಲಿ ಸಹ ಸುಖ ಮತ್ತು ದುಃಖಗಳು ಸಾಗರದ ಅಲೆಗಳಿದ್ದಂತೆ, ಆ ಮೃತ್ಯುವಿನ ಅಲೆಗಳಿಗೆ ಎದೆಯೊಡ್ಡಿ ನಾಳೆಯ ಬಗ್ಗೆ ನಾವು ದೃಢ ಸಂಕಲ್ಪ ಹೊಂದಬೇಕು ಎಂದು ಡಿವಿಜಿಯವರು ಹೇಳಿದ್ದಾರೆ. ಹೀಗೆ ಹತ್ತು ಹಲವು ವಿಚಾರಗಳ ಬಗ್ಗೆ ಬೆಳಕು ಚೆಲ್ಲುವ ಮಂಕುತಿಮ್ಮನ ಕಗ್ಗ ಅವರ ಜೀವಿತ ಕಾಲದಲ್ಲಿ ಹೆಚ್ಚು ಪ್ರಚಾರ, ಪ್ರಶಸ್ತಿಗಳನ್ನು ಗಳಿಸದಿದ್ದರೂ ಸಹ ಕನ್ನಡಿಗರ ಪಾಲಿಗೆ “ಕನ್ನಡದ ಭಗವದ್ಗೀತೆ” ಎಂಬ ಜನಪ್ರಿಯತೆಯನ್ನು ತಂದುಕೊಟ್ಟಿದೆ.
ರಚನೆ:- ಬಿ.ಆರ್. ರವೀಂದ್ರ, ವಕೀಲರು ಮತ್ತು ಸಾಹಿತಿಗಳು ಕೋಲಾರ.