2023 ಸಾರ್ವತ್ರಿಕ ವಿಧಾನಸಭಾ ಚುನಾವಣೆಯಲ್ಲಿ ಜೆಡಿಎಸ್ ಪಕ್ಷವನ್ನು ಅಧಿಕಾರಕ್ಕೆ, ಕುಮಾರಸ್ವಾಮಿಯನ್ನು ಮುಖ್ಯಮಂತ್ರಿಯಾಗಿ ಮಾಡುವುದೇ ಜೆಡಿಎಸ್ ಪಕ್ಷದ ಪ್ರತಿಯೊಬ್ಬ ಕಾರ್ಯಕರ್ತನ ಗುರಿಯಾಗಿಬೇಕು

ವರದಿ: ಶಬ್ಬೀರ್ ಅಹಮ್ಮದ್, ಶ್ರೀನಿವಾಸಪುರ

ಕೋಲಾರ,ಜು.30: ಮುಂಬರುವ 2023 ಸಾರ್ವತ್ರಿಕ ವಿಧಾನಸಭಾ ಚುನಾವಣೆಯಲ್ಲಿ ಜೆಡಿಎಸ್ ಪಕ್ಷವನ್ನು ಅಧಿಕಾರಕ್ಕೆ ತರುವ ಮೂಲಕ ಕುಮಾರಸ್ವಾಮಿಯನ್ನು ಮುಖ್ಯಮಂತ್ರಿಯಾಗಿ ಮಾಡುವುದೇ ಜೆಡಿಎಸ್ ಪಕ್ಷದ ಪ್ರತಿಯೊಬ್ಬ ಕಾರ್ಯಕರ್ತನ ಗುರಿಯಾಗಬೇಕು ಎಂದು ವಿಧಾನ ಪರಿಷತ್ ಸದಸ್ಯ ಇಂಚರ ಗೋವಿಂದರಾಜ ಹೇಳಿದರು.
ನಗರದ ಖಾಸಗಿ ಕಲ್ಯಾಣ ಮಂಟಪದಲ್ಲಿ ಜೆಡಿಎಸ್ ಪಕ್ಷದ ಕೋರ್ ಕಮಿಟಿ ಸಭೆಯಲ್ಲಿ ಮಾತನಾಡಿದ ಅವರು, ಕುಮಾರಸ್ವಾಮಿ ರವರನ್ನು ಮುಖ್ಯಮಂತ್ರಿಯಾಗಿ ಮಾಡಲು ಜಿಲ್ಲೆಯ ಆರು ವಿಧಾನಸಭಾ ಕ್ಷೇತ್ರಗಳಲ್ಲಿ ಜೆಡಿಎಸ್ ಶಾಸಕರನ್ನು ಗೆಲ್ಲಿಸಿಕೊಳ್ಳಬೇಕು ಅದಕ್ಕಾಗಿ ಪಕ್ಷದ ಬೂತ್ ಮಟ್ಟದಿಂದ ಪಕ್ಷ ಸಂಘಟನೆಗೆ ಶಕ್ತಿ ನೀಡಬೇಕೆಂದರು.
ಸಾಮಾನ್ಯ ವ್ಯಕ್ತಿಯಾಗಿದ್ದ ನನ್ನನ್ನು ಗುರುತಿಸಿ ಮಾಜಿ ಪ್ರಧಾನಿ ಎಚ್.ಡಿ. ದೇವೇಗೌಡರು, ಎಚ್. ಡಿ ಕುಮಾರಸ್ವಾಮಿಯವರು ನನ್ನ ಮೇಲೆ ವಿಶ್ವಾಸವಿಟ್ಟು ವಿಧಾನ ಪರಿಷತ್ ಸದಸ್ಯರಾಗಿ ಮಾಡುವ ಮೂಲಕ ಜಿಲ್ಲೆಯಾದ್ಯಂತ ಪಕ್ಷ ಸಂಘಟನೆ ಮಾಡಲು ಶಕ್ತಿಯನ್ನು ಕೊಟ್ಟಿದ್ದಾರೆ. ಆ ಶಕ್ತಿಯನ್ನು ಬಳಸಿಕೊಂಡು ಪಕ್ಷದ ಮುಖಂಡರನ್ನು ವಿಶ್ವಾಸಕ್ಕೆ ತೆಗೆದುಕೊಂಡು ಪಕ್ಷ ಸಂಘಟನೆ ಮಾಡುತ್ತೇನೆ ಜೆಡಿಎಸ್ ಪಕ್ಷದಿಂದ ಆಯ್ಕೆಯಾಗಿರುವ ಜನಪ್ರತಿನಿಧಿಗಳು ತಮ್ಮ ವ್ಯಾಪ್ತಿಯಲ್ಲಿ ಮಾಡುವ ಕಾರ್ಯಕ್ರಮಗಳ ಹೆಸರಿನಲ್ಲಿ ಪಕ್ಷದ ಬೆಳವಣಿಗೆಗೆ ಪಕ್ಷದ ವರ್ಚಸ್ಸಿಗೆ ಹೆಚ್ಚಿನ ಆದ್ಯತೆ ನೀಡಬೇಕಾಗಿದೆ ಗ್ರಾಮಾಂತರ ಮಟ್ಟದಲ್ಲಿ ಕಾರ್ಯಕರ್ತರ ಪಡೆಯನ್ನು ಕಟ್ಟಿಕೊಂಡು ಮುಂದಿನ ಚುನಾವಣೆಯನ್ನು ಎದುರಿಸಬೇಕಾಗಿದೆ ಎಂದರು.
ವಿಧಾನ ಪರಿಷತ್ ಮಾಜಿ ಸದಸ್ಯ ತೂಪಲ್ಲಿ ಆರ್ ಚೌಡರೆಡ್ಡಿ ಮಾತನಾಡಿ, ಅವಿಭಜಿತ ಕೋಲಾರ ಜಿಲ್ಲೆಯಲ್ಲಿ ಪಕ್ಷ ಸಂಘಟನೆಗೆ ಹೆಚ್ಚಿನ ಒತ್ತು ನೀಡಲು ನನ್ನನ್ನು ಸಂಚಾಲಕರಾಗಿ ನೇಮಿಸಿದ್ದು, ಸಂಘಟನೆಯನ್ನು ಬಲಪಡಿಸಲು ಗ್ರಾಮೀಣ ಭಾಗದಲ್ಲಿ ಘಟಕ ರಚನೆ ಮಾಡಿ ಮುಂದಿನ ಚುನಾವಣೆಗೆ ತಯಾರಾಗಬೇಕಾಗಿದೆ. ಮುಂಬರುವ 2023 ರ ಚುನಾವಣೆಯಲ್ಲಿ ಜಾತ್ಯತೀತ ಜನತಾದಳ ಪಕ್ಷದ ನಡವಳಿಕೆ ಮತ್ತು ಪ್ರಣಾಳಿಕೆಗಳನ್ನು ಜನರ ಮುಂದೆ ತಿಳಿಸುವ ಮೂಲಕ ಅಧಿಕಾರವನ್ನು ಪಡೆಯಬೇಕಾಗಿದೆ ಜಿಲ್ಲೆಯ ಶ್ರೀನಿವಾಸಪುರ ಮತ್ತು ಮುಳಬಾಗಲು ಹೊರತುಪಡಿಸಿ ಉಳಿದ ತಾಲೂಕುಗಳಲ್ಲಿ ತಾಲೂಕ ಸಮಿತಿಗಳನ್ನು ರಚನೆ ಮಾಡಿದ್ದು, ತಾಲೂಕು ಸಮಿತಿಗಳು ಮುಂದೆ ಕ್ರಿಯಾಶೀಲವಾಗಿ ಪಕ್ಷ ಸಂಘಟನೆಗೆ ಹೆಚ್ಚಿನ ಒತ್ತು ನೀಡಬೇಕಾಗಿದೆ ಎಂದರು.
ಕೆಜಿಎಫ್ ರಾಜೇಂದ್ರ ಮಾತನಾಡಿ, ಜೆಡಿಎಸ್ ಪಕ್ಷದ ಸಂಘಟನೆಯ ದೃಷ್ಟಿಯಿಂದ ಪಕ್ಷದ ಮುಖಂಡರು ಭಿನ್ನಾಭಿಪ್ರಾಯಗಳನ್ನು ಬಿಟ್ಟು ಒಗ್ಗಟ್ಟಾಗಿ ಎಲ್ಲರೂ ಸಂಘಟಿತರಾಗಬೇಕಾಗಿದೆ ಎಂದರು.
ದಯಾನಂದ್ ಮಾತನಾಡಿ, ಮುಂದಿನ ಚುನಾವಣೆಗೆ ಕೆಜಿಎಫ್‍ನಲ್ಲಿ ಅಭ್ಯರ್ಥಿಯನ್ನು ಈಗಲೇ ಗುರುತಿಸಿ ಅವರ ಜೊತೆ ಕೆಲಸ ಮಾಡಲು ಅವಕಾಶ ಮಾಡಿಕೊಡಬೇಕಾಗಿದೆ ಎಂದರು.
ಬೆಳಮಾರನಹಳ್ಳಿ ಆನಂದ್ ಮಾತನಾಡಿ, ಮುಂಬರುವ ಚುನಾವಣೆಯಲ್ಲಿ ರಾಜ್ಯಾದ್ಯಂತ ಜೆಡಿಎಸ್ ಪಕ್ಷ ನಡಿಗೆ ಹಳ್ಳಿ ಕಡೆಗೆ ಎಂಬ ಉದ್ದೇಶವನ್ನಿಟ್ಟುಕೊಂಡು ಬೂತ್ ಮಟ್ಟದಲ್ಲಿ ಪ್ರತಿಯೊಬ್ಬ ಕಾರ್ಯಕರ್ತರನ್ನು ಗುರುತಿಸಿ ಹೋರಾಟಗಳಲ್ಲಿ ಪಕ್ಷದ ಕಾರ್ಯಕ್ರಮಗಳಲ್ಲಿ ಭಾಗವಹಿಸುವಂತೆ ಮಾಡಬೇಕಾಗಿದೆ ಎಂದರು
ಸಭೆಯಲ್ಲಿ ಜಿಲ್ಲಾ ಪಂಚಾಯತಿ ಮಾಜಿ ಸದಸ್ಯರಾದ ಕಿತ್ತಂಡೂರು ನಂಜುಂಡಪ್ಪ, ರಾಮಸ್ವಾಮಿರೆಡ್ಡಿ, ಜೆಡಿಎಸ್ ತಾಲೂಕು ಅಧ್ಯಕ್ಷ ಬಾಬು ಮೌನಿ, ಮಹಿಳಾ ಘಟಕದ ಜಿಲ್ಲಾಧ್ಯಕ್ಷೆ ಕುರ್ಕಿ ರಾಜೇಶ್ವರಿ, ಮುಖಂಡರಾದ ವಕ್ಕಲೇರಿ ರಾಮು, ಸಿಎಂಆರ್ ಶ್ರೀನಾಥ್, ಮಲ್ಲೇಶ್ ಬಾಬು, ಬಣಕನಹಳ್ಳಿ ನಟರಾಜ್ ಮುದುವಾಡಿ ಮಂಜು, ಖಾಜಿಕಲ್ಲಹಳ್ಳಿ ಹರೀಶ್ ಗೌಡ, ಪರ್ಜೆನಹಳ್ಳಿ ನಾಗೇಶ್, ಎಪಿಎಂಸಿ ಈರಣ್ಣ, ಅನ್ವರ್, ಪ್ರಕಾಶ್, ರಘುಪತಿರೆಡ್ಡಿ, ದಯಾನಂದ್, ಸೋಮಶೇಖರ್ ಭಾಗವಹಿಸಿದ್ದರು