ವರದಿ: ಶಬ್ಬೀರ್ ಅಹ್ಮದ್, ಶ್ರೀನಿವಾಸಪುರ
ನಂಗಲಿ; ಮಾ.8: ಘೋಷಣೆಗೆ ಸೀಮಿತವಾದ ಮಹಿಳಾ ಸಬಲೀಕರಣ ಸರ್ಕಾರಗಳ ವಿರುದ್ಧ ರೈತಸಂಘದ ತಾಲೂಕು ಅಧ್ಯಕ್ಷ ಯಲುವಳ್ಳಿ ಪ್ರಭಾಕರ್ ಆರೋಪ ಮಾಡಿದರು.
ವಿಶ್ವ ಮಹಿಳಾ ದಿನಾಚರಣೆ ಅಂಗವಾಗಿ ವಡ್ಡಹಳ್ಳಿ ಪ್ರಗತಿಪರ ರೈತ ಮಹಿಳೆ ರತ್ನಮ್ಮ ಅವರ ತೋಟದಲ್ಲಿ ಗಿಡ ನೆಟ್ಟು, ಮಹಿಳೆಯರನ್ನು ಸನ್ಮಾನಿಸಿ ಮಾತನಾಡಿದ ಅವರು, ಚುನಾವಣೆ ಸಮೀಪಿಸಿದರೆ ಸಾಕು ರಾಜಕಾರಣಿಗಳಿಗೆ ಮಹಿಳಾ ಸಬಲೀಕರಣ ನೆನಪಾಗುತ್ತದೆ. ಮಹಿಳೆಯರ ಸಮಾವೇಶ ಮಾಡಿ ಸಬಲೀಕರಣದ ಬಗ್ಗೆ ಪುಂಕಾನು ಪುಂಕವಾಗಿ ಮಾತನಾಡಿ ಬಜೆಟ್ನಲ್ಲಿ ಮಹಿಳೆಯರಿಗಾಗಿ ಒಂದಿಷ್ಟು ಘೋಷಣೆಗಳನ್ನು ಮಾಡಿ ಅನುದಾನ ಮೀಸಲಿಡುತ್ತಾರೆ.
ಹಾಗಾದರೆ ಮಹಿಳೆಯರು ನಿಜಕ್ಕೂ ಸಬಲೆಯರಾಗಿದ್ದಾರೆಯೇ ಎಂದು ನೋಡಿದರೆ ಈಗಲೂ ಮಹಿಳೆಯರು ಶೋಷಣೆಗೆ ಒಳಗಾಗುತ್ತಿರುವುದು ಕಂಡುಬರುತ್ತಿದೆ. ಪ್ರತಿದಿನ ನಾನಾ ರೀತಿಯ ಕಿರುಕುಳ, ತಾತ್ಸಾರ, ನಿಂಧನೆಗೆ ಗುರಿಯಾಗುತ್ತಿದ್ದಾರೆ ಎಂದು ಆರೋಪಿಸಿದರು.
ಮಹಿಳಾ ಸಬಲೀಕರಣ ಕೇವಲ ಬಾಯಿ ಮಾತಿಗೆ ಸೀಮಿತವಾಗಬಾರದು. ಜನಪ್ರತಿನಿಧಿಗಳು ಇನ್ನಾದರೂ ಮಹಿಳೆಯರ ಸುರಕ್ಷತೆಗೆ ಸಂಬಂಧಿಸಿದ ಸಮಸ್ಯೆಗಳ ಗಾಂಭೀರ್ಯತೆಯನ್ನು ಅರ್ಥ ಮಾಡಿಕೊಳ್ಳಬೇಕು. ಮಹಿಳೆಯರಿಗೆ ಸುರಕ್ಷತೆ ಕಲ್ಪಿಸದೆ ಸಬಲೀಕರಣ ಸಾಧ್ಯವಿಲ್ಲವೆಂದು ಅರಿಯಬೇಕೆಂದರು.
ಪ್ರಗತಿಪರ ರೈತ ಮಹಿಳೆ ರತ್ನಮ್ಮ ಮಾತನಾಡಿ, ಹೆಣ್ಣು ಮಕ್ಕಳನ್ನು ಬ್ರೂಣದಲ್ಲಿಯೇ ಹತ್ಯೆ ಮಾಡುವ ಮುಖಾಂತರ ಹುಟ್ಟುವ ಮೊದಲೇ ಸ್ತ್ರೀಯರು ದೌರ್ಜನ್ಯಕ್ಕೆ ಒಳಗಾಗುತ್ತಾರೆ. ಸರ್ಕಾರವು ಬ್ರೂಣ ಲಿಂಗ ಪತ್ತೆ ಹಾಗೂ ಬ್ರೂಣ ಹತ್ಯೆಯನ್ನು ನಿಷೇಧಿಸಿದ್ದರೂ ಇಂತಹ ಘಟನೆಗಳು ಎಗ್ಗಿಲ್ಲದೆ ಸಾಗುತ್ತಿವೆ.
ನೆಪ ಮಾತ್ರಕ್ಕೆ ಪೊಲೀಸ್ ಠಾಣೆಯಲ್ಲಿ ದಾಖಲಾಗುವ ಹಾಗೂ ಮಾಧ್ಯಮಗಳಲ್ಲಿ ವರದಿಯಾಗುವ ಪ್ರಕರಣಗಳು ಕೆಲವು ಮಾತ್ರ. ಹೆಚ್ಚಿನ ಸಂಖ್ಯೆಯಲ್ಲಿ ಬ್ರೂಣ ಹತ್ಯೆ ಪ್ರಕರಣಗಳು ಬೆಳಕಿಗೆ ಬಾರದೆ ನಡೆಯುತ್ತಿವೆ. ಪೋಷಕರು ಹಾಗೂ ವೈದ್ಯರ ನಡುವಿನ ಅನೇಕ ಪ್ರಕರಣಗಳು ಪೊಲೀಸ್ ಠಾಣೆಯ ಮೆಟ್ಟಿಲೇರುವುದಿಲ್ಲ.
ಬ್ರೂಣ ಲಿಂಗ ಪತ್ತೆ ಮಾಡಿದ ವೈದ್ಯರಿಗೆ ಕಾನೂನು ಹೇಳುವ ಶಿಕ್ಷೆಯಾಗುವುದಿಲ್ಲ. ದೇಶದ ಹೆಣ್ಣು ಮಕ್ಕಳ ರಕ್ಷಣೆಗೆ ಸರ್ಕಾರಗಳು ಪ್ರಭಲ ಕಾನೂನು ಜಾರಿ ಮಾಡುವ ಜೊತೆಗೆ ಜನ ಜಾಗೃತಿ ಮೂಲಕ ಬ್ರೂಣ ಹತ್ಯೆ ತಡೆಯುವ ಯೋಜನೆಗಳು ಜಾರಿಯಾಗಬೇಕೆಂದು ಸರ್ಕಾರಗಳಿಗೆ ಮನವಿ ಮಾಡಿದರು.
ರೈತಸಂಘದ ರಾಜ್ಯ ಉಪಾಧ್ಯಕ್ಷ ಕೆ.ನಾರಾಯಣಗೌಡ ಮಾತನಾಡಿ, ಭಯ ಮುಕ್ತ ವಾತಾವರಣ ನಿರ್ಮಾಣ ಮಾಡುವಲ್ಲಿ ಸರ್ಕಾರಗಳು ವಿಫಲವಾಗಿವೆ. ದೇಶಕ್ಕೆ ಸ್ವಾತಂತ್ರ್ಯ ಬಂದು 10 ದಶಕಗಳು ಕಳೆದರೂ ನಿರ್ಜನ ಪ್ರದೇಶದಲ್ಲಿ ಮಹಿಳೆಯರು ಏಕಾಂಗಿಯಾಗಿ ಸಂಚರಿಸಬೇಕಾದರೆ ಜೀವ ಕೈಯಲ್ಲಿ ಹಿಡಿದು ಹೆಜ್ಜೆ ಇಡಬೇಕಾದ ಪರಿಸ್ಥಿತಿಯಿದೆ.
ಆಧುನಿಕ ಯುಗದಲ್ಲಿ ಹಲವಾರು ಮಹಿಳಾ ರಕ್ಷಣೆ ದಾರಿಗಳಿದ್ದರೂ ಸರ್ಕಾರ ಅಳವಡಿಸಿಕೊಳ್ಳದೆ ಕಾಲಹರಣ ಮಾಡುವ ಮುಖಾಂತರ ದೌರ್ಜನ್ಯಕ್ಕೆ ಒಳಗಾದಾಗ ಮೊಸಳೆ ಕಣ್ಣೀರು ಸುರಿಸುವ ಬದಲು ಸೂಕ್ಷ್ಮ ಪ್ರದೇಶಗಳಲ್ಲಿ ಸಿಸಿಟಿವಿ ಪೊಲೀಸರ ಗಸ್ತು ಕಿಡಿಗೇಡಿ ವರ್ತನೆ ಮಾಡುವವರ ವಿರುದ್ಧ ಕಠಿಣ ಕ್ರಮ. ಮಹಿಳೆಯರ ಮೇಲೆ ಅಪರಾಧ ಕೃತ್ಯ ನಡೆದಾಗ ತನಿಖೆ ಮಾಡಲು ರಾಜಕೀಯ ಒತ್ತಡವಿಲ್ಲದ ಪೊಲೀಸ್ ಠಾಣೆ ಸೇರಿದಂತೆ ಹತ್ತು ಹಲವಾರು ಕ್ರಮ ಕೈಗೊಂಡರೆ ಮಹಿಳೆಯರ ಮೇಲಿನ ದೌರ್ಜನ್ಯ ತಡೆಯಬಹುದು ಎಂದು ಸಲಹೆ ನೀಡಿದರು.
ಕಾರ್ಯಕ್ರಮದಲ್ಲಿ ಜಿಲ್ಲಾಧ್ಯಕ್ಷ ಐತಾಂಡಹಳ್ಳಿ ಮಂಜುನಾಥ್, ಯುವ ರೈತ ಮುಖಂಡ ನಂಗಲಿ ಕಿಶೋರ್, ಪದ್ಮಘಟ್ಟ ಧರ್ಮ, ನಂಗಲಿ ನಾಗೇಶ್, ಜಿಲ್ಲಾ ಕಾರ್ಯಾಧ್ಯಕ್ಷ ಹೆಬ್ಬಣಿ ಆನಂದರೆಡ್ಡಿ, ರಾಮಮೂರ್ತಿ, ಸೋಮಶೇಖರ್, ರಾಜು, ಶಶಿ, ಅಂಬ್ಲಿಕಲ್ ಮಂಜುನಾಥ್, ಕೋಲಾರ ತಾಲೂಕು ಅಧ್ಯಕ್ಷ ಈಕಂಬಳ್ಳಿ ಮಂಜುನಾಥ್, ಹಸಿರುಸೇನೆ ತಾಲೂಕು ಅಧ್ಯಕ್ಷ ವೇಣು ಮುಂತಾದವರಿದ್ದರು.