ಏಡ್ಸ್ ನ್ನು ಸಂಪೂರ್ಣ ಸಂಹಾರ ಮಾಡುವ ನಿಟ್ಟಿನಲ್ಲಿ ಆರೋಗ್ಯ ಇಲಾಖೆ ಬದ್ಧತೆಯಿಂದ ಕಾರ್ಯನಿರ್ವಹಿಸಬೇಕು; ಎನ್.ಎಂ.ನಾಗರಾಜ

ಕೋಲಾರ,ಜು.15: ಏಡ್ಸ್ ಎಂಬ ವ್ಯಾದಿಯನ್ನು ಸಮಾಜದಿಂದ ಸಂಪೂರ್ಣ ಸಂಹಾರ ಮಾಡುವ ನಿಟ್ಟಿನಲ್ಲಿ ಆರೋಗ್ಯ ಇಲಾಖೆ ಬದ್ಧತೆಯಿಂದ ಕಾರ್ಯನಿರ್ವಹಿಸಬೇಕೆಂದು, ರಾಜ್ಯ ಏಡ್ಸ್ ನಿಯಂತ್ರಣ ಸಂಘದ ಯೋಜನಾ ನಿರ್ದೇಶಕರು ಆಗಿರುವ ಐ.ಎ.ಎಸ್.ಅಧಿಕಾರಿ ಎನ್.ಎಂ.ನಾಗರಾಜ ಅವರು ಸೂಚಿಸಿದರು.
ನಗರದ ಎಸ್.ಎನ್.ಆರ್.ಆಸ್ಪತ್ರೆಗೆ ದಿಢೀರ್ ಭೇಟಿನೀಡಿ ಇಲ್ಲಿನ ಏಡ್ಸ್ ನಿಯಂತ್ರಣ ವಿಭಾಗ, ಎ.ಆರ್.ಟಿ.ಕೇಂದ್ರ, ಬ್ಲಡ್ ಬ್ಯಾಂಕ್ ಮತ್ತು ಪಿ.ಪಿ.ಟಿ.ಸಿ ಕೇಂದ್ರಗಳನ್ನು ಪರಿಶೀಲಿಸಿ, ದಾಖಲೆಗಳನ್ನು ವೀಕ್ಷಿಸಿ, ವೈದ್ಯಾಧಿಕಾರಿಗಳು, ತಜ್ಞ ಸಿಬ್ಬಂದಿ ಹಾಗೂ ನೌಕರರೊಡನೆ ಸಮಾಲೋಚನೆ ನಡೆಸಿದರು.
ಜಿಲ್ಲೆಯಲ್ಲಿ ಏಡ್ಸ್ ಹಬ್ಬುವಿಕೆಯಲ್ಲಿ ಗಣನೀಯವಾಗಿ ಇಳಿಕೆಯಾಗಿದ್ದು, ಇದನ್ನು ಕೆಲವೇ ವರ್ಷಗಳಲ್ಲಿ ಶೂನ್ಯಕ್ಕೆ ತರಬೇಕು. ಈಗಾಗಲೇ ಇರುವ ಸೋಂಕಿತರಿಗೆ ನಿಯಮದಂತೆ ಚಿಕಿತ್ಸೆ ಮುಂದುವರೆಸಬೇಕು. ಹೊಸ ಸೋಂಕು ಹರಡದಂತೆ ಜನರಲ್ಲಿ ಅದರಲ್ಲೂ ಮುಖ್ಯವಾಗಿ ಯುವ ಜನತೆಯಲ್ಲಿ ಆರೋಗ್ಯದ ಮಹತ್ವದ ಅರಿವು, ಮುನ್ನೆಚ್ಚರಿಕೆ ಕ್ರಮಗಳ ಬಗ್ಗೆ ಮನದಟ್ಟು ಮಾಡಬೇಕೆಂದು ಒತ್ತಿ ಹೇಳಿದರು.
ಏಡ್ಸ್ ನಿಯಂತ್ರಣಕ್ಕಾಗಿ ಕೇಂದ್ರ ಹಾಗೂ ರಾಜ್ಯ ಸರ್ಕಾರಗಳು ಪ್ರತ್ಯೇಕ ಇಲಾಖೆಯನ್ನೇ ತೆರೆದಿದ್ದು, ಕೋಟ್ಯಂತರ ರೂಗಳನ್ನು ವ್ಯಯಿಸಲಾಗುತ್ತಿದೆ. ಪೊಲಿಯೋ, ಕ್ಷಯ ಸೇರಿದಂತೆ ಇತರೆ ಗಂಭೀರ ಕಾಯಿಲೆಗಳನ್ನು ಕೊನೆಗಾಣಿಸಿದಂತೆ, ಏಡ್ಸ್‍ನ್ನು ಸಹ ಸಮಾಜದಿಂದ ಮುಕ್ತಗೊಳಿಸಬೇಕು, ಹೊಸ ಸೋಂಕು ಹರಡದಂತೆ ಅರಿವು, ಸೂಕ್ತ ಚಿಕಿತ್ಸೆ ಮೂಲಕ ಸಾವುಗಳನ್ನು ತಡೆಯುವಂತೆ ಮಾಡಬೇಕು. ಚಿಕಿತ್ಸೆ ಪ್ರಾರಂಭಿಸಿ ಮತ್ತೆ ಬಾರದಿರುವ ಸೋಂಕಿತರನ್ನು ಟ್ರ್ಯಾಕ್ ಮಾಡಿ ಹುಡುಕಿ ಚಿಕಿತ್ಸೆ ನೀಡುವ ಬಗ್ಗೆ ಎಚ್ಚರಿಕೆ ವಹಿಸಬೇಕೆಂದು ಸೂಚಿಸಿದರು.
ಈ ಸಂದರ್ಭದಲ್ಲಿ ಎಸ್.ಎನ್.ಆರ್.ಆಸ್ಪತ್ರೆಯ ಜಿಲ್ಲಾ ಶಸ್ತ್ರ ಚಿಕಿತ್ಸಕ ಡಾ.ಎಸ್.ಎನ್.ವಿಜಯಕುಮಾರ್, ನಿವಾಸಿ ವೈದ್ಯಾಧಿಕಾರಿ ಡಾ.ಬಾಲಸುಂದರ್, ಜಿಲ್ಲಾ ಅಂಧತ್ವ ನಿವಾರಣಾಧಿಕಾರಿ ಡಾ.ಎನ್.ಸಿ.ನಾರಾಯಣಸ್ವಾಮಿ, ರಕ್ತನಿಧಿ ವೈದ್ಯಾಧಿಕಾರಿ ಡಾ.ರೇವತಿ, ಸಿಬ್ಬಂದಿಗಳಾದ ಹೇಮಲತಾ, ಶ್ರೀನಿವಾಸ್, ಶಿವಾರೆಡ್ಡಿ, ಸುಮತಿ, ಸಂಗೀತ ಮತ್ತಿತರರು ಉಪಸ್ಥಿತರಿದ್ದರು.