ಬೆಂಗಳೂರು : ಕಳೆದ ಒಂದು ವರ್ಷದಿಂದ ನೆನೆಗುದಿಗೆ ಬಿದ್ದಿರುವ ಜಿಲ್ಲಾ ಮತ್ತು ಪ್ರಾದೇಶಿಕ ಪತ್ರಿಕೆಗಳ ಶೇ.12 ರಷ್ಟು ಜಾಹೀರಾತು ದರವನ್ನು ಶೀಘ್ರವೇ ಹೆಚ್ಚಳ ಮಾಡಲಾಗುವುದೆಂದು ವಾರ್ತಾ ಮತ್ತು ಸಾರ್ವಜನಿಕ ಸಂಪರ್ಕ ಇಲಾಖೆ ಆಯುಕ್ತರಾದ ಸೂರಳ್ಕರ್ ವಿಕಾಸ್ ಕಿಶೋರ್ ಭರವಸೆ ನೀಡಿದರು.
ಕರ್ನಾಟಕ ಕಾರ್ಯನಿರತ ದಿನಪತ್ರಿಕೆಗಳ ಸಂಪಾದಕರ ಸಂಘದ ರಾಜ್ಯಾಧ್ಯಕ್ಷ ಎ.ಸಿ.ತಿಪ್ಪೇಸ್ವಾಮಿ ಅವರ ನೇತೃತ್ವದಲ್ಲಿ ಶನಿವಾರ ಮಧ್ಯಾಹ್ನ ಆಯುಕ್ತರನ್ನು ಭೇಟಿ ಮಾಡಿ ಈ ಹಿಂದಿನ ಆಯುಕ್ತರೊಂದಿಗೆ ಸಂಘದ ಪದಾಧಿಕಾರಿಗಳು ಸಭೆ ನಡೆಸಿ ಸಲ್ಲಿಸಲಾದ ಮನವಿಯಲ್ಲಿನ ಬೇಡಿಕೆಗಳ ಕುರಿತು ಆಯುಕ್ತರ ಗಮನಕ್ಕೆ ತರಲಾಯಿತು. ಸಂಘದ ಯಾವೊಂದು ಬೇಡಿಕೆಗಳನ್ನು ಸಹ ಇದುವರೆಗೆ ಇಲಾಖೆ ಈಡೇರಿಸದ ಬಗ್ಗೆ ಬೇಸರ ವ್ಯಕ್ತಪಡಿಸಿದ ಸಂಘದ ಪದಾಧಿಕಾರಿಗಳು ಕೂಡಲೇ ಜಾಹೀರಾತು ದರ ಹೆಚ್ಚಳ, ಇಲಾಖೆಯಲ್ಲಿ ಹೊಸದಾಗಿ ಸೇರಿರುವ ಎಸ್ ಸಿ/ಎಸ್ ಟಿ/ಒಬಿಸಿ ಪತ್ರಿಕೆಗಳಿಗೆ ಮಾಸಿಕ ಒಂದು ಪುಟ ಜಾಹೀರಾತು ನೀಡಿಕೆ ಕುರಿತು ಕ್ರಮಕೈಗೊಳ್ಳುವಂತೆ ಮನವಿ ಮಾಡಲಾಯಿತು.
ಇನ್ನೂ ಇಲಾಖೆಯಿಂದ ಜಾಹೀರಾತು ಸಂಸ್ಥೆಗಳಿಗೆ ಹಣ ಪಾವತಿಯಾಗಿದ್ದರೂ ಕೂಡ ಪತ್ರಿಕೆಗಳಿಗೆ ಕೆಲವು ಏಜೆನ್ಸಿಗಳು ಹಣ ಪಾವತಿ ಮಾಡದಿರುವ ಕುರಿತು ಆಯುಕ್ತರ ಗಮನಕ್ಕೆ ತರಲಾಯಿತು. ಇಲಾಖೆ ಎಜೆನ್ಸಿಗಳ ಮೂಲಕ ಜಿಲ್ಲಾ ಮತ್ತು ಪ್ರಾದೇಶಿಕ ಪತ್ರಿಕೆಗಳಿಗೆ ಬಿಡುಗಡೆ ಮಾಡುವ ಜಾಹೀರಾತುಗಳಿಗೆ ಸಂಬಂಧಿಸಿದಂತೆ ಪತ್ರಿಕೆಗಳು ಏಜೆನ್ಸಿಗಳಿಗೆ ಶೇ.15 ರಷ್ಟು ಕಮಿಷನ್ ನೀಡದಿರುವ ಬಗ್ಗೆ ಕ್ರಮ ಕೈಗೊಳ್ಳುವಂತೆ ವಿನಂತಿ ಮಾಡಲಾಯಿತು.ಒಂದು ವೇಳೆ ಕಮಿಷನ್ ಕೊಡಲೇಬೇಕೆಂದರೆ ಪತ್ರಿಕೆಗಳಿಗೆ ಎಜೆನ್ಸಿಗಳು ಹಣ ಕೊಡಬೇಕಾದ ಅವಧಿಯನ್ನ ನಿಗಧಿಪಡಿಸಿ ಇಲಾಖೆಯಿಂದ ಆದೇಶ ಹೊರಡಿಸುವಂತೆ ಕೋರಲಾಯಿತು.
ಸಂಘದ ಮನವಿ ಸ್ವೀಕರಿಸಿ ಶಾಂತ ರೀತಿಯಿಂದ ಬೇಡಿಕೆಗಳ ಕುರಿತು ಆಲಿಸಿದ ಅದಕ್ಕೆ ಸ್ಪಂದಿಸಿದ ಆಯುಕ್ತರು ನನ್ನ ಅಧಿಕಾರದ ಹಂತದಲ್ಲಿ ಕ್ರಮಕೈಗೊಳ್ಳಬೇಕಾದ ನಿಮ್ಮ ಸಂಘದ ಬೇಡಿಕೆಗಳಿಗೆ ಚುನಾವಣೆ ಮುಗಿದ ತಕ್ಷಣ ಮುಂದಿನ ಒಂದು ವಾರದೊಳಗೆ ಖಂಡಿತ ಕ್ರಮತೆಗೆದುಕೊಳ್ಳುತ್ತೇನೆ ಎಂಬ ಭರವಸೆಯನ್ನು ಸಂಘದ ನಿಯೋಗಕ್ಕೆ ಆಯುಕ್ತರು ನೀಡಿದರು.
ಆಯುಕ್ತರ ಭರವಸೆಯಿಂದ ಮತ್ತು ಒಂದು ವರ್ಷದಿಂದ ನೆನೆಗುದಿಗೆ ಬಿದ್ದಿರುವ ಜಾಹೀರಾತು ದರ ಹೆಚ್ಚಳ, ಎಸ್ಸಿ, ಎಸ್ಟಿ, ಒಬಿಸಿ, ಬ್ರಾಹ್ಮಣ ಸಂಪಾದಕತ್ವದ ಪತ್ರಿಕೆಗಳಿಗೆ ಜಾಹೀರಾತು ನೀಡಿಕೆ, ಐದು ವರ್ಷ ಪೂರೈಸಿರುವ ಒಬಿಸಿ ಪತ್ರಿಕೆಗಳಿಗೆ ಎರಡು ಪುಟಗಳ ಜಾಹೀರಾತು ಕೊಡುವ ಕಡತಗಳಿಗೆ ಮತ್ತು ಬಾಕಿ ಉಳಿದಿರುವ ಪತ್ರಿಕೆಗಳ ಕಡತಗಳಿಗೆ ಮುಕ್ತಿ ಸಿಗಬಹುದೆಂಬ ಆಶಾಭಾವನೆ ಸಂಘದ ಪದಾಧಿಕಾರಿಗಳಿಗೆ ಆಯಿತು.
ಕೊಪ್ಪಳ ಜಿಲ್ಲಾ ಘಟಕದ ಪ್ರಧಾನ ಕಾರ್ಯದರ್ಶಿ ಅವರ ನೇತೃತ್ವದಲ್ಲಿ ಇಲಾಖೆ ಅಯುಕ್ತರನ್ನು ಬಿಬಿಎಂಪಿ ಕಚೇರಿಯಲ್ಲಿ ಶುಕ್ರವಾರ ಭೇಟಿ ಮಾಡಿ ಸಂಘದ ಬೇಡಿಕೆಗಳ ಕುರಿತು ಸಹ ಚರ್ಚಿಸಲಾಗಿತ್ತು.
ಶನಿವಾರ ಕೂಡ ಬೆಳಿಗ್ಗೆ ಭೇಟಿ ಮಾಡಿದ ಸಂದರ್ಭದಲ್ಲಿ ಸಂಘದ ಪದಾಧಿಕಾರಿಗಳಿಗೆ ಮಧ್ಯಾಹ್ನ ಭೇಟಿ ಮಾಡಿ ಚರ್ಚಿಸುವಂತೆ ಆಯುಕ್ತರು ತಿಳಿಸಿದ್ದರಿಂದ ಸಂಘದ ಪದಾಧಿಕಾರಿಗಳಾದ ಮಹಮದ್ ಯೂನುಸ್, ಜಿ.ವೈ ಪದ್ಮಾ ನಾಗರಾಜ್, ಹೆಚ್.ನರಸಿಂಹರಾಜು,ಕೆ. ಎಸ್. ಸ್ವಾಮಿ , ದಾವಣಗೆರೆ ಜಿಲ್ಲಾ ಘಟಕದ ಕಾರ್ಯದರ್ಶಿ ಗೋವಿಂದರಾಜು ಅವರೊಂದಿಗೆ ಭೇಟಿ ಮಾಡಿ ಚರ್ಚಿಸಲಾಯಿತು.