

ಕುಂದಾಪುರ: ಫೆಬ್ರವರಿ 9ರಂದು ಇಲ್ಲಿನ ಭಂಡಾರ್ಕಾರ್ಸ್ ಕಲಾ ಮತ್ತು ವಿಜ್ಞಾನ ಕಾಲೇಜು ಇದರ ರಾಷ್ಟ್ರೀಯ ಸೇವಾ ಯೋಜನೆಯ ವಾರ್ಷಿಕ ವಿಶೇಷ ಶಿಬಿರದ ಸಮಾರೋಪ ಸಮಾರಂಭವು ಸರಕಾರಿ ಹಿರಿಯ ಪ್ರಾಥಮಿಕ ಶಾಲೆ, ಆಜ್ರಿ ಮಾನಂಜೆ, ಕಮಲಶಿಲೆ ಇಲ್ಲಿ ನೆರವೇರಿತು.
ರಾಜೀವ ಶೆಟ್ಟಿ, ಹಂದಿಮನೆ, ಜೀವ ವಿಮಾ ವಿತರಕರು ಇವರು ಸಮಾರೋಪ ಭಾಷಣ ಮಾಡಿ ಏಳು ದಿನಗಳ ಶಿಬಿರದಲ್ಲಿ ಶಿಸ್ತು, ಶ್ರಮದಾನ, ಶೈಕ್ಷಣಿಕ ಹಾಗೂ ಸಾಂಸ್ಕೃತಿಕ ಕಾರ್ಯಕ್ರಮದ ಮೂಲಕ ಇಲ್ಲಿಯ ಜನರ ಮನಸ್ಸನ್ನು ಗೆದ್ದಿದ್ದೀರಿ. ಇದನ್ನು ತಮ್ಮ ಮುಂದಿನ ಜೀವನದಲ್ಲಿ ಆಳವಡಿಸಿಕೊಳ್ಳಿ ಎಂದು ಶುಭಹಾರೈಸಿದರು. ಶಾಲಾಭಿವೃದ್ಧಿ ಮಂಡಳಿಯ ಅಧ್ಯಕ್ಷರಾದ ರಾಘವೇಂದ್ರ ಮಯ್ಯ ಇವರು ಈ ಪರಿಸರದಲ್ಲಿ ಏಳು ದಿನಗಳ ಕಾಲ ಹಬ್ಬದ ವಾತಾವರಣವನ್ನು ನಿರ್ಮಿಸಿದ್ದೀರಿ. ಇಲ್ಲಿ ಪಡೆದ ಶಿಕ್ಷಣ ನಿಮ್ಮ ಮುಂದಿನ ಜೀವನಕ್ಕೆ ಸಹಕಾರಿಯಾಗಲಿದೆ ಎಂದು ಹಾರೈಸಿದರು. ಸಮಾರಂಭದಲ್ಲಿ ಉಪಸ್ಥಿತರಿದ್ದ ಕಾಲೇಜಿನ ವಿದ್ಯಾರ್ಥಿ ಕ್ಷೇಮಪಾಲನಾಧಿಕಾರಿಪ್ರೊ. ಸತ್ಯನಾರಾಯಣ ಹತ್ವಾರ್ ಇವರು ತಮ್ಮ ಶಿಸ್ತು ಕಾರ್ಯಚಟುವಟಿಕೆಗಳಿಂದ ಕಾಲೇಜಿನ ಹೆಸರನ್ನು ಎತ್ತಿಹಿಡಿದಿದ್ದೀರಿ ಎನ್ನುತ್ತಾ ಊರಿನವರ ಸಹಕಾರಕ್ಕೆ ಧನ್ಯವಾದಗಳನ್ನು ತಿಳಿಸಿದರು. ಕಾರ್ಯಕ್ರಮದ ಅಧ್ಯಕ್ಷ ಸ್ಥಾನವನ್ನು ವಹಿಸಿದ್ದ ಕಾಲೇಜಿನ ಪ್ರಾಂಶುಪಾಲರಾದ ಡಾ. ಶುಭಕಾರಾಚಾರಿಯವರು ಈ ಶಿಬಿರದಲ್ಲಿ ಕಲಿತ ಸಮಯ ಪಾಲನೆ,ಸಹಬಾಳ್ವೆಯ ಮಹತ್ವವನ್ನು ತಿಳಿಸಿ ಊರಿನವರಿಗೆ ಕೃತಜ್ಞತೆ ತಿಳಿಸಿದರು.
ಶಿಬಿರಾರ್ಥಿಗಳಾದ ಕುಮಾರಿ ಸಮೃದ್ಧಿ, ಲತಿಕಾ ಹಾಗೂ ಚೇತನ್ ಶಿಬಿರದ ಬಗ್ಗೆ ತಮ್ಮ ಅನುಭವ ಹಂಚಿಕೊಂಡರು. ಶಿಬಿರಾರ್ಥಿಗಳ ಪರವಾಗಿ ಶಾಲೆಗೆ ನೆನೆಪಿನ ಕಾಣಿಕೆಯನ್ನು ಪ್ರಾಂಶುಪಾಲರು
ಎಸ್. ಡಿ.ಎಂ.ಸಿ ಅಧ್ಯಕ್ಷರಿಗೆ ಹಸ್ತಾಂತರಿಸಿದರು. ಸೇವಾಸಿಂಚನ ಫೌಂಡೇಶನ್ (ರಿ ) ವತಿಯಿಂದ ಶಿಬಿರಾರ್ಥಿಗಳಿಗೆ, ಶಿಬಿರಾಧಿಕಾರಿಗಳಿಗೆ, ಸಹಶಿಬಿರಾಧಿಕಾರಿಗಳಿಗೆ ನೆನಪಿನ ಕಾಣಿಕೆಯನ್ನು ನೀಡಲಾಯಿತು. ಎನ್.ಎಸ್.ಎಸ್ ಯೋಜಾನಾಧಿಕಾರಿ ಅರುಣ್ ಏ ಎಸ್ ವಂದಿಸಿದರು. ಯೋಜನಾಧಿಕಾರಿಯಾದ ಇನ್ನೋರ್ವ ರಾಮಚಂದ್ರ ಆಚಾರ್ ಕಾರ್ಯಕ್ರಮ ನಿರ್ವಹಿಸಿದರು.
