ಚಿಕ್ಕಬಳ್ಳಾಪುರ ಜಿಲ್ಲಾ ಸಹಕಾರ ಹಾಲು ಒಕ್ಕೂಟ ವಿಭಜನೆಗೆ ಅಭ್ಯಂತರವಿಲ್ಲ

ವರದಿ: ಶಬ್ಬೀರ್ ಅಹಮ್ಮದ್, ಶ್ರೀನಿವಾಸಪುರ

ಕೋಲಾರ-ಚಿಕ್ಕಬಳ್ಳಾಪುರ ಜಿಲ್ಲಾ ಸಹಕಾರ ಹಾಲು ಒಕ್ಕೂಟ ವಿಭಜನೆಗೆ ಈಗಾಗಲೇ ಒಕ್ಕೂಟದ ಆಡಳಿತ ಮಂಡಲಿ, ವಾರ್ಷಿಕ ಸಾಮಾನ್ಯ ಸಭೆಗಳಲ್ಲಿ ಚರ್ಚಿಸಿ ತೀರ್ಮಾನಿಸಿರುವಂತೆ ವಿಭಜನೆ ಮಾಡಲು ಸಮ್ಮತಿಸಿರುವುದರಿಂದ, ಒಕ್ಕೂಟವನ್ನು ವಿಭಜಿಸಲು ನನ್ನ ಅಭ್ಯಂತರವಿರುವುದಿಲ್ಲ. ಎನ್. ಹನುಮೇಶ್ ನಿರ್ದೇಶಕರು, ಶ್ರೀನಿವಾಸಪುರ ತಾಲ್ಲೂಕು ಕೋಲಾರ-ಚಿಕ್ಕಬಳ್ಳಾಪುರ ಜಿಲ್ಲಾ ಸಹಕಾರ ಹಾಲು ಒಕ್ಕೂಟ ನಿ. ಇವರು ಮಾಧ್ಯಮಕ್ಕೆ ತಿಳಿಸಿದ್ದಾರೆ.
ಚಿಕ್ಕಬಳ್ಳಾಪುರದಲ್ಲಿ ಅತ್ಯಾಧುನಿಕ ತಂತ್ರಜ್ಞಾನದ 5 ಲಕ್ಷ ಲೀಟರ್ ಸಾಮಥ್ರ್ಯದ ಮೆಗಾಡೇರಿಯನ್ನು ಅಂದಾಜು ರೂ. 200 ಕೋಟಿಗಳ ವೆಚ್ಚದಲ್ಲಿ ಸ್ಥಾಪಿಸಿದ್ದು, 3 ಸಂಖ್ಯೆಯ ಒಂದು ಲಕ್ಷ ಲೀಟರ್ ಸಾಮಥ್ರ್ಯದ ಶೀತಲೀಕರಣ ಕೇಂದ್ರಗಳು ಹಾಗೂ ಕರ್ನಾಟಕ ಹಾಲು ಮಹಾ ಮಂಡಳಿಯ ವತಿಯಿಂದ ಅಂದಾಜು ರೂ. 100 ಕೋಟಿಗಳ ವೆಚ್ಚದಲ್ಲಿ ಅತ್ಯಾಧುನಿಕ ತಂತ್ರಜ್ಞಾನದ ಪಶು ಆಹಾರ ಘಟಕವನ್ನು ಶಿಡ್ಲಘಟ್ಟ ತಾಲ್ಲೂಕು ಎಸ್. ಗೊಲ್ಲಹಳ್ಳಿ ಇಲ್ಲಿ ಸ್ಥಾಪಿಸಲಾಗುತ್ತಿದೆ.
ಆದರೆ ಕೋಲಾರ ಮುಖ್ಯಡೇರಿಯು ಸುಮಾರು 27 ವರ್ಷಗಳ ಹಿಂದೆ ನಿರ್ಮಿಸಿರುವ ಹಳೆಯ ಡೇರಿಯಾಗಿದ್ದು, ಇಲ್ಲಿನ ಯಂತ್ರೋಪಕರಣಗಳು ಹಾಗೂ ತಂತ್ರಜ್ಞಾನವು ಹಳೆಯದಾಗಿ ಇಂದಿನ ಅಂತರರಾಷ್ಟ್ರೀಯ ಮಟ್ಟದಲ್ಲಿ ಸ್ಪರ್ಧಾತ್ಮಕ ಗುಣಮಟ್ಟದ ಉತ್ಪನ್ನಗಳನ್ನು ಉತ್ಪಾದಿಸಲು ಅತ್ಯಾಧುನಿಕ ತಂತ್ರಜ್ಞಾನವನ್ನು ಅಳವಡಿಸಿಕೊಳ್ಳುವುದು ಅತ್ಯವಶ್ಯಕವಾಗಿರುವ ಹಿನ್ನೆಲೆಯಲ್ಲಿ ಮುಖ್ಯಡೇರಿಯ ಆವರಣದಲ್ಲಿ ರೂ. 130 ಕೋಟಿಗಳ ವೆಚ್ಚದಲ್ಲಿ 10 ಲಕ್ಷ ಲೀಟರ್ ಸಾಮಥ್ರ್ಯದ ಎಂ.ವಿ.ಕೆ. ಗೋಲ್ಡನ್ ಡೇರಿ ಸ್ಥಾಪನೆಗೆ ಸರ್ಕಾರದ ಅನುಮತಿ ಪಡೆದು ಘಟಕ ನಿರ್ಮಾಣಕ್ಕಾಗಿ ಟೆಂಡರ್ ಚಾಲನೆಗೊಳಿಸುವ ಸಂದರ್ಭದಲ್ಲಿ ಹಲವು ಕಾರಣಗಳೊಡ್ಡಿ ಸಹಕಾರ ಸಚಿವರ ನೇತೃತ್ವದಲ್ಲಿ ನಡೆದ ಸಭೆಯಲ್ಲಿ ತಡೆಯಾಜ್ಞೆ ನೀಡಿರುತ್ತಾರೆ. ತದನಂತರ ಕೋಲಾರ ಹಾಲು ಒಕ್ಕೂಟದ ಸ್ಥಿತಿಗತಿಗಳ ಬಗ್ಗೆ ಹಾಗೂ ಎಂ.ವಿ.ಕೆ. ಗೋಲ್ಡನ್ ಡೇರಿಯ ಅವಶ್ಯಕತೆಯ ಬಗ್ಗೆ ಮಾನ್ಯ ಸಹಕಾರ ಸಚಿವರಲ್ಲಿ ಮನವರಿಕೆ ಮಾಡಿಕೊಟ್ಟ ನಂತರ ತಡೆಯಾಜ್ಞೆ ತೆರವುಗೊಳಿಸಿ ಒಕ್ಕೂಟ
ವಿಭಜನೆ ಹಂತದಲ್ಲಿರುವುದರಿಂದ, ಕೋಲಾರ ಜಿಲ್ಲೆಯ ಹಾಲು ಶೇಖರಣೆ, ಉತ್ಪಾದನೆ, ಮಾರುಕಟ್ಟೆ ಅಂಶಗಳನ್ನು ಪರಿಗಣಿಸಿ ರಾಷ್ಟ್ರೀಯ ಹೈನು ಅಭಿವೃದ್ದಿ ಮಂಡಳಿಯ ಶಿಫಾರಸ್ಸಿನೊಂದಿಗೆ ನೂತನ ಪ್ರಸ್ತಾವನೆ ಸಲ್ಲಿಸಲು ಸೂಚಿಸಲಾಗಿರುತ್ತದೆ.
ಅದರಂತೆ ಕೋಲಾರ ಜಿಲ್ಲೆ ವ್ಯಾಪ್ತಿಯ ಹಾಲು ಶೇಖರಣೆ, ಉತ್ಪಾದನೆ, ಮಾರುಕಟ್ಟೆ ಅಂಶಗಳನ್ನು ಗಮನದಲ್ಲಿರಿಸಿ ರೂ. 185 ಕೋಟಿಗಳ ವೆಚ್ಚದಲ್ಲಿ ನೂತನವಾಗಿ ಎಂ.ವಿ.ಕೆ. ಗೋಲ್ಡನ್ ಡೇರಿ ನಿರ್ಮಾಣ ಮಾಡಲು ರಾಷ್ಟ್ರೀಯ ಹೈನು ಅಭಿವೃದ್ದಿ ಮಂಡಳಿಯವರಿಂದ ಶಿಫಾರಸ್ಸು ಪಡೆದು ಸಲ್ಲಿಸಿರುವ ಪ್ರಸ್ತಾವನೆಗೂ ಸಹ ಸರ್ಕಾರದ ಹಂತದಲ್ಲಿ ಅನುಮೋದನೆ ನೀಡದೇ ಬಾಕಿ ಇರುವುದು ಕೋಲಾರ ಜಿಲ್ಲೆಯ ಹಾಲು ಉತ್ಪಾದಕರಿಗೆ ಅನ್ಯಾವೆಸಗಿದಂತಾಗಿರುವುದರಿಂದ, ವಿಭಜನೆಗೂ ಮುನ್ನ ರೂ. 185 ಕೋಟಿಗಳ ವೆಚ್ಚದ ಎಂ.ವಿ.ಕೆ. ಗೋಲ್ಡನ್ ಡೇರಿ ನಿರ್ಮಾಣಕ್ಕೆ ಸರ್ಕಾರವು ಅನುಮೋದನೆ ನೀಡಿ ಈ ಭಾಗದ ಹಾಲು ಉತ್ಪಾದಕರ ಹಿತ ಕಾಯ್ದುಕೊಳ್ಳುವುದು ಸೂಕ್ತವೆಂದು ಅಭಿಪ್ರಾಯಿಸುತ್ತೇನೆ ಎಂದು.ಎನ್. ಹನುಮೇಶ್ ನಿರ್ದೇಶಕರು, ಶ್ರೀನಿವಾಸಪುರ ತಾಲ್ಲೂಕು ಕೋಲಾರ-ಚಿಕ್ಕಬಳ್ಳಾಪುರ ಜಿಲ್ಲಾ ಸಹಕಾರ ಹಾಲು ಒಕ್ಕೂಟ ನಿ. ಇವರು ಮಾಧ್ಯಮಕ್ಕೆ ತಿಳಿಸಿದ್ದಾರೆ.