

ತುಮಕೂರು: ಸಂಪೂರ್ಣ ಸುಟ್ಟ ಸ್ಥಿತಿಯಲ್ಲಿದ್ದ ಕಾರಿನಲ್ಲಿ ಮೂರು ಶವಗಳು ಪತ್ತೆ ಪ್ರಕರಣಕ್ಕೆ ಮೇಜರ್ ಟ್ವಿಸ್ಟ್ ಸಿಕ್ಕಿದೆ. ತುಮಕೂರಿನ ಕುಚ್ಚಂಗಿ ಕೆರೆಯಲ್ಲಿ ನಿಗೂಡವಾಗಿ ಮೂವರ ಶವ ಸಿಕ್ಕಿದ್ದು,ಪ್ರಕರಣದ ಬೆನ್ನತ್ತಿದ್ದ ಪೊಲೀಸರು ಒಂದೇ ದಿನದಲ್ಲಿ ಮೂವರ ಭೀಕರ ಕೊಲೆಯ ಪ್ರಕರಣವನ್ನು ಭೇದಿಸಿದ್ದಾರೆ. ಚಿನ್ನದ ಆಸೆಗಾಗಿ ಹಣ ತಂದ ಮೂವರು ಭೀಕರವಾಗಿ ಕೊಲೆಯಾಗಿ ಹೋಗಿದ್ದಾರೆ.ಪೊಲೀಸರು ನೀಡಿದ ಮಾಹಿತಿ ಮೇರೆಗೆ ಸ್ಥಳಕ್ಕೆ ಬಂದ ಮೃತರ ಸಂಬಂಧಿಕರಿಗೆ ಅಸಲಿ ಸತ್ಯ ತಿಳಿದಿದೆ. ಸದ್ಯ ಕೊಲೆ ಪ್ರಕರಣಕ್ಕೆ ಸಂಬಂಧಪಟ್ಟಂತೆ ಪ್ರಮುಖ ಆರೋಪಿ ಸ್ವಾಮಿ ಸೇರಿ ಒಟ್ಟು 6 ಜನರನ್ನು ಪೊಲೀಸರು ವಶಕ್ಕೆ ಪಡೆದಿದ್ದಾರೆ ಎನ್ನಲಾಗಿದೆ.
ಒಂದೇ ದಿನದಲ್ಲಿ ಪ್ರಕರಣ ಭೇದಿಸಿದ ಪೊಲೀಸರು
ಸುಟ್ಟ ಸ್ಥಿತಿಯಲ್ಲಿ ಪತ್ತೆಯಾಗಿರೋ ಕಾರಿನಲ್ಲಿ ಮೂವರ ಶವ ಪತ್ತೆಯಾದ ದುರ್ಘಟನೆ ತುಮಕೂರು ತಾಲ್ಲೂಕಿನ ಕುಚ್ಚಂಗಿ ಕೆರೆ ಹತ್ತಿರ ನಡೆದಿತ್ತು. ಕೆಎ 43 ರಿಜೆಸ್ಟ್ರೀಷನ್ ನಂಬರಿನ ಮಾರುತಿ ಎಸ್ಪ್ರೆಸ್ಸೊ ಕಾರು ಕೆರೆ ಅಂಗಳದಲ್ಲಿ ನಿಗೂಢವಾಗಿ ನಿಂತಿದ್ದು, ಜನರು ಹತ್ತಿರ ತೆರಳಿದಾಗ ಮೂವರ ಶವ ಕಾರಿನೊಳಗೆ ಇರೋದು ಪತ್ತೆಯಾಗಿತ್ತು. ಬಳಿಕ ಕೋರಾ ಪೊಲೀಸರು ಸ್ಥಳಕ್ಕೆ ದೌಡಾಯಿಸಿ ಕೇಸು ದಾಖಲಿಸಿಕೊಂಡು ಪ್ರಕರಣದ ಬೆನ್ನತ್ತಿದ್ದರು. ಕೇಸು ದಾಖಲಾದ ಒಂದೇ ದಿನದಲ್ಲಿ ಬಹುತೇಕ ಪ್ರಕರಣವನ್ನ ಭೇದಿಸುವಲ್ಲಿ ತುಮಕೂರು ಪೊಲೀಸರು ಯಶಸ್ವಿಯಾಗಿದ್ದಾರೆ. ಕೊಲೆಯಾದವರು ಸುಮಾರು ೫೦ ಲಕ್ಷಕ್ಕೂ ಹೆಚ್ಚಿನ ಹಣ ಕಳೆದುಕೊಂಡಿದ್ದಾರೆಂದು ಕೊಲೆಯಾದವರ ಸಂಬಂಧಿಗಳು ತಿಳಿಸಿದ್ದಾರೆಂದು ಹೇಳಲಾಗುತ್ತದೆ. ನಕಲಿ ಚಿನ್ನ ತೋರಿಸಿ,ಹಣ ಲಪಟಾಯಿಸಿದ್ದಾರೆಂದು ಅನುಮಾನ ಪಡಲಾಗಿದೆ.