ವರದಿ: ಶಬ್ಬೀರ್ ಅಹಮ್ಮದ್, ಶ್ರೀನಿವಾಸಪುರ
ಶ್ರೀನಿವಾಸಪುರ, ಕೇಂದ್ರ ಮತ್ತು ರಾಜ್ಯದಲ್ಲಿ ಬಿಜೆಪಿ ಪಕ್ಷ ಆಡಳಿತವನ್ನು ನಡೆಸುತ್ತಿದ್ದು, ರೈತರ ಹೆಸರಿನಲ್ಲಿ ಅಧಿಕಾರವನ್ನು ಸ್ವೀಕರಿಸಿ ರೈತರ ಮೇಲೆ ಕೃಷಿಗೆ ಬಳಸುವ ರಸಗೊಬ್ಬರ ಮತ್ತು ಕೀಟನಾಶಕ ಯಂತ್ರೋಪಕರಣಗಳ ಬೆಲೆಯನ್ನು ಹೆಚ್ಚಿಸಿ ಕೇಂದ್ರ ಮತ್ತು ರಾಜ್ಯ ಸರ್ಕಾರ ರೈತರ ವಿರೋಧ ನೀತಿಗಳನ್ನು ಜಾರಿಗೆ ತಂದು ರೈತರಿಗೆ ತೊಂದರೆಯನ್ನು ಮಾಡುತ್ತೀದ್ದಾರೆಂದು ಕರ್ನಾಟಕ ರಾಜ್ಯ ರೈತ ಸಂಘ ಹಾಗೂ ಹಸಿರು ಸೇನೆಯ ರಾಜ್ಯ ಪ್ರಧಾನ ಕಾರ್ಯದರ್ಶಿ ಅಬ್ಬಣಿ ಶಿವಪ್ಪ ತಿಳಿಸಿದರು.
ಪಟ್ಟಣದ ತಾಲ್ಲೂಕು ಕಛೇರಿಯ ಅವರಣದಲ್ಲಿ ಉಪತಹಶೀಲ್ದಾರ್ಗೆ ಮನವಿ ಪತ್ರ ಸಲ್ಲಿಸಿ ಮಾತನಾಡಿದ ಶಿವಪ್ಪ ರೈತರ ಹೆಸರಿನಲ್ಲಿ ಅಧಿಕಾರಕ್ಕೆ ಬಂದ ರಾಜಕೀಯ ನಾಯಕರು ರೈತರ ಪರವಾಗಿ ಯಾವುದೇ ಕೆಲಸ ಮಾಡುತ್ತಿಲ್ಲ ಕನಿಷ್ಠ ಪಕ್ಷ ರಾಗಿಯ ಬೆಂಬಲ ಬೆಲೆಯಲ್ಲಿ ಖರೀದಿ ಮಾಡಿ ಸುಮಾರು 4 ತಿಂಗಳು ಕಳೆದರೂ ರೈತರಿಗೆ ಹಣ ಕೊಟ್ಟಿಲ್ಲ. ಭೂ ದಾಖಲೆ ಇಲಾಖೆಯಲ್ಲಿ ಸಿಬ್ಬಂದಿ ಕೊರತೆಯಿಂದ ಜಿಲ್ಲೆಯ ಒಂದರಲ್ಲಿಯೇ ರೈತರು ಸಲ್ಲಿಸಿರುವ ಸುಮಾರು 25 ಸಾವಿರ ಅರ್ಜಿಗಳು ಬಾಕಿರುತ್ತವೆ. ಪಂಚಾಯಿತಿಗಳಲ್ಲಿ ಇ-ಸ್ವತ್ತು ಮಾಡಲು ಸರ್ವೆಯರ್ಗಳ ಕೊರತೆ ಇದ್ದು, ವರ್ಷನೂಗಟ್ಟಲೇ ಇ-ಸ್ವತ್ತು ಬಾಕಿ ಇರುವುದರಿಂದ ತೀವ್ರ ತೊಂದರೆಯಾಗಿದೆ ಇದರ ಬಗ್ಗೆ ಕೂಡಲೇ ಕ್ರಮ ಕೈಗೊಳ್ಳಬೇಕು ಇಲ್ಲದ ಪಕ್ಷದಲ್ಲಿ ಜಿಲ್ಲೆಯಾದ್ಯಾಂತ ತಾಲ್ಲೂಕು ಕಛೇರಿಯ ಮುಂದೆ ಪ್ರತಿಭಟನೆಯನ್ನು ಹಮ್ಮಿಕೊಳ್ಳಲಾಗುವುದು ಎಂದರು.
ಕರ್ನಾಟಕ ರಾಜ್ಯ ರೈತ ಸಂಘ ಹಾಗೂ ಹಸಿರು ಸೇನೆ ರಾಜ್ಯ ಉಪಾಧ್ಯಕ್ಷ ಬೀಸನಹಳ್ಲಿ ಬೈಚೇಗೌಡ ಮಾತನಾಡಿ ಕಂದಾಯ ಇಲಾಖೆ ದಾಖಲೆಗಳಲ್ಲಿ ಸಣ್ಣ ಪುಟ್ಟ ತಿದ್ದುಪಡಿಗಳಿಗೂ ವರ್ಷನೂಗಟ್ಟಲೆ ರೈತರು ಕಛೇರಿಗಳಿಗೆ ಅಲೆದಾಡುವಂತಹ ಸನ್ನೀವೇಶವಿದ್ದು ಕೂಡಲೆ ಗ್ರಾಮ ಮಟ್ಟದಲ್ಲಿ ವಿಶೇಷ ಅದಾಲತ್ ನಡೆಸಿ ಸಮಸ್ಯೆ ಶೀಘ್ರವಾಗಿ ಇತ್ಯಾರ್ಥಪಡಿಸಬೇಕು. ಜಿಲ್ಲೆಯ ಕೆರೆಗಳಿಗೆ ತುಂಬಿಸುತ್ತಿರುವ ಕೆಸಿ ವ್ಯಾಲಿ ನೀರನ್ನು 3 ನೇ ಹಂತದಲ್ಲಿ ಶುದ್ದೀಕರಿಸಿ ನೀರನ್ನು ಕೆರೆಗಳಿಗೆ ಬಿಡಬೇಕು ಹಾಗೆಯೇ ಎತ್ತಿಹೊಳೆ ನೀರಾವರಿ ಯೋಜನೆಯ ಕಾಮಗಾರಿಯನ್ನು ತ್ವರಿತವಾಗಿ ಪೂರ್ಣಗೊಳಿಸಬೇಕು ರೈತರಿಗೆ 50 ವರ್ಷಗಳ ಹಿಂದೆ ಸಾಗುವಳಿ ಪತ್ರ ನೀಡಿದ್ದು ಇನ್ನೂ ದುರಸ್ತಿ ಮಾಡದೆ ಪಿ ನಂಬರ್ನಲ್ಲಿ ಇರುತ್ತದೆ. ಕೂಡಲೆ ಸರ್ಕಾರ ದುರಸ್ತಿ ಮಾಡುವ ಮೂಲಕ ಪಹಣಿಯಲ್ಲಿರುವ ಪಿ ನಮಬರ್ಗಳನ್ನು ತೆಗೆದು ರೈತರಿಗೆ ಸಾರ್ವಜನಿಕರಿಗೆ ಅನುಕೂಲ ಮಾಡಿಕೊಡಬೇಕೆಂದು ತಿಳಿಸಿದರು.
ಕೋಲಾರ ಜಿಲ್ಲಾಧ್ಯಕ್ಷ ಬೆಡಶೆಟ್ಟಿಹಳ್ಳಿ ರಮೇಶ್ ಮಾತನಾಡಿ ಕೇಂದ್ರ ಮತ್ತು ರಾಜ್ಯ ಸರ್ಕಾರಗಳು ಕೃಷಿ ಮತ್ತು ತೋಟಗಾರಿಕೆ ಉತ್ಪನ್ನಗಳಿಗೆ ಬೆಳೆ ಖಾತ್ರಿ ಮತ್ತು ಮಾರುಕಟ್ಟೆ ಭದ್ರತೆ ಒದಗಿಸುವವರಿಗೆ ಎಲ್ಲಾ ಸಹಾಯಧನಗಳನ್ನು ಮುಂದುವರಿಸಬೇಕು. ಜಿಲ್ಲೆಯಲ್ಲಿ ರಾಜಕಾಲುವೆ, ಗುಂಡು ತೋಪು, ಕೆರೆಕುಂಟೆ, ಸರ್ಕಾರಿ ಕಾಲುವೆಗಳು ಒತ್ತುವರಿಯಾಗಿದ್ದು, ಕೂಡಲೇ ತೆರವುಗೊಳಿಸಲು ಕ್ರಮ ಕೈಗೊಳ್ಳಬೇಕು ಹಾಗೆಯೇ ಮಂಜೂರಾಗಿರುವ ಎಲ್ಲಾ ರೈತರಿಗೂ ಸಾಗುವಳಿ ಚೀಟಿ ನೀಡಬೇಕು ವಜಾಗೊಂಡಿರುವ ಮಂಜೂರು ಅರ್ಜಿಗಳನ್ನು ಪರಿಶೀಲನೆ ಮಾಡಿ ನೈಜ್ಯ ಫಲಾನುಭವಿಗಳಿಗೆ ಮಂಜೂರು ಮಾಡಿ ಸಾಗುವಳಿ ಚೀಟಿ ನೀಡಬೇಕೆಂದು ಅಗ್ರಹಿಸಿದರು.
ಇದೇ ಸಂದರ್ಭದಲ್ಲಿ ಉಪತಹಶೀಲ್ದಾರ್ ಡಿ.ಜಿ.ಚಂದ್ರಪ್ಪ ಮುಖಾಂತರ ಮುಖ್ಯ ಮಂತ್ರಿಗಳಿಗೆ ಮನವಿಯನ್ನು ಸಲ್ಲಿಸಿದರು.
ಇದೇ ಸಮಯದಲ್ಲಿ ಕರ್ನಾಟಕ ರಾಜ್ಯ ರೈತ ಸಂಘ ತಾಲ್ಲೂಕು ಅಧ್ಯಕ್ಷ ಎಂ.ಬಿ. ನಾಗೇಂದ್ರ ತಾಲ್ಲೂಕು ಕಾರ್ಯದರ್ಶಿ ಮುನಿಸ್ವಾಮಿಗೌಡ ಗೌರವಾಧ್ಯಕ್ಷ ಅಂಜನೇಯರೆಡ್ಡಿ ತಾಲ್ಲೂಕು ಪ್ರಧಾನ ಕಾರ್ಯದರ್ಶಿ ವೆಂಕಟಸ್ವಾಮಿರೆಡ್ಡಿ, ಉಪಾಧ್ಯಕ್ಷ ನಾರಾಯಣಸ್ವಾಮಿ, ಶಿವರಾಜ್, ರಾಜಣ್ಣ, ವರದಾಪುರ ನಾಗರಾಜ್, ಕೆ.ಅನಂದ್ಕುಮಾರ್, ಜಿಲ್ಲಾ ಕಾರ್ಯದರ್ಶಿ ವೀರಾಪುರ ಮಂಜುನಾಥ್, ತಿಪ್ಪೇಸಂದ್ರ ಹರೀಶ್, ತಿಮ್ಮಾರೆಡ್ಡಿ, ಇತ್ತಿತರರು ಉಪಸ್ಥಿತರಿದ್ದರು.