ವರದಿ: ಶಬ್ಬೀರ್ ಅಹ್ಮದ್, ಶ್ರೀನಿವಾಸಪುರ
ಶ್ರೀನಿವಾಸಪುರ: ಜಿಲ್ಲೆಯಲ್ಲಿ ಉತ್ತಮ ಮಳೆಯಾಗುತ್ತಿದ್ದು, ಮಲೆನಾಡಿನ ವಾತಾವರಣ ನಿರ್ಮಾಣವಾಗಿದೆ. ಬಹುತೇಕ ಕೆರೆಗಳು ತುಂಬಿ ಕೋಡಿ ಬಿದ್ದಿವೆ. ಕೋಲಾರ ಬರಪೀಡಿತ ಜಿಲ್ಲೆ ಎಂಬ ಕಳಂಕ ದೂರವಾಗಿದೆ ಎಂದು ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆಯ ಹಿರಿಯ ಜಿಲ್ಲಾ ನಿರ್ದೇಶಕ ಜೆ.ಚಂದ್ರಶೇಖರ್ ಹೇಳಿದರು.
ತಾಲ್ಲೂಕಿನ ಅರಿಕೆರೆ ಗ್ರಾಮದ ಚೌಡೇಶ್ವರಿ ದೇವಾಲಯದ ಆವರಣದಲ್ಲಿ ಮಂಗಳವಾರ ಏರ್ಪಡಿಸಿದ್ದ ಸಮಾರಂಭದಲ್ಲಿ, ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ ವತಿಯಿಂದ ಹೂಳೆತ್ತಿದ ಪರಿಣಾಮವಾಗಿ ತುಂಬಿದ ಕೆರೆಯನ್ನು, ಗ್ರಾಮ ಕೆರೆ ಅಭಿವೃದ್ಧಿ ಸಮಿತಿಗೆ ಹಸ್ತಾಂತರಿಸಿ ಮಾತನಾಡಿ, ಧರ್ಮಸ್ಥಳದ ಧರ್ಮಾಧಿಕಾರಿ ಡಾ. ಡಿ.ವೀರೇಂದ್ರ ಹೆಗ್ಗಡೆ ಅವರು ಕೆರೆ ಅಭಿವೃದ್ಧಿಗೆ ರೂ.13.93 ಲಕ್ಷ ಮಂಜೂರು ಮಾಡಿದ್ದರು. ರೂ.13.86 ಲಕ್ಷ ವೆಚ್ಚಮಾಡಿ ಹೂಳು ತೆಗೆಯಲಾಗಿದೆ ಎಂದು ಹೇಳಿದರು.
ಕೆರೆಯ 12 ಎಕರೆ ಪ್ರದೇಶದಲ್ಲಿ ಹೂಳು ತೆಗೆಯಲಾಗಿದ್ದು, 22100 ಟ್ರ್ಯಾಕ್ಟರ್ ಲೋಡ್ ಹೂಳನ್ನು ಕೃಷಿ ಭೂಮಿಗೆ ಸಾಗಿಸಲಾಗಿದೆ. ಅದರಿಂದ ಕೃಷಿ ಭೂಮಿ ಫಲವತ್ತತೆ ಹೆಚ್ಚಿದೆ. ಉತ್ತಮ ಫಸಲು ಪಡೆಯಲು ಅನುಕೂಲವಾಗಿದೆ. ಪ್ರತಿ ವರ್ಷ ತಾಲ್ಲೂಕಿನ ಒಂದು ಕೆರೆಯನ್ನು ಆಯ್ಕೆ ಮಾಡಿಕೊಂಡು ಹೂಳು ತೆಗೆಯಲಾಗುವುದು ಎಂದು ಹೇಳಿದರು.
ತಾಲ್ಲೂಕಿನಲ್ಲಿ ಈಗಾಗಲೆ ಹಲವು ಕೆರೆಗಳಲ್ಲಿ ಹೂಳು ತೆಗೆಯಲಾಗಿದ್ದು, ಹೂಳು ತೆಗೆದಿರುವ ಎಲ್ಲ ಕೆರೆಗಳೂ ಮಳೆ ನೀರಿನಿಂದ ತುಂಬಿ ತುಳುಕುತ್ತಿವೆ. ಅದರಿಂದ ಜನ ಹಾಗೂ ಜಾನುವಾರುಗಳಿಗೆ ಹೆಚ್ಚಿನ ಪ್ರಯೋಜನವಾಗಿದೆ. ತುಂಬಿದ ಕೆರೆಗಳಿಗೆ ಬಾಗಿನ ಅರ್ಪಿಸಲಾಗುತ್ತಿದೆ. ಮಳೆ ಜನ ಜೀವನದಲ್ಲಿ ಬದಲಾವಣೆ ತರಲಿದೆ ಎಂದು ಹೇಳಿದರು.
ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ ವತಿಯಿಂದ ನಮ್ಮೂರ ಕೆರೆ ಕಾರ್ಯಕ್ರಮ ಯಶಸ್ವಿಯಾಗಿ ನಡೆಯುತ್ತಿದೆ. ಕೆರೆ ಸಂಸ್ಕøತಿ ಪುನರುಜ್ಜೀವನಗೊಳ್ಳುತ್ತಿದೆ. ಗ್ರಾಮಸ್ಥರು ಕೆರೆಯನ್ನು ಚೆನ್ನಾಗಿ ನೋಡಿಕೊಳ್ಳಬೇಕು. ಮಾಲೀನ್ಯಕ್ಕೆ ಅವಕಾಶ ಮಾಡಿಕೊಡಬಾರದು ಎಂದು ಹೇಳಿದರು.
ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆಯ ಹಿರಿಯ ಜಿಲ್ಲಾ ನಿರ್ದೇಶಕ ಜೆ.ಚಂದ್ರಶೇಖರ್, ಯೋಜನಾಧಿಕಾರಿ ಸುರೇಶ್ ಗೌಡ, ಕೆರೆ ಅಭಿವೃದ್ಧಿ ಸಮಿತಿ ಅಧ್ಯಕ್ಷ ರಾಮನಾಥ್ ಇದ್ದರು