ಶ್ರೀನಿವಾಸಪುರ: ಕೋಲಾರ ಹಾಲು ಒಕ್ಕೂಟದ ಶಿಬಿರ ಕಚೇರಿ ಕಟ್ಟಡ ನಿರ್ಮಿಸಲು ನಿವೇಶನ ಖರೀದಿಗೆ ಸಂಬಂಧಿಸಿದಂತೆ ಒಕ್ಕೂಟದ ಮಾಜಿ ನಿರ್ದೇಶಕ ಬೈರೆಡ್ಡಿ ಮಾಡಿರುವ ಆರೋಪ ಸುಳ್ಳು ಎಂದು ಕೋಮುಲ್ ನಿರ್ದೇಶಕ ಎನ್.ಹನುಮೇಶ್ ಹೇಳಿದರು.
ಪಟ್ಟಣದಲ್ಲಿ ಸೋಮವಾರ ಏರ್ಪಡಿಸಿದ್ದ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ನಿವೇಶನ ಖರೀದಿಯಲ್ಲಿ ರೂ.35 ಲಕ್ಷ ಲಾಭ ಮಾಡಿಕೊಳ್ಳಲಾಗಿದೆ ಎಂದು ಪಾಳ್ಯ ಬೈರೆಡ್ಡಿ ಈಚೆಗೆ ಪತ್ರಿಕಾಗೋಷ್ಠಿಯಲ್ಲಿ ಹೇಳಿರುವುದು ಸರಿಯಲ್ಲ ಎಂದು ಅಭಿಪ್ರಾಯಪಟ್ಟರು.
ನಿಯಮಾನುಸಾರ ಆಡಳಿತ ಮಂಡಲಿ ಅನುಮೋದನೆ ಪಡೆದ ಬಳಿಕ 3040 ಚದರ ಅಡಿ ನಿವೇಶನ ಖರೀದಿಗೆ ಅರ್ಹ ಮಾಲೀಕರಿಂದ ಅರ್ಜಿ ಕರೆಯಲಾಗಿತ್ತು. ನಿಗದಿತ ಅವಧಿಯೊಳಗೆ ಆಸಕ್ತ ಮಾಲೀಕರಿಂದ ಬಂದ ಅರ್ಜಿ ಮತ್ತು ದಾಖಲೆ ಕಾನೂನು ತಜ್ಞರ ಪರಿಶೀಲನೆಗೆ ಒಳಪಡಿಸಲಾಗಿತ್ತು. ಆಕ್ಷೇಪಣೆ ಸಲ್ಲಿಸಲು ಅವಕಾಶ ಕಲ್ಪಿಸಲಾಗಿತ್ತು. ಯಾವುದೇ ಆಕ್ಷೇಪಣೆ ಬಾರದ ಹಿನ್ನೆಲೆಯಲ್ಲಿ ನೋಂದಾಯಿತ ಮೌಲ್ಯಮಾಪಕರಿಂದ ದರ ನಿಗದಿಪಡಿಸಲಾಯಿತು. ಪ್ರತಿ ಚದರಡಿಗೆ ರೂ.2350 ರಿಂದ 2500 ನೀಡಬಹುದೆಂದು ಅಭಿಪ್ರಾಯಪಟ್ಟಿದ್ದರು ಎಂದು ಹೇಳಿದರು.
ಪಟ್ಟಣದ ಹೊರವಲಯದ ಪನಸಮಾಕನಹಳ್ಳಿ ಸಮೀಪ ಇರುವ ಒಕ್ಕೂಟದ 10 ಎಕರೆ ಜಮೀನು ಕರಗೆಟೆಡ್ ಬಾಕ್ಸ್ ತಯಾರಿಕಾ ಘಟಕ ಸ್ಥಾಪಿಸಲು ಮೀಸಲಿಡಲಾಗಿದೆ. ಹಾಗೊಂದು ವೇಳೆ ಶಿಬಿರ ಕಚೇರಿ ನಿರ್ಮಿಸಲು ಪ್ರಯತ್ನಿಸಿದರೂ, ಅಲ್ಲಿಗೆ ಬಸ್ ಸೌಲಭ್ಯ ಇಲ್ಲ. ಸರಿಯಾದ ರಸ್ತೆ ಸೌಲಭ್ಯವೂ ಇಲ್ಲ. ಪಟ್ಟಣದಿಂದ 6 ಕಿ.ಮೀ ದೂರ ಇರುವುದರಿಂದ ಹಾಲು ಉತ್ಪಾದಕರು ಹಾಗೂ ಸಿಬ್ಬಂದಿ ಓಡಾಟಕ್ಕೆ ಕಷ್ಟವಾಗುತ್ತದೆ. ಪಟ್ಟಣದಲ್ಲಿ ಕಚೇರಿ ಇದ್ದಲ್ಲಿ ಹೆಚ್ಚು ಅನುಕೂಲವಾಗುತ್ತದೆ ಎಂದು ಅಭಿಪ್ರಾಯಪಟ್ಟರು.
ಶ್ರೀನಿವಾಸಪುರ ಹೊರತುಪಡಿಸಿ ಜಿಲ್ಲೆಯ ಎಲ್ಲ ತಾಲ್ಲೂಕುಗಳಲ್ಲೂ ಕೋಮುಲ್ ಶಿಬಿರಿ ಕಚೇರಿ ಕಟ್ಟಡ ನಿರ್ಮಿಸಲಾಗಿದೆ. ಹಾಲು ಉತ್ಪಾದಕರ ಸಹಕಾರ ಸಂಘಗಳ ಅಧ್ಯಕ್ಷರು ಮತ್ತು ಕಾರ್ಯದರ್ಶಿಗಳ ಒತ್ತಾಯದ ಮೇರೆಗೆ, ಪುರಸಭೆ ವ್ಯಾಪ್ತಿಯಲ್ಲಿ ಶಿಬಿರ ಕಚೇರಿ ನಿರ್ಮಿಸಲು ನಿವೇಶನ ಖರೀದಿ ಪ್ರಕ್ರಿಯೆ ಪ್ರಾರಂಭಿಸಲಾಗಿದೆ. ‘ನಾನು ತಾಲ್ಲೂಕಿನ ಹಾಲು ಉತ್ಪಾದಕರ ಅಭಿವೃದ್ಧಿಗೆ ಬದ್ಧನಾಗಿದ್ದೇನೆ. ಹಾಲು ಉತ್ಪಾದಕರ ಬೇಡಿಕೆ ಈಡೇರಿಸುವ ಸಲುವಾಗಿ ನಿಯಮಾನುಸಾರ ನಿವೇಶನ ಖರೀದಿಸಲಾಗುತ್ತಿದೆ’ ಎಂದು ಹೇಳಿದರು.
ಕೋಚಿಮುಲ್ ಮಾಜಿ ನಿರ್ದೇಶಕ ಮುನಿವೆಂಕಟಪ್ಪ, ತಾಲ್ಲೂಕು ಪಂಚಾಯಿತಿ ಮಾಜಿ ಅಧ್ಯಕ್ಷ ಎಸ್.ವಿ.ಸುಧಾಕರ್, ಡಿಸಿಸಿ ಬ್ಯಾಂಕ್ ನಿರ್ದೇಶಕ ವೆಂಕಟರೆಡ್ಡಿ, ಮುಖಂಡರಾದ ಪಾಳ್ಯ ಗೋಪಾಲರೆಡ್ಡಿ, ನಾಗದೇನಹಳ್ಳಿ ಸೀತಾರಾಮರೆಡ್ಡಿ, ಕೇತಗಾನಹಳ್ಳಿ ನಾಗರಾಜ್, ಅಯ್ಯಪ್ಪ ಇದ್ದರು.