JANANUDI.COM NETWORK
ಬೆಂಗಳೂರು: ಎ.30: ’ಕೇಂದ್ರ ಸರ್ಕಾರ ಈ ಹಿಂದೆ ಪ್ರಕಟಿಸಿದಂತೆ ನಾಳೆ ಅಂದರೆ ಮೇ 1ಕ್ಕೆ 18 ವರ್ಷ ಮೇಲ್ಪಟ್ಟವರಿಗೆ ರಾಜ್ಯದಲ್ಲಿ ಸಾಮೂಹಿಕ ಕೊರೋನಾ ಲಸಿಕೆ ಅಭಿಯಾನ ಆರಂಭಿಸಲು ಸಾಧ್ಯವಾಗುತ್ತಿಲ್ಲ, ಅದಕ್ಕಾಗಿ ಈ ವಯೋಮಾನದವರು ಆಸ್ಪತ್ರೆಗಳಿಗಾಗಲಿ, ಲಸಿಕಾ ಕೇಂದ್ರಗಳಿಗಾಗಲಿ ಹೋಗಬೇಡಿ’ ಎಂದು ಆರೋಗ್ಯ ಸಚಿವ ಡಾ ಕೆ ಸುಧಾಕರ್ ರಾಜ್ಯದ ಜನತೆಯಲ್ಲಿ ಮನವಿ ಮಾಡಿಕೊಂಡಿದ್ದಾರೆ.
ಕೇಂದ್ರ ಸರ್ಕಾರ ಘೋಷಿಸಿರುವಂತೆ 18 ವರ್ಷದಿಂದ 44 ವರ್ಷದೊಳಗಿನವರಿಗೆ ಮೇ 1ರಿಂದ ಕೊರೊನಾ ಲಸಿಕೆ ನೀಡುವ ಅಭಿಯಾನ ಆರಂಭವಾಗಬೇಕಿತ್ತು. ಈ ಪ್ರಕಾರ ಕರ್ನಾಟಕ ರಾಜ್ಯದಲ್ಲಿ 3 ರಿಂದ 3.5 ಕೋಟಿ ಜನರು ಫಲಾನುಭವಿಗಳು ಇದ್ದಾರೆ ಎಂದು ಅಂದಾಜು ಮಾಡಿದ್ದೇವೆ. ಈಗಾಗಲೇ ಸರ್ಕಾರ 400 ಕೋಟಿ ರೂಪಾಯಿಗಳ ಲಸಿಕೆ ತಯಾರಿಕಾ ಕಂಪೆನಿ ಸೆರಂ ಇನ್ಸ್ಟಿಟ್ಯೂಟ್ ಗೆ ನೀಡಿ 1 ಕೋಟಿ ಡೋಸ್ ಗೆ ಆರ್ಡರ್ ನೀಡಿದೆ. ಆದರೆ ಭಾರತ್ ಬಯೋಟೆಕ್ ಕಂಪೆನಿ, ರಷ್ಯಾ ಮೂಲದ ಕಂಪೆನಿಯನ್ನು ಸಹ ಸಂಪರ್ಕಿಸಿದ್ದು ಅವರಿಂದ ಅಧಿಕೃತವಾಗಿ ಮಾಹಿತಿ ಬಂದಿಲ್ಲ’ ಎಂದು ಅವರು ತಿಳಿಸಿದರು.
ಕಂಪೆನಿಯಿಂದ ಯಾವಾಗ ಲಸಿಕೆ ಬರುತ್ತದೆ ಎಂದು ಸರ್ಕಾರಕ್ಕೆ ಅಂದಾಜು ಮಾಡಲು ಸಾಧ್ಯವಿಲ್ಲ, ಹೀಗಾಗಿ ಎಷ್ಟು ವಾರಗಳಾಗಬಹುದು ಎಂದು ನನಗೆ ಹೇಳಲಾಗುತ್ತಿಲ್ಲ. ಆದಷ್ಟು ಶೀಘ್ರ ಲಸಿಕೆ ತರಿಸುವ ಸರ್ಕಾರದ ಪ್ರಯತ್ನವು ಮುಂದುವರಿಯುತ್ತಿದೆ. ಕಂಪೆನಿ ಮೇಲೆ ಒತ್ತಡ ಹೇರಿ ಆದಷ್ಟು ಬೇಗ ಲಸಿಕೆ ತರಿಸುವುದು ಸರ್ಕಾರದ ಧ್ಯೇಯ ಕೂಡ ಆಗಿದೆ’ ಎಂದರು.
18 ವರ್ಷದಿಂದ 44 ವರ್ಷದೊಳಗಿನವರಿಗೆ ರಾಜ್ಯದ ಜನತೆಗೆ ಸರ್ಕಾರ ಉಚಿತವಾಗಿ ಎಲ್ಲಾ ಸರ್ಕಾರಿ ಆಸ್ಪತ್ರೆಗಳಲ್ಲಿ ಲಸಿಕೆ ನೀಡುವುದು ಖಂಡಿತ. ಇದರಲ್ಲಿ ಯಾವುದೇ ಗೊಂದಲ ಬೇಡ. ಕೋವಿಡ್ ಪೋರ್ಟಲ್ ನಲ್ಲಿ ಹೆಸರು ನೋಂದಾಯಿಸಿಕೊಳ್ಳುವ ಪ್ರಕ್ರಿಯೆ ಮುಂದುವರಿಸಬಹುದು, ಅದೇ ರೀತಿ 45 ವರ್ಷ ಮೇಲ್ಪಟ್ಟವರು ಲಸಿಕೆ ಹಾಕಿಸಿಕೊಳ್ಳದವರು ಆಸ್ಪತ್ರೆಗಳಿಗೆ ಹೋಗಿ ಲಸಿಕೆ ಹಾಕಿಸಿಕೊಳ್ಳಿ’ ಎಂದು ಸಹ ಸಚಿವರು ಮನವಿ ಮಾಡಿಕೊಂಡರು.
ಸೆರಂ ಸಂಸ್ಥೆಯಿಂದ ಖಚಿತ ಮಾಹಿತಿ ಬಂದ ಕೂಡಲೇ ನಾವೇ ರಾಜ್ಯದ ಜನತೆಗೆ 18 ವರ್ಷ ಮೇಲ್ಪಟ್ಟವರಿಗೆ ಯಾವಾಗ ಲಸಿಕೆ ಅಭಿಯಾನ ಆರಂಭವಾಗುತ್ತದೆ ಎಂದು ತಿಳಿಸುತ್ತೇವೆ ಎಂದರು. ಸದ್ಯದ ಆರೋಗ್ಯ ತುರ್ತು ಪರಿಸ್ಥಿತಿಯಲ್ಲಿ ನಾಗರಿಕರು ಕೋವಿಡ್ ಮಾರ್ಗಸೂಚಿಗಳನ್ನು ಶಿಸ್ತುಬದ್ಧವಾಗಿ ಪಾಲಿಸಿ ಆರೋಗ್ಯ ಕಾಪಾಡಿಕೊಳ್ಳಿ’ ಎಂದು ಮನವಿ ಸಚಿವ ಸುಧಾಕರ್ ಮನವಿ ಮಾಡಿಕೊಂಡಿದ್ದಾರೆ.