

ಕುಂದಾಪುರ : ಚಲನಚಿತ್ರ ಮಾಧ್ಯಮವು ಸಮಾಜದ ಮೇಲೆ ಶೀಘ್ರ ಪರಿಣಾಮ ಬೀರುವ ಶಕ್ತಿ ಹೊಂದಿದೆ. ಇದರ ಮೂಲಕ ಯಾವುದೇ ಸಂದೇಶಗಳನ್ನು ಜನರಿಗೆ ಸ್ಪಷ್ಟವಾಗಿ ತಲುಪಿಸಬಹುದು. ಡಾ. ರಾಜ್ ಕುಮಾರ್, ವಿಷ್ಣುವರ್ಧನ್, ಅಂಬರೀಶ್ ರವರ ಚುತ್ರಗಳಲ್ಲಿ ಸಮಾಜಕ್ಕೆ ಒಳ್ಳೆಯ ಸ್ಪಷ್ಟ ಸಂದೇಶಗಳಿರುತ್ತಿತ್ತು. ಇಂತಹ ಚಿತ್ರಗಳನ್ನು ನೋಡಿ ಅದೆಷ್ಟೋ ಮಂದಿ ಜೀವನದಲ್ಲಿ ಮಹತ್ಸಾಧನೆಗಳನ್ನು ಮಾಡಿದ್ದಾರೆ. ಆದರೆ ಇಂದು ಬಿಡುಗಡೆಗೊಳ್ಳುತ್ತಿರುವ ಹೆಚ್ಚಿನ ಚಿತ್ರಗಳು ಕೇವಲ ಮನೋರಂಜನೆ ಮತ್ತು ವ್ಯಾಪಾರಿ ಉದ್ದೇಶ ಹೊಂದಿದ್ದು, ಸಮಾಜವಿರೋಧಿ ಸಂಗತಿಗಳಿಂದಲೇ ವಿಜೃಂಭಿಸುತ್ತಿವೆ. ಇಂತಹವು ಯುವ ಜನಾಂಗದವರನ್ನು ತಪ್ಪು ದಾರಿಗೆಳೆಯಲು ಪ್ರಚೋದಿಸುತ್ತವೆ. ಇಂತಹ ಕಾಲ ಘಟ್ಟದಲ್ಲಿ, ಅತ್ಯದ್ಭುತ ಜಾದೂಗಾರ, ಕನಸುಗಾರ, ಸಾಧಕ ಡಾ. ಕೋಟ ಶಿವರಾಮ ಕಾರಂತರ ಸಮಾಜಮುಖೀ ಸಂದೇಶವನ್ನು ಮಕ್ಕಳಿಗೆ ತಲುಪಿಸುವ ಮಹತ್ವಾಕಾಂಕ್ಷೆಯಲ್ಲಿ ನಿರ್ಮಿಸಿರುವ “ಬಾಲವನದ ಜಾದೂಗಾರ” ಕಿರುಚಿತ್ರವನ್ನು ಎಲ್ಲರೂ ವೀಕ್ಷಿಸಬೇಕು. ಈ ಚಿತ್ರದ ಮೂಲಕ, ಸರ್ವ ಕ್ಷೇತ್ರಗಳಲ್ಲೂ ಸಾಧನೆ ಮಾಡಿ ಸೈ ಎನಿಸಿಕೊಂಡ ಡಾ. ಕಾರಂತರ ಕೃತಿಗಳನ್ನು ಓದುವ, ಅವರ ಆಶಯಗಳನ್ನು ಮೈಗೂಡಿಸಿಕೊಳ್ಳುವ ಸದಾಶಯ ಮಕ್ಕಳಲ್ಲಿ ಮೂಡಲಿ. ಶಿಕ್ಷಣದ ಜೊತೆಗೆ ಮನೋರಂಜನೆಯನ್ನೂ ಒದಗಿಸುವ ಈ ಚಿತ್ರ ಯಶಸ್ವಿಯಾಗಲಿ ಎಂದು ಕೊಲ್ಲೂರು ಶ್ರೀ ಮೂಕಾಂಬಿಕಾ ದೇವಳ ವ್ಯವಸ್ಥಾಪನಾ ಸಮಿತಿ ಅಧ್ಯಕ್ಷ, ಶಿಕ್ಷಣ ತಜ್ಞ ಕೆರಾಡಿ ಚಂದ್ರಶೇಖರ ಶೆಟ್ಟಿ ಹಾರೈಸಿದರು.
ಕುಂದಾಪುರದ ಉದ್ಯಮಿ ಕೆ. ಪಿ. ಶ್ರೀಶನ್ ಅವರು ವಸಂತ ಪ್ರೊಡಕ್ಷನ್ ಹೌಸ್ ಬ್ಯಾನರ್ ನಲ್ಲಿ ನಿರ್ಮಿಸಿರುವ, ಡಾ. ಶಿವರಾಮ ಕಾರಂತರ ಸಾಧನೆಗಳನ್ನು ಪರಿಚಯಿಸುವ ಸಂದೇಶ ಹೊಂದಿರುವ “ಬಾಲವನದ ಜಾದೂಗಾರ” ಕಿರುಚಿತ್ರದ ಟೀಸರ್ ಮತ್ತು ಪೋಸ್ಟರ್ ಗಳನ್ನು ನಗರದಲ್ಲಿ ಬಿಡುಗಡೆಗೊಳಿಸಿ ಅವರು ಶುಭ ಹಾರೈಸಿದರು.
ಕೆರಾಡಿಯ ತಮ್ಮ ಶಿಕ್ಷಣ ಸಂಸ್ಥೆಗಳಲ್ಲಿ ಈ ಚಿತ್ರಪ್ರದರ್ಶನ ವ್ಯವಸ್ಥೆಗೊಳಿಸುವುದಾಗಿ ಭರವಸೆ ನೀಡಿದ ಅವರು, ಕೊಲ್ಲೂರು ದೇವಳ ಶಿಕ್ಷಣ ಸಂಸ್ಥೆಗಳಲ್ಲೂ ಪ್ರದರ್ಶನ ವ್ಯವಸ್ಥೆಗೆ ಯತ್ನಿಸುವುದಾಗಿ ತಿಳಿಸಿದರು.
ಮುಖ್ಯ ಅತಿಥಿ ಕುಂದಾಪುರ ಕ್ಷೇತ್ರ ಶಿಕ್ಷಣಾಧಿಕಾರಿ ಅರುಣ್ ಕುಮಾರ್ ಮಾತನಾಡಿ, ಇಂದು ವಿದ್ಯಾರ್ಥಿಗಳಲ್ಲಿ ಓದುವ ಹವ್ಯಾಸ ಕಡಿಮೆಯಾಗಿದೆ. ಯುವಜನಾಂಗವನ್ನು ಮೊಬೈಲ್ ಮೋಡ್ ನಿಂದ ರೀಡಿಂಗ್ ಮೋಡ್ ಗೆ ತರಲು ಇಂತಹ ಮಹಾನ್ ಸಾಧಕರ ಕುರಿತಾದ ಚಿತ್ರಗಳು ಅವಶ್ಯಕವಿವೆ. ಇದು ಮಕ್ಕಳ ಮೇಲೆ ಧನಾತ್ಮಕ ಪರಿಣಾಮ ಬೀರಬಲ್ಲದು. ಆ ಮೂಲಕ ಕಾರಂತರ ಸಾಧನೆ ಅವರಿಗೆ ಸ್ಫೂರ್ತಿ ತುಂಬಬಲ್ಲದು ಎಂದು ಹೇಳಿ, ಚಿತ್ರವನ್ನು ಕ್ಷೇತ್ರದ ಎಲ್ಲಾ ಶಾಲೆಗಳಲ್ಲೂ ಪ್ರದರ್ಶಿಸುವ ಬಗ್ಗೆ ಇಲಾಖೆಯಿಂದಾಗುವ ಸಹಕಾರವನ್ನು ನೀಡುವ ಭರವಸೆ ನೀಡಿದರು.
ವೆಂಕಟರಮಣ ಶಿಕ್ಶಜನ ಸಂಸ್ಥೆಗಳ ಮುಖ್ಯಸ್ಥ ಕೆ. ರಾಧಾಕೃಷ್ಣ ಶೆಣೈ ಶುಬ್ಗಹಾರೈಸಿದರು.
ಚಿತ್ರ ಕತೆಗಾರ ಮನ್ಸೂರ್ ಪಳ್ಳೂರು ಮಾತನಾಡಿದರು. ನಿರ್ದೇಶಕ ಇ. ಎಂ. ಅಶ್ರಫ್ ಮಾತನಾಡಿ, ಚಿತ್ರ ನಿರ್ಮಾಣದ ಉದ್ದೇಶವನ್ನು ತೆರೆದಿಟ್ಟರು. ತಾನು ಈ ಹಿಂದೆ ಕೊಲ್ಲೂರು ಶ್ರೀ ಮೂಕಾಂಬಿಕಾ ಸನ್ನಿಧಿಯಲ್ಲಿ ಸನ್ಮಾನಿತನಾದುದನ್ನು ಸ್ಮರಿಸಿಕೊಂಡರು. ವಿದ್ಯಾರ್ಥಿಗಳು ಮಾತ್ರವಲ್ಲದೆ, ಪೋಷಕರೂ ಈ ಕಿರು ಚಿತ್ರವನ್ನು ವೀಕ್ಷಿಸಿ ಪ್ರೋತ್ಸಾಹಿಸಬೇಕು ಎಂದು ಮನವಿ ಮಾಡಿದರು.
ಬಾಲವನದ ಜಾದೂಗಾರ ಕಿರು ಚಿತ್ರದ ನಿರ್ಮಾಪಕ, ವಸಂತ ಪ್ರೊಡಕ್ಷನ್ ಹೌಸ್ ಮಾಲೀಕ ಕೆ. ಪಿ. ಶ್ರೀಶನ್ ಸಮಾರಂಭದ ಅಧ್ಯಕ್ಷತೆ ವಹಿಸಿ ಮಾತನಾಡಿ, ತಾನು ಮಲಯಾಳಿ ಮೂಲದವನಾದರೂ ಶಿವರಾಮ ಕಾರಂತರ ಅಪಾರ ಸಾಧನೆಗಳಿಂದ ಪ್ರಭಾವಿತನಾಗಿ, ಮಕ್ಕಳಲ್ಲಿ ಎಳವೆಯಲ್ಲೇ ಕಾರಂತರ ಧನಾತ್ಮಕ ಚಿಂತನೆಯನ್ನು ಬೆಳೆಸುವ ಉದ್ದೇಶದಿಂದ ಚಿತ್ರ ನಿರ್ಮಿಸಿರುವುದಾಗಿ ತಿಳಿಸಿದರು. ಚಿತ್ರವನ್ನು ಇತರ ಭಾಷೆಗಳಿಗೂ ಡಬ್ ಮಾಡಿ ನಮ್ಮ ಕಾರಂತರನ್ನು ವಿಶ್ವಕ್ಕೆ ಪರಿಚಯಿಸುವ ಯೋಜನೆ ಹೊಂದಿರುವುದಾಗಿಯೂ ಅವರು ತಿಳಿಸಿದರು.
ಹಿರಿಯ ನ್ಯಾಯವಾದಿ ರವಿಕಿರಣ್ ಮುರುಡೇಶ್ವರ ಶುಭಹಾರೈಸಿ, ಕೊಲೆ, ದರೋಡೆ ಮುಂತಾದ ಭಯಾನಕ ಕಥಾನಕ ಹೊಂದಿರುವ ಚಿತ್ರಗಳೇ ಹೆಚ್ಚು ಬರುತ್ತಿರುವ ಇಂದು, ನಮ್ಮ ನೆಲದ ಸಾಧಕರನ್ನು ಯುವಜನರಿಗೆ ಪರಿಚಯಿಸುವ ಇಂತಹ ಚಿತ್ರ ನಿರ್ಮಿಸಿದ ಶ್ರೀಶನ್ ರವರನ್ನು ಅಭಿನಂದಿಸಬೇಕು ಎಂದರು.
ಕುಂದಪ್ರಭಾ ಪತ್ರಿಕಾ ಸಂಪಾದಕ ಯು. ಎಸ್. ಶೆಣೈ ಸ್ವಾಗತಿಸಿ, ಪ್ರಸ್ತಾವನೆಗೈದರು. ನಾಗರತ್ನ ಕಾರ್ಯಕ್ರಮ ನಿರೂಪಿಸಿ, ಚಿತ್ರದ ನಿರ್ಮಾಣ ನಿರ್ವಾಹಕ ಜಾಯ್ ಕರ್ವಾಲೋ ವಂದಿಸಿದರು. ಬಾಲವನದ ಜಾದೂಗಾರ ಕಿರುಚಿತ್ರದ 20 ಸೆಕೆಂಡ್ ಗಳ ಟೀಸರನ್ನು ಪ್ರದರ್ಶಿಸಲಾಯಿತು.































