ವರದಿ: ಶಬ್ಬೀರ್ ಅಹ್ಮದ್, ಶ್ರೀನಿವಾಸಪುರ
ಶ್ರೀನಿವಾಸಪುರ: ಶಿಕ್ಷಕರು ವಯೋನಿವೃತ್ತಿ ಬಳಿಕ ತಮ್ಮ ಶೈಕ್ಷಣಿಕ ಅನುಭವವನ್ನು ಸಮಾಜದ ಅಭಿವೃದ್ಧಿಗಾಗಿ ಬಳಸಬೇಕು ಎಂದು ಜಿಲ್ಲಾ ಸರ್ಕಾರಿ ನೌಕರರ ಸಂಘದ ಅಧ್ಯಕ್ಷ ಅಶೋಕ್ ಹೇಳಿದರು.
ತಾಲ್ಲೂಕಿನ ಕುಪ್ಪಹಳ್ಳಿ ಗ್ರಾಮದ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಗುರುವಾರ ಏರ್ಪಡಿಸಿದ್ದ ಬೀಳ್ಕೊಡುಗೆ ಸಮಾರಂಭದಲ್ಲಿ, ಶಾಲೆಯಲ್ಲಿ 40 ವರ್ಷಗಳ ಕಾಲ ಶಿಕ್ಷಕರಾಗಿ ಹಾಗೂ ಮುಖ್ಯ ಶಿಕ್ಷಕರಾಗಿ ಸೇವೆ ಸಲ್ಲಿಸಿ ನಿವೃತ್ತರಾದ ಕೆ.ಎಚ್.ಸಂಪತ್ ಕುಮಾರ್ ಮತ್ತು ಅವರ ಪತ್ನಿ ಎಂ.ವಿ.ಅರ್ಚನ ಅವರನ್ನು ಸನ್ಮಾನಿಸಿ ಮಾತನಾಡಿದರು.
ತಾಲ್ಲೂಕು ಸರ್ಕಾರಿ ನೌಕರರ ಸಂಘದ ಅಧ್ಯಕ್ಷ ಎಂ.ನಾಗರಜಾಜ್ ಮಾತನಾಡಿ, ಐಎಎಸ್, ಐಪಿಎಸ್ ಹಾಗೂ ಐಎಫ್‍ಎಸ್ ಅಧಿಕಾರಿಗಳಾಗಿದ್ದ ಅಣ್ಣಂದಿರ ನಡುವೆ ಕೆ.ಎಚ್.ಸಂಪತ್ ಕುಮಾರ್ ಸರ್ಕಾರಿ ಶಾಲಾ ಶಿಕ್ಷಕರಾಗಿ ಗಣನೀಯ ಸೇವೆ ಸಲ್ಲಿಸಿದ್ದಾರೆ. ವಿದ್ಯಾರ್ಥಿ ಪ್ರಿಯ ಶಿಕ್ಷಕರಾಗಿ, ಪೋಷಕರ ಗೌರವಕ್ಕೆ ಪಾತ್ರರಾಗಿದ್ದಾರೆ ಎಂದು ಹೇಳಿದರು.
ನಿವೃತ್ತ ಮುಖ್ಯ ಶಿಕ್ಷಕ ಕೆ.ಎಚ್.ಸಂಪತ್ ಕುಮಾರ್ ಮಾತನಾಡಿ, ‘ಒಂದೇ ಶಾಲೆಯಲ್ಲಿ ನಾಲ್ಕು ದಶಕಗಳ ಕಾಲ ಸಲ್ಲಿಸಿದ ಸೇವೆ ನೆಮ್ಮದಿ ತಂದಿದೆ. ವಿದ್ಯಾರ್ಥಿಗಳು ತೋರಿದ ಪ್ರೀತಿ ಹಾಗೂ ಪೋಷಕರುನೀಡಿದ ಗೌರದಿಂದ ಹೃದಯ ತುಂಬಿ ಬರುತ್ತಿದೆ. ಮುಂದೆಯೂ ಮಕ್ಕಳಿಗೆ ಅಗತ್ಯವಾದ ಶೈಕ್ಷಣಿಕ ಮಾರ್ಗದರ್ಶನ ನೀಡಲು ಉತ್ಸುಕನಾಗಿದ್ದೇನೆ’ ಎಂದು ಹೇಳಿದರು.
ಜಿಲ್ಲಾ ಸರ್ಕಾರಿ ನೌಕರರ ಸಂಘದ ಪ್ರಧಾನ ಕಾರ್ಯದರ್ಶಿ ವಿ.ತಿಪ್ಪಣ್ಣ, ತಾಲ್ಲೂಕು ಪ್ರಾಥಮಿಕ ಶಾಲಾ ಶಿಕ್ಷಕರ ಸಂಘದ ಅಧ್ಯಕ್ಷ ಬೈರಾರೆಡ್ಡಿ, ಶಿಕ್ಷಕರಾದ ಕಲಾ ಶಂಕರ್, ರಘುನಾಥರೆಡ್ಡಿ, ಡಿ.ಎನ್.ರಾಮಚಂದ್ರಪ್ಪ, ಕಮಲಮ್ಮ, ಶಾರದಮ್ಮ, ಅಂಜಲಿದೇವಿ, ರವಿಚಂದ್ರ ಇದ್ದರು.