ವರದಿ: ಶಬ್ಬೀರ್ ಅಹ್ಮದ್, ಶ್ರೀನಿವಾಸಪುರ
ಶ್ರೀನಿವಾಸಪುರ: ಶಿಕ್ಷಕರು ವಿದ್ಯಾರ್ಥಿಗಳಲ್ಲಿ ವೈಜ್ಞಾನಿಕ ಮನೋಭಾವ ಬೆಳೆಸಬೇಕು ಎಂದು ಡಯಟ್ ಪ್ರಾಂಶುಪಾಲ ಟಿ.ಕೆ.ರಾಘವೇಂದ್ರ ಹೇಳಿದರು.
ಪಟ್ಟಣದ ಕರ್ನಾಟಕ ಸರ್ಕಾರಿ ಮಾದರಿ ಉನ್ನತೀಕರಿಸಿದ ಹಿರಿಯ ಪ್ರಾಥಮಿಕ ಶಾಲೆಯ ಅವರಣದಲ್ಲಿ ಸೋಮವಾರ ಏರ್ಪಡಿಸಿದ್ದ ರಾಷ್ಟ್ರೀಯ ವಿಜ್ಞಾನ ದಿನಾಚರಣೆ ಸಮಾರಂಭ ಉದ್ಘಾಟಿಸಿ ಮಾತನಾಡಿ, ವಿಜ್ಞಾನ ಜನರ ಬದುಕಲ್ಲಿ ಹಾಸುಹೊಕ್ಕಾಗಿದೆ. ಅದನ್ನು ವಿವೇಚನೆಯಿಂದ ಬಳಸಬೇಕಾದ ಹೊಣೆ ಸಮಾಜದ ಮೇಲಿದೆ ಎಂದು ಹೇಳಿದರು.
ಶಾಲೆಯ ಮುಖ್ಯ ಶಿಕ್ಷಕ ಎಂ.ಬೈರೇಗೌಡ ಮಾತನಾಡಿ, ವಿಜ್ಞಾನ ಮಾನವನ ಬದುಕನ್ನು ಸುಲಭ ಮಾಡಿದೆ. ಹಾಗೆಯೇ ವಿಜ್ಞಾನದ ಕೆಲವು ಆವಿಷ್ಕಾರಗಳು ಮಾನವ ಕುಲಕ್ಕೆ ಬೆದರಿಕೆ ಒಡ್ಡಿವೆ. ಆದ್ದರಿಂದ ವಿಜ್ಞಾನದ ಕೊಡುಗೆಯನ್ನು ಸ್ವಯಂ ಚಿಕಿತ್ಸಕ ಬುದ್ಧಿಯಿಂದ ಬಳಸಬೇಕು ಎಂದು ಹೇಳಿದರು.
ಡಯಟ್ ಉಪನ್ಯಾಸಕರಾದ ಗಂಗಪ್ಪ, ಪುರುಷೋತ್ತಮ್ ವಿಜ್ಞಾನದ ಮಹತ್ವ ಕುರಿತು ಮಾತನಾಡಿದರು.
ಬೇರೆ ಬೇರೆ ಶಾಲೆಗಳ ವಿದ್ಯಾರ್ಥಿಗಳು, ಶಿಕ್ಷಕರು ಹಾಗೂ ವಿಜ್ಞಾನ ಚಿಂತಕರು ಸಮಾರಂಭದಲ್ಲಿ ಉಪಸ್ಥಿತರಿದ್ದರು.