ಕುಂದಾಪುರ (ಅ.19): ಶಿಕ್ಷಕರಾದವರು ಸಾಧುಸಂತರ ಹಾಗೆ ವೇದಿಕೆಯಲ್ಲಿ ನಿಂತು ಪ್ರವಚನ ನೀಡುವುದಕ್ಕಿಂತ ವಿದ್ಯಾರ್ಥಿಗಳ ಜೊತೆಗಿದ್ದು, ಅವರ ಮನೋಬಲವನ್ನು ಅರಿತು ಮಾರ್ಗದರ್ಶಕರಾಗಬೇಕು ಎಂದು ಮಣಿಪಾಲ ಯೂನಿವರ್ಸಿಟಿ ಯ ವಿಶ್ರಾಂತ ಕುಲಪತಿಗಳು ಮಣಿಪಾಲ ವಿಶ್ವವಿದ್ಯಾನಿಲಯದ ಪ್ರೊ. ಚಾನ್ಸಲರ್ ಆಗಿರುವ ಡಾ. ರಾಮನಾರಾಯಣ್ ಹೇಳಿದರು.
ಅವರು ಕುಂದಾಪುರ ಎಜುಕೇಶನ್ ಸೊಸೈಟಿ ಪ್ರವರ್ತಿತ ಎಚ್ ಎಂ ಎಂ ಹಾಗೂ ವಿಕೆಆರ್ ಶಾಲೆಗಳ ಟೀಚರ್ ಟ್ರೈನಿಂಗ್ ವಿಭಾಗದಲ್ಲಿ ಶಿಕ್ಷಕ ವಿದ್ಯಾರ್ಥಿಗಳಿಗೆ ಆಯೋಜಿಸಿದ ಕಾರ್ಯಾಗಾರದಲ್ಲಿ ಮಾತನಾಡಿದರು. ಸಂಸ್ಥೆಯ ಪ್ರಾಂಶುಪಾಲರಾದ ಡಾ. ಚಿಂತನಾ ರಾಜೇಶ್ ಮಾತನಾಡುತ್ತಾ ತರಗತಿಯಲ್ಲಿ ಸಮಸ್ಯೆಗಳು ಎಲ್ಲಿವೆ ಎಂದು ಯೋಚಿಸುವುದಕ್ಕಿಂತ ಸಮಸ್ಯೆಗಳನ್ನು ಹೇಗೆ ಪರಿಹರಿಸಬಹುದು ಎಂಬುದನ್ನು ಇಂದಿನ ದಿನಗಳಲ್ಲಿ ಯೋಚಿಸಬೇಕು ಎಂದರು. ಕಾರ್ಯಕ್ರಮದ ಅಧ್ಯಕ್ಷರಾಗಿರುವ ಕುಂದಾಪುರ ಎಜುಕೇಶನ್ ಸೊಸೈಟಿ (ರಿ.) ಯ ಕಾರ್ಯದರ್ಶಿಯಾಗಿರುವ ಸೀತಾರಾಮ ನಕ್ಕತ್ತಾಯರು, ಶಿಕ್ಷಕರು ಕ್ರಿಯಾಶೀಲರಾಗಬೇಕಾದರೆ ತರಬೇತಿಗಳು ಅತೀ ಮುಖ್ಯ ಎಂದರು.
ಶಿಕ್ಷಣ ಸಂಯೋಜಕರಾದ ವಿಲ್ಮಾ ಡಿ ಸಿಲ್ವಾ ಅತಿಥಿಗಳ ಪರಿಚಯ ಮಾಡಿದರು. ಶಿಕ್ಷಕಿ ಶ್ವೇತಾ ಕಾರ್ಯಕ್ರಮ ನಿರೂಪಿಸಿ ವಂದಿಸಿದರು. ಸಂಸ್ಥೆಯ ಎಲ್ಲಾ ವಿಭಾಗದ ಮುಖ್ಯಸ್ಥರು, ಶಿಕ್ಷಕರು, ಸಂಸ್ಥೆಯ ಶಿಕ್ಷಕ ವಿದ್ಯಾರ್ಥಿಗಳು ಉಪಸ್ಥಿತರಿದ್ದರು.