ವರದಿ: ಶಬ್ಬೀರ್ ಅಹಮ್ಮದ್, ಶ್ರೀನಿವಾಸಪುರ
ಶ್ರೀನಿವಾಸಪುರ: ಮಕ್ಕಳ ಸಂತಸ ಕಲಿಕೆಗೆ ನಲಿ ಕಲಿ ಶಾಲೆ ಸಹಕಾರಿ. ಶಿಕ್ಷಕರು ಮಕ್ಕಳ ಮನಸ್ಸಿನೊಂದಿಗೆ ಮಕ್ಕಳಲ್ಲಿ ಬೆರೆತು ಆಟದ ಮೂಲಕ ಪಾಠ ಹೇಳಬೇಕು ಎಂದು ಕ್ಷೇತ್ರ ಶಿಕ್ಷಣಾಧಿಕಾರಿ ವಿ.ಉಮಾದೇವಿ ಹೇಳಿದರು.
ತಾಲ್ಲೂಕಿನ ಗೌಡಹಳ್ಳಿ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆ ಆವರಣದಲ್ಲಿ ಶುಕ್ರವಾರ ನಲಿ ಕಲಿ ಶಾಲೆ ಉದ್ಘಾಟಿಸಿ ಮಾತನಾಡಿ, ಕೋವಿಡ್ ಮಕ್ಕಳ ಸಹಜ ಕಲಿಕೆಗೆ ಪೆಟ್ಟು ಕೊಟ್ಟಿದೆ. ಆದರೂ ಅವನ್ನು ಕಲಿಕೆಯಿಂದ ದೂರ ಉಳಿಯದಂತೆ ಇಲಾಖೆ ವಿವಿಧ ಕಾರ್ಯಕ್ರಮಗಳನ್ನು ರೂಪಿಸಿ ಜಾರಿತೆ ತಂದಿದೆ. ಅದರ ಪರಿಣಾಮವಾಗಿ ಮಕ್ಕಳು ಶಾಲಾ ಸಂಪರ್ಕದಿಂದ ದೂರವಾಗಿಲ್ಲ ಎಂದು ಹೇಳಿದರು.
ಶೈಕ್ಷಣಿಕ ಕ್ಷೇತ್ರದಲ್ಲಿ ನಲಿ ಕಲಿ ಶಾಲಾ ಕಲ್ಪನೆ ಅದ್ಭುತವಾದುದು. ಶಾಲಾ ಶಿಕ್ಷಣದಲ್ಲಿ ಬೆತ್ತಕ್ಕೆ ಸ್ಥಾನವಿಲ್ಲ. ಮಗು ಕೇಂದ್ರೀಕೃತ ಶಿಕ್ಷಣ ವ್ಯವಸ್ಥೆ ಜಾರಿಗೆ ಬಂದ ಮೇಲೆ. ಶಿಕ್ಷಕರ ಕೆಲಸ ಹಗುರವಾಗಿದೆ. ಮಗುವಿನ ಮನಸ್ಸನ್ನು ಅರಿತು ಕಲಿಸುವ ಕಾರ್ಯಕ್ಕೆ ಶಿಕ್ಷಕ ಸಮುದಾಯ ಒಗ್ಗಿಹೋಗಿದೆ. ಇದರಿಂದ ಮಕ್ಕಳು ಸಂತೋಷವಾಗಿ ಸಾಲೆಗೆ ಬಂದು ನಲಿಯುತ್ತಾ ಕಲಿತು ಮನೆ ಸೇರಲು ಸಾಧ್ಯವಾಗಿದೆ ಎಂದು ಹೇಳಿದರು.
ಗ್ರಾಮ ಪಂಚಾಯಿತಿ ಅಧ್ಯಕ್ಷ ಬಂಗವಾದಿ ರವಿಕುಮಾರ್, ತಾಲ್ಲೂಕು ಸರ್ಕಾರಿ ನೌಕರರ ಸಂಘದ ಅಧ್ಯಕ್ಷ ಬಂಗವಾದಿ ನಾಗರಾಜ್, ಪದಾಧಿಕಾರಿಗಳಾದ ಬಯ್ಯಾರೆಡ್ಡಿ, ಶಿವಣ್ಣ ಇದ್ದರು.