ಶ್ರೀನಿವಾಸಪುರ: ಶಿಕ್ಷಕರು ಪ್ರಾಥಮಿಕ ಶಿಕ್ಷಣಕ್ಕೆ ಹೆಚ್ಚಿನ ಆದ್ಯತೆ ನೀಡಬೇಕು ಎಂದು ಶಾಸಕ ಕೆ.ಆರ್.ರಮೇಶ್ ಕುಮಾರ್ ಹೇಳಿದರು.
ಪಟ್ಟಣದ ರಂಗಾರಸ್ತೆ ಪ್ರೌಢ ಶಾಲೆ ಆವರಣದಲ್ಲಿ ತಾಲ್ಲೂಕು ಸಾರ್ವಜನಿಕ ಶಿಕ್ಷಣ ಇಲಾಖೆ ವತಿಯಿಂದ ಸೋಮವಾರ ಏರ್ಪಡಿಸಿದ್ದ ಕಲಿಕಾ ಹಬ್ಬ ಸಮಾರಂಭ ಉದ್ಘಾಟಿಸಿ ಮಾತನಾಡಿದ ಅವರು, ಶಿಕ್ಷಕರಿಗೆ ಒಳ್ಳೆ ಸಂಬಳ ದೊರೆಯುತ್ತಿದೆ. ಆದರೆ ಸರ್ಕಾರಿ ಶಾಲೆಗಳಲ್ಲಿ ಮಕ್ಕಳ ಸಂಖ್ಯೆ ಕುಸಿಯುತ್ತಿದೆ. ಈ ಕುರಿತು ಶಿಕ್ಷಕರು ಆತ್ಮಾವಲೋಕನ ಮಾಡಿಕೊಳ್ಳಬೇಕು ಎಂದು ಹೇಳಿದರು.
ಪ್ರಾಥಮಿಕ ಶಿಕ್ಷಣ ಹಾಗೂ ಪ್ರಾಥಮಿಕ ಆರೋಗ್ಯ ಅತ್ಯಮೂಲ್ಯ. ಅವು ಸರ್ಕಾರದ ನಿಯಂತ್ರಣದಲ್ಲಿರಬೇಕು. ಅವುಗಳನ್ನು ಖಾಸಗಿಯವರ ಕೈಗೆ ನೀಡುವ ಯಾವುದೇ ದೇಶಕ್ಕೆ ದರಿದ್ರ ತಪ್ಪಿದ್ದಲ್ಲ. ನಾನು ಮೊದಲ ಬಾರಿಗೆ ಶಾಸಕನಾದಾಗ ಪಟ್ಟಣಕ್ಕೆ ಸರ್ಕಾರಿ ಪ್ರಥಮ ದರ್ಜೆ ಕಾಲೇಜು ತರುವ ಭರವಸೆ ನೀಡಿದ್ದೆ. ಭರವಸೆ ಈಡೇರಿಸಲಾಗಿದೆ. ಪಟ್ಟಣದಲ್ಲಿ ಮಹಿಳೆಯರು ಹಾಗೂ ಪುರುಷರಿಗೆ ಪ್ರತ್ಯೇಕವಾದ ಪ್ರಥಮ ದರ್ಜೆ ಕಾಲೇಜು ಪ್ರಾರಂಭಿಸಲು ಉದ್ದೇಶಿಸಲಾಗಿದೆ ಎಂದು ಹೇಳಿದರು.
ಕ್ಷೇತ್ರ ಶಿಕ್ಷಣಾಧಿಕಾರಿ ವಿ.ಉಮಾದೇವಿ ಮಾತನಾಡಿ, ಕೋವಿಡ್ ಸಂಕಷ್ಟದ ಬಳಿಕ ಶಾಲೆಗಳು ಪ್ರಾರಂಭವಾದಾಗ ಸ್ವಕಲಿಕಾ ಮಾದರಿ ವಿಧಾನ ಜಾರಿಗೆ ತರಲಾಯಿತು. ಕಲಿಕಾ ಚೇತರಿಕೆ ಎಂಬ ಹೆಸರಲ್ಲಿ ಪ್ರಾರಂಭಿಸಲಾಯಿತು, ಕಲಿಕೆ ಅನುಭವ ಕೇಂದ್ರೀಕೃತಗೊಳಿಸುವ ಉದ್ದೇಶದಿಂದ ಕಲಿಕಾ ಹಬ್ಬ ಆಚರಿಸಲಾಗುತ್ತಿದೆ. ತಾಲ್ಲೂಕಿನ 24 ಕ್ಲಸ್ಟರ್‍ಗಳಲ್ಲಿ ಈ ಹಬ್ಬ ಆಚರಿಸಲಾಗುತ್ತಿದೆ ಎಂದು ಹೇಳಿದರು.
ಪಿಎಲ್‍ಡಿ ಬ್ಯಾಂಕ್ ಅಧ್ಯಕ್ಷ ದಿಂಬಾಲ ಅಶೋಕ್, ತಾಲ್ಲೂಕು ಸರ್ಕಾರಿ ನೌಕರರ ಸಂಘದ ಅಧ್ಯಕ್ಷ ಎಂ.ನಾಗರಾಜ್, ಬಿಆರ್‍ಸಿ ಸಮನ್ವಯಾಧಿಕಾರಿ ಕೆ.ಸಿ.ವಸಂತ, ಡಿಇಆರ್‍ಟಿಇ ಜಿ.ವಿ.ಚಂದ್ರಪ್ಪ, ಸಿಆರ್‍ಪಿಗಳಾದ ರಾಧಾಕೃಷ್ಣ, ಅಕ್ಮಲ್, ಆರಿಫ್ ಪಾಷ, ಇಸಿಒ ಸಾದಿಕ್ ಪಾಷ, ಶಾಲಾ ಮುಖ್ಯಸ್ಥರಾದ ಟಿ.ವಿ.ಬೈರೆಡ್ಡಿ, ಆದಿಲಕ್ಷ್ಮಮ್ಮ, ಚೆನ್ನಪ್ಪ, ನಾಗೇಂದ್ರ ಪ್ರಸಾದ್, ಎಸ್‍ಡಿಎಂಸಿ ಅಧ್ಯಕ್ಷ ನಾರಾಯಣಸ್ವಾಮಿ, ಮುಖಂಡರಾದ ಸೀತಾರಾಮರೆಡ್ಡಿ, ಮಂಜುನಾಥರೆಡ್ಡಿ, ಅನ್ನೀಸ್ ಅಹ್ಮದ್ ಇದ್ದರು.