ಕೋಲಾರ:- ನಗರದಲ್ಲಿ ಐದು ಕೋಟಿ ರೂ ಅಂದಾಜು ವೆಚ್ಚದಿಂದ ನಿರ್ಮಿಸಲು ಉದ್ದೇಶಿಸಿರುವ ಗುರುಭವನವನ್ನು 2026ರೊಳಗೆ ತಾವೇ ನೇತೃತ್ವವಹಿಸಿ ನಿರ್ಮಾಣ ಮಾಡಿ ಶಿಕ್ಷಕರಿಗೆ ಹಸ್ತಾಂತರ ಮಾಡುವುದಾಗಿ ಶಾಸಕ ಕೊತ್ತೂರು ಡಾ.ಜಿ.ಮಂಜುನಾಥ್ ಘೋಷಿಸಿದರು.
ನಗರದ ಟಿ.ಚನ್ನಯ್ಯ ರಂಗಮಂದಿರದಲ್ಲಿ ಜಿಲ್ಲಾಡಳಿತ,ಜಿಪಂ, ಶಾಲಾ ಶಿಕ್ಷಣ ಮತ್ತು ಸಾಕ್ಷರತಾ ಇಲಾಖೆ ಆಶ್ರಯದಲ್ಲಿ ನಡೆದ ಶಿಕ್ಷಕರ ದಿನಾಚರಣೆ ಕಾರ್ಯಕ್ರಮದಲ್ಲಿ ಜಿಲ್ಲಾಮಟ್ಟದ ಉತ್ತಮ ಶಿಕ್ಷಕ ಪ್ರಶಸ್ತಿ ಗಳಿಸಿದ ಹಾಗೂ ನಿವೃತ್ತರಾದ ಶಿಕ್ಷಕರ್ನು ಸನ್ಮಾನಿಸಿ ಅವರು ಮಾತನಾಡುತ್ತಿದ್ದರು.
ಶಿಕ್ಷಕ ಸಂಘಟನೆಗಳಲ್ಲಿನ ಗೊಂದಲ ಮತ್ತಿತರ ಕಾರಣಗಳಿಂದ ಈವರೆಗೂ 7 ಬಾರಿ ಶಂಕುಸ್ಥಾಪನೆಗೊಂಡಿರುವ ಗುರುಭವನದ ಕಾಮಗಾರಿ ಮಾತ್ರ ಆರಂಭಗೊಳ್ಳದಿರುವುದು ವಿಪರ್ಯಾಸ ಎಂದ ಅವರು, ಒಂದೇ ವರ್ಷದಲ್ಲಿ ಇಡೀ ಕಟ್ಟಡದ ಕಾಮಗಾರಿ ಪೂರ್ಣ ಅಸಾಧ್ಯವಾದರೂ ಅತಿ ಶೀಘ್ರ ಶಿಲಾನ್ಯಾಸ ನೆರವೇರರಿಸಿ 2026ರ ಶಿಕ್ಷಕರ ದಿನಾಚರಣೆ ಕಾರ್ಯಕ್ರಮವನ್ನು ಅದೇ ಕಟ್ಟಡದಲ್ಲಿ ನಡೆಸಲು ಕ್ರಮವಹಿಸುವುದಾಗಿ ಭರವಸೆ ನೀಡಿದರು.
ಸಂಸದ ಮುನಿಸ್ವಾಮಿ, ವಿಧಾನಪರಿಷತ್ ಸದಸ್ಯ ಡಾ.ವೈ.ಎ.ನಾರಾಯಣಸ್ವಾಮಿ ತಲಾ 50 ಲಕ್ಷ ನೀಡಿದ್ದಾರೆ, ಉಳಿದಂತೆ ವಿಧಾನಪರಿಷತ್ ಸದಸ್ಯ ಇಂಚರ ಗೋವಿಂದರಾಜು, ಅನಿಲ್ ಕುಮಾರ್ ಇಬ್ಬರೂ ತಲಾ 25 ಲಕ್ಷ ನೀಡಬೇಕು ಎಂದ ಅವರು, ಶಿಕ್ಷಕರ ಕಲ್ಯಾಣ ನಿಧಿಯ 1 ಕೋಟಿ ರೂ ಸೇರಿದಂತೆ ಎಲ್ಲಾ ಹಣ ಬಳಸಿಕೊಂಡು ಕಟ್ಟಡ ಕಾಮಗಾರಿ ಶೀಘ್ರ ಆರಂಭಿಸುವುದಾಗಿ ತಿಳಿಸಿದರು.
ಶಿಕ್ಷಕ ವೃತ್ತಿ ಅತ್ಯಂತ ಪವಿತ್ರವಾಗಿದ್ದು, ತಂದೆ,ತಾಯಿ, ಶಿಕ್ಷಕ ಮಾತ್ರ ಪ್ರತಿಯೊಬ್ಬರ ಮನಸ್ಸಿನಲ್ಲೂ ಚಿರಸ್ಥಾಯಿ ಉಳಿಯಲು ಸಾಧ್ಯ ಎಂದು ತಿಳಿಸಿ, ಶಿಕ್ಷಕರು ಸಂಘಟನೆ ರಚನೆಗೆ ಚುನಾವಣೆಗೆ ಹೋಗದೇ ಅವಿರೋಧ ಆಯ್ಕೆಗೆ ಅವಕಾಶ ಮಾಡಿಕೊಡಿ, ವಿರಸ,ಗೊಂದಲ ಬೇಡ ಎಲ್ಲರೂ ಒಗ್ಗಟ್ಟಾಗಿ ಸಾಗಿ ಎಂದರು.
ಗುರುಭವನ ವಿಳಂಬ ವಿಷಾದರ-ಅನಿಲ್
ವಿಧಾನಪರಿಷತ್ ಸದಸ್ಯ ಎಂ.ಎಲ್ ಅನಿಲ್‍ಕುಮಾರ್, ಪ್ರಾಥಮಿಕ ಶಿಕ್ಷಣ ಜೀವನದ ಅಡಿಪಾಯವಾಗಿದ್ದು, ಸಮಾಜ ಕಟ್ಟುವ ಶಿಲ್ಪಿಗಳಾದ ಗುರುವಿಗೆ ಅತ್ಯಂತ ಗೌರವವಿದೆ, ನಿಮಗಾಗಿ ಗುರುಭವನ ನಿರ್ಮಾಣ ಇನ್ನು ಆಗದಿರುವುದು ವಿಷಾದದ ಸಂಗತಿ ನಾವು ಹಣ ಕೊಡಲು ಸಿದ್ದವಿದ್ದರೂ ವಿಳಂಬ ಮಾಡುತ್ತಿದ್ದೀರಿ, ಶಾಸಕರು,ಸಂಂಸದರ ಅನುದಾನದ ಜತೆ ನಿಮ್ಮ ಒಂದು ದಿನದ ವೇತನ ನೀಡಿ ಎಂದು ಸಲಹೆ ನೀಡಿದರು.
2ಕೋಟಿ ವೆಚ್ಚದಲ್ಲಿ ಸುಸಜ್ಜಿತ ಶಾಲೆ
ವಿಧಾನಪರಿಷತ್ ಸದಸ್ಯ ಇಂಚರ ಗೋವಿಂದರಾಜು ಮಾತನಾಡಿ, ಶಿಕ್ಷಣ,ಆರೋಗ್ಯ ಕ್ಷೇತ್ರಗಳು ಎರಡು ಕಣ್ಣುಗಳಿದ್ದಂತೆ ಶಿಕ್ಷಣ,ಆಹಾರ,ಆರೋಗ್ಯ ಇವಿದ್ದರೆ ಮಾತ್ರ ಯಾವುದೇ ದೇಶ ಸಾಧನೆ ಮಾಡಲು ಸಾಧ್ಯವಿದೆ, ಕೋಲಾರದ ನೂತನ ಸರ್ಕಾರಿ ಪ್ರೌಢಶಾಲೆ ನೂತನ ಕಟ್ಟಡಕ್ಕೆ 1.20 ಕೋಟಿ ರೂ ಮಂಜೂರು ಮಾಡಿಸಿದ್ದೇನೆ, ಅದೇ ರೀತಿ ಬಾಲಕರ ಕಾಲೇಜು ನಮ್ಮ ಕೋಲಾರದ ಅತ್ಯಂತ ಘನತೆಯ ಕಟ್ಟಡವಾಗಿದೆ, ಅದರ ಅಭಿವೃದ್ದಿಗೂ ಶಾಸಕರು ಕೈಜೋಡಿಸಬೇಕು ಎಂದ ಅವರು, ಒಳ್ಳೆಯ ದಾಖಲಾತಿ ಇರುವ ಶಾಲೆ ಗುರುತಿಸಿಕೊಟ್ಟಲ್ಲಿ ತಾವೇ ಸ್ವತಃ ತಮ್ಮ ಹಣದಿಂದ 2 ಕೋಟಿ ವೆಚ್ಚದಲ್ಲಿ ಅತ್ಯಾಧುನಿಕ ಸೌಲಭ್ಯಗಳುಳ್ಳ ಶಾಲಾ ಕಟ್ಟಡ ನಿರ್ಮಿಸಿಕೊಡುವುದಾಗಿ ತಿಳಿಸಿದರು.
ಶಿಕ್ಷಣದಲ್ಲಿ ಸಂಸ್ಕಾರ ಅತಿ ಮುಖ್ಯ-ಎಡಿಸಿ
ಅಪರ ಜಿಲ್ಲಾಧಿಕಾರಿ ಶಂಕರ್ ವಣಿಕ್ಯಾಳ್ ಮಾತನಾಡಿ, ಸರ್ಕಾರಿ ಶಾಲೆಗಳಿಗೆ ಕಾಸ್ಮೆಟಿಕ್ ಟಜ್ ಬೇಡ, ಅಲ್ಲಿ ಗುಣಾತ್ಮಕ ಶಿಕ್ಷಣ ಸಿಗುವಂತೆ ಮಾಡಿದರೆ ಸಾಕು, ಅಂಕ ಆಧಾರಿತ ಶಿಕ್ಷಣಕ್ಕಿಂತ ಮಕ್ಕಳಿಗೆ ಇಂದು ಮೌಲ್ಯಯುತ ಶಿಕ್ಷಣದ ಅಗತ್ಯವಿದೆ, ಮಕ್ಕಳಿಗೆ ಭಾರತೀಯ ಸಂಸ್ಕøತಿ ತಿಳಿಸಿಕೊಡಿ ಆಗ ಮಾತ್ರ ಉತ್ತಮ ಸಮಾಜ ನಿರ್ಮಾಣ ಸಾಧ್ಯ ಎಂದರು.
ಸ್ಪರ್ಧಾತ್ಮಕ ಯುಗದಲ್ಲಿ ಮಕ್ಕಳಿಗೆ ಜ್ಞಾನ ಹಂಚಲು ಶಿಕ್ಷಕರು ನಿಂತ ನೀರಾಗದೇ ಹರಿಯುವ ನೀರಾಗಬೇಕು, ನಿರಂತರ ಅಧ್ಯಯನಶೀಲತೆ ಬೆಳೆಸಿಕೊಳ್ಳಬೇಕು, ಶಿಕ್ಷಣ ನೀಡುವ ಪ್ರತಿಯೊಬ್ಬರೂ ಗುರುಗಳೇ, ಸರ್ಕಾರಿ ಶಾಲೆಗಳ ಮಕ್ಕಳು ಉನ್ನತ ಸ್ಥಾನಕ್ಕೆ ಹೋಗಿದ್ದಾರೆ, ಕೀಳಿರಿಮೆ ಅಗತ್ಯವಿಲ್ಲ, ಶಿಕ್ಷಕರು ಗುಂಪುಗಾರಿಕೆ ದೂರ ಮಾಡಿಕೊಳ್ಳಿ ಶಿಕ್ಷಣ ರಂಗವನ್ನು ಬೆಳೆಸಿ ಎಂದು ಕಿವಿಮಾತು ಹೇಳಿ, ಎಸ್ಸೆಸ್ಸೆಲ್ಸಿಯಲ್ಲಿ ಜಿಲ್ಲೆ ಈ ಬಾರಿ ಮೊದಲ ಮೂರು ಸ್ಥಾನದಲ್ಲಿರಲು ಶ್ರಮಿಸಿ ಎಂದರು.
ಡಿಡಿಪಿಐ ಕೃಷ್ಣಮೂರ್ತಿ ಸ್ವಾಗತಿಸಿ, ಜಿಲ್ಲೆಯ 18 ಮಂದಿಗೆ ಜಿಲ್ಲಾಮಟ್ಟದ ಪ್ರಶಸ್ತಿ ನೀಡಿದ್ದು, ಎಸ್ಸೆಸ್ಸೆಲ್ಸಿ ಉತ್ತಮ ಫಲಿತಾಂಶಕ್ಕಾಗಿ ಇಲಾಖೆ ಸಕಲ ಸಿದ್ದತೆ ನಡೆಸಿದೆ, ಮುಖ್ಯಶಿಕ್ಷಕರ ಸಭೆ ನಡೆಸಲಾಗಿದೆ ಮಕ್ಕಳ ಕಲಿಕೆಗೆ ಅಗತ್ಯವಾದ ಸಂಪನ್ಮೂಲಗಳ ಸಿದ್ದತೆ ನಡೆದಿದೆ ಎಂದರು.
ಇದೇ ಸಂದರ್ಭದಲ್ಲಿ ಸರ್ಕಾರಿ,ಅನುದಾನಿತ,ಅನುದಾನರಹಿತ ಶಾಲೆಗಳಲ್ಲಿ ಪ್ರಸ್ತುತ ವರ್ಷ ನಿವೃತ್ತರಾದ 40ಕ್ಕೂ ಹೆಚ್ಚು ಶಿಕ್ಷಕರನ್ನು ಸನ್ಮಾನಿಸಿ ಬೀಳ್ಕೊಡಲಾಯಿತು. ಜಿಲ್ಲಾಮಟ್ಟದ ಉತ್ತಮ ಶಿಕ್ಷಕ ಪ್ರಶಸ್ತಿ ಗಳಿಸಿದ ಎಲ್ಲಾ ಆರು ತಾಲ್ಲೂಕುಗಳ ಒಟ್ಟು 18 ಮಂದಿ ಶಿಕ್ಷಕರನ್ನು ನಗದು ಪುರಸ್ಕಾರದೊಂದಿಗೆ ಸನ್ಮಾನಿಸಲಾಯಿತು. ಶಾಸಕ ಕೊತ್ತೂರು ಮಂಜುನಾಥ್ ಕಾಯಕ್ರಮದ ನಂತರ ಎಲ್ಲಾ ಶಿಕ್ಷಕರಿಗೂ ಊಟದ ವ್ಯವಸ್ಥೆ ಮಾಡಿಸಿದ್ದರು.
ಕಾರ್ಯಕ್ರಮದಲ್ಲಿ ಡಯಟ್ ಪ್ರಾಂಶುಪಾಲ ಜಯಣ್ಣ, ಬಿಇಒ ಕನ್ನಯ್ಯ, ಶಿಕ್ಷಣಾಧಿಕಾರಿ ಅಶೋಕ್,ವಿಷಯ ಪರಿವೀಕ್ಷಕರಾದ ಶಂಕರೇಗೌಡ, ಗಾಯತ್ರಿ,ಶಶಿವಧನ, ಕೃಷ್ಣಪ್ಪ, ಇಸಿಒ ಕೆ.ಶ್ರೀನಿವಾಸ್,ಖಾಸಗಿ ಶಾಲೆಗಳ ಸಂಘದ ಸದಾನಂದ್,ಎಸ್.ಮುನಿಯಪ್ಪ, ಜಗದೀಶ್, ವಿವಿಧ ಶಿಕ್ಷಕ ಸಂಘಟನೆಗಳ ಪದಾಧಿಕಾರಿಗಳಾದ ಜಿ.ಎಂ.ಚಂದ್ರಪ್ಪ, ಜಿ.ಶ್ರೀನಿವಾಸ್, ಶಿವಕುಮಾರ್,ಅಪ್ಪೇಗೌಡ,ನಾಗರಾಜ್,ಅಶ್ವಥ್ಥನಾರಾಯಣ, ವಿ.ಮುರಳಿಮೋಹನ್, ಆರ್.ನಾಗರಾಜ್,ಮುನಿಯಪ್ಪ, ಆಂಜನೇಯ,ನಾರಾಯಣರೆಡ್ಡಿ,ಶ್ರೀರಾಮ್ ಮತ್ತಿತರರಿದ್ದರು.