ಕೋಲಾರ,ಜ,.08: ತಾಲೂಕಿನ ಟಿಎಪಿಸಿಎಂಎಸ್ ಚುನಾವಣೆಯಲ್ಲಿ ಸ್ವಯಂ ಘೋಷಿತ ಹಿರಿಯ ಸಹಕಾರಿಗಳಿಗೆ ಹಾಗೂ ಕಾಂಗ್ರೆಸ್ ಮುಖಂಡರಿಗೆ ರೈತ ಸಮುದಾಯವು ತಕ್ಕ ಪಾಠ ಕಲಿಸಲಿದ್ದಾರೆ ಎಂದು ಸಿಎಂಆರ್ ಶ್ರೀನಾಥ್ ತಿಳಿಸಿದರು.
ಭಾನುವಾರ ನಡೆದ ಟಿಎಪಿಸಿಎಂಎಸ್ ಚುನಾವಣೆಯ ಫಲಿತಾಂಶವನ್ನು ಕುರಿತು ಪತ್ರಿಕಾ ಹೇಳಿಕೆ ನೀಡಿ ಮಾತನಾಡಿದ ಅವರು ರೈತರ ಅಭಿವೃದ್ಧಿಗಾಗಿ ಶ್ರಮಿಸಬೇಕಾಗಿದ್ದ ಟಿಎಪಿಸಿಎಂಎಸ್ ಸಹಕಾರಿಗಳು ತಮ್ಮ ಸ್ವಾರ್ಥಕ್ಕೆ ಬಳಕೆಯಾಗಿದ್ದೇ ಹೆಚ್ಚು ಇಂತಹ ಸಂದರ್ಭದಲ್ಲಿ ಜಿಲ್ಲೆಯ ಸಹಕಾರಿಗಳ ಮಾರ್ಗದರ್ಶನದಲ್ಲಿ ಈ ಚುನಾವಣೆಯನ್ನು ಎದುರಿಸಲಾಗಿತ್ತು.
ತಾಲೂಕಿನ ಟಿಎಪಿಸಿಎಂಎಸ್ ಸಹಕಾರಿ ಸಂಸ್ಥೆಯಲ್ಲಿ ಸುಮಾರು 1980 ರಲ್ಲಿ ನಡೆದ ಚುನಾವಣೆಯೇ ಕೊನೆಯಾಗಿತ್ತು ಅಂದಿನಿಂದಲೂ ಅವಿರೋಧವಾಗಿ ಆಯ್ಕೆಯಾಗಿ ಬರಲಾಗಿತ್ತು. ಭಾನುವಾರ ನಡೆದ ಚುನಾವಣೆಯಲ್ಲಿ ಕೂಡ ಅವಿರೋಧವಾಗಲು ಮೂರು ಪಕ್ಷಗಳ ನೇತೃತ್ವದಲ್ಲಿ ಒಂದು ಸುತ್ತಿನ ಮಾತುಕತೆಗಳನ್ನು ನಡೆಸಲಾಗಿತ್ತು. ಆದರೆ ಕೆಲವರು ತಮ್ಮ ಸ್ವಾರ್ಥಕ್ಕಾಗಿ ಸಹಕಾರಿ ಸಂಸ್ಥೆಯನ್ನು ತಮ್ಮ ಹಿಡಿತಕ್ಕೆ ತೆಗೆದುಕೊಳ್ಳುವುದಕ್ಕೆ ಮುಖಂಡರುಗಳನ್ನು ದಾರಿ ತಪ್ಪಿಸುವ ಕೆಲಸಕ್ಕೆ ಮುಂದಾಗಿದ್ದರು.
ಹಿರಿಯ ಮಾರ್ಗದಲ್ಲಿ ಮೂರು ಪಕ್ಷಗಳ ಮುಖಂಡರು ಒಮ್ಮತಕ್ಕೆ ಬಂದು ಸೀಟು ಹಂಚಿಕೆಯನ್ನು ಮಾಡಲಾಗಿತ್ತು. ಆದರೆ ಕಾಂಗ್ರೆಸ್ ಪಕ್ಷದಲ್ಲಿನ ಕೆಲವು ಹಿರಿಯ ಸಹಕಾರಿಗಳು ಜೆಡಿಎಸ್ ಮತ್ತು ಬಿಜೆಪಿ ಪಕ್ಷದ ಮುಖಂಡರನ್ನು ದಾರಿ ತಪ್ಪಿಸುವ ಕೆಲಸ ಮಾಡುವುದಕ್ಕೆ ಮುಂದಾಗಿದ್ದು ಅಲ್ಲದೆ ನಮ್ಮೊಂದಿಗೆ ಚರ್ಚೆಗಳ ನಡೆಸುತ್ತಿರುವಾಗಲೇ ಮತ್ತೊಂದು ಕಡೆ ಚುನಾವಣೆ ಪ್ರಚಾರಕ್ಕೆ ತೆರಳಿದ್ದರು.
ಕಾಂಗ್ರೆಸ್ ಪಕ್ಷದ ಹಿರಿಯ ಸಹಕಾರಿಗಳ ಕುತಂತ್ರದ ಕೆಲಸವನ್ನು ಗಮನಿಸಿದ ಜೆಡಿಎಸ್ ಮತ್ತು ಬಿಜೆಪಿ ಪಕ್ಷದ ಮುಖಂಡರು ಎಚ್ಚೆತ್ತುಕೊಂಡು ಟಿಎಪಿಸಿಎಂಎಸ್ ಪ್ರತಿಷ್ಠೆಯಾಗಿ ತೆಗೆದುಕೊಂಡು ಎಲ್ಲಾ ಒಗ್ಗಟ್ಟಾಗಿ ಹೋರಾಡಿದ ಪರಿಣಾಮವಾಗಿ ನಾವು 8 ಸ್ಥಾನಗಳಲ್ಲಿ ಗೆಲ್ಲುವ ಮೂಲಕ ಕಾಂಗ್ರೆಸ್ ಮುಖಂಡರಿಗೆ ಮುಖಭಂಗವಾಗುವಂತೆ ಮಾಡಿದ್ದೇವೆ ಎಂದು ಹೇಳಿದರು.
ಟಿಎಪಿಸಿಎಂಎಸ್ ಚುನಾವಣೆಯಲ್ಲಿ ಜೆಡಿಎಸ್-ಬಿಜೆಪಿ ಮೈತ್ರಿಯಿಂದಾಗಿ ಮುಖಂಡರಿಗೆ ಶಕ್ತಿ ಬಂದಿದ್ದು, ಮುಂದೆ ನಡೆಯುವ ಎಲ್ಲಾ ಚುನಾವಣೆಯನ್ನು ಮೈತ್ರಿ ಮೂಲಕ ಎದುರಿಸುತ್ತೇವೆ. ಈ ಚುನಾವಣೆಯಲ್ಲಿ ಮೈತ್ರಿ ಪಕ್ಷದ ಮೇಲೆ ನಂಬಿಕೆ ಇಟ್ಟು ಅಭೂತಪೂರ್ವ ಗೆಲುವು ತಂದು ಕೊಟ್ಟ ಎಲ್ಲಾ ಮತದಾರರಿಗೆ ಹೃದಯ ಪೂರ್ವಕ ಅಭಿನಂದನೆಗಳನ್ನು ಸಲ್ಲಿಸುವುದಾಗಿ ಜೆಡಿಎಸ್ ಮುಖಂಡ ಸಿಎಂಆರ್ ಶ್ರೀನಾಥ್ ಹೇಳಿದ್ದಾರೆ.