

ಶ್ರೀನಿವಾಸಪುರ : ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆಯ ವತಿಯಿಂದ ತಾಲ್ಲೂಕಿನ ಕನಕ ಸಭಾಭನದಲ್ಲಿ ತಾಲ್ಲೂಕು ಮಟ್ಟದ ಮಹಿಳಾ ವಿಚಾರಗೋಷ್ಠಿ ಕಾರ್ಯಕ್ರಮವನ್ನು ಆಯೋಜಿಸಲಾಗಿತ್ತು.
ಕಾರ್ಯಕ್ರಮವನ್ನು ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆಯ ಬೆಂಗಳೂರು ಪ್ರಾದೇಶಿಕ ನಿರ್ದೇಶಕರಾದ ಮಾನ್ಯ ಶೀನಪ್ಪರವರು ಉದ್ಘಾಟಿಸಿದರು.
ಈ ಸಂದರ್ಭ ಮಾತನಾಡಿದ ಅವರು ಶ್ರೀ ಕ್ಷೇತ್ರ ಧರ್ಮಸ್ಥಳ ಚತುರ್ವಿದ ದಾನಗಳಿಗೆ ಹೆಸರುವಾಸಿಯಾದ ಕ್ಷೇತ್ರ… ಹಸಿದವನಿಗೆ ಅನ್ನ ನೀಡುವುದಕ್ಕಿಂತ ಅನ್ನವನ್ನು ಉತ್ಪಾದಿಸುವ ಕಲೆಯನ್ನು ಕಲಿಸಿಕೊಡಿ ಎನ್ನುವುದು ಧರ್ಮಾಧಿಕಾರಿಗಳ ಕಲ್ಪನೆ.. ಪೂಜ್ಯರ ಧರ್ಮಪತ್ನಿ ಮಾತೃಶ್ರೀ ಹೇಮಾವತಿ ಅಮ್ಮನವರ ಕನಸಿನ ಕೂಸು ಮಹಿಳಾ ಜ್ಞಾನವಿಕಾಸ ಕಾರ್ಯಕ್ರಮ.. ಮಹಿಳೆಯರು ಸಾಮಾಜಿಕವಾಗಿ ಆರ್ಥಿಕವಾಗಿ ಅಭಿವೃದ್ಧಿ ಹೊಂದಿ ಸ್ವಾವಲಂಬಿ ಬದುಕು ಸಾಗಿಸಲು ಮತ್ತು ಮಹಿಳೆಯರನ್ನು ಸಶಕ್ತರನ್ನಾಗಿ ಮಾಡುವಲ್ಲಿ ಜ್ಞಾನವಿಕಾಸದ ಪಾತ್ರ ಅತ್ಯಂತ ಮಹತ್ವದ್ದು ಎಂದರು.. ಹಿಂದಿನ ಕಾಲದಲ್ಲಿ ಮಹಿಳೆಯರು ಕೇವಲ ನಾಲ್ಕು ಗೋಡೆಗಳ ಮದ್ಯೆ ಬಂಧಿಯಾಗಿದ್ದು ಪ್ರಸ್ತುತ ಪ್ರಾಪಂಚಿಕ ಜ್ಞಾನ ಬ್ಯಾಂಕ್ ವ್ಯವಹಾರಗಳ ಬಗ್ಗೆ ತಿಳಿದುಕೊಂಡು ಪ್ರಜ್ಞಾವಂತರಾಗಿದ್ದಾರೆ. ಭಾರತೀಯ ಸನಾತನ ಸಂಸ್ಕೃತಿಯಲ್ಲಿ ಮಹಿಳೆಯರಿಗೆ ಉನ್ನತವಾದ ಹಾಗೂ ಗೌರವಯುತವಾದ ಸ್ಥಾನವಿದೆ. ಮಮತೆ, ಕರುಣೆ, ವಾತ್ಸಲ್ಯ, ತಾಳ್ಮೆ, ಇವೆಲ್ಲ ಹೆಣ್ಣಿಗೆ ಗರ್ಭದಿಂದ ಬಂದ ಆಭರಣಗಳು. ಪ್ರಕೃತಿಗೂ ಮಹಿಳೆಗೂ ಅವಿನಾನುಭಾವ ಸಂಬಂಧವಿದೆ. ನಮ್ಮ ಸಂಸ್ಕೃತಿ, ಕುಟುಂಬ ನಿರ್ವಹಣೆ, ದುಶ್ಚಟಮುಕ್ತ ಸಮಾಜ ನಿರ್ಮಾಣ ವೈಯಕ್ತಿಕ ಶುಚಿತ್ವದ ಮನೋಭಾವನೆಯಿಂದ ಮುನ್ನಡೆದು ಉತ್ತಮ ಸಮಾಜ ನಿರ್ಮಾಣಕ್ಕೆ ಮಹಿಳೆಯರ ಪಾತ್ರ ಅತ್ಯಗತ್ಯವಾಗಿದೆ. ಇವತ್ತು ಪ್ರತಿಯೊಂದು ಕ್ಷೇತ್ರದಲ್ಲೂ ಮಹಿಳೆಯರು ಅದ್ಭುತ ಸಾಧನೆ ಮಾಡುತ್ತಿದ್ದು ಈ ಕಾರ್ಯಕ್ರಮದ ಸದುಪಯೋಗ ಎಲ್ಲರೂ ಪಡೆದುಕೊಳ್ಳಬೇಕು ಎಂದರು..
ಅಖಿಲ ಭಾರತೀಯ ಗಮಕ ಕಲಾ ಪರಿಷತ್ತಿನ ಜಿಲ್ಲಾಧ್ಯಕ್ಷರಾದ ಮಾಯಾ ಬಾಲಚಂದ್ರರವರು ಮಾತನಾಡುತ್ತಾ ಇವತ್ತಿನ ದಿನದಲ್ಲಿ ಸಾಲ ನೀಡುವ ನೂರಾರು ಸಂಸ್ಥೆಗಳಿವೆ… ಆದರೆ ಧರ್ಮಸ್ಥಳ ಸಂಸ್ಥೆ ಬ್ಯಾಂಕಿನಿಂದ ಸದಸ್ಯರಿಗೆ ಸಾಲ ನೀಡುವುದರ ಜೊತೆಗೆ ಹಲವಾರು ಸಮಾಜಮುಖಿ ಕಾರ್ಯಕ್ರಮಗಳನ್ನು ಮಾಡುತ್ತಾ ಮನುಷ್ಯನಲ್ಲಿ ಮಾನವೀಯ ಮೌಲ್ಯಗಳು ಇನ್ನಿತರ ವಿಚಾರಧಾರೆಗಳನ್ನು ಸದಸ್ಯರಲ್ಲಿ ತುಂಬಿ ಪ್ರಬುದ್ಧರನ್ನಾಗಿ ಮಾಡುತ್ತಿರುವುದು ಹೆಮ್ಮೆಯ ವಿಚಾರ. ಸಂಸ್ಥೆಯ ಕಾರ್ಯಚಟುವಟಿಕೆಯ ವ್ಯಾಪ್ತಿ ತುಂಬಾ ದೊಡ್ಡದಿದ್ದು ಶ್ಲಾಘನೀಯವಾಗಿದೆ ಎಂದರು..
ಸಂಪನ್ಮೂಲ ವ್ಯಕ್ತಿಗಳಾಗಿ ಮಾತನಾಡಿದ ದೇವರಾಜಾ ಅರಸು ಕಾಲೇಜು ಆಪ್ ನರ್ಸಿಂಗ್ ಇದರ ಪ್ರಾಂಶುಪಾಲರಾದ ವಿಜಯಲಕ್ಷ್ಮೀಯವರು ಮಾತನಾಡುತ್ತಾ ಮಾನಸಿಕ ಆರೋಗ್ಯ ಹಾಗೂ ಭಾವನೆಗಳ ನಿಯಂತ್ರಣ ಆಗಬೇಕಾದರೆ ದೈನಂದಿನ ಜೀವನದಲ್ಲಿ ಯೋಗ ಪ್ರಾಣಾಯಾಮ ವನ್ನು ಮಾಡಬೇಕು…ಪ್ರತಿದಿನ ದೇಹಕ್ಕೆ ಒಂದಷ್ಟು ವ್ಯಾಯಾಮ ಆದಾಗ ದೇಹ ಸಧೃಡವಾಗುತ್ತದೆ ಮತ್ತು ರೋಗಗಳು ಬರದಂತೆ ತಡೆಯಲು ಅನುಕೂಲವಾಗುತ್ತದೆ. ಇಂತಹ ಕಾರ್ಯಕ್ರಮಗಳ ಜನಸಾಮಾನ್ಯರಿಗೆ ಧರ್ಮಸ್ಥಳ ಸಂಸ್ಥೆ ಅರಿವು ಮೂಡಿಸುತ್ತಿರುವುದು ಅತ್ಯತ್ತಮವಾದ ಕೆಲಸ ಎಂದು ಮೆಚ್ಚುಗೆ ಸೂಚಿಸಿದರು..
ಸಮಾಜದಲ್ಲಿ ಸಾಧನೆ ಮಾಡಿದ ಪುರಸಭೆಯ ಮಂಗಳ ಸತ್ಯಮೂರ್ತಿ ಹಾಗೂ ಪಾತೂರುಗಡ್ಡದ ಶಂಕರಮ್ಮ ರವರನ್ನು ಸನ್ಮಾನಿಸಲಾಯಿತು..
ಮಾಜಿ ತಾಲ್ಲೂಕು ಪಂಚಾಯತ್ ಸದಸ್ಯರಾದ ನಾಗವೇಣಿ ರೆಡ್ಡಿ ಅಧ್ಯಕ್ಷತೆ ವಹಿಸಿದ್ದರು..
ಕಾರ್ಯಕ್ರಮದಲ್ಲಿ ತಾಲ್ಲೂಕು ಯೋಜನಾಧಿಕಾರಿ ಪ್ರಕಾಶ್ ಕುಮಾರ್ ಜಿಲ್ಲಾ ಜನಜಾಗೃತಿ ವೇದಿಕೆ ಸದಸ್ಯರಾದ ಗಿರಿಜಾ ಮತ್ತು ವಾಸುದೇವ್ ಹಾಗೂ ಯೋಜನೆಯ ಮೇಲ್ವಿಚಾರಕ ಶ್ರೇಣಿಯ ಕಾರ್ಯಕರ್ತರು ಉಪಸ್ಥಿತರಿದ್ದರು.
