ಕೋಲಾರ:- ದೇಶದ ಸ್ವಾತಂತ್ರ್ಯ, ಐಕ್ಯತೆಗೆ ಪ್ರತೀಕವಾಗಿರುವ ಭಾರತ ಸೇವಾದಳವನ್ನು ಪ್ರತಿ ಶಾಲೆಯಲ್ಲಿ ಸಂಘಟಿಸಿ,ಮಕ್ಕಳಲ್ಲಿ ರಾಷ್ಟ್ರಪ್ರೇಮ, ಭಾವೈಕ್ಯತೆ ಮೂಡಿಸಿ ಸಂಸ್ಕಾರಯುತ, ದೇಶಭಕ್ತ ಪ್ರಜೆಗಳನ್ನು ಸಮಾಜಕ್ಕೆ ಕೊಡುಗೆಯಾಗಿ ನೀಡಿ ಎಂದು ಭಾರತ ಸೇವಾದಳ ಜಿಲ್ಲಾ ಕಾರ್ಯಾಧ್ಯಕ್ಷ ಸಿಎಂಆರ್.ಶ್ರೀನಾಥ್ ಶಿಕ್ಷಕರಿಗೆ ಕರೆ ನೀಡಿದರು.
ನಗರದ ಪತ್ರಕರ್ತರ ಭವನದಲ್ಲಿ ಸೋಮವಾರ ಶಾಲಾ ಶಿಕ್ಷಣ ಇಲಾಖೆ ಹಾಗೂ ಭಾರತ ಸೇವಾದಳ ಜಿಲ್ಲಾ ಸಮಿತಿಯಿಂದ ಆಯೋಜಿಸಲಾಗಿದ್ದ ತಾಲೂಕಿನ ಪ್ರಾಥಮಿಕ ಶಾಲಾ ಶಿಕ್ಷಕರ ಪುನಶ್ಚೇತನ ಶಿಬಿರವನ್ನು ಉದ್ಘಾಟಿಸಿ ಅವರು ಮಾತನಾಡುತ್ತಿದ್ದರು.
ದೇಶದ ಸ್ವಾತಂತ್ರ್ಯಕ್ಕಾಗಿ ತ್ಯಾಗ ಬಲಿದಾನ ಮಾಡಿದ ಮಹನೀಯರ ಕುರಿತು ಮಕ್ಕಳಿಗೆ ತಿಳಿಸಿಕೊಡಿ, ಡಾ.ನಾ.ಸು.ಹರ್ಡಿಕರ್ ಅವರು ದೇಶವನ್ನು ಗುಲಾಮಗಿರಿಯಿಂದ ಮುಕ್ತಗೊಳಿಸಲು ಸಂಘಟಿಸಿದ ಈ ಸಂಘಟನೆ ಇಂದು ಮಕ್ಕಳಲ್ಲಿ ದೇಶಪ್ರೇಮ, ರಾಷ್ಟ್ರಧ್ವಜದ ಕುರಿತು ಗೌರವ ಮೂಡಿಸುವಲ್ಲಿ ಪ್ರಮುಖ ಪಾತ್ರ ವಹಿಸಿದೆ ಎಂದರು.
ಪ್ರತಿ ಶಾಲೆಗೆ ರಾಷ್ಟ್ರಧ್ವಜಸಂಹಿತೆ ಕುರಿತಂತೆ ಭಾರತ ಸೇವಾದಳ ಪ್ರಕಟಿಸಿರುವ ಪುಸ್ತಕಗಳನ್ನು ಉಚಿತವಾಗಿ ತಾವೇ ವಿತರಿಸುವುದಾಗಿ ಭರವಸೆ ನೀಡಿದ ಅವರು, ತಮ್ಮದೇ ರಾಷ್ಟ್ರದ ಚಿಹ್ನೆ, ಧ್ವಜದ ಅಡಿಯಲ್ಲಿ ಹೋರಾಟಗಳನ್ನು ನಡೆಸುವ ಮೂಲಕ ಭಾರತೀಯರ ಸಾರ್ವಭೌಮತೆ, ಐಕ್ಯತೆ, ಘನತೆ ಗೌರವದ ಸಂಕೇತವಾಗಿ ಗಣರಾಜ್ಯೋತ್ಸವ ಸ್ವಾತಂತ್ರ್ಯದಿನ ಆಚರಿಸಿಕೊಂಡು ಬರಲಾಗುತ್ತಿದೆ ಎಂದರು.
ಭಾರತ ಸೇವಾದಳ ಜಿಲ್ಲಾಧ್ಯಕ್ಷ ಕೆ.ಎಸ್.ಗಣೇಶ್ ಮಾತನಾಡಿ, ರಾಷ್ಟ್ರಧ್ವಜದ ಬಣ್ಣಗಳು ಯಾವುದೇ ಧರ್ಮದ ಸಂಕೇತವಲ್ಲ ಈ ಕಲ್ಪನೆ ತಪ್ಪು ಎಂದ ಅವರು, ಧ್ವಜ ಬಗೆಗಿನ ಈ ಅಜ್ಞಾನ ದೂರವಾಗಬೇಕು ಎಂದು ತಿಳಿಸಿದರು.
ಆಂಧ್ರಪ್ರದೇಶದ ಪಿಂಗಳಿ ವೆಂಕಯ್ಯ ತ್ರಿವರ್ಣ ಧ್ವಜವನ್ನು ರೂಪಿಸಿದ್ದು, ಇದರ ವಿನ್ಯಾಸವನ್ನು ಅಂತಿಮವಾಗಿ ಹೈದ
ರಾಬಾದ್ನ ದೇಶಭಕ್ತ ಕುಟುಂಬದ ಸುರಾಯ್ಯ ಬದ್ರೂದ್ದೀನ್ ಎಂಬುವವರು ವಿನ್ಯಾಸ ಮಾಡಿದ್ದರ ಕುರಿತು ಸ್ಮರಿಸಿದರು.
ಸ್ವಾತಂತ್ರ್ಯದ ದಿನ ಪ್ರತಿ ಶಾಲೆಯಲ್ಲಿ ರಾಷ್ಟ್ರಧ್ವಜವನ್ನು ವ್ಯವಸ್ಥಿತವಾಗಿ ಹಾರಿಸಬೇಕು. ಸರಿಯಾದ ವ್ಯವಸ್ಥೆಯಲ್ಲಿ ಬಾವುಟ ಹಾರಿಸದಿದ್ದರೆ ಸೇವೆಯಿಂದ ಅಮಾನತು ಆಗುವುದು ಖಚಿತ. ಪ್ರತಿನಿತ್ಯ ಪಾಠ ಮಾಡಿ ವಿದ್ಯಾರ್ಥಿಗಳ ಜ್ಞಾನವನ್ನು ವೃದ್ಧಿಸುವ, ಬುದ್ದಿ ಹೇಳುವ ಶಿಕ್ಷಕರು ಧ್ವಜಕ್ಕೆ ನೀಡುವ ಗೌರವವನ್ನು ಅರಿಯಬೇಕು. ದಿನನಿತ್ಯ ನಿಮ್ಮ ಕೆಲಸದ ಜಂಜಾಟದಲ್ಲಿ ಮರೆಯುವ ಪಾಠವನ್ನು ಭಾರತ ಸೇವಾದಳದಿಂದ ನಿಮಗೆ ಸಂಪೂರ್ಣ ಮಾಹಿತಿ ನೀಡಲಾಗುತ್ತದೆ ಎಂದು ತಿಳಿಸಿದರು.
ಪ್ರತಿ ತಾಲೂಕಿನಲ್ಲಿ ಭಾರತ ಸೇವಾದಳ ಘಟಕಗಳಿದೆ. ಪ್ರತಿ ಶಾಲೆಯಲ್ಲಿ 33 ಜನ ತಂಡ ಮಾಡಿ,
ಸೇವಾದಳ ಸಮರಶೀಲ ಶಿಸ್ತುಬದ್ದ ಸಂಘಟನೆಯಾಗಿದ್ದು, ಮಕ್ಕಳಲ್ಲಿ ದೇಶಭಕ್ತಿ ಬೆಳೆಸಿ, ರಾಷ್ಟ್ರಧ್ವಜವನ್ನು ಹಾರಿಸುವ ಗೌರವ ನೀಡುವ ಹಾಗೂ ಬ್ಯಾಂಡ್ ಸೆಟ್ ತರಬೇತಿಯನ್ನು ಸೇವಾದಳ ನೀಡುತ್ತದೆ ಇದರ ಸದುಪಯೋಗ ಪಡೆಯಿರಿ ಎಂದು ಕೋರಿದರು.
ಭಾರತ ಸೇವಾದಳದ ಜಿಲ್ಲಾ ಉಪಾಧ್ಯಕ್ಷ ಜಿ.ಶ್ರೀನಿವಾಸ್ ಪ್ರಾಸ್ತಾವಿಕವಾಗಿ ಮಾತನಾಡಿ, ನಾವು ಎಂದಿಗೂ ಇತಿಹಾಸ ಮರೆಯಬಾರದು, ಸೇವಾದಳ ನಮಗೆ ಸಮಯಪ್ರಜ್ಞೆ ಕಲಿಸುತ್ತದೆ, ಮಕ್ಕಳಲ್ಲಿ ಶಿಸ್ತು ಮೂಡಿಸಿ ಶಾಲೆಯ ವಾತಾವರಣವನ್ನೇ ಸರಿದಾರಿಗೆ ತರುವ ಶಕ್ತಿ ಹೊಂದಿದೆ ಎಂದು ತಿಳಿಸಿದರು.
ಸಂಪನ್ಮೂಲ ವ್ಯಕ್ತಿಗಳಾಗಿ ಆಗಮಿಸಿದ್ದ ಬೆಂಗಳೂರು ಜಿಲ್ಲೆಯವರದ ಭಾರತ ಸೇವಾದಳ ಸಹ ಕಾರ್ಯದರ್ಶಿ ಮಹೇಶ್ ಗೌಡ ಹಾಗೂ ಜಿಲ್ಲಾ ಸಂಘಟಕ ಎಂ.ಬಿ.ದಾನೇಶ್ ರಾಷ್ಟ್ರಧ್ವಜ ಕಟ್ಟುವ, ಮಡಚುವ, ಹಾರಿಸುವ ಸಮಯದಲ್ಲಿ ಯಾವಗೀತೆ ಹಾಡಬೇಕು ಹಾಗೂ ಇಳಿಸುವ ಸಮಯದಲ್ಲಿ ಯಾವ ಗೀತೆ ಹಾಡಬೇಕು ಎಂಬ ವಿಧಾನಗಳ ಕುರಿತು ಪ್ರಾತ್ಯಕ್ಷಿಕೆ ನೀಡಿದರಲ್ಲದೇ ಸೇವಾದಳ ಕಾರ್ಯಯೋಜನೆಗಳ ಕುರಿತು ಶಿಕ್ಷಕರಿಗೆ ಮಾರ್ಗದರ್ಶನ ನೀಡಿದರು.
ಭಾರತ ಸೇವಾದಳದ ಜಿಲ್ಲಾ ಕಾರ್ಯದರ್ಶಿ ಎಸ್.ಸುಧಾಕರ್ ಮಾತನಾಡಿ, ಖಾಸಗಿ ಶಾಲೆಗಳಲ್ಲಿನ ಶಿಕ್ಷಣದಿಂದ ಅಂಕ,ಸಂಪಾದನೆ ಹೆಚ್ಚಾಗುತ್ತದೆ ಆದರೆ ಸರ್ಕಾರಿ ಶಾಲೆಗಳ ಶಿಕ್ಷಣದಿಂದ ಮಕ್ಕಳಲ್ಲಿ ಸಮಾಜಮುಖಿ ಆಲೋಚನೆ ಮತ್ತು ಸಂಸ್ಕಾರ ವೃದ್ದಿಯಾಗುತ್ತದೆ ಎಂದು ತಿಳಿಸಿ, ಸೇವಾದಳ ಪ್ರತಿ ಶಾಲೆಯಲ್ಲೂ ಸಂಘಟಿಸಿ ಮಕ್ಕಳ ಮನಸ್ಸನ್ನು ಅಪರಾಧ ಮುಕ್ತವಾಗಿಸಿ ಎಂದು ಸಲಹೆ ನೀಡಿದರು.
ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದ ತಾಲ್ಲೂಕು ಭಾರತ ಸೇವಾದಳ ಅಧ್ಯಕ್ಷ ಶ್ರೀರಾಮ್ ಮಾತನಾಡಿ, ಯಾವುದೇ ಶಾಲೆಯಲ್ಲಿ ಸೇವಾದಳ ಘಟಕ ಆರಂಭಿಸಿದರೆ ಆಶಾಲೆಯ ಎಲ್ಲಾ 33 ಮಕ್ಕಳಿಗೂ ಸೇವಾದಳದಿಂದ ಉಚಿತ ಸೇವಾದಳ ಟೋಪಿ ವಿತರಿಸುವುದಾಗಿ ಭರವಸೆ ನೀಡಿ, ಸೇವಾದಳ ಸಂಘಟಿಸೋಣ, ಸಮಾಜದಲ್ಲಿ ರಾಷ್ಟ್ರಪ್ರೇಮ ಬೆಳೆಸೋಣ ಎಂದರು.
ಭಾರತ ಸೇವಾದಳ ಜಿಲ್ಲಾ ಸಂಘಟಕ ದಾನೇಶ್ ನಿರೂಪಿಸಿ, ಸ್ವಾಗತಿಸಿದ ಕಾರ್ಯಕ್ರಮದಲ್ಲಿ ಸೇವಾದಳ ಜಿಲ್ಲಾ ಕಾರ್ಯಾಧ್ಯಕ್ಷ ಕೆ.ವಿ.ಜಗನ್ನಾಥ್,ಜಿಲ್ಲಾ ಪ್ರತಿನಿಧಿಗಳಾದ ಬಹದ್ದೂರ್ ಸಾಬ್, ಎಂ.ಎನ್.ಶ್ರೀನಿವಾಸಮೂರ್ತಿ, ಫಾಲ್ಗುಣ, ಸುಬ್ರಮಣಿರೆಡ್ಡಿ ಮತ್ತಿತರರು ಉಪಸ್ಥಿತರಿದ್ದು, ಶಿಕ್ಷಕರಾದ ಕೆ.ಲೀಲಾ,ಅಂಬಿಕಾ,ವಿಜಯ ಸರ್ವಧರ್ಮ ಪ್ರಾರ್ಥನೆ ನೆರವೇರಿಸಿಕೊಟ್ಟಿದ್ದು, ಮಹೇಶ್ಗೌಡ ವಂದಿಸಿದರು. ತಾಲ್ಲೂಕಿನ 200ಕ್ಕೂ ಹೆಚ್ಚು ಶಿಕ್ಷಕರು ಪಾಲ್ಗೊಂಡಿದ್ದರು.
ಶಿಕ್ಷಕರ ಪುನಶ್ಚೇತನ ಶಿಬಿರದ ಧ್ವಜಾರೋಹಣವನ್ನು ಜಿಲ್ಲಾ ಮತ್ತು ತಾಲ್ಲೂಕು ಪದಾಧಿಕಾರಿಗಳ ಸಮ್ಮುಖದಲ್ಲಿ ನಡೆಸಿಕೊಟ್ಟು ಕಾರ್ಯಕ್ರಮಕ್ಕೆ ಚಾಲನೆ ನೀಡಿದರು. ಈ ಸಂದರ್ಭದಲ್ಲಿ ರಾಜೇಶ್ಸಿಂಗ್,ಮಹಮದ್ ಚಾಂದ್ಪಾಷಾ, ಚಲಪತಿ, ಗಂಗಾಧರ್ ಮತ್ತಿತರರಿದ್ದರು.