ಕೋಲಾರ:- ಮಕ್ಕಳಿಗೆ ಪಠ್ಯದ ಜತೆಗೆ ಕ್ರೀಡೆ,ಸಾಂಸ್ಕೃತಿಕ ಚಟುವಟಿಕೆಗಳ ಅಗತ್ಯವಿದ್ದು, ಅವರಲ್ಲಿ ಅಡಗಿರುವ ಪ್ರತಿಭೆ ಅನಾವರಣಕ್ಕೆ ಪ್ರತಿಭಾ ಕಾರಂಜಿ ಉತ್ತಮ ವೇದಿಕೆಯಾಗಿದೆ ಎಂದು ಶಾಲಾ ಶಿಕ್ಷಣ ಮತ್ತು ಸಾಕ್ಷರತಾ ಇಲಾಖೆ ಉಪನಿರ್ದೇಶಕ ಕೃಷ್ಣಮೂರ್ತಿ ತಿಳಿಸಿದರು.
ಜಿಲ್ಲಾಡಳಿತ,ಜಿಪಂ, ಶಾಲಾ ಶಿಕ್ಷಣ ಇಲಾಖೆ ಆಶ್ರಯದಲ್ಲಿ ಬುಧವಾರ ನಗರದ ಅಂಜುಮಾನ್ ಅಲಮಿನ್ ಶಾಲಾ ಆವರಣದಲ್ಲಿ ನಡೆದ ೨೦೨೪-೨೫ನೇ ಸಾಲಿನ ತಾಲ್ಲೂಕು ಮಟ್ಟದ ಪ್ರತಿಭಾ ಕಾರಂಜಿ ಸ್ವರ್ಧೆಗಳಿಗೆ ಚಾಲನೆ ನೀಡಿ ಅವರು ಮಾತನಾಡುತ್ತಿದ್ದರು.
ಆಧುನಿಕತೆ ಬೆಳೆದಂತೆ ಮೊಬೈಲ್, ದೂರದರ್ಶನದ ದಾಳಿಯಿಂದ ನಶಿಸಿ ಹೋಗುತ್ತಿರುವ ಗ್ರಾಮೀಣ ಜಾನಪದ ಸಂಸ್ಕೃತಿಯನ್ನು ಉಳಿಸಿ ಬೆಳೆಸುವ ಕೆಲಸ ಶಾಲಾ ಮಕ್ಕಳಿಂದಲೇ ಆಗಬೇಕು, ಮಕ್ಕಳಲ್ಲಿ ಅಡಗಿರುವ ಕಲೆ ಹೊರ ಬರಲು ಶಿಕ್ಷಣ ಇಲಾಖೆ ಪ್ರತಿಭಾ ಕಾರಂಜಿ, ಕಲೋತ್ಸವ ನಡೆಸುತ್ತಿದೆ ಎಂದರು.
ಕೋಲಾರ ಜಿಲ್ಲೆ ಕಲೆಗಳ ತವರಾಗಿದ್ದು, ಇಲ್ಲಿ ಕೋಲಾಟ, ಕೇಳಿಕೆ, ಪೌರಾಣಿಕ ನಾಟಕ, ಬುರ್ರಕಥೆ ಹೀಗೆ ಅನೇಕ ಕಲೆಗಳ ಸಾಧಕರು ಇಲ್ಲಿಂದಲೇ ಸಮಾಜದಲ್ಲಿ ಗುರ್ತಿಸಿಕೊಳ್ಳುತ್ತಾರೆ, ಮಕ್ಕಳಲ್ಲಿ ಗ್ರಾಮೀಣ ಕಲೆಯ ಮಹತ್ವ ತಿಳಿಸಿಕೊಡಿ, ಮಕ್ಕಳಿಗೆ ಪಠ್ಯದಷ್ಟೇ ಕ್ರೀಡೆ,ಸಾಂಸ್ಕೃತಿಕ ಚಟುವಟಿಕೆಗಳ ಕಲಿಕೆ ಅಗತ್ಯ ಎಂಬುದನ್ನು ಅರಿತಿರುವ ಶಿಕ್ಷಕರು ಮಕ್ಕಳನ್ನು ಅತ್ಯಂತ ಮನೋಹರವಾಗಿ ಸಿದ್ದಗೊಳಿಸಿ ಸ್ಪರ್ಧೆಗಳಿಗೆ ಕರೆತಂದಿದ್ದಾರೆ ಎಂದು ಅಭಿನಂದಿಸಿ, ಜಿಲ್ಲಾ,ರಾಜ್ಯಮಟ್ಟದಲ್ಲೂ ಸಾಧನೆ ಮಾಡಿ ಕೀರ್ತಿ ತನ್ನಿ ಎಂದರು.
ನಗರಸಭೆ ಅಧ್ಯಕ್ಷೆ ಲಕ್ಷ್ಮೀದೇವಮ್ಮ ರಮೇಶ್ ಮಾತನಾಡಿ, ಮಕ್ಕಳಲ್ಲಿನ ಪ್ರತಿಭೆ ಗುರುತಿಸುವ ಶಕ್ತಿ ಶಿಕ್ಷಕರಿಗೆ ಮಾತ್ರವಿದೆ, ಶಿಕ್ಷಕರು ಇಂತಹ ಪ್ರತಿಭೆಗಳನ್ನು ಸಮಾಜಕ್ಕೆ ಗುರುತಿಸುವ ಅತಿ ಮುಖ್ಯ ಜವಾಬ್ದಾರಿ ಹೊಂದಿದ್ದಾರೆ ಎಂದರು.
ಹೆಸರೇ ಸೂಚಿಸುವಂತೆ ಪ್ರತಿಭೆ ಚಿಮ್ಮಿಸುವ ಕಾರ್ಯಕ್ರಮ ಇದಾಗಿದ್ದು, ಪ್ರತಿ ಮಗುವಿನಲ್ಲೂ ಅಡಗಿರುವ ವಿಶಿಷ್ಟ ಚೈತನ್ಯವನ್ನು ಹೊರಗೆ ತರುವ ಕೆಲಸ ಶಿಕ್ಷಕರು ಮಾಡಬೇಕು, ಮಕ್ಕಳ ಈ ಚಟುವಟಿಕೆಗಳಲ್ಲಿ ನೈತಿಕ ಮೌಲ್ಯಗಳು ಅಡಗಿರುವಂತೆ ನೋಡಿಕೊಳ್ಳಬೇಕು ಎಂದು ಸಲಹೆ ನೀಡಿದರು.
ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದ ಕ್ಷೇತ್ರ ಶಿಕ್ಷಣಾಧಿಕಾರಿ ಕೆ.ಉಮಾ, ಈ ಮಕ್ಕಳಲ್ಲಿ ಕಂಡು ಬರುತ್ತಿರುವ ಗ್ರಾಮೀಣ ಸಂಸ್ಕೃತಿಯ ಸೊಗಡು ಶ್ಲಾಘನೀಯವಾಗಿದೆ, ಪ್ರತಿಭಾ ಕಾರಂಜಿಯಲ್ಲಿ ಪಾಲ್ಗೊಂಡಿರುವ ಮಕ್ಕಳ ಸಂತಸಕ್ಕೆ ಎಲ್ಲೆ ಇಲ್ಲ ಎಂದ ಅವರು, ಕೆಲವು ಮಕ್ಕಳು ಕಲಿಕೆಯಲ್ಲಿ ಹಿಂದುಳಿದಿದ್ದರೂ ಅವರಿಗೆ ಮತ್ತಿನ್ಯಾವುದೋ ಕಲೆ,ಕ್ರೀಡೆಯ ಸಾಧನೆ ಸಾಧ್ಯವಾಗುತ್ತದೆ, ಅದನ್ನು ಗಮನಿಸಿ ಅವರನ್ನು ಸಮಗ್ರ ಶಿಕ್ಷಣದತ್ತ ಕರೆದೊಯ್ಯಿರಿ, ತೀರ್ಪುಗಾರರು ನಿಷ್ಪಕ್ಷಪಾತ ತೀರ್ಪು ಬರುವಂತೆ ಎಚ್ಚರವಹಿಸಬೇಕು ಎಂದರು.
ಕ್ಷೇತ್ರ ಸಂಪನ್ಮೂಲ ವ್ಯಕ್ತಿ ಪ್ರವೀಣ್ ಕಾರ್ಯಕ್ರಮ ನಿರೂಪಿಸಿ, ಸರ್ಕಾರಿ ಶಾಲೆಗಳಲ್ಲಿ ಪ್ರತಿಭೆಗಳಿಗೆ ಕೊರತೆಯಿಲ್ಲ, ಶಿಕ್ಷಕರು ಅನೇಕ ಪ್ರತಿಭೆಗಳನ್ನು ಬೆಳೆಕಿಗೆ ತಂದಿದ್ದಾರೆ, ಇಲ್ಲಿ ಸಿಕ್ಕಿರುವ ವೇದಿಕೆ ಬಳಸಿಕೊಂಡು ರಾಜ್ಯಮಟ್ಟಕ್ಕೂ ಹೋಗಿ ಜಿಲ್ಲೆಯ ಕೀರ್ತಿ ಹೆಚ್ಚಿಸಿ ಎಂದರು.
ಕಾರ್ಯಕ್ರಮದ ನೋಡಲ್ ಅಧಿಕಾರಿ ಕೆ.ಶ್ರೀನಿವಾಸ್ ಮಾತನಾಡಿದರು. ವೇದಿಕೆಯಲ್ಲಿ ನಗರಸಭೆ ಉಪಾಧ್ಯಕ್ಷೆ ಸಂಗೀತ ಜಗದೀಶ್, ಸದಸ್ಯ ಸಾಧಿಕ್ಪಾಷ, ಶಿಕ್ಷಣಾಧಿಕಾರಿ ಸಗೀರಾ ಅಂಜುಂ, ವಿಷಯ ಪರಿವೀಕ್ಷಕ ವೆಂಕಟೇಶಬಾಬು,ಕ್ಷೇತ್ರ ಸಮನ್ವಯಾಧಿಕಾರಿ ಶಶಿವಧನ, ರಾಜ್ಯ ಎಸ್ಸಿಎಸ್ಟಿ ಶಿಕ್ಷಕರ ಸಂಘದ ಪ್ರಧಾನ ಕಾರ್ಯದರ್ಶಿ ಕೆ.ಟಿ.ನಾಗರಾಜ್, ಜಿಲ್ಲಾಧ್ಯಕ್ಷ ಮುನಿಯಪ್ಪ, ಖಾಸಗಿ ಶಾಲೆಗಳ ಜಿಲ್ಲಾ ಉಪಾಧ್ಯಕ್ಷ ರವಿ ಶಿಕ್ಷಣ ಸಂಸ್ಥೆಗಳ ನರೇಶ್ಬಾಬು,ತಾಲ್ಲೂಕು ಅಧ್ಯಕ್ಷ ಫಲ್ಗುಣ, ಪ್ರೌಢಶಾಲಾ ಸಹಶಿಕ್ಷಕರ ಸಂಘದ ತಾಲ್ಲೂಕು ಉಪಾಧ್ಯಕ್ಷ ಸತೀಶ್ಕುಮಾರ್, ಜಿಲ್ಲಾ ವೃತ್ತಿ ಶಿಕ್ಷಕರ ಸಂಘದ ಅಧ್ಯಕ್ಷ ಆಂಜನೇಯ, ಪ್ರಾಥಮಿಕ ಶಾಲಾ ಶಿಕ್ಷಕರ ಸಂಘದ ಪ್ರಧಾನ ಕಾರ್ಯದರ್ಶಿ ಚಂದ್ರಪ್ಪ, ಉರ್ದುಶಿಕ್ಷಕರ ಸಂಘದ ಅಧ್ಯಕ್ಷ ಅಯಾಜ್,ಸಿಆರ್ಪಿಗಳಾದ ಸುರೇಶ್, ಜಬೀವುಲ್ಲಾ, ಜಮೀರ್ಅಹಮದ್, ಗೋವುಂದ್, ಮುಖ್ಯಶಿಕ್ಷಕ ಓ.ಮಲ್ಲಿಕಾರ್ಜುನ್, ಮುಖಂಡ ಶ್ರೀರಾಮ್ ಮತ್ತಿತರರು ಉಪಸ್ಥಿತರಿದ್ದರು. ಕಾರ್ಯಕ್ರಮದಲ್ಲಿ ಸುವರ್ಣ ಸೆಂಟ್ರಲ್ ಶಾಲೆಯ ವಿದ್ಯಾರ್ಥಿಗಳು ಪ್ರಾರ್ಥನೆ, ನಾಡಗೀತೆ, ರೈತಗೀತೆ ನಡೆಸಿಕೊಟ್ಟರು.