ತಾಲ್ಲೂಕು ಮಟ್ಟದ ಪ್ರಾಥಮಿಕ , ಪ್ರೌಢಶಾಲಾ ಪ್ರತಿಭಾ ಕಾರಂಜಿ , ಕಲೋತ್ಸವ ಮಕ್ಕಳು ಪಠ್ಯದ ಜತೆ ಕ್ರೀಡೆ , ಸಾಂಸ್ಕೃತಿಕ ಚಟುವಟಿಕೆ ಅಗತ್ಯ – ಕೆ.ಶ್ರೀನಿವಾಸಗೌಡ

ಕೋಲಾರ : – ಮಕ್ಕಳಿಗೆ ಪಠ್ಯದ ಜತೆಗೆ ಕ್ರೀಡೆ , ಸಾಂಸ್ಕೃತಿಕ ಚಟುವಟಿಕೆಗಳ ಅಗತ್ಯ ಇದ್ದು , ಎಲ್ಲವೂ ಸೇರಿದಾಗಲೇ ಸಮಗ್ರ ಶಿಕ್ಷಣವಾಗಲು ಸಾಧ್ಯ ಪ್ರತಿಭೆಗಳನ್ನು ಪ್ರೋತ್ಸಾಹಿಸಲು ಪ್ರತಿಭಾಕಾರಂಜಿ ಉತ್ತಮ ವೇದಿಕೆ ಎಂದು ಶಾಸಕ ಕೆ.ಶ್ರೀನಿವಾಸಗೌಡ ಅಭಿಪ್ರಾಯಪಟ್ಟರು . ಬುಧವಾರ ನಗರದ ಅಂಜುಮಾನ್ ಅಲಮಿನ್ ಶಾಲಾ ಆವರಣದಲ್ಲಿ ತಾಲ್ಲೂಕು ಮಟ್ಟದ ಪ್ರತಿಭಾ ಕಾರಂಜಿ ಸ್ಪರ್ಧೆಗಳಿಗೆ ಚಾಲನೆ ನೀಡಿ ಅವರು ಮಾತನಾಡುತ್ತಿದ್ದರು . ಆಧುನಿಕತೆ ಬೆಳೆದಂತೆ ಮೊಬೈಲ್ , ದೂರದರ್ಶನದ ದಾಳಿಯಿಂದ ನಶಿಸಿ ಹೋಗುತ್ತಿರುವ ಗ್ರಾಮೀಣ ಜಾನಪದ ಸಂಸ್ಕೃತಿಯನ್ನು ಉಳಿಸಿ ಬೆಳೆಸುವ ಕೆಲಸ ಶಾಲಾ ಮಕ್ಕಳಿಂದಲೇ ಆಗಬೇಕು , ಗ್ರಾಮೀಣರಲ್ಲಿ ಅಡಗಿರುವ ಕಲೆ ಹೊರ ಬರಲು ಇಂತಹ ವೇದಿಕೆ ಸೃಷ್ಟಿಸಿರುವ ಶಾಲಾ ಶಿಕ್ಷಣ ಮತ್ತು ಸಾಕ್ಷರತಾ ಇಲಾಖೆಗೆ ಅಭಿನಂದನೆ ಎಂದು ತಿಳಿಸಿದರು . ಕೋಲಾರ ಜಿಲ್ಲೆ ಕಲೆಗಳ ತವರಾಗಿದ್ದು , ಇಲ್ಲಿ ಕೋಲಾಟ , ಕೇಳಿಕೆ , ಪೌರಾಣಿಕ ನಾಟಕ , ಬುರಕಥೆ ಹೀಗೆ ಅನೇಕ ಕಲೆಗಳ ಸಾಧಕರು ಇಲ್ಲಿಂದಲೇ ಸಮಾಜದಲ್ಲಿ ಗುರ್ತಿಸಿಕೊಳ್ಳುತ್ತಾರೆ , ಮಕ್ಕಳಲ್ಲಿ ಗ್ರಾಮೀಣ ಕಲೆಯ ಮಹತ್ವ ತಿಳಿಸಿಕೊಡಿ , ಮಕ್ಕಳಿಗೆ ಪಠ್ಯದಷ್ಟೇ ಕೀಡೆ , ಸಾಂಸ್ಕೃತಿಕ ಚಟುವಟಿಕೆಗಳ ಕಲಿಕೆ ಅಗತ್ಯ ಎಂಬುದನ್ನು ಅರಿತುಕೊಳ್ಳಿ ಎಂದರು . ಕ್ಷೇತ್ರ ಶಿಕ್ಷಣಾಧಿಕಾರಿ ಕನ್ನಯ್ಯ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದು , ಸರ್ಕಾರಿ ಶಾಲೆಗಳು ಇಂದು ಖಾಸಗಿ ಶಾಲೆಗಳನ್ನು ಮೀರಿ ಬೆಳೆಯುತ್ತಿವೆ , ಫಲಿತಾಂಶದಲ್ಲೂ ಹಿಂದೆ ಬಿದ್ದಿಲ್ಲ ಎಂದರು .
ಪೋಷಕರಲ್ಲಿನ ಖಾಸಗಿ ಶಾಲೆಗಳ ವ್ಯಾಮೋಹ ಇಂದು ಸರ್ಕಾರಿ ಶಾಲೆಗಳಿಗೆ ಕುತ್ತು ತಂದಿದೆ , ಈ ಮಕ್ಕಳಲ್ಲಿ ಕಂಡು ಬರುತ್ತಿರುವ ಗ್ರಾಮೀಣ ಸಂಸ್ಕೃತಿಯ ಸೊಗಡು ಖಾಸಗಿ ಶಾಲಾ ಮಕ್ಕಳಲ್ಲಿ ಕಾಣಲು ಸಾಧ್ಯವೇ ಎಂದು ಪ್ರಶ್ನಿಸಿದರು . ಮಕ್ಕಳಲ್ಲಿನ ಪ್ರತಿಭೆ ಗುರುತಿಸುವ ಶಕ್ತಿ ಶಿಕ್ಷಕರಿಗೆ ಮಾತ್ರವಿದೆ , ಶಿಕ್ಷಕರು ಇಂತಹ ಪ್ರತಿಭೆಗಳನ್ನು ಸಮಾಜಕ್ಕೆ ಗುರುತಿಸುವ ಅತಿ ಮುಖ್ಯ ಜವಾಬ್ದಾರಿ ಹೊಂದಿದ್ದಾರೆ ಎಂದರು . ಹೆಸರೇ ಸೂಚಿಸುವಂತೆ ಪ್ರತಿಭೆ ಚಿಮ್ಮಿಸುವ ಕಾರ್ಯಕ್ರಮ ಇದಾಗಿದ್ದು , ಪ್ರತಿ ಮಗುವಿನಲ್ಲೂ ಅಡಗಿರುವ ವಿಶಿಷ್ಟ ಚೈತನ್ಯವನ್ನು ಹೊರಗೆ ತರುವ ಕೆಲಸ ಶಿಕ್ಷಕರು ಮಾಡಬೇಕು , ಮಕ್ಕಳ ಈ ಚಟುವಟಿಕೆಗಳಲ್ಲಿ ನೈತಿಕ ಮೌಲ್ಯಗಳು ಅಡಗಿರುವಂತೆ ನೋಡಿಕೊಳ್ಳಬೇಕು ಎಂದು ಸಲಹೆ ನೀಡಿದರು . ಡಯಟ್ ಉಪನ್ಯಾಸಕ ಬಾಲಾಜಿ ಮಾತನಾಡಿ , ಸರ್ಕಾರಿ ಶಾಲೆಗಳಲ್ಲಿ ಪ್ರತಿಭೆಗಳಿಗೆ ಕೊರತೆಯಿಲ್ಲ , ಶಿಕ್ಷಕರು ಅನೇಕ ಪ್ರತಿಭೆಗಳನ್ನು ಬೆಳೆಕಿಗೆ ತಂದಿದ್ದಾರೆ , ಇಲ್ಲಿ ಸಿಕ್ಕಿರುವ ವೇದಿಕೆ ಬಳಸಿಕೊಂಡು ರಾಜ್ಯಮಟ್ಟಕ್ಕೂ ಹೋಗಿ ಜಿಲ್ಲೆಯ ಕೀರ್ತಿ ಹೆಚ್ಚಿಸಿ ಎಂದರು . ತಾಲ್ಲೂಕು ಪ್ರಾಥಮಿಕ ಶಿಕ್ಷಕರ ಸಂಘದ ಅಧ್ಯಕ್ಷ ಅಶ್ವಥನಾರಾಯಣ ಪ್ರತಿಭಾ ಕಾರಂಜಿಯಲ್ಲಿ ಪಾಲ್ಗೊಂಡಿರುವ ಮಕ್ಕಳ ಸಂತಸಕ್ಕೆ ಎಲ್ಲೆ ಇಲ್ಲ ಎಂದ ಅವರು , ಕೆಲವು ಮಕ್ಕಳು ಕಲಿಕೆಯಲ್ಲಿ ಹಿಂದುಳಿದಿದ್ದರೂ ಅವರಿಗೆ ಮತ್ತಿನ್ಯಾವುದೋ ಕಲೆ , ಕ್ರೀಡೆಯ ಸಾಧನೆ ಸಾಧ್ಯವಾಗುತ್ತದೆ , ಅದನ್ನು ಗಮನಿಸಿ ಅವರನ್ನು ಸಮಗ್ರ ಶಿಕ್ಷಣದತ್ತ ಕರೆದೊಯ್ದಿರಿ , ತೀರ್ಪುಗಾರರು ನಿಷ್ಪಕ್ಷಪಾತ ತೀರ್ಪು ಬರುವಂತೆ ಎಚ್ಚರವಹಿಸಬೇಕು ಎಂದರು .
ಕಾರ್ಯಕ್ರಮವನ್ನು ಇಸಿಒಗಳಾದ ಎನ್.ಮುನಿರತ್ನಯ್ಯಶೆಟ್ಟಿ , ಕೆ.ಶ್ರೀನಿವಾಸ್‌ ಆಯೋಜಿಸಿದ್ದು , ಚಿನ್ಮಯ ಶಾಲೆ ಮಕ್ಕಳು ನಿರೂಪಿಸಿದ್ದು , ಸುವರ್ಣ ಸೆಂಟ್ರಲ್ ಶಾಲೆ ಮಕ್ಕಳು ನಾಡಗೀತೆ , ರೈತಗೀತೆ ಪ್ರಾರ್ಥನೆ ನಡೆಸಿಕೊಟ್ಟರು . ಸಾಧಕ ಮಕ್ಕಳಿಗೆ ಶಾಸಕರ ಬಹುಮಾನ ಕ್ಯಾಲನೂರಿನ ಕೆಪಿಎಸ್‌ ಶಾಲೆಯ ೧ ಮತ್ತು ೨ ನೇ ತರಗತಿ ಮಕ್ಕಳು ಕೀಬೋರ್ಡ್ ನುಡಿಸಿ ಗಮನ ಸೆಳೆದಿದ್ದು , ಮಕ್ಕಳ ಪ್ರತಿಭೆ ಗಮನಿಸಿ ಶಾಸಕ ಕೆ.ಶ್ರೀನಿವಾಸಗೌಡ ಸ್ಥಳದಲ್ಲೇ ಆ ಮಕ್ಕಳಿಗೆ ೨ ಸಾವಿರ ರೂ ಬಹುಮಾನ ನೀಡಿದರು . ಕಾರ್ಯಕ್ರಮದಲ್ಲಿ ಬಿಆರ್‌ಸಿ ಪ್ರವೀಣ್ , ರಾಜ್ಯ ದೈಹಿಕ ಶಿಕ್ಷಕರ ಸಂಘದ ಅಧ್ಯಕ್ಷ ಎಸ್.ಚೌಡಪ್ಪ , ಸರ್ಕಾರಿ , ಖಾಸಗಿ ಶಿಕ್ಷಕರು , ಶಾಲೆಗಳ ಸಂಘಟನೆಗಳ ಮುಖಂಡರಾದ ಎಸ್.ಮುನಿಯಪ್ಪ , ಬಿ.ಎಂ.ಚಂದ್ರಪ್ಪ , ಶಿವಕುಮಾರ್ , ಗಂಗಾಧರಮೂರ್ತಿ , ಕೆ.ಟಿ.ನಾಗರಾಜ್ , ಮುನಿಯಪ್ಪ , ಎಸ್.ನಾರಾಯಣಸ್ವಾಮಿ , ಇಸಿಒಗಳಾದ ಬೈರೆಡ್ಡಿ , ವೆಂಕಟಾಚಲಪತಿ , ರಾಘವೇಂದ್ರ , ವಿ.ಮುರಳಿಮೋಹನ್ , ಜಿ.ಶ್ರೀನಿವಾಸ್ , ಆರ್.ನಾಗರಾಜ್ , ವೃತ್ತಿಶಿಕ್ಷಕರ ಸಂಘದ ಅಧ್ಯಕ್ಷ ನಾಗರಾಜ್‌ , ಎಂ.ಎನ್.ಶ್ರೀನಿವಾಸಮೂರ್ತಿ , ಅಕಲ್‌ ಸಾಬ್‌ , ಗಂಗಾಧರಮೂರ್ತಿ , ಮುಕುಂದ , ಮೋಹಾನಾಚಾರಿ , ಸೋಮಶೇಖರ್ , ಫಲ್ಗುಣ , ಮತ್ತಿತರರು ಉಪಸ್ಥಿತರಿದ್ದರು
.