ಹೆಚ್ಚುವರಿ ಶಿಕ್ಷಕರ ತಾಲ್ಲೂಕು ಮಟ್ಟದ ಸ್ಥಳ ಆಯ್ಕೆ ಪ್ರಕ್ರಿಯೆ ಯಶಸ್ವಿ : ಸರ್ವರ್ ಅಡಚಣೆ ನಡುವೆಯೂ ಗೊಂದಲರಹಿತ ಕೌನ್ಸಿಲಿಂಗ್-ಕೃಷ್ಣಮೂರ್ತಿ

ಕೋಲಾರ:- ಪ್ರಾಥಮಿಕ, ಪ್ರೌಢಶಾಲಾ ಶಿಕ್ಷಕರ ಹೆಚ್ಚುವರಿ ಕೌನ್ಸಿಲಿಂಗ್ ಸರ್ವರ್ ಸಮಸ್ಯೆ ನಡುವೆಯೂ ಯಶಸ್ವಿಯಾಗಿ ನಡೆದಿದ್ದು, ಗೊಂದಲಗಳಿಗೆ ಅವಕಾಶವಿಲ್ಲದಂತೆ ಶಾಲಾ ಶಿಕ್ಷಣ ಮತ್ತು ಸಾಕ್ಷರತಾ ಇಲಾಖೆ ಉಪನಿರ್ದೇಶಕ ಕೃಷ್ಣಮೂರ್ತಿ ಖುದ್ದು ನೇತೃತ್ವ ವಹಿಸಿದ್ದರು.
ನಗರದ ಡಿಡಿಪಿಐ ಕಚೇರಿಯ ಎಸ್‍ಎಸ್‍ಎ ಸಭಾಂಗಣದಲ್ಲಿ ಮಂಗಳವಾರ ಬೆಳಗ್ಗೆ 10 ಗಂಟೆಗೆ ಆರಂಭಗೊಳ್ಳಬೇಕಾಗಿದ್ದ ಪ್ರಾಥಮಿಕ ಶಾಲಾ ಹೆಚ್ವುವರಿ ಶಿಕ್ಷಕರು,ಮುಖ್ಯಶಿಕ್ಷಕರ ಕೌನ್ಸಿಲಿಂಗ್‍ಗೆ ಸರ್ವರ್ ಸಮಸ್ಯೆ ಎದುರಾದ ಕಾರಣ ಸುಮಾರು 2 ಗಂಟೆಗಳ ಕಾಲ ವಿಳಂಬವಾಯಿತು.
12 ಗಂಟೆ ಸುಮಾರಿಗೆ ಸರ್ವರ್ ಸಮಸ್ಯೆ ಸರಿಹೋಗುತ್ತಿದ್ದಂತೆ ಮೊದಲಿಗೆ ಪ್ರಾಥಮಿಕ ಶಾಲೆಗಳ ಮುಖ್ಯಶಿಕ್ಷಕರ ಕೌನ್ಸಿಲಿಂಗ್ ಮುಗಿಸಲಾಗಿದ್ದು, ನಂತರ ದೈಹಿಕ ಶಿಕ್ಷಕರ ಕೌನ್ಸಿಲಿಂಗ್ ನಡೆಯಿತು.
ಈ ವೇಳೆಗಾಗಲೇ 2 ಗಂಟೆ ಮುಗಿದಿದ್ದು, ನಂತರ ಪ್ರಾಥಮಿಕ ಶಾಲಾ ಸಹಶಿಕ್ಷಕರ ಕೌನ್ಸಿಲಿಂಗ್ ಪ್ರಕ್ರಿಯೆಗೆ ಚಾಲನೆ ನೀಡಲಾಯಿತು. ಸರ್ವರ್ ಸಮಸ್ಯೆ ಕಾಡಿದ್ದರಿಂದಾಗಿ ಕೌನ್ಸಿಲಿಂಗ್ ಕುಂಟುತ್ತಾ ಸಾಗಿತು.
ಸಂಜೆ 4 ಗಂಟೆಯಾದರೂ 250 ಮಂದಿ ಪ್ರಾಥಮಿಕ ಶಿಕ್ಷಕರಲ್ಲಿ ಕೇವಲ 50 ಮಂದಿಯ ಕೌನ್ಸಿಲಿಂಗ್ ಹಾಗೂ ಸ್ಥಳ ಆಯ್ಕೆ ಪ್ರಕ್ರಿಯೆ ಮಾತ್ರವೇ ಮುಗಿದಿದ್ದು, ಎಲ್ಲಾ ಶಿಕ್ಷಕರ ಕೌನ್ಸಿಲಿಂಗ್ ಪ್ರಕ್ರಿಯೆ ಮುಗಿಯಲು ಸಂಜೆ 6 ಗಂಟೆಯಾದರೂ ಬೇಕು ಎಂಬ ಮಾತುಗಳ ಶಿಕ್ಷಕ ವಲಯದಲ್ಲಿ ಕೇಳಿ ಬರುತ್ತಿತ್ತು.

ಪ್ರೌಢಶಾಲಾ ಶಿಕ್ಷಕರ ಕೌನ್ಸಿಲಿಂಗ್ ವಿಳಂಬ


ಈ ನಡುವೆ ಮಧ್ಯಾಹ್ನ 2 ಗಂಟೆಗೆ ಆರಂಭಗೊಳ್ಳಬೇಕಿದ್ದ ಪ್ರೌಢಶಾಲಾ ಹೆಚ್ಚುವರಿ ಶಿಕ್ಷಕರ ಕೌನ್ಸಿಲಿಂಗ್ ವಿಳಂಬವಾಗಿದ್ದು, ಶಿಕ್ಷಕರು ತಮ್ಮ ಸ್ಥಳ ಆಯ್ಕೆಯಾಗಿ ಕಾತರದಿಂದ ಕಾದಿದ್ದುದು ಕಂಡು ಬಂತು.
ಇದು ರಾಜ್ಯಮಟ್ಟದ ಪ್ರಕ್ರಿಯೆಯಾಗಿದ್ದು, ಇಂದು ತಾಲ್ಲೂಕುಮಟ್ಟದಲ್ಲಿ ಸ್ಥಳ ಆಯ್ಕೆ ಕೌನ್ಸಿಲಿಂಗ್ ಪ್ರಕ್ರಿಯೆ ಮುಗಿಸಲೇಬೇಕಾಗಿದೆ ಎಂಬುದು ಇಲಾಖೆಯ ಅಧಿಕಾರಿಗಳ ಮಾತಾಗಿದೆ.
ನಾಳೆಯೇ ಜಿಲ್ಲಾಮಟ್ಟದ ಪ್ರಾಥಮಿಕ ಹಾಗೂ ಪ್ರೌಢಶಾಲಾ ಶಿಕ್ಷಕರ ಹೆಚ್ಚುವರಿ ಕೌನ್ಸಿಲಿಂಗ್ ಜಿಲ್ಲಾಮಟ್ಟದ ಪ್ರಕ್ರಿಯೆಗೆ ವೇಳಾಪಟ್ಟಿ ನಿಗಧಿಯಾಗಿರುವುದರಿಂದ ಇಂದು ನಿಗಧಿಯಾಗಿರುವ ಕೌನ್ಸಿಲಿಂಗ್ ಅನ್ನು ಇಂದು ಎಷ್ಟೇ ಸಮಯವಾದರೂ ಮುಗಿಸುವುದಾಗಿ ಡಿಡಿಪಿಐ ಕೃಷ್ಣಮೂರ್ತಿ ಮಾಧ್ಯಮಗಳಿಗೆ ತಿಳಿಸಿದರು.
ಪ್ರಕ್ರಿಯೆಯಲ್ಲಿ ಇಲಾಖೆಯ ಶಿಕ್ಷಣಾಧಿಕಾರಿ ಮುನಿವೆಂಕಟರಾಮಾಚಾರಿ, ಬಿಇಒಗಳಾದ ಕನ್ನಯ್ಯ ಉಮಾದೇವಿ, ಗಂಗರಾಮಯ್ಯ, ಸುಕನ್ಯಾ,ಚಂದ್ರಶೇಖರ್, ಚಂದ್ರಕಲಾ, ವಿಷಯ ಪರಿವೀಕ್ಷಕರಾದ ಕೃಷ್ಣಪ್ಪ, ಶಶಿವಧನ, ಗಾಯತ್ರಿ,ಶಂಕರೇಗೌಡ, ವೆಂಕಟೇಶಪ್ಪ, ಎಪಿಸಿಒ ಮೋಹನ್ ಬಾಬು, ಇಲಾಖೆಯ ವ್ಯವಸ್ಥಾಪಕ ಗೋವಿಂದಗೌಡ, ಅಧೀಕ್ಷಕ ಮಂಜುನಾಥರೆಡ್ಡಿ, ಕೇಶವರೆಡ್ಡಿ, ಸಿಬ್ಬಂದಿ ಲಕ್ಷ್ಮಣ್, ಚಿರಂಜೀವಿ, ವೇಣುಗೋಪಾಲ್ ದೇವರಾಜ್ ಮತ್ತಿತರರು ಕಾರ್ಯ ನಿರ್ವಹಿಸಿದ್ದು, ಶಿಕ್ಷಕ ಮುಖಂಡರಾದ ಚೌಡಪ್ಪ, ಅಪ್ಪಿಗೌಡ,ನಾಗರಾಜ್,ಶಿವಕುಮಾರ್,ಮುರಳಿಮೋಹನ್, ಮುನಿಯಪ್ಪ, ವಿನೋದ್‍ಬಾಬು, ಕೆಜಿಎಫ್ ತಾಲ್ಲೂಕು ನೌಕರರ ಸಂಘದ ಅಧ್ಯಕ್ಷ ನರಸಿಂಹಮೂರ್ತಿ ಸೇರಿದಂತೆ ವಿವಿಧ ಶಿಕ್ಷಕ ಸಂಘಟನೆಗಳ ಮುಖಂಡರು ಹಾಜರಿದ್ದರು.