ಶ್ರೀನಿವಾಸಪುರ: ಮಾವು ಬೆಳೆಗಾರರಿಗೆ ಬೆಳೆ ನಷ್ಟ ಪರಿಹಾರ ನೀಡುವಂತೆ ಆಗ್ರಹಿಸಿ ಡಿ.8 ರಂದು ತಾಲ್ಲೂಕು ಬಂದ್ ಆಚರಿಸಲಾಗುವುದು ಎಂದು, ಜಿಲ್ಲಾ ಮಾವು ಬೆಳೆಗಾರರ ಸಂಘದ ಅಧ್ಯಕ್ಷ ಚಿನ್ನಪ್ಪರೆಡ್ಡಿ ಹೇಳಿದರು.
ಪಟ್ಟಣದ ರಾಮ ಮಂದಿರದ ಆವರಣದಲ್ಲಿ ಕೋಲಾರ ಜಿಲ್ಲಾ ಮಾವು ಬೆಳೆಗಾರರ ಸಂಯುಕ್ತ ಹೋರಾಟ ಸಮತಿ ವತಿಯಿಂದ ಶನಿವಾರ ಏರ್ಪಡಿಸಿದ್ದ ಜಿಲ್ಲಾ ಮಾವು ಬೆಳೆಗಾರರ ಸಭೆಯಲ್ಲಿ ಮಾತನಾಡಿದ ಅವರು, ಅಂದು ಎಲ್ಲ ತಾಲ್ಲೂಕು ಕೇಂದ್ರಗಳಲ್ಲೂ ಮಾವು ಬೆಳೆಗಾರರು ಹಾಗೂ ವಿವಿಧ ರೈತ ಪರ ಸಂಘಟನೆಗಳ ಕಾರ್ಯಕರ್ತರು ಪ್ರತಿಭಟನೆ ನಡೆಸಿ ತಹಶೀಲ್ದಾರರಿಗೆ ಬೇಡಿಕೆ ಒಳಗೊಂಡ ಮನವಿ ಪತ್ರ ನೀಡುವರು ಎಂದು ಹೇಳಿದರು.
ಕರ್ನಾಟಕ ಪ್ರಾಂತ ರೈತ ಸಂಘದ ರಾಜ್ಯ ಘಟಕದ ಉಪಾಧ್ಯಾಕ್ಷ ಪಿ.ಆರ್.ಸೂರ್ಯನಾರಾಯಣ ಮಾತನಾಡಿ, ಹೋರಾಟಕ್ಕೆ ಶಕ್ತಿ ತುಂಬಲು ಜಿಲ್ಲಾ ಮಟ್ಟಲ್ಲಿ ಸಂಘಟನೆ ಬಲಪಡಿಸಬೇಕು. ಹೋರಾಟದಲ್ಲಿ ರಾಮನಗರ, ಬೆಂಗಳೂರು ಗ್ರಾಮಾಂತರ, ಚಿಕ್ಕಬಳ್ಳಾಪುರ ಹಾಗೂ ಕೋಲಾರದ ಜಿಲ್ಲೆಯ ಮಾವು ಬೆಳೆಗಾರರನ್ನು ತೊಡಗಿಸಕೊಳ್ಳಬೇಕು ಎಂದು ಹೇಳಿದರು.
ಕರ್ನಾಟಕ ಪ್ರಾಂತ ರೈತ ಸಂಘದ ಪ್ರಧಾನ ಕಾರ್ಯದರ್ಶಿ ಪಾತಕೋಟ ನವೀನ್ ಕುಮಾರ್ ಮಾತನಾಡಿ, ರಾಜ್ಯ ಸರ್ಕಾರ ಮಾವಿನ ಬೆಳೆ ನಷ್ಟ ಪರಿಹಾರ ನೀಡುವಲ್ಲಿ ವಿಫಲವಾಗಿದೆ. ಜಿಲ್ಲಾ ಮಟ್ಟದಲ್ಲಿ ಮಟ್ಟದಲ್ಲಿ ನಡೆದ ಜಂಟಿ ಸಭೆಯಿಂದ ರೈತರಿಗೆ ಅನುಕೂಲವಾಗಿಲ್ಲ. ಜಿಲ್ಲಾ ಮಟ್ಟದ ವಿಸ್ತøತ ಸಭೆಯಲ್ಲಿ ಕೂಲಂಕುಷವಾಗಿ ಚರ್ಚಿಸಿದ ಬಳಿಕ ಹೋರಾಟದ ಹಾದಿ ಹಿಡಿಯಲಾಗಿದೆ ಎಂದು ಹೇಳಿದರು.
ರಾಜ್ಯ ರೈತ ಸಂಘದ ತಾಲ್ಲೂಕು ಘಟಕದ ಅಧ್ಯಕ್ಷ ಶ್ರೀರಾಮರೆಡ್ಡಿ ಮಾತನಾಡಿ, ವಿಮಾ ಕಂಪನಿಯಿಂದ ಹಗಲು ದರೋಡೆ ನಡೆಯುತ್ತಿದೆ. ಸರ್ಕಾರ ತಾಲ್ಲೂಕು ಆಡಲಿತ ನೀಡಿರುವ ಬೆಳೆ ನಷ್ಟದ ವರದಿ ಆಧರಿಸಿ ಪರಿಹಾರ ನೀಡಬೇಕು. ಸಮಸ್ಯೆ ಬಗ್ಗೆ ಸರ್ಕಾರದ ಗಮನ ಸೆಳೆಯಲು ಬಂದ್ ಅಗತ್ಯ ಎಂದು ಹೇಳಿದರು.
ಮುಖಂಡರಾದ ಬೈಚೇಗೌಡ, ವೀರಭದ್ರೇಗೌಡ, ಆನಂದಕುಮಾರ್, ಬಿ.ಎಸ್.ಸೈಯದ್ ಫಾರೂಕ್ ಮಾತನಾಡಿದರು. ಮುಖಂಡರಾದ ಎನ್.ವೀರಪ್ಪರೆಡ್ಡಿ, ಕೃಷ್ಣಮೂರ್ತಿ ಇದ್ದರು.