ವರದಿ: ಶಬ್ಬೀರ್ ಅಹ್ಮದ್, ಶ್ರೀನಿವಾಸಪುರ
ಕೋಲಾರ:- ಸರ್ಕಾರದ ಬಿಸಿಯೂಟ,ಕ್ಷೀರಭಾಗ್ಯ ಯೋಜನೆಗಳ ಸದುಪಯೋಗ ಪಡೆಯಿರಿ, ಶ್ರದ್ಧೆಯಿಂದ ಕಲಿತು ಸಮಾಜಕ್ಕೆ ಕೊಡುಗೆ ನೀಡುವ ಸಾಧಕರಾಗಿ ಎಂದು ಜಿಲ್ಲಾ ಅಕ್ಷರದಾಸೋಹ ಶಿಕ್ಷಣಾಧಿಕಾರಿ ತಿಮ್ಮರಾಯಪ್ಪ ಕರೆ ನೀಡಿದರು.
ತಾಲ್ಲೂಕಿನ ಅರಾಭಿಕೊತ್ತನೂರು ಸರ್ಕಾರಿ ಪ್ರೌಢಶಾಲೆಯಲ್ಲಿ ಶಾಲೆಯ ಬಿಸಿಯೂಟ ನಿರ್ವಹಣೆ, ಮಕ್ಕಳಿಗೆ ಊಟ ಬಡಿಸುವಿಕೆ ಪರಿಶೀಲಿಸಿದ ನಂತರ ವಿದ್ಯಾರ್ಥಿಗಳೊಂದಿಗೆ ಸಂವಾದ ನಡೆಸಿ ಅವರು ಮಾತನಾಡುತ್ತಿದ್ದರು.
ಸರ್ಕಾರ ಮಕ್ಕಳಲ್ಲಿನ ಅಪೌಷ್ಟಿಕತೆ, ರಕ್ತಹೀನತೆ ತೊಡೆದು ಹಾಕಲು ಬಿಸಿಯೂಟ, ಕ್ಷೀರಭಾಗ್ಯ ಸೌಲಭ್ಯ ನೀಡುತ್ತಿದೆ, ಇದು ನಿಮ್ಮ ಕಲಿಕೆಗೆ ಸಹಕಾರಿಯಾಗಬೇಕು, ಕೇವಲ ಶಾಲೆಗೆ ಬಂದು ಹೋದರೆ ಸಾಲದು ಕಲಿಕೆ ದೃಢಪಡಿಸಿಕೊಳ್ಳಿ, ಶ್ರದ್ಧೆಯಿಂದ ಓದಿ, ಪೊಷಕರ ಆಶಯ ಈಡೇರಿಸಿ ಎಂದು ಕಿವಿಮಾತು ಹೇಳಿದರು.
ಶಾಲೆಯಲ್ಲಿ ಶುಚಿ,ರುಚಿಯಾದ ಊಟದ ವ್ಯವಸ್ಥೆ ಇರುವ ಕುರಿತು ಸಂತಸ ವ್ಯಕ್ತಪಡಿಸಿದ ಅವರು, ಆಹಾರ ಧಾನ್ಯಗಳಲ್ಲಿ ಕಳಪೆ ಕಂಡು ಬಂದರೆ ಕೂಡಲೇ ನನ್ನ ಗಮನಕ್ಕೆ ತನ್ನಿ, ಮಕ್ಕಳಿಗೆ ನೀಡುವ ಆಹಾರ ಧಾನ್ಯದಲ್ಲಿ ವ್ಯತ್ಯಯವಾಗದಂತೆ ಗಮನಹರಿಸಿ ಎಂದು ಶಿಕ್ಷಕರಿಗೆ ತಾಕೀತು ಮಾಡಿದರು.
ಸರ್ಕಾರಿ ಶಾಲೆಗಳಲ್ಲಿ ಹಾಜರಾತಿ ಹೆಚ್ಚಳಕ್ಕೆ ಬಿಸಿಯೂಟ ಸಹಕಾರಿಯಾಗಿದ್ದು, ಸ್ವಚ್ಚತೆಗೆ ಒತ್ತು ನೀಡಬೇಕು, ಮಕ್ಕಳಿಗೆ ಶುದ್ದ ಕುಡಿಯುವ ನೀರು ಒದಗಿಸಬೇಕು ಎಂದು ಅಡುಗೆ ಸಿಬ್ಬಂದಿಗೆ ಸೂಚಿಸಿದರು.
ಪ್ರಾಮಾಣಿಕ ಪರಿಶ್ರಮದಿಂದ ಸಿಗುವ ಸಾಧನೆ ತೃಪ್ತಿ ತರುತ್ತದೆ, ಅಡ್ಡದಾರಿಯಲ್ಲಿ ಮಾಡಿದ ಸಾಧನೆ ಎಂದಿಗೂ ತೃಪ್ತಿ ತಾರದು, ಬದುಕಿನ ಪ್ರತಿ ಹಂತದಲ್ಲೂ ಸಮಯಪ್ರಜ್ಞೆ ಅಗತ್ಯವಿದೆ, ಪ್ರತಿನಿಮಿಷವೂ ಸದ್ಬಳಕೆ ಮಾಡಿಕೊಳ್ಳಿ, ಕಲಿಕೆಯಲ್ಲಿ ನಿಮ್ಮನ್ನು ತೊಡಗಿಸಿಕೊಳ್ಳಿ ಎಂದು ಮಕ್ಕಳಿಗೆ ತಿಳಿಸಿದರು.
ಯುಪಿಎಸ್ಸಿ,ಕೆಪಿಎಸ್ಸಿ ಸ್ವರ್ಧಾತ್ಮಕ ಪರೀಕ್ಷೆಗಳನ್ನು ಗೆಲ್ಲುವ ಕನಸು ಕಟ್ಟಿ, ಸ್ವಾವಲಂಬಿ ಬದುಕಿನ ಪಾಠ ಕಲಿತು ಸಮಾಜಕ್ಕೆ ಕೊಡುಗೆ ನೀಡುವ ವ್ಯಕ್ತಿತ್ವ ರೂಪಿಸಿಕೊಳ್ಳಿ ಎಂದು ಕಿವಿಮಾತು ಹೇಳಿದರು.
ಈ ಸಂದರ್ಭದಲ್ಲಿ ಶಾಲೆಯ ಪ್ರಭಾರ ಮುಖ್ಯಶಿಕ್ಷಕಿ ಸಿದ್ದೇಶ್ವರಿ, ಶಿಕ್ಷಕರಾದ ಭವಾನಿ,ಸುಗುಣಾ, ಕೆ.ಲೀಲಾ, ಫರೀದಾ,ವೆಂಕಟರೆಡ್ಡಿ, ಶ್ರೀನಿವಾಸಲು, ಡಿ.ಚಂದ್ರಶೇಖರ್ ಮತ್ತಿತರರಿದ್ದರು.