ಬಾಲಕಿಯರ ಪಿಯು ಕಾಲೇಜಿನಲ್ಲಿ ಎಸ್ಸೆಸ್ಸೆಲ್ಸಿ ಪೂರಕ ಪರೀಕ್ಷೆಗೆ ಸಿದ್ದತೆಪರೀಕ್ಷಾ ಪಾವಿತ್ರ್ಯತೆ ಕಾಪಾಡಲು ಕ್ರಮವಹಿಸಿ -ಮುನಿವೆಂಕಟರಾಮಾಚಾರಿ

ಕೋಲಾರ:- ಎಸ್ಸೆಸ್ಸೆಲ್ಸಿ ಪೂರಕ ಪರೀಕ್ಷೆ ಜೂ.12ರ ಸೋಮವಾರದಿಂದ ಆರಂಭಗೊಳ್ಳುತ್ತಿದ್ದು, ಯಾವುದೇ ಗೊಂದಲಕ್ಕೆ ಅವಕಾಶವಿಲ್ಲದಂತೆ ಹಾಗೂ ಪರೀಕ್ಷಾ ಪಾವಿತ್ರ್ಯತೆಗೆ ಧಕ್ಕೆಯಾಗದಂತೆ ಕಾರ್ಯನಿರ್ವಹಿಸಿ ಎಂದು ಜಿಲ್ಲಾ ಎಸ್ಸೆಸ್ಸೆಲ್ಸಿ ನೋಡಲ್ ಅಧಿಕಾರಿ ಹಾಗೂ ಶಿಕ್ಷಣಾಧಿಕಾರಿ ಮುನಿವೆಂಕಟರಾಮಾಚಾರಿ ಸೂಚಿಸಿದರು.
ನಗರದ ಬಾಲಕಿಯರ ಪಿಯು ಕಾಲೇಜು ಕೇಂದ್ರದಲ್ಲಿ ಪರೀಕ್ಷೆಗೆ ನಿಯೋಜನೆಗೊಂಡ ಮುಖ್ಯ ಅಧೀಕ್ಷಕರು, ಸ್ಥಾನಿಕ ಜಾಗೃತದಳ ಹಾಗೂ ಕೊಠಡಿ ಮೇಲ್ವಿಚಾರರನ್ನುದ್ದೇಶಿಸಿ ಅವರು ಮಾತನಾಡುತ್ತಿದ್ದರು.
ಇದು ಖಾಸಗಿ ಅಭ್ಯರ್ಥಿಗಳ ಕೇಂದ್ರವಾಗಿದೆ ಎಂದ ಅವರು, ಕಳೆದ ಎಸ್ಸೆಸ್ಸೆಲ್ಸಿ ಪರೀಕ್ಷೆಗೆ ಶೇ.75 ಶಾಲಾ ಹಾಜರಾತಿ ಕೊರತೆಯಿಂದ ಪರೀಕ್ಷೆ ಬರೆಯಲು ಅವಕಾಶ ಸಿಗದೇ ವಂಚಿತರಾದ ವಿದ್ಯಾರ್ಥಿಗಳಿಗೆ ಇದೇ ಮೊದಲ ಬಾರಿಗೆ ಖಾಸಗಿ ಅಭ್ಯರ್ಥಿಗಳಾಗಿ ಪರೀಕ್ಷೆ ಬರೆಯಲು ಪ್ರೌಢಶಿಕ್ಷಣ ಪರೀಕ್ಷಾ ಮಂಡಳಿ ಅವಕಾಶ ಕಲ್ಪಿಸಿದ್ದು, ಅದರಂತೆ ರಾಜ್ಯದಲ್ಲಿ 28 ಸಾವಿರ ಮಂದಿ ಹಾಗೂ ಕೋಲಾರ ಜಿಲ್ಲೆಯಲ್ಲಿ 322 ಮಂದಿ ಅಂತಹ ವಿದ್ಯಾರ್ಥಿಗಳಿಗೂ ಪರೀಕ್ಷೆ ಬರೆಯಲು ಅವಕಾಶ ಕಲ್ಪಿಸಲಾಗಿದೆ ಎಂದರು.
ಈ ಕೇಂದ್ರದಲ್ಲಿ ಪರೀಕ್ಷಾ ಪಾವಿತ್ರ್ಯತೆಗೆ ಧಕ್ಕೆಯಾಗದಂತೆ ಕೆಲಸ ನಿರ್ವಹಿಸಿ, ಈ ಕೇಂದ್ರದಲ್ಲಿ ಕನ್ನಡ,ಉರ್ದು,ಇಂಗ್ಲೀಷ್ ಮಾಧ್ಯಮದ ವಿದ್ಯಾರ್ಥಿಗಳು ಇರುವುದರಿಂದ ಪ್ರಶ್ನೆಪತ್ರಿಕೆ ವಿತರಿಸುವಾಗ ಗೊಂದಲ ಮಾಡಿಕೊಳ್ಳದಿರಿ, ಆಯಾ ಮಾಧ್ಯಮದ ವಿದ್ಯಾರ್ಥಿಯ ಮಾಹಿತಿ ಗಮನಿಸಿ ಪ್ರಶ್ನೆಪತ್ರಿಕೆ ವಿತರಿಸಿ ಎಂದು ಸಲಹೆ ನೀಡಿದರು.
ಕ್ಷೇತ್ರ ಶಿಕ್ಷಣಾಧಿಕಾರಿಗಳಿಂದ ಅನುಮೋದಿತ ಶಿಕ್ಷಕರನ್ನೇ ಸದರಿ ಪರೀಕ್ಷೆಗೆ ಕೊಠಡಿಮೇಲ್ವಿಚಾರಕರನ್ನಾಗಿ ನೇಮಿಸಿಕೊಳ್ಳಬೇಕು, ಕೇಂದ್ರದಲ್ಲಿ ಕಾರ್ಯನಿರ್ವಹಿಸುವ ಎಲ್ಲರಿಗೂ ಗುರುತಿನ ಚೀಟಿ ನೀಡಿ ಎಂದು ಸೂಚಿಸಿದರು.
ಮುಖ್ಯ ಅಧೀಕ್ಷಕ ನಾಗರಾಜ್ ಮಾತನಾಡಿ, ಕೊಠಡಿ ಮೇಲ್ವಿಚಾರಕರು ಸೇರಿದಂತೆ ಪರೀಕ್ಷಾ ಕೇಂದ್ರದಲ್ಲಿ ಕಾರ್ಯನಿರ್ವಹಿಸುವ ಯಾರೂ ಮೊಬೈಲ್ ತರಬೇಡಿ, ಮಕ್ಕಳಿಗೆ ಗೊಂದಲವಾಗದ ರೀತಿ ನಿಯಮಗಳನ್ನು ಚಾಚೂ ತಪ್ಪದೇ ಪಾಲಿಸಿ ಎಂದು ತಾಕೀತು ಮಾಡಿದರು.
ಕೊಠಡಿ ಮೇಲ್ವಿಚಾರಕರು, ಡಿ ದರ್ಜೆ ಸಿಬ್ಬಂದಿ ಸೇರಿದಂತೆ ಕೇಂದ್ರದಲ್ಲಿ ಕರ್ತವ್ಯ ನಿರ್ವಹಿಸುವ ಪ್ರತಿಯೊಬ್ಬರಿಗೂ ಗುರುತಿನ ಚೀಟಿ ಕಡ್ಡಾಯವಾಗಿದೆ, ಮೊಬೈಲ್ ತಂದಿದ್ದರೆ ಶಿಕ್ಷಕರು ಆರಂಭದಲ್ಲೇ ತಮ್ಮ ಮೊಬೈಲ್‍ಅನ್ನು ಇಲಾಖೆ ನೇಮಿಸಿರುವ ಮೊಬೈಲ್ ಸಂಗ್ರಹಣಾಧಿಕಾರಿಗೆ ಒಪ್ಪಿಸಿ ಪರೀಕ್ಷಾ ಕರ್ತವ್ಯಕ್ಕೆ ಹಾಜರಾಗಬೇಕು ಎಂದು ಸೂಚಿಸಿದರು.
ಪರೀಕ್ಷಾ ಕೇಂದ್ರದಲ್ಲಿ ಶೌಚಾಲಯ, ಕುಡಿಯುವ ನೀರಿನ ವ್ಯವಸ್ಥೆ ಸಮರ್ಪಕವಾಗಿರುವಂತೆ ಕ್ರಮವಹಿಸಲಾಗಿದೆ, ಪರೀಕ್ಷಾಕಾರ್ಯಕ್ಕೆ ನೇಮಕಗೊಂಡ ಸಿಬ್ಬಂದಿ ಬೆಳಗ್ಗೆ 9 ಗಂಟೆಗೆ ಹಾಜರಾಗುವಂತೆ ಸೂಚಿಸಿದ ಅವರು, ಆಯಾ ದಿನದಂದು ಇರುವ ಪರೀಕ್ಷಾ ವಿಷಯದ ಶಿಕ್ಷಕರನ್ನು ಪರೀಕ್ಷೆಗೆ ತೆಗೆದುಕೊಳ್ಳುವುದಿಲ್ಲ ಎಂದು ಸ್ಪಷ್ಟಪಡಿಸಿದರು.
ಈ ಸಂದರ್ಭದಲ್ಲಿ ಕೇಂದ್ರ ಅಭಿರಕ್ಷಕರು ಪ್ರಶ್ನೆಪತ್ರಿಕೆ ಬಂಡಲ್‍ಗಳನ್ನು ಮಾರ್ಗಾಧಿಕಾರಿಗಳು ಬೆಳಗ್ಗೆ 8 ಗಂಟೆಗೆ ತರುವುದರಿಂದ ಮೊದಲೇ ಹಾಜರಿದ್ದು ಸಂಗ್ರಹಿಸುವ ಕೆಲಸ ಮಾಡಲಾಗುತ್ತದೆ, ಕೊಠಡಿಯಲ್ಲಿ ಪರೀಕ್ಷಾ ಕಾರ್ಯ ಹಾಗೂ ಮಕ್ಕಳ ಏಕಾಗ್ರತೆಗೆ ಭಂಗ ಬಾರದಂತೆ ಎಲ್ಲಾ ಅಗತ್ಯ ಮುನ್ನಚ್ಚರಿಕೆ ವಹಿಸಲು ಮನವಿ ಮಾಡಿದರು.
ಈ ಸಂದರ್ಭದಲ್ಲಿ ಪರೀಕ್ಷಾ ತಾಲ್ಲೂಕು ನೋಡಲ್ ಅಧಿಕಾರಿ ಮುನಿರತ್ನಯ್ಯಶೆಟ್ಟಿ, ಪರೀಕ್ಷಾ ಕಾರ್ಯಕ್ಕೆ ನೇಮಕಗೊಂಡಿರುವ ಶಿಕ್ಷಕರಾದ ಶಿಕ್ಷಕರಾದ ಲೋಕೇಶಪ್ಪ ದಟ್ಟೇರ್,ಕೆ.ಲೀಲಾ, ನಾರಾಯಣರೆಡ್ಡಿ, ಅನಿತಾ ಪತ್ತಾರ್, ಸಿಆರ್‍ಪಿ ಗೋವಿಂದು, ಮೇಡಿಹಾಳ ಶಿಕ್ಷಕ ನಾಗರಾಜ್,ಎಸ್.ಎನ್.ನಾರಾಯಣಸ್ವಾಮಿ ಸೇರಿದಂತೆ ವಿವಿಧ ಶಾಲೆಗಳು ಶಿಕ್ಷಕರು ಹಾಜರಿದ್ದರು.