ಕೋಲಾರ,ಜೂ.13: ಟಮಕ ಇಂಡಸ್ಟ್ರಿಯಲ್ ಏರಿಯಾದಲ್ಲಿ ಪ್ಲಾಸ್ಟಿಕ್ ತಯಾರಿಸುವ ಕಾರ್ಖಾನೆಗಳಿಂದ ಆಗುತ್ತಿರುವ ಪರಿಸರ ಮಾಲಿನ್ಯದ ಬಗ್ಗೆ ಎರಡು ತಿಂಗಳ ಹಿಂದೆ ಪರಿಸರ ಅಧಿಕಾರಿಗಳಿಗೆ ದೂರು ನೀಡಿದ್ದರೂ ಸಹ ಇದುವರೆಗೂ ಯಾವುದೇ ಕ್ರಮ ಕೈಗೊಂಡಿಲ್ಲ ಎಂದು ಕರ್ನಾಟಕ ಮಾನವ ಹಕ್ಕುಗಳ ಸಮಿತಿಯ ರಾಜ್ಯಾಧ್ಯಕ್ಷ ಗಲ್ಪೇಟೆ ಕೆ.ಸಿ.ಸಂತೋಷ್, ಜಿಲ್ಲಾಧ್ಯಕ್ಷ ಟಮಕ ಶ್ರೀನಾಥ್ ಆರೋಪಿಸಿದ್ದಾರೆ.
ಜಂಟಿ ಪತ್ರಿಕಾ ಹೇಳಿಕೆ ನೀಡಿರುವ ಅವರು, ಇಂದು ಮನುಷ್ಯ, ಪ್ರಾಣಿ ಮತ್ತು ಪಕ್ಷಿಗಳ ಮೇಲೆ ಪ್ಲಾಸ್ಟಿಕ್ನಿಂದ ಆಗುತ್ತಿರುವ ದುಷ್ಪರಿಣಾಮಗಳು ಹೆಚ್ಚಾಗುತ್ತಿವೆ. ಇವುಗಳಲ್ಲಿ ಮಕ್ಕಳ ಎಲುಬುಗಳನ್ನು ನಿರೂಪಗೊಳಿಸಬಲ್ಲ ವಿಷಕಾರಿ ವಸ್ತುಗಳಿವೆ. ಇವು ವಿವಿಧ ಬಗೆಯ ಕ್ಯಾನ್ಸರ್ ರೋಗಕ್ಕೆ ಕಾರಣವಾಗಬಹುದಾದ ನರಮಂಡಲಕ್ಕೆ ಧಕ್ಕೆ ಉಂಟು ಮಾಡಿ ಮೆದುಳು ಮತ್ತು ಕಣ್ಣುಗಳಿಗೆ ಹಾನಿ ಉಂಟು ಮಾಡುತ್ತವೆ. ಅದಲ್ಲದೆ ಚರ್ಮಕ್ಕೆ ತೊಂದರೆ ಪ್ಲಾಸ್ಟಿಕ್ ಅಂಶ ದೇಹಕ್ಕೆ ಸೇರಿಕೊಂಡಂಲ್ಲಿ ಮಕ್ಕಳ ಬೆಳವಣಿಗೆಗೆ ತೊಂದರೆ, ಉಸಿರಾಟದ ತೊಂದರೆ, ತಲೆನೋವು ಮುಂತಾದ ತೊಂದರೆಗಳನ್ನು ಉಂಟು ಮಾಡುತ್ತದೆ.
ಈ ಎಲ್ಲಾ ದುಷ್ಪರಿಣಾಮಗಳು ಪ್ಲಾಸ್ಟಿಕ್ ನಿಂದ ಆಗುತ್ತವೆಂದು ತಿಳಿದರೂ ಸಹ ಟಮಕ ಇಂಡಸ್ಟ್ರಿಯಲ್ ಪ್ಲಾಸ್ಟಿಕ್ ಕಾರ್ಖಾನೆಯವರು ತಮ್ಮ ಕಾರ್ಖಾನೆಯ ಮುಂದೆ ರಾಶಿ ರಾಶಿಯಾಗಿ ಪ್ಲಾಸ್ಟಿಂಕ್ ನ್ನು ಸುರಿದು ಮತ್ತು ಉಳಿದ ಪ್ಲಾಸ್ಟಿಂಕನ್ನು ತಮ್ಮ ಕಾರ್ಖಾನೆಯ ಮುಂದೆ ಸುಟ್ಟು ಹಾಕುತ್ತಿದ್ದಾರೆ. ಇದು ಗಾಳಿಯಲ್ಲಿ ಸೇರಿಕೊಂಡು ಮನುಷ್ಯ, ಪ್ರಾಣಿ ಮತ್ತು ಪಕ್ಷಿಗಳ ಮೇಲೆ ದುಷ್ಪರಿಣಾಮಗಳನ್ನು ಉಂಟಾಗುತ್ತಿವೆ.
ಆದುದ್ದರಿಂದ ತಾವುಗಳು ಸ್ಥಳ ಪರಿಶೀಲನೆ ಮಾಡಿ ಪ್ಲಾಸ್ಟಿಕ್ ಕಾರ್ಖಾನೆ ಮಾಲೀಕರ ವಿರುದ್ಧ ಕಾನೂನು ರೀತಿ ಕ್ರಿಮಿನಲ್ ಮೊಕದಮ್ಮೆ ದಾಖಲಿಸಿ ಕಾರ್ಖಾನೆಯ ಪರವಾನಿಗೆಯನ್ನು ರದ್ದು ಮಾಡಿ, ಪರಿಸರ ಮಾಲಿನ್ಯವಾಗದಂತೆ ಮತ್ತು ಮಾನವ, ಪ್ರಾಣಿ ಮತ್ತು ಪಕ್ಷಿಗಳ ಹಕ್ಕುಗಳನ್ನು ಸಂರಕ್ಷಣೆ ಮಾಡಬೇಕಾಗಿ ಎರಡು ತಿಂಗಳ ಹಿಂದೆ ದೂರು ನೀಡಿರುವುದು ಸರಿಯಷ್ಟೇ.
ಆದರೆ ಕೋಲಾರ ಜಿಲ್ಲಾ ಪರಿಸರ ಅಧಿಕಾರಿಗಳು ಇದರ ಬಗ್ಗೆ ಬರಿ ನೋಟಿಸ್ಗಳನ್ನು ನೀಡಿ ಕಾಲಹರಣ ಮಾಡುತ್ತಿರುವುದು ನೋಡಿದರೆ ತಡೆಗಟ್ಟಬೇಕಾದ ಅಧಿಕಾರಿಗಳೇ ಕಾರ್ಖಾನೆ ಅವರ ಜೊತೆ ಸೇರಿಕೊಂಡಿದ್ದಾರೆ ಎಂದು ಅನುಮಾನ ಉಂಟಾಗುತ್ತಿದೆ, ಇದರಿಂದ ಆಗುತ್ತಿರುವ ದುಷ್ಪರಿಣಾಮಗಳಿಗೆ ನೇರ ಹೊಣೆ ಈ ಅಧಿಕಾರಿಗಳೇ ಆಗಿರುತ್ತಾರೆ. ಈ ಕೂಡಲೇ ಈ ಕಾರ್ಖಾನೆಗಳ ವಿರುದ್ಧ ಕಾನೂನು ರೀತಿ ಕ್ರಮ ಕೈಗೊಳ್ಳದೇ ಹೋದರೆ ತಮ್ಮ ಇಲಾಖೆಯ ಮುಂದೆ ಹೋರಾಟ ಮಾಡುವುದಾಗಿ ಎಚ್ಚರಿಕೆಯನ್ನು ನೀಡಿದ್ದಾರೆ.