ವರದಿ: ಶಬ್ಬೀರ್ ಅಹಮ್ಮದ್, ಶ್ರೀನಿವಾಸಪುರ
ಬಂಗಾರಪೇಟೆ, ಆ-3, ಗೋಮಾಳ ಹಾಗೂ ಅರಣ್ಯ ಭೂಮಿ ಮದ್ಯೆ ಇರುವ ಸಮಸ್ಯೆ ಬಗೆ ಹರಿಸಲು ಸರ್ವೆ ಮಾಡಿಸಿ ಗಡಿ ಗುರ್ತಿಸಿ ಸಾಗುವಳಿ ಮಾಡುತ್ತಿರುವ ರೈತರಿಗೆ ಆಗುತ್ತಿರುವ ಸಮಸ್ಯೆಗೆ ಅಂತ್ಯ ಹೇಳಬೇಕೆಂದು ರೈತ ಸಂಘದಿಂದ ವಲಯ ಅರಣ್ಯ ಅಧಿಕಾರಿಗಳ ಕಛೇರಿ ಮುಂದೆ ಹೋರಾಟ ಮಾಡಿ ಅರಣ್ಯ ಅಧಿಕಾರಿ ಮಂಜುನಾಥ ರವರಿಗೆ ಮನವಿ ನೀಡಿ ಆಗ್ರಹಿಸಲಾಯಿತು.
ಒಂದು ವಾರದೊಳಗೆ ಗಡಿ ಭಾಗಗಳಾದ ಕಾಮಸಮುದ್ರ, ಬೂದಿಕೋಟೆ ವ್ಯಾಪ್ತಿಯ ಗೋಮಾಳ, ಅರಣ್ಯ ಭೂಮಿ ಸಮಸ್ಯೆ ಸರ್ವೆ ಮಾಡಿಸಿ ಇತ್ಯರ್ಥಿ ಪಡಿಸಿ ಸಾಗುವಳಿ ಮಾಡುತ್ತಿರುವ ರೈತರ ಸಮಸ್ಯೆ ಬಗೆ ಹರಿಸದೇ ಹೋದರೆ ಸಾವಿರಾರು ರೈತರು ಹಾಗೂ ಬೆಳೆಗಳ ಸಮೇತ ರಾಷ್ಟ್ರೀಯ ಹೆದ್ದಾರಿ ಬಂದ್ ಹಾಗೂ ಬೃಹತ್ ತಮಟೆ ಚಳುವಳಿ ಮಾಡುವ ಎಚ್ಚರಿಕೆ ಅರಣ್ಯ ಅಧಿಕಾರಿಗಳಿಗೆ ರೈತ ಸಂಘದ ರಾಜ್ಯ ಉಪಾದ್ಯಕ್ಷ ಕೆ.ನಾರಾಯಣಗೌಡ ನೀಡಿದರು.
ಹೋರಾಟದಲ್ಲಿ ಭಾಗವಹಿಸಿ ಮಾತನಾಡಿದ ರವರು ತಂದೆ-ತಾಯಿ ಜಗಳದಲ್ಲಿ ಮಗು ಬಡವಾಯಿತು ಎಂಬ ಗಾದೆಯಂತೆ ಕಂದಾಯ ಮತ್ತು ಅರಣ್ಯ ಅಧಿಕಾರಿಗಳು ಅಗ್ಗ ಜಗ್ಗಾಟದಲ್ಲಿ ಗಡಿ ಭಾಗದ ಕಾಮಸಮುದ್ರ ಬೂದಿಕೋಟೆ ವ್ಯಾಪ್ತಿಯ ಸಾವಿರಾರು ಜನ ರೈತರು ಬೀದಿಗೆ ಬೀಳುವ ಪರಿಸ್ಥಿತಿಗೆ ತಂದು ನಿಲ್ಲಿಸಿದ್ದಾರೆಂದು ಅಧಿಕಾರಿಗಳ ವಿರುದ್ದ ಆಕ್ರೋಷ ವ್ಯಕ್ತಪಡಿಸಿದರು.
ಗಡಿ ಭಾಗಗಳಲ್ಲಿ ಸುಮಾರು ಸಾವಿರಾರು ಎಕೆರೆ ಗೋಮಾಳ ವಿದ್ದು, ಭೂಮಿ ಇಲ್ಲದ ಲಕ್ಷಾಂತರ ಬಡ ರೈತರು ಕೃಷಿ ಮಾಡಲು ಸಾಗುವಳಿ ಚೀಟಿಗಾಗಿ ಸರ್ಕಾರದ ನಿಯಮದಂತೆ ನಮೂನೆ 50, 53, 57, 59 ಅರ್ಜಿಗಳನ್ನು ಸಲ್ಲಿಸಿ, ಜಾಥಕ ಪಕ್ಷಿಗಳಂತೆ ಕಾಯುತ್ತಿದ್ದಾರೆ. ಆದರೆ ಅರಣ್ಯ ಇಲಾಖೆ ಅಧಿಕಾರಿಗಳು ಸಾಗುವಳಿ ಮಾಡುತ್ತಿರುವ ಸಾವಿರಾರು ಎಕರೆ ನಮ್ಮ ಆಸ್ತಿ ಎಂದು ರಾತ್ರಿ ಹಗಲು ರೈತರನ್ನು ಬಿಡದೆ ದೌರ್ಜನ್ಯ ಮಾಡಿ ಸುಳ್ಳು ಕೇಸುಗಳನ್ನು ದಾಖಲು ಮಾಡುವ ಮುಖಾಂತರ ರೈತ ವಿರೋಧಿ ದೋರಣೆ ಅನುಸರಿಸಿ ರೈತರ ಅನ್ನ ತಿಂದು ರೈತರಿಗೆ ದ್ರೋಹ ಬಗೆಯುತ್ತಿದ್ದಾರೆಂದು ಅರಣ್ಯ ಇಲಾಖೆ ಅಧಿಕಾರಿಗಳ ವಿರುದ್ದ ಅಸಮದಾನ ವ್ಯಕ್ತಪಡಿಸಿದರು.
ಜಿಲ್ಲಾಧ್ಯಕ್ಷ ಐತಂಡಹಳ್ಳಿ ಮಂಜುನಾಥ ಮಾತನಾಡಿ ಸರ್ಕಾರದ ಸಂಬಳ ಪಡೆದು ಜನ ಸಾಮಾನ್ಯರ ಕೆಲಸ ಮಾಡಬೇಕಾದ ಕಂದಾಯ ಇಲಾಖೆ ಅಧಿಕಾರಿಗಳ ಬೇಜವಾಭ್ದಾರಿಯಿಂದ ಗಡಿಭಾಗದ ಕಾಮಸಮುದ್ರ ಬೂದಿಕೋಟೆ ವ್ಯಾಪ್ತಿಯ ಸಾವಿರಾರು ಎಕರೆ ಗೋಮಾಳ ಜಮೀನು ಅರಣ್ಯ ಇಲಾಖೆ ಅಧಿಕಾರಿಗಳ ಪಾಲಾಗುತ್ತಿದೆ. ಜೀವನ ನಿರ್ವಹಣೆಗಾಗಿ 2 ಎಕರೆ, 4 ಎಕರೆ ಗೋಮಾಳ ಜಮೀನಿನಲ್ಲಿ ಸಾಗುವಳಿ ಮಾಡುತ್ತಿದ್ದ ರೈತರಿಗೆ ಅರಣ್ಯ ಇಲಾಖೆ ಅಧಿಕಾರಿಗಳ ಹಿಟ್ಲರ್ ದೋರಣೆ ಸಹಿಸಿಕೊಳ್ಳಲು ಸಾಧ್ಯವಾಗದ ಪರಿಸ್ಥಿತಿ ಗಡಿಭಾಗದ ರೈತರದಾಗಿದ್ದರೂ ಸಮಸ್ಯೆ ಇತ್ಯರ್ಥ ಪಡಿಸಲು ತಾಲ್ಲೂಕು ಆಡಳಿತ ಮುಂದಾಗದೆ ಇರುವುದು ದುರದೃಷ್ಟಕರ ಎಂದು ಅಸಮದಾನ ವ್ಯಕ್ತಪಡಿಸಿದರು.
ತಾಲ್ಲೂಕಿನಾಧ್ಯಂತ ಸಾವಿರಾರು ಎಕರೆ ಅರಣ್ಯ ಭೂಮಿ ಬಲಾಡ್ಯರು ರಾಜಕೀಯ ಬೆಂಬಲ ಇರುವ ವ್ಯಕ್ತಿಗಳು ರಾಜಾರೋಷವಾಗಿ ನೂರಾರು ಎಕರೆ ಒತ್ತುವರಿ ಮಾಡಿಕೊಂಡು ದೊಡ್ಡ ದೊಡ್ಡ ಎಸ್ಟೇಟ್ ನಿರ್ಮಿಸಿದರೂ ಅವರ ವಿರುದ್ಧ ಕ್ರಮಕೈಗೊಳ್ಳಲು ತಾಕತ್ತಿಲ್ಲದ ಅರಣ್ಯ ಇಲಾಖೆ ಅಧಿಕಾರಿಗಳು ಗುಬ್ಬಚ್ಚಿ ಮೇಲೆ ಬ್ರಹ್ಮಾಸ್ತ್ರ ಎಂಬಂತೆ ಅಮಾಯಕ ರೈತರ ಮೇಲೆ ತಮ್ಮ ಪೌರುಷವನ್ನು ತೋರಿಸಲು ಮುಂದಾಗಿರುವುದು ರೈತ ವಿರೋಧಿ ದೋರಣೆಯಾಗಿದೆ ಎಂದು ಅಧಿಕಾರಿಗಳ ವಿರುದ್ಧ ಕಿಡಿಕಾಡಿದರು.
ಒಂದು ವಾರದ ಒಳಗೆ ತಾಲ್ಲೂಕಿನಾಧ್ಯಂತ ಗೋಮಾಳ ಹಾಗೂ ಅರಣ್ಯ ಭೂಮಿ ಮದ್ಯೆ ಇರುವ ಸಮಸ್ಯೆ ಇತ್ಯರ್ಥ ಪಡಿಸಲು ಸರ್ವೆ ಮಾಡಿಸಿ ಗೋಮಾಳ ಹಾಗೂ ಅರಣ್ಯ ಭೂಮಿಯ ಗಡಿಗಳನ್ನು ಗುರುತಿಸಿ ಸಾಗುವಳಿ ಮಾಡುತ್ತಿರುವ ಸಾವಿರಾರು ರೈತರಿಗೆ ಆಗುತ್ತಿರುವ ತೊಂದರೆಯನ್ನು ತಪ್ಪಿಸಬೇಕು ಮತ್ತು ಸ.ನಂ. 5 ಕುಂದರಸನಹಳ್ಳಿ ಹಾಗೂ ತಳೂರು ಸ.ನಂ. 11 ರಲ್ಲಿನ ನೂರಾರು ಎಕರೆ ಗೋಮಾಳ ಊರಿನ ಭೂ ರೈತರಿಗೆ ಮಂಜೂರು ಮಾಡಬೇಕು. ಅಕ್ರಮ ಮಂಜೂರಾತಿ ರದ್ದುಪಡಿಸಬೇಕೆಂದು ಅಧಿಕಾರಿಗಳನ್ನು ಒತ್ತಾಯಿಸಿದರು.
ಮನವಿ ಸ್ವೀಕರಿಸಿ ಮಾತನಾಡಿದ ವಲಯ ಅರಣ್ಯ ಅಧಿಕಾರಿಗಳಾದ ಮಂಜುನಾಥ ರವರು ಮೂರು ದಿನದ ಹಿಂದೆ ಹೊಸದಾಗಿ ಅಧಿಕಾರ ಸ್ವೀಕಾರ ಮಾಡಿದ್ದೇನೆ. ಗಡಿ ಭಾಗದ ಹಾಗು ತಾಲ್ಲೂಕಿನಾದ್ಯಂತ ಸಮಸ್ಯೆಗಳ ಬಗ್ಗೆ ವರದಿ ತರಿಸಿಕೊಂಡು ದಾಖಲೆಗಳ ಸಮೇತ ಸರ್ವೆ ಮಾಡಿಸಿ ನಮ್ಮ ವ್ಯಾಪ್ತಿಗೆ ಬರುವ ಗೋಮಾಳ ಜಮೀನನ್ನು ಸ್ವಾಧೀನ ಪಡಿಸಿಕೊಂಡು ಸಾಗುವಳಿ ರೈತರಿಗೆ ಆಗುತ್ತಿರುವ ತೊಂದರೆಯನ್ನು ತಪ್ಪಿಸಿ ಅಮಾಯಕ ರೈತರ ಮೇಲೆ ದೌರ್ಜನ್ಯ ಮಾಡುವ ಅಧಿಕಾರಿಗಳ ವಿರುದ್ದ ಕ್ರಮ ಕೈಗೊಳ್ಳುವ ಭರವಸೆಯನ್ನು ನೀಡಿದರು.
ಹೋರಾಟದಲ್ಲಿ ಕೋಲಾರ ತಾಲ್ಲೂಕು ಅಧ್ಯಕ್ಷ ಈಕಂಬಳ್ಳಿ ಮಂಜು, ಹಸಿರು ಸೇನೆ ಜಿಲ್ಲಾಧ್ಯಕ್ಷ ಕಿರಣ್, ಜಿಲ್ಲಾ ಉಪಾಧ್ಯಕ್ಷ ಚಾಂದ್‍ಪಾಷ, ಜಿಲ್ಲಾ ಗೌರವಾದ್ಯಕ್ಷ ಮರಗಲ್ ಮುನಿಯಪ್ಪ, ಮಂಗಸಂದ್ರ ತಿಮ್ಮಣ್ಣ, ಕೋಲಾರ ತಾ.ಅಧ್ಯಕ್ಷ ಈಕಂಬಳ್ಳಿ ಮಂಜುನಾಥ, ಜಾವೀದ್, ಗೌಸ್, ನಯಾಜ್, ನವಾಜ್, ವಕ್ರಕುಂಟೆ ಆಂಜಿನಪ್ಪ, ಬೂದಿಕೋಟೆ ಹೋಬಳಿ ಅಧ್ಯಕ್ಷ ನಾಗಯ್ಯ, ಗರುಡಕೆಂಪನಹಳ್ಳಿ ಮುನಿರಾಜು, ಬಸಪ್ಪ, ಮುರುಗೇಶ್, ರಾಮಕೃಷ್ಣಪ್ಪ ಇನ್ನು ಮುಂತಾದವರು ಭಾಗವಹಿಸಿದ್ದರು.