ಕೋವಿಡ್ ಆತಂಕ-ಕಚೇರಿಗೆ ಬರುವ ಜನತೆಗೆ ಸಮಯನಿಗಧಿ ಶಾಲೆಗಳಿಗೆ ಬೇಸಿಗೆ ರಜೆ-ಡಿಸಿಯವರಿಗೆ ಸುರೇಶ್‍ಬಾಬು ಮನವಿ

ವರದಿ: ಶಬ್ಬೀರ್ ಅಹಮ್ಮದ್, ಶ್ರೀನಿವಾಸಪುರ

ಕೋಲಾರ:- ಕೋವಿಡ್ 2ನೇ ಅಲೆ ಹಿನ್ನಲೆಯಲ್ಲಿ ಸರ್ಕಾರಿ ನೌಕರರ ಆರೋಗ್ಯ ರಕ್ಷಣೆ ದೃಷ್ಟಿಯಿಂದ ಕಚೇರಿಗಳಿಗೆ ಬರುವ ಸಾರ್ವಜನಿಕರಿಗೆ ಸಮಯ ನಿಗಧಿ, ಮಕ್ಕಳು,ಶಿಕ್ಷಕರ ಸುರಕ್ಷತೆ ದೃಷ್ಟಿಯಿಂದ ಶಾಲೆಗಳಿಗೆ ಬೇಸಿಗೆ ರಜೆ ನೀಡುವಂತೆ ಜಿಲ್ಲಾ ನೌಕರರ ಸಂಘದ ಅಧ್ಯಕ್ಷ ಜಿ.ಸುರೇಶ್‍ಬಾಬು ಜಿಲ್ಲಾಧಿಕಾರಿ ಡಾ.ಆರ್.ಸೆಲ್ವಮಣಿ ಅವರಿಗೆ ಮನವಿ ಮಾಡಿದರು.
ಈ ಸಂಬಂಧ ಸಂಘದ ಪದಾಧಿಕಾರಿಗಳೊಂದಿಗೆ ಡಿಸಿಯವರನ್ನು ಭೇಟಿಯಾಗಿ ಮನವಿ ಸಲ್ಲಿಸಿದ ಅವರು, ಕೋವಿಡ್ 2ನೇ ಅಲೆ ಆತಂಕಕಾರಿಯಾಗಿ ವೃದ್ದಿಸುತ್ತಿದೆ, ಇದರಿಂದ ನೌಕರರ ಆರೋಗ್ಯ ರಕ್ಷಣೆಗೆ ಒತ್ತು ನೀಡುವ ಅಗತ್ಯವಿದೆ ಎಂದು ತಿಳಿಸಿದರು.
ನೌಕರರು ಸರ್ಕಾರದ ಯೋಜನೆಗಳನ್ನು ಜನತೆಗೆ ತಲುಪಿಸಲು ಪ್ರಾಮಾಣಿಕವಾಗಿ ಕೆಲಸ ಮಾಡುತ್ತಿದ್ದಾರೆ, ಈ ನಡುವೆ ನೌಕರರ ಕುಟುಂಬ ವರ್ಗದಲ್ಲಿ ಸೋಂಕಿನ ತೀವ್ರತೆಯ ಕುರಿತು ಆತಂಕವಿದೆ ಎಂದು ತಿಳಿಸಿದರು.
ಸೋಂಕು ತಡೆಗಾಗಿ ಕಚೇರಿಗಳಿಗೆ ಬರುವ ಸಾರ್ವಜನಿಕರು ಕಚೇರಿಗಳಿಗೆ ಬರಲು ಅಪರಾಹ್ನ 3 ಗಂಟೆ ಸಮಯ ನಿಗಧಿ ಮಾಡಿ, ನೌಕರರಿಗೆ ಗುಣಮಟ್ಟದ ಮಾಸ್ಕ್,ಸ್ಯಾನಿಟೈಸರ್ ಒದಗಿಸಿ ಆರೋಗ್ಯದ ಮೇಲಾಗುವ ದುಷ್ಪರಿಣಾಮ ತಡೆಗೆ ಕ್ರಮವಹಿಸಲು ಮನವಿ ಮಾಡಿ, ಈ ಸಂಬಂಧ ಎಲ್ಲಾ ಇಲಾಖೆಗಳ ಮುಖ್ಯಸ್ಥರು ಕ್ರಮವಹಿಸುವಂತೆ ಸೂಚಿಸಲು ಕೋರಿದರು.
ಶಾಲೆಗಳಿಗೆ
ಬೇಸಿಗೆ ರಜೆ ನೀಡಿ
ಕೋವಿಡ್ ಸೋಂಕಿನಿಂದ ಮಕ್ಕಳ ರಕ್ಷಣೆ ಅಗತ್ಯವಾಗಿದೆ, ಮಕ್ಕಳ ಸುರಕ್ಷತೆ ದೃಷ್ಟಿಯಿಂದ ಪ್ರತಿ ವರ್ಷದಂತೆ ಈ ವರ್ಷವು ಕೂಡಲೇ ಬೇಸಿಗೆ ರಜೆ ನೀಡಲು ಮನವಿ ಮಾಡಿದರು.
ಈಗಾಗಲೇ 1 ರಿಂದ 9ನೇ ತರಗತಿವರೆಗೂ ರಜೆ ಘೋಷಿಸಲಾಗಿದೆ, ಉಳಿದಂತೆ 10ನೇ ತರಗತಿ ಮಕ್ಕಳಿಗೆ ಶಾಲೆ ನಡೆಯುತ್ತಿದ್ದು, ಸೋಂಕು ಹರುಡುವ ಭೀತಿಯಲ್ಲಿ ಪೋಷಕರಿದ್ದಾರೆ ಎಂದ ಅವರು, ಪ್ರತಿ ವರ್ಷದಂತೆ ಏ.10 ರಿಂದ ಮೇ.30 ರವರೆಗೂ ಬೇಸಿಗೆ ರಜೆ ನೀಡುವ ಹಿಂದಿನ ಆದೇಶ ಜಾರಿಗೆ ಮನವಿ ಮಾಡಿದರು.
ಸರ್ಕಾರಿ ಶಾಲೆಗಳಲ್ಲಿ ನಿರಂತರ,ವ್ಯಾಪಕ ಮೌಲ್ಯಮಾಪನ ಪದ್ದತಿ ಇರುವುದರಿಂದ ಇದನ್ನೇ ಮಕ್ಕಳ ಉತ್ತೀರ್ಣಕ್ಕೆ ಪರಿಗಣಿಸಿ ರಜೆ ನೀಡಲು ಸಮಸ್ತ ಶಿಕ್ಷಕರ ಪರವಾಗಿ ಮನವಿ ಮಾಡುತ್ತಿರುವುದಾಗಿ ತಿಳಿಸಿದರು.
ಅನಾಮಧೇಯ
ದೂರಿಗೆ ಹೆದರಿದಿರಿ
ಜಿಲ್ಲಾಧಿಕಾರಿ ಡಾ.ಆರ್.ಸೆಲ್ವಮಣಿ ಮಾತನಾಡಿ, ಅನಾಮಧೇಯ ದೂರುಗಳಿಗೆ ಹೆದರದೇ ನಿಷ್ಟೆಯಿಂದ ನಿಮ್ಮ ಕರ್ತವ್ಯ ನೀವು ನಿರ್ವಹಿಸಿ ಎಂದು ಸೂಚಿಸಿದರಲ್ಲದೇ, ಅಂತಹ ದೂರುಗಳಿಗೆ ಸ್ಪಂದಿಸದಿರಲು ಈಗಾಗಲೇ ಇಲಾಖೆಗಳಿಗೆ ಸೂಚನೆ ನೀಡಲಾಗಿದೆ ಎಂದು ತಿಳಿಸಿದರು.
ಇದೇ ಸಂದರ್ಭದಲ್ಲಿ ನೌಕರರ ಸಂಘದ ಮನವಿಯಂತೆ ಈಗಾಗಲೇ ಜಿಲ್ಲೆಯ ವಿವಿಧ ಇಲಾಖೆಗಳಲ್ಲಿರುವ ವಿಕಲಚೇತನ ನೌಕರರು ಮನೆ ಯಿಂದಲೇ ಕರ್ತವ್ಯ ನಿರ್ವಹಿಸಲು ಎಲ್ಲಾ ಇಲಾಖೆಗಳಿಗೆ ಸೂಚನೆ ನೀಡಿರುವುದಾಗಿ ತಿಳಿಸಿದರು.
ಈ ಸಂದರ್ಭದಲ್ಲಿ ನೌಕರರ ಸಂಘದ ಖಜಾಂಚಿ ಕೆ.ವಿಜಯ್, ಗೌರವಾಧ್ಯಕ್ಷ ಶ್ರೀನಿವಾಸರೆಡ್ಡಿ, ರಾಜ್ಯಪರಿಷತ್ ಸದಸ್ಯ ಗೌತಮ್, ಹಿರಿಯ ಉಪಾಧ್ಯಕ್ಷ ಸುಬ್ರಮಣಿ, ಉಪಾಧ್ಯಕ್ಷ ಪುರುಷೋತ್ತಮ್,ಗ್ರಾಮ ಲೆಕ್ಕಿಗರ ಸಂಘದ ಅಧ್ಯಕ್ಷ ಅಜಯ್, ನೌಕರರ ಸಂಘದ ಜಂಟಿ ಕಾರ್ಯದರ್ಶಿ ಮಂಜುನಾಥ್ ಮತ್ತಿತರರಿದ್ದರು.