ಕುಂದಾಪುರ ತಾಲೂಕಿನ ಕೋಟೇಶ್ವರದ ಶ್ರೀಮತಿ ಸುಪ್ರಸನ್ನ ನಕ್ಕತ್ತಾಯ ಅವರ 100 ಕಲಾಕೃತಿಗಳ ಏಕ ವ್ಯಕ್ತಿ ಚಿತ್ರಕಲಾ ಪ್ರದರ್ಶನ ಕುಂದಾಪುರದ ಸೂರ್ನಳ್ಳಿ ರಸ್ತೆಯಲ್ಲಿರುವ ಸುಪ್ರಭಾ ಕಾಂಪ್ಲೆಕ್ಸ್ನ ತ್ರಿವರ್ಣ ಕಲಾ ಗ್ಯಾಲರಿಯಲ್ಲಿ ಜು. 27 ರಂದು ನಡೆಯಿತು.
ಹಿರಿಯ ಕಲಾವಿದ, ಪರಿಸರ ತಜ್ಞ ದಿನೇಶ ಹೊಳ್ಳ ಮಂಗಳೂರು ವೈವಿಧ್ಯಮಯ ಹಕ್ಕಿಗಳ “ಸಂಚಯ” ಚಿತ್ರಕಲಾ ಪ್ರದರ್ಶನ ಉದ್ಘಾಟಿಸಿದರು. “ಹಕ್ಕಿಗಳೇ ನಮ್ಮ ರಕ್ಷಕರು. ಪಶ್ಚಿಮ ಘಟ್ಟದ ಪ್ರದೇಶ ಅಭಿವೃದ್ಧಿಯ ಹೆಸರಲ್ಲಿ ನಾಶಗೊಳ್ಳುತ್ತಾ ಇರುವುದರಿಂದ ಇಂದು ಹಕ್ಕಿಗಳಿಗೂ ಪ್ರಾಣಿಗಳಿಗೂ ಸಂಕಟ ಮಾತ್ರವಲ್ಲ, ಗುಡ್ಡಗಳೇ ಕುಸಿದು ಬೀಳುವಂತಹ ದುರಂತ ಇಂದು ಸಂಭವಿಸುತ್ತಿದೆ. ಸುಂದರ ಹಕ್ಕಿಗಳ ಈ ಕಲಾ ಪ್ರದರ್ಶನ ಗಮನಿಸಿದಾಗ ಸಂತೋಷವಾಗುತ್ತದೆ. ನಾವು ನಮ್ಮನ್ನು ಕಾಪಾಡುವ ಪ್ರಕೃತಿಯ ಜೀವಗಳನ್ನು ಎಷ್ಟು ನೋಯಿಸುತ್ತಿದ್ದೇವೆ ಎಂದು ದು:ಖವಾಗುತ್ತದೆ. ಪ್ರಾಕೃತಿಕ ವ್ಯವಸ್ಥೆಯನ್ನು ವಿರೂಪಗೊಳಿಸುತ್ತಿದ್ದೇವೆ ಎಂದು ಅರಿವಾಗುತ್ತದೆ. ವಿದ್ಯಾರ್ಥಿಗಳು ಪರಿಸರದಲ್ಲಿರುವ ಹಕ್ಕಿಗಳೊಂದಿಗೆ ಅವರ ಬಾಂಧವ್ಯ ಬೆಳೆಯುವಂತೆ ಮಾಡಬೇಕು. ಈ ಕಲಾ ಪ್ರದರ್ಶನ ಬಹಳ ಉತ್ತಮವಾಗಿದೆ” ಎಂದು ದಿನೇಶ ಹೊಳ್ಳ ಹೇಳಿದರು.
ಚಿತ್ರಕಲಾ ವಿದ್ಯಾರ್ಥಿಗಳಿಗೆ ಶಿಫಾರಸು ಪತ್ರ ವಿತರಿಸಿದ ನಿವೃತ್ತ ಪ್ರಾಂಶುಪಾಲರಾದ ಚಿತ್ರಾ ಕಾರಂತ ಮಾತನಾಡಿ, “ಸುಪ್ರಸನ್ನ ನಕ್ಕತ್ತಾಯರಲ್ಲಿ ಸೂಪ್ತವಾಗಿ ಹುದಗಿರುವ ಕಲಾ ನೈಪುಣ್ಯತೆ ಈ “ಸಂಚಯ” ಕಲಾ ಪ್ರದರ್ಶನದಿಂದ ಬೆಳಕಿಗೆ ಬಂದಿದೆ” ಎಂದರು.
ಮುಖ್ಯ ಅಭ್ಯಾಗತರಾದ ‘ಕುಂದಪ್ರಭ’ ಸಂಸ್ಥೆಯ ಯು. ಎಸ್. ಶೆಣೈ ಮಾತನಾಡಿ, “ಉತ್ತಮ ಕವನಗಳನ್ನು ಬರೆಯುವ ಸುಪ್ರಸನ್ನ ನಕ್ಕತ್ತಾಯ, ತಾವು ಉತ್ತಮ ಚಿತ್ರಕಲಾವಿದರೂ ಸಹ ಎಂದು ಸಾಬೀತು ಪಡಿಸಿದ್ದಾರೆ. ಅವರಲ್ಲಿರುವ ಶ್ರದ್ಧೆ ಅನುಕರಣೀಯ. ಚಿತ್ರ ಪ್ರದರ್ಶನಕ್ಕೆ ಇವರಿಗೆ ಪ್ರೇರಣೆ ತುಂಬಿದ ತ್ರಿವರ್ಣ ಕಲಾ ಗ್ಯಾಲರಿ ಸಂಚಾಲಕ, ಕಲಾವಿದ ಹರೀಶ ಸಾಗಾ ಅವರೂ ಅಭಿನಂದನಾರ್ಹರು. ವಿದ್ಯಾರ್ಥಿಗಳು ಈ ಕಲಾ ಪ್ರದರ್ಶನ ನೋಡಲೇಬೇಕು” ಎಂದರು.
ಹರೀಶ ಸಾಗಾ ಮಾತನಾಡಿ, “ಚಿತ್ರಕಲೆಗೆ ಆಸಕ್ತಿ, ಶ್ರದ್ಧೆ ಹಾಗೂ ನಿರಂತರ ಅಧ್ಯಯನ ಮುಖ್ಯ. ಇದರಲ್ಲಿ ಹಲವು ಹಂತಗಳಿರುತ್ತವೆ. ಕೆಲವರು ಕಲಿಯುವ ಹಂತದಲ್ಲೇ ಎಲ್ಲವೂ ತಿಳಿಯಿತು ಎಂದು ಭಾವಿಸುತ್ತಾರೆ. ಅದು ಸರಿಯಲ್ಲ. ಸುಪ್ರಸನ್ನ ನಕ್ಕತ್ತಾಯರಿಗೆ ಇನ್ನಷ್ಟು ಕಲಿಯುವ ಆಸಕ್ತಿ ಇದೆ. ಅವರು ಸಾಧನೆ ಮಾಡಬಲ್ಲರು” ಎಂದರು.
ಶ್ರೀಮತಿ ಸುಪ್ರಸನ್ನ ನಕ್ಕತ್ತಾಯ ಪ್ರಾಸ್ತಾವಿಕ ಮಾತುಗಳನ್ನಾಡಿ ಸ್ವಾಗತಿಸಿದರು. ಶ್ರೀಮತಿ ವಸಂತಿ ಪಂಡಿತ ಸುಪ್ರಸನ್ನ ನಕ್ಕತ್ತಾಯರನ್ನು ಅಭಿನಂದಿಸಿದರು. ಶ್ರೀಮತಿ ಸುಲೋಚನಾ ರಮೇಶ್ ನಿರೂಪಿಸಿದರು. ಕಲಾ ವಿದ್ಯಾರ್ಥಿನಿ ಕೃತಿ ದೇವಾಡಿಗ ವಂದಿಸಿದರು.