ಕೋಲಾರ:- ಸತತ 18 ವರ್ಷಗಳ ಶಿಕ್ಷಕರ ಸಮಸ್ಯೆಗಳಿಗೆ ಸದನದ ಒಳಗೆ ಹಾಗೂ ಹೊರಗೆ ಹೋರಾಟ ಮಾಡುತ್ತಾ ಅನೇಕ ಸಮಸ್ಯೆಗಳ ಪರಿಹಾರಕ್ಕೆ ಕಾರಣರಾಗಿರುವ ಹಸನ್ಮುಖಿ ಶಿಕ್ಷಕರ ಸ್ನೇಹಿ ನಾಯಕರೆಂದೇ ಗುರುತಿಸಿಕೊಂಡಿರುವ ಬಿಜೆಪಿ-ಜೆಡಿಎಸ್ ಮೈತ್ರಿ ಅಭ್ಯರ್ಥಿ ಡಾ.ವೈ.ಎ.ನಾರಾಯಣಸ್ವಾಮಿ ಅವರನ್ನು ಶಿಕ್ಷಕರು ಬೆಂಬಲಿಸಬೇಕು ಜೆಡಿಎಸ್ ಮುಖಂಡ ಸಿಎಂಆರ್.ಶ್ರೀನಾಥ್ ಮನವಿ ಮಾಡಿದರು.
ಗುರುವಾರ ತಾಲ್ಲೂಕಿನ ಅರಾಭಿಕೊತ್ತನೂರು ಸರ್ಕಾರಿ ಪ್ರೌಢಶಾಲೆಯಲ್ಲಿ ಆಗ್ನೇಯ ಶಿಕ್ಷಕರ ಕ್ಷೇತ್ರದ ಮೈತ್ರಿ ಅಭ್ಯರ್ಥಿ ಡಾ.ವೈ.ಎ.ನಾರಾಯಣಸ್ವಾಮಿ ಪರ ಮತಯಾಚಿಸಿದ ಅವರು, ಶಿಕ್ಷಣ ಮತ್ತು ಶಿಕ್ಷಕರ ಬಗ್ಗೆ ಕಾಳಜಿ ಹೊಂದಿರುವ ವ್ಯಕ್ತಿ ಸದನದಲ್ಲಿ ಇರಬೇಕು ಎಂದರು.
ಶಿಕ್ಷಕರ ಸಮಸ್ಯೆಗಳಿಗೆ ಸದಾ ಸ್ಪಂದನೆ, ವೇತನ ತಾರತಮ್ಯ,ಬಡ್ತಿ ಸಂಬಂಧ ಇದ್ದ ಸಮಸ್ಯೆಗಳು, ಶಿಕ್ಷಕ ಸ್ನೇಹಿ ವರ್ಗಾವಣೆ ನೀತಿ ಜಾರಿ,ಅನುದಾನಿತ ಶಾಲೆಗಳ ಶಿಕ್ಷಕರ ಸಮಸ್ಯೆಗಳ ನಿವಾರಣೆ ಮತ್ತಿತರ ಅಂಶಗಳ ಕುರಿತು ಪಕ್ಷಬೇಧ ಮರೆತು ಸದನದ ಹೊರಗೂ,ಒಳಗೂ ಕೆಲಸ ಮಾಡಿರುವ ವೈಎಎನ್ ಅವರನ್ನು ಗೆಲ್ಲಿಸುವಂತೆ ಮನವಿ ಮಾಡಿದರು.
ಜೆಡಿಎಸ್,ಬಿಜೆಪಿ ಸಮ್ಮಿಶ್ರ ಸರ್ಕಾರದಲ್ಲಿ ನೀಡಿರುವ ಆಡಳಿತವನ್ನು ಜನತೆ ಇಂದಿಗೂ ಮರೆತಿಲ್ಲ, ಶಿಕ್ಷಕರ ಹುದ್ದೆಗಳ ಭರ್ತಿ, ರಾಜ್ಯಾದ್ಯಂತ ಸರ್ಕಾರಿ ಪ್ರೌಢಶಾಲೆಗಳು, ಜೂನಿಯರ್ ಕಾಲೇಜುಗಳನ್ನು ಮಂಜೂರು ಮಾಡುವ ಮೂಲಕ ಹೊಸ ಆಯಾಮ ಸೃಷ್ಟಿಸಿದ್ದನ್ನು ಸ್ಮರಿಸಿದ ಅವರು, ಶೈಕ್ಷಣಿಕ ಅಭಿವೃದ್ದಿಗೆ ಒತ್ತು ನೀಡುವ ಮನಸ್ಥಿತಿ ಬಿಜೆಪಿ,ಜೆಡಿಎಸ್ಗಿದೆ ಎಂದರು.
ರವಿಶಿಕ್ಷಣ ಸಂಸ್ಥೆಗಳ ಅಧ್ಯಕ್ಷ ಮುಂರಾಂಡಹಳ್ಳಿ ಡಾ.ಗೋಪಾಲಪ್ಪ ಮಾತನಾಡಿ, ರಾಜ್ಯದಲ್ಲಿ ಸಂಕಷ್ಟದಲ್ಲಿದ್ದ ಅಥಿತಿ ಉಪನ್ಯಾಸಕರ ಖಾಯಂ, ಜೆಒಸಿಯ 3 ಸಾವಿರ ಶಿಕ್ಷಕರನ್ನು ಖಾಯಂ ಮಾಡಿ ಅವರ ಬದುಕಿಗೆ ಭದ್ರತೆ ನೀಡಿದ್ದು, ಕುಮಾರಸ್ವಾಮಿ, ಯಡಿಯೂರಪ್ಪ ನೇತೃತ್ವದ ಸರ್ಕಾರ ಎಂದ ಅವರು, ಈ ಸಂದರ್ಭದಲ್ಲಿ ಶಿಕ್ಷಕರ ಧ್ವನಿಯಾಗಿ ವೈಎಎನ್ ಕೆಲಸ ಮಾಡಿದ್ದಾರೆ, ಅವರ ಮರು ಆಯ್ಕೆಯ ಮೂಲಕ ಸದನದಲ್ಲಿ ಶಿಕ್ಷಕರ ಸಮಸ್ಯೆಗಳ ವಿರುದ್ದ ಧ್ವನಿ ಮತ್ತಷ್ಟು ಗಟ್ಟಿಗೊಳ್ಳಲಿದೆ ಎಂದರು.
ಎಂಎಲ್ಸಿ ಚುನಾವಣೆಯಲ್ಲಿ ಕಾಂಗ್ರೆಸ್ಗೆ ಮುಖಭಂಗವಾಗುವ ರೀತಿಯಲ್ಲಿ ಫಲಿತಾಂಶ ಬರಬೇಕು, ಶಿಕ್ಷಕರ ಬಗ್ಗೆ ಹೆಚ್ಚು ಕಾಳಜಿ ಇದ್ದರೆ ಅದು ವೈ.ಎ.ನಾರಾಯಣಸ್ವಾಮಿ ಅವರಿಗೆ ಮಾತ್ರ, ಸರ್ಕಾರಕ್ಕೆ ಚಾಟಿ ಬೀಸುವ ಕೆಲಸ ವೈಎಎನ್ ಮಾಡುತ್ತಾರೆ ಎಂದು ತಿಳಿಸಿದರು.
ಜೆಡಿಎಸ್ ಜಿಲ್ಲಾ ಕಾರ್ಯಾಧ್ಯಕ್ಷ ಬಣಕನಹಳ್ಳಿ ನಟರಾಜ್ ಮಾತನಾಡಿ, ರಾಜ್ಯದಲ್ಲಿನ ಸರ್ಕಾರ ಸರ್ಕಾರಿ ಶಾಲೆಗಳನ್ನು ನಾಶ ಮಾಡುವ ಸಂಚು ಸದ್ದಿಲ್ಲದೇ ನಡೆಸುತ್ತಿದ್ದಾರೆ, ರಾಜ್ಯದಲ್ಲಿ ಪ್ರಾಥಮಿಕ, ಪ್ರೌಢ ಶಾಲಾ ಶಿಕ್ಷಕರ ಹುದ್ದೆಗಳು ಸಾಕಷ್ಟು ಖಾಲಿ ಇವೆ. 60ಸಾವಿರ ಶಿಕ್ಷಕರ ಹುದ್ದೆ ಖಾಲಿ ಇರುವ ಕುರಿತ ವರದಿ ಆತಂಕಕಾರಿ ಎಂದ ಅವರು, ಇದು ಸರ್ಕಾರಿ ಶಾಲೆಗಳನ್ನು ಮುಗಿಸುವ ಹುನ್ನಾರ ಎಂದರು.
ಬಿಜೆಪಿ-ಜೆಡಿಎಸ್ ಮೈತ್ರಿಯಿಂದಾಗಿ ವೈಎಎನ್ ಗೆಲುವು ಮತ್ತಷ್ಟು ಸುಲಭವಾಗಲಿದೆ, ಸತತ 18 ವರ್ಷಗಳ ಕಾಲ ಶಿಕ್ಷಕರೊಂದಿಗೆ ಕೆಲಸ ಮಾಡಿರುವ ಅವರ ಕುರಿತು ನಮಗಿಂತ ಶಿಕ್ಷಕರಿಗೆ ಹೆಚ್ಚು ಗೊತ್ತಿದೆ, ಸಮಸ್ಯೆ ಹೊತ್ತು ಬರುವ ಶಿಕ್ಷಕರ ಕುರಿತು ಅವರಿಗಿರುವ ಕಾಳಜಿ ಅವರು ತೋರುವ ಪ್ರೀತಿ ಯಾರಿಂದಲೂ ಸಾಧ್ಯವಿಲ್ಲ ಎಂದರು.
ಈ ಸಂದರ್ಭದಲ್ಲಿ ಬಿಜೆಪಿಯ ಮಮತಮ್ಮ, ಮುಖಂಡರಾದ ಅಶೋಕ್, ಕಾರ್ತಿಕ್, ಪ್ರವೀಣ್, ಮಂಜುನಾಥ್, ಮುಖ್ಯಶಿಕ್ಷಕಿ ತಾಹೇರಾ ನುಸ್ರತ್, ಶಿಕ್ಷಕರಾದ ಸಿದ್ದೇಶ್ವರಿ, ಎಂ.ಆರ್.ಗೋಪಾಲಕೃಷ್ಣ, ಭವಾನಿ, ವೆಂಕಟರೆಡ್ಡಿ, ಶ್ವೇತಾ,ಲೀಲಾ,ಸುಗುಣಾ, ಫರೀದಾ, ಚಂದ್ರಶೇಖರ್ ಮತ್ತಿತರರಿದ್ದರು.