ದೇವರು ನಮಗೆ ನೀಡಿದ ವರ, ಚಿನ್ನ, ಬೆಳ್ಳಿ, ಕಾರು, ಬಂಗಲೆ ಅಲ್ಲ. ಮುಖ್ಯವಾಗಿ ನಮಗೆ ನೀಡಿದ ವರ, ಸಮಯ. ಈ ಸಮಯವನ್ನು ಸರಿಯಾಗಿ ಸದುಪಯೋಗ ಮಾಡಿಕೊಂಡರೆ ಜೀವನದಲ್ಲಿ ಬೇರೆ ಎಲ್ಲಾ ರೀತಿಯ ಸಂಪತ್ತನ್ನು ಗಳಿಸಬಹುದು. ವಿದ್ಯಾರ್ಥಿಗಳು ತಮ್ಮ ಪ್ರತಿಭೆ, ನಡೆ-ನುಡಿ, ಗುರಿ ಸಾಧನೆಯ ಹಾದಿ, ಎಲ್ಲ ವಿಷಯಗಳಲ್ಲೂ ಪರಿಪೂರ್ಣತೆ ಪಡೆಯಲು ಶಿಸ್ತು, ಶ್ರದ್ಧೆಯಿಂದ ಶ್ರಮಿಸಬೇಕು. ದೇವರ ಮೇಲೆ ವಿಶ್ವಾಸವಿಟ್ಟು, ಗುರು ಹಿರಿಯರಲ್ಲಿ ಗೌರವ ಇಟ್ಟು, ಮಾತಾ ಪಿತಾರ ಮಾರ್ಗದರ್ಶನದಲ್ಲಿ ಮುನ್ನಡೆದರೆ ಯಶಸ್ಸು ಖಂಡಿತ” ಎಂದು ಉಡುಪಿ ಕುಂಜಿಬೆಟ್ಟು ಶಾರದಾ ವಸತಿ ಶಾಲೆಯ ನಿರ್ದೇಶಕರಾದ ವಿದ್ಯಾವಂತ ಆಚಾರ್ಯ ಹೇಳಿದರು.
ಕುಂದಾಪುರ ಪೇಟೆ ಶ್ರೀ ವೆಂಕಟರಮಣ ದೇವಸ್ಥಾನದಲ್ಲಿ ಜಿ.ಎಸ್.ಬಿ. ದೇವಾಲಯಗಳ ಒಕ್ಕೂಟ (ರಿ.) ಮಂಗಳೂರು ಸಂಘಟನೆಯ ಕುಂದಾಪುರ ವಲಯದ ಸಮಾವೇಶ ಉದ್ಘಾಟಿಸಿ ದಿಕ್ಸೂಚಿ ಭಾಷಣ ಮಾಡುತ್ತಾ ಅವರು ನುಡಿದರು.
“ನನ್ನಿಂದ ಸಾಧ್ಯವಿದೆ” ಎಂಬ ಆತ್ಮ ವಿಶ್ವಾಸವಿರಿಸಿಕೊಂಡು ಯುವಕರು ಮುನ್ನಡೆದರೆ ಗುರಿ ಸಾಧನೆ ಮಾಡಲು ಸಾಧ್ಯ ಎಂದು ಹಲವು ನಿದರ್ಶನಗಳನ್ನು ನೀಡಿದ ಅವರು, ಯಾವುದೇ ಅನಾನುಕೂಲತೆಗಳನ್ನು ಗೆದ್ದು ಜಯ ಸಾಧಿಸಲು ಸಾಧ್ಯವಿದೆ” ಗೌಡ ಸಾರಸ್ವತ ಸಮಾಜದವರಿಗೆ ಬುದ್ಧಿಶಕ್ತಿ, ಜ್ಞಾನ, ಕರ್ತತ್ವ ಶಕ್ತಿ ದೇವರು ನೀಡಿದ್ದಾನೆ. ಧರ್ಮಕ್ಕಾಗಿ ನಮ್ಮವರು ಬಹಳ ತ್ಯಾಗ ಮಾಡಿದ್ದಾರೆ. ಜೀವನವನ್ನು ಸದುಪಯೋಗಿಸಿಕೊಳ್ಳಿ ಎಂದು ವಿದ್ಯಾರ್ಥಿಗಳಿಗೆ ತಿಳುವಳಿಕೆ ನೀಡಿದರು.
ಸಮಾವೇಶದ ಅಧ್ಯಕ್ಷತೆಯನ್ನು ಕುಂದಾಪುರ ವಲಯದ ಅಧ್ಯಕ್ಷ ಡಿ. ಗೋಪಾಲಕೃಷ್ಣ ಕಾಮತ್ ವಹಿಸಿದ್ದರು.
ಮುಖ್ಯ ಅತಿಥಿಗಳಾಗಿ ಕುಂದಾಪುರ ಪೇಟೆ ಶ್ರೀ ವೆಂಕಟರಮಣ ದೇವಸ್ಥಾನದ ಆಡಳಿತ ಮೊಕ್ತೇಸರರಾದ ಕೆ. ರಾಧಾಕೃಷ್ಣ ಶೆಣೈ, ಜಿ.ಎಸ್.ಬಿ. ದೇವಾಲಯಗಳ ಒಕ್ಕೂಟದ ಅಧ್ಯಕ್ಷ ಅತುಲ್ ಕುಡ್ವ ಮಂಗಳೂರು, ಕಾರ್ಯದರ್ಶಿ ಆರ್ಬೆಟ್ಟು ಮಾಧವ ಕಾಮತ್, ಕೋಟೇಶ್ವರ ಶ್ರೀ ಪಟ್ಟಾಭಿರಾಮಚಂದ್ರ ದೇವಸ್ಥಾನದ ಆಡಳಿತ ಮೊಕ್ತೇಸರ ಕೆ. ಶ್ರೀಧರ ಕಾಮತ್ ಭಾಗವಹಿಸಿ, ಶುಭ ಹಾರೈಸಿ, ಸಾಧಕ ವಿದ್ಯಾರ್ಥಿಗಳನ್ನು ಅಭಿನಂದಿಸಿದರು.
ವೇ.ಮೂ.ಜಿ. ಪ್ರಕಾಶ್ ಭಟ್ ಚೇಂಪಿ, “ಸಂಸ್ಕಾರ ಸುಧೆ” ಕಾರ್ಯಕ್ರಮ ಮೂಲಕ ಮೌಲಿಕ ಜ್ಞಾನ ಪರಿಚಯಿಸಿದರು.
ಹಿರಿಯ ಸಾಧಕರಾದ ವೇ.ಮೂ. ಬಸ್ರೂರು ಪಾಂಡುರಂಗ ಆಚಾರ್ಯ ಉಡುಪಿ, ಡಾ. ಎಸ್. ಎನ್. ಪಡಿಯಾರ್ ಕುಂದಾಪುರ, ಎಚ್. ಗಣೇಶ ಕಾಮತ್ ಗಂಗೊಳ್ಳಿ, ದಕ್ಕೇರಬಾಳು ಮಾಧವ ಕಾಮತ್ ಸಿದ್ದಾಪುರ, ಆಟಕೆರೆ ಲಕ್ಷ್ಮಣ ಗೋವಿಂದ್ರಾಯ ಪೈ ಕೋಟೇಶ್ವರ, ಜಿ. ಪದ್ಮನಾಭ ಕಿಣಿ ಗಾವಳಿ, ಶ್ರೀಮತಿ ಚಂದ್ರಮತಿ ಸದಾಶಿವ ನಾಯಕ್ ಚೇಂಪಿ ಅವರನ್ನು ಸನ್ಮಾನಿಸಿ ಗೌರವಿಸಲಾಯಿತು. ವೇ.ಮೂ.ದಾಮೋದರ ಆಚಾರ್ಯ ಬಸ್ರೂರು ಇವರಿಗೆ ಮರಣೋತ್ತರ ಗೌರವ ನೀಡಲಾಯಿತು. ಶಿಕ್ಷಣ ಕ್ಷೇತ್ರದಲ್ಲಿ ಉತ್ತಮ ಸಾಧನೆ ಮಾಡಿದ ವಿದ್ಯಾರ್ಥಿಗಳಿಗೆ ಪ್ರತಿಭಾ ಪುರಸ್ಕಾರ ನೀಡಲಾಯಿತು.
ಕೆ. ರಾಧಾಕೃಷ್ಣ ಶೆಣೈ ಸ್ವಾಗತಿಸಿದರು. ಗಣೇಶ ನಾಯಕ ಶಿರಿಯಾರ ಕಾರ್ಯಕ್ರಮ ನಿರೂಪಿಸಿದರು