ಕೋಲಾರ,ಆ.12: ಕೋಲಾರ ಮತ್ತು ವೇಮಗಲ್ ಯೋಜನಾ ಕಛೇರಿ ವ್ಯಾಪ್ತಿಯ ಒಟ್ಟು 135 ವೃತಿಪರ ಕೋರ್ಸ್ ಮಾಡುತ್ತಿರುವ ವಿದ್ಯಾರ್ಥಿಗಳಿಗೆ 2023-24ನೇ ಸಾಲಿನಲ್ಲಿ ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ದಿ ಯೋಜನೆಯ ವತಿಯಿಂದ ಮಂಜೂರಾದ ಸುಜ್ಞಾನನಿಧಿ ಶಿಷ್ಯವೇತನ ಮಂಜೂರಾತಿ ಪತ್ರವನ್ನು ವಿತರಣಾ ಕಾರ್ಯಕ್ರಮವನ್ನು ತಾಲ್ಲೂಕಿನ ಸ್ಕೌಡ್ಸ್ ಮತ್ತು ಗೈಡ್ಸ್ ಭವನದಲ್ಲಿ ಹಮ್ಮಿಕೊಳ್ಳಲಾಗಿತ್ತು.
ಕೋಲಾರ ಜಿಲ್ಲಾ ಕಾರ್ಯನಿರತ ಪತ್ರಕರ್ತರ ಸಂಘದ ಅಧ್ಯಕ್ಷ ಬಿ.ವಿ.ಗೋಪಿನಾಥ್ ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿ, ಧರ್ಮಸ್ಥಳದ ಪೂಜ್ಯರ ಮಾರ್ಗದರ್ಶನದಲ್ಲಿ ಇಡೀ ರಾಜ್ಯದಾದ್ಯಂತ ನೂರಾರು ಸಮಾಜಮುಖಿ ಕಾರ್ಯಕ್ರಮಗಳು ನಡೆಯುತ್ತಿದ್ದು, ಇಂತಹ ಕಾರ್ಯಕ್ರಮದಲ್ಲಿ ಭಾಗವಹಿಸುವುದು ಆತ್ಮತೃಪ್ತಿಯನ್ನು ಕೊಡುತ್ತದೆ. ಅವರು ಮಾಡುವ ಪ್ರತಿಯೊಂದು ಕಾರ್ಯಕ್ರಮಗಳು ಬಡ ದುರ್ಬಲ ವರ್ಗದವರ ಏಳಿಗೆಗಾಗಿ ಇವರು ಮಾಡುವ ಕಾರ್ಯಕ್ರಮಗಳಿಗೂ ಮುಂದಿನ ದಿನಗಳಲ್ಲಿ ಜಿಲ್ಲೆಯಲ್ಲಿರುವ ನಮ್ಮಂತವರೆಲ್ಲರೂ ಕೂಡ ಸಂಪೂರ್ಣ ಸಹಕಾರ ನೀಡುವುದಾಗಿ ತಿಳಿಸಿದರು.
ಕೋಲಾರ ಜಿಲ್ಲಾ ನಿರ್ದೇಶಕ ಪದ್ಮಯ್ಯ ಸಿ.ಎಚ್ ಮಾತನಾಡಿ, ಧರ್ಮಸ್ಥಳ ಸಂಸ್ಥೆ ಪೂಜ್ಯರ ಮಾರ್ಗದರ್ಶನದಲ್ಲಿ ನೂರಾರು ಸಮಾಜಮುಖಿ ಕಾರ್ಯಕ್ರಮಗಳನ್ನು ಮಾಡುತ್ತಿದ್ದು, ಬಹಳ ಮುಖ್ಯವಾಗಿ ಮನುಷ್ಯನಿಗೆ ಬೇಕಾಗಿದ್ದು, ಶಿಕ್ಷಣ ಮತ್ತು ಆರೋಗ್ಯ ಶಿಕ್ಷಣಕ್ಕೆ ಪೂರಕವಾಗಿ ಬಡ ದುರ್ಬಲ ವರ್ಗದ ಪ್ರತಿಭಾವಂತ ಮಕ್ಕಳು ತಮ್ಮ ಬಡತನದಿಂದ ಉನ್ನತ ಶಿಕ್ಷಣದಿಂದ ವಂಚಿತರಾಗಬಾರದು ಎನ್ನುವ ದೃಷ್ಠಿಯಲ್ಲಿ ಪೂಜ್ಯರು ವೃತ್ತಿಶಿಕ್ಷಣ ಮಾಡುತ್ತಿರುವ ಒಳ್ಳೆಯ ಅಂಕಗಳನ್ನು ಪಡೆದಿರುವ ವಿದ್ಯಾರ್ಥಿಗಳನ್ನು ಗುರುತಿಸಿ ಶಿಷ್ಯವೇತನವನ್ನು ನೀಡುತ್ತಿದ್ದು, ಇದು ಗ್ರಾಮೀಣ ವಿದ್ಯಾರ್ಥಿಗಳಿಗೆ ಅತ್ಯಂತ ಪ್ರಯೋಜನಕಾರಿಯಾಗಿದೆ. ಈ ವರ್ಷ ಕೋಲಾರ ತಾಲ್ಲೂಕಿನಲ್ಲಿ ಶ್ರೀ ಕ್ಷೇತ್ರ ಧರ್ಮಸ್ಥಳ ಸಂಸ್ಥೆಯಿಂದ ಕೋಲಾರ ಮತ್ತು ವೇಮಗಲ್ ವ್ಯಾಪ್ತಿಯಲ್ಲಿ ಒಟ್ಟು 135 ವಿದ್ಯಾರ್ಥಿಗಳಿಗೆ ಮಾಸಿಕ ಮೊತ್ತ ರೂ.103600/- ಮೊತ್ತ ಶಿಷ್ಯವೇತನ ಮಂಜೂರಾಗಿದ್ದು, ಈ ವಿದ್ಯಾರ್ಥಿಗಳ ಕೋರ್ಸ್ ಮುಗಿಯುವರೆಗೂ ಕೂಡ ಪ್ರತೀ ತಿಂಗಳು ಮೊತ್ತ ಬರುತ್ತದೆ. ಇಡೀ ರಾಜ್ಯದಲ್ಲಿ ಇದುವರೆಗೆ ಪೂಜ್ಯರು 97000 ಮಿಕ್ಕಿದ ವಿದ್ಯಾರ್ಥಿಗಳಿಗೆ ಸುಮಾರು 114 ಕೋಟಿ ಮೊತ್ತ ಶಿಷ್ಯವೇತನ ನೀಡಿದ್ದಾರೆ ಎಂದರು.
ಕೋಲಾರ ಜಿಲ್ಲೆಯ ಅಂಜುಮನ್ ಇಸ್ಲಾಮಿಯಾ ಅಧ್ಯಕ್ಷ ಜಮೀರ್ ಅಹಮದ್, ಧರ್ಮಸ್ಥಳ ಸಂಸ್ಥೆ ಸದಸ್ಯರಿಗೆ ಕೇವಲ ಆರ್ಥಿಕ ಸಹಕಾರ ನೀಡುವುದು ಮಾತ್ರವಲ್ಲದೇ ವ್ಯವಹಾರ, ಶಿಸ್ತು, ಸಹಕಾರ, ನಿರ್ವಹಣೆಗೆ ಹಾಗೂ ಸಂಸ್ಕಾರಯುತ ಜೀವನ ಮೌಲ್ಯಗಳನ್ನು ಕಲಿಸಿಕೊಡುತ್ತಿದ್ದು, ಸಂಸ್ಥೆಯ ಹತ್ತು ಹಲವಾರು ಕಾರ್ಯಕ್ರಮಗಳು ಸಮಾಜದ ದುರ್ಬಲ ವರ್ಗದವರಿಗೆ ಆಶಾಕಿರಣವಾಗಿದೆ ಎಂದರು.
ಕೋಲಾರ ಶಾಂತಿ ಸೌಹಾರ್ಧ ಸಮಿತಿ ಅಧ್ಯಕ್ಷ ಪಂಡಿತ್ ಮುನಿವೆಂಕಟಪ್ಪ ಮಾತನಾಡುತ್ತಾ, ಯಾವುದೇ ಒಂದು ಸಮುದಾಯಕ್ಕೆ ಸೀಮಿತವಾಗಿರದೆ ಎಲ್ಲಾ ಧರ್ಮದವರಿಗೂ ಕೂಡ ತನ್ನದೇ ಆದಂತ ಕಾರ್ಯಕ್ರಮಗಳನ್ನು ಸೌಲಭ್ಯಗಳನ್ನು ವಿಸ್ತರಿಸಿರುವುದು ಶ್ಲಾಘನೀಯ ಕೋಲಾರ ಜಿಲ್ಲೆಗೆ ಧರ್ಮಸ್ಥಳ ಗ್ರಾಮಾಭಿವೃದ್ದಿ ಯೋಜನೆ 10 ವರ್ಷಗಳಿಂದ ಸೇವೆ ಸಲ್ಲಿಸುತ್ತಿದ್ದು, ತಳ ಮಟ್ಟದ ಎಲ್ಲಾ ವರ್ಗದ ಜನಗಳಿಗೆ ಸೌಲಭ್ಯ ವಂಚಿತರಿಗೆ ಅವರ ಏಳಿಗೆಗೆ ಶ್ರಮಿಸುತ್ತಿದ್ದು, ಕೋಲಾರ ಜಿಲ್ಲೆಗೆ ವರದಾನವಾಗಿ ಮೂಡಿ ಬಂದಿದೆ ಎಂದು ತಿಳಿಸಿದರು.
ಜನಜಾಗೃತಿ ವೇದಿಕೆ ಉಪಾಧ್ಯಕ್ಷ ವೆಂಕಟೇಶ್ ಟಮಕ, ಜನಜಾಗೃತಿ ವೇದಿಕೆ ಸದಸ್ಯ ನಂಜುಂಡಯ್ಯ ಶೆಟ್ಟಿ, ಕೋಲಾರ ತಾಲ್ಲೂಕು ಯೋಜನಾಧಿಕಾರಿ ಸಿದ್ದಗಂಗಯ್ಯ ಟಿ.ಎಸ್ ಮತ್ತು ವೇಮಗಲ್ ವ್ಯಾಪ್ತಿಯ ಯೋಜನಾಧಿಕಾರಿ ಸಂತೋಷ್ ತಾಲೂಕಿನ ಸಿಬ್ಬಂದಿಗಳು ಹಾಗೂ ವಿದ್ಯಾರ್ಥಿಗಳು ಮತ್ತು ಪೆÇೀಷಕರು ಉಪಸಿತರಿದ್ದರು.