ಶ್ರೀನಿವಾಸಪುರ; ನ.22: ಕಂದಾಯ ಅಧಿಕಾರಿಗಳು ಅರಣ್ಯ ಅಧಿಕಾರಿಗಳಿಗೆ ಸಹಕರಿಸಿ ಸ್ಥಗಿತವಾಗಿರುವ ಅರಣ್ಯ ಭೂ ಒತ್ತುವರಿ ತೆರವು ಮುಂದುವರೆಸುವ ಜೊತೆಗೆ ಕೆರೆ, ರಾಜಕಾಲುವೆ ಒತ್ತುವರಿ ತೆರವುಗೊಳಿಸಲು ವಿಶೇಷ ತಂಡ ರಚಿಸುವಂತೆ ರೈತಸಂಘದಿಂದ ನೂತನ ತಾಲೂಕು ದಂಡಾಧಿಕಾರಿಗಳಾದ ಸುಧೀಂದ್ರ ಅವರಿಗೆ ಗಿಡ ನೀಡುವ ಮೂಲಕ ಸ್ವಾಗತಿಸಿ, ಮನವಿ ನೀಡಿ ಒತ್ತಾಯಿಸಲಾಯಿತು.
ಅರಣ್ಯ ಭೂಮಿ ಕೆರೆ ರಾಜಕಾಲುವೆಗೆ ನಕಲಿ ದಾಖಲೆಗಳನ್ನು ಸೃಷ್ಠಿ ಮಾಡಿ ಕಂದಾಯ ಹಾಗೂ ಸರ್ವೇ ಅಧಿಕಾರಿಗಳ ವಿರುದ್ಧ ಕ್ರಿಮಿನಲ್ ಮೊಕದ್ದಮೆ ದಾಖಲು ಮಾಡಬೇಕೆಂದು ರೈತಸಂಘದ ರಾಜ್ಯ ಸಂಚಾಲಕ ಬಂಗವಾದಿ ನಾಗರಾಜಗೌಡ ತಹಸೀಲ್ದಾರ್ ಅವರನ್ನು ಒತ್ತಾಯ ಮಾಡಿದರು.
3700 ಎಕರೆ ಅರಣ್ಯ ಭೂಮಿಗೆ ಲಕ್ಷಲಕ್ಷ ಲಂಚ ಪಡೆದು ಕಂದಾಯ ಹಾಗೂ ಸರ್ವೇ ಅಧಿಕಾರಿಗಳು ನಕಲಿ ದಾಖಲೆಗಳನ್ನು ಸೃಷ್ಠಿ ಮಾಡಿ ಅರಣ್ಯಭೂಮಿಯನ್ನು ಬಲಾಢ್ಯರಿಗೆ ಅಕ್ರಮ ದರಖಾಸ್ತು ಕಮಿಟಿ ಮೂಲಕ ನಕಲಿ ಸಾಗುವಳಿಯನ್ನು ನೀಡುವ ಮುಖಾಂತರ ಸರ್ಕಾರಿ ಅರಣ್ಯ ಭೂಮಿಯನ್ನು ಕಬಳಿಸಿ ರಾಷ್ಟ್ರೀಕೃತ ಬ್ಯಾಂಕ್ಗಳಲ್ಲಿ ಸಾವಿರಾರು ಕೋಟಿ ಸಾಲವನ್ನು ಪಡೆದಿರುವ ಶ್ರೀಮಂತ ಭೂಗಳ್ಳರಿಗೆ ಸಿಂಹಸ್ವಪ್ನವಾಗಿರುವ ಅರಣ್ಯ ಅಧಿಕಾರಿಗಳಿಗೆ ಕಂದಾಯ ಅಧಿಕಾರಿಗಳು ಸಹಕರಿಸಿ ಉಳಿಕೆಯಿರುವ ಅರಣ್ಯ ಭೂಮಿ ಒತ್ತುವರಿಯನ್ನು ತೆರವುಗೊಳಿಸಬೇಕೆಂದು ಮನವಿ ಮಾಡಿದರು.
ಕಳೆದ ಲೋಕಸಭೆ ಚುನಾವಣೆಯಲ್ಲಿ ನಿಯತ್ತಾಗಿ ಕಾಂಗ್ರೆಸ್ ನಲ್ಲಿದ್ದು, ಬಿಜೆಪಿ ಸಂಸದರಾದ ಎಸ್.ಮುನಿಸ್ವಾಮಿ ಅವರಿಗೆ ಬಹಿರಂಗ ಪ್ರಚಾರ ಮಾಡುವ ಮುಖಾಂತರ ತನ್ನ ನಿಯತ್ತು ತೋರಿಸಿರುವ ಮಾಜಿ ಸ್ಪೀಕರ್ ರಮೇಶ್ ಕುಮಾರ್ ಅವರ 200 ಎಕರೆ ಅರಣ್ಯ ಭೂಮಿ ಒತ್ತುವರಿ ಉಳಿಸಲು ಸಂಸದರು ಅರಣ್ಯ ಅಧಿಕಾರಿಗಳ ಮೇಲೆ ತಮ್ಮ ಪ್ರತಾಪವನ್ನು ತೋರಿಸುತ್ತಿದ್ದಾರೆಂದು ಸಂಸದರ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದರು.
ಜವಾಬ್ದಾರಿ ಸ್ಥಾನದಲ್ಲಿದ್ದು ಅರಣ್ಯ ಭೂಮಿಯನ್ನು ಉಳಿಸಬೇಕಾದಂತಹ ಸಂಸದರೇ ಶ್ರೀಮಂತ ಅರಣ್ಯ ಭೂಗಳ್ಳರ ಪರ ನಿಲ್ಲುತ್ತಿರುವುದು ಯಾವ ನ್ಯಾಯ. ಒಂದು ಕಡೆ ಅರಣ್ಯ ಒತ್ತುವರಿ ಮತ್ತೊಂದು ಕಡೆ ಕೆರೆ ರಾಜಕಾಲುವೆಗಳನ್ನು ಒತ್ತುವರಿ ಮಾಡಿಕೊಳ್ಳುತ್ತಿದ್ದರೆ ಮುಂದಿನ ದಿನಗಳಲ್ಲಿ ಜಿಲ್ಲೆಯ ಪರಿಸ್ಥಿತಿ ಬಗ್ಗೆ ಸಂಸದರು ಏಕೆ ಯೋಚನೆ ಮಾಡುತ್ತಿಲ್ಲವೆಂದು ಪ್ರಶ್ನೆ ಮಾಡಿದರು.
ತಾಲೂಕು ಅಧ್ಯಕ್ಷ ತೆರ್ನಹಳ್ಳಿ ಆಂಜಿನಪ್ಪ ಮಾತನಾಡಿ, ಮುಂಗಾರುಮಳೆ ಆರ್ಭಟ ಶುರುವಾದರೆ ತಾಲೂಕಿನಾದ್ಯಂತ ಮಳೆ ನೀರು ಸರಾಗವಾಗಿ ಕೆರೆಗಳಿಗೆ ಹರಿಯಲು ರಾಜಕಾಲುವೆಗಳಿಲ್ಲದೆ ನೇರವಾಗಿ ಬಡವರ ಮನೆಗಳು ಹಾಗೂ ರೈತರ ಹೊಲಗದ್ದೆಗಳಿಗೆ ನುಗ್ಗಿ ಕೆರೆ ಕುಂಟೆಗಳಾಗಿ ಮಾರ್ಪಟ್ಟು 10 ನಿಮಿಷಗಳಲ್ಲಿ ಬಡವರ ಬದುಕನ್ನು ಕಸಿಯುತ್ತಿದ್ದರೂ ತಾಲೂಕು ಆಡಳಿತ ಒತ್ತುವರಿಯಾಗಿರುವ ಕೆರೆ, ರಾಜಕಾಲುವೆಗಳ ತೆರವು ಕಾರ್ಯಾಚರಣೆ ಸಮಸ್ಯೆಯಾದಾಗ ಮಾತ್ರ ಜ್ಞಾಪಕಕ್ಕೆ ಬಂದು ಮತ್ತೆ ಗಜಿನಿ ಸಿನಿಮಾದ ನಟನೆಯಂತೆ ಅಧಿಕಾರಿಗಳು ಮರೆಯುತ್ತಾರೆಂದು ವ್ಯಂಗ್ಯವಾಡಿದರು.
ಸ್ಥಗಿತಗೊಂಡಿರುವ ಅರಣ್ಯ ಭೂಮಿ ಒತ್ತುವರಿ ತೆರವುಗೊಳಿಸಲು ಅರಣ್ಯ ಅಧಿಕಾರಿಗಳಿಗೆ ಕಂದಾಯ ಅಧಿಕಾರಿಗಳು ಸಹಕರಿಸಿ ಒತ್ತುವರಿಯಾಗಿರುವ ಕೆರೆ, ರಾಜಕಾಲುವೆಗಳನ್ನು ಮುಲಾಜಿಲ್ಲದೆ ತೆರವುಗೊಳಿಸಿ, ಒತ್ತುವರಿದಾರರ ವಿರುದ್ಧ ಕ್ರಿಮಿನಲ್ ಮೊಕದ್ದಮೆ ದಾಖಲು ಮಾಡಬೇಕೆಂದು ಒತ್ತಾಯ ಮಾಡಿದರು.
ಮನವಿ ಸ್ವೀಕರಿಸಿ ಮಾತನಾಡಿದ ನೂತನ ತಹಸೀಲ್ದಾರ್ ಸುಧೀಂದ್ರ ಅವರು, ಮೊದಲು ಹದಗೆಟ್ಟಿರುವ ತಾಲೂಕು ಆಡಳಿತವನ್ನು ಸರಿಪಡಿಸಿ ಜನಸಾಮಾನ್ಯರ ಸೇವೆ ಮೊದಲ ಆದ್ಯತೆಯಾಗಬೇಕು. ಅರಣ್ಯ ಭೂಮಿ ಒತ್ತುವರಿ ಬಗ್ಗೆ ಸಂಬಂಧಪಟ್ಟ ಅಧಿಕಾರಿಗಳ ಜೊತೆ ಚರ್ಚೆ ಮಾಡಿ ತೆರವುಗೊಳಿಸುವ ಭರವಸೆಯನ್ನು ನೀಡಿದರು.
ಮನವಿ ನೀಡುವಾಗ ರೈತಸಂಘದ ರಾಜ್ಯ ಉಪಾಧ್ಯಕ್ಷ ಕೆ.ನಾರಾಯಣಗೌಡ, ಆಲವಾಟಿ ಶಿವು, ದೇವಂಡಹಳ್ಳಿ ರಾಜೇಂದ್ರ, ಸಹದೇವಣ್ಣ, ಶಿವಾರೆಡ್ಡಿ, ಗಿರೀಶ್ ಮುಂತಾದವರಿದ್ದರು.