ಕೋಲಾರ: ಕಂಪ್ಯೂಟರ್ ಹಾಗೂ ಟೈಪಿಂಗ್ ಕಲಿಕೆ ಹಿಂದೆ ಆಯ್ಕೆಯಾಗಿತ್ತು ಆದರೆ ಈಗ ಅನಿವಾರ್ಯವಾಗಿದೆ ಮತ್ತು ಭವಿಷ್ಯದಲ್ಲಿ ಬದುಕು ಕಟ್ಟಿಕೊಳ್ಳಲು ಅತ್ಯಗತ್ಯವೂ ಆಗಿದೆ ಎಂದು ಜಿಲ್ಲಾ ಕಾರ್ಯನಿರತ ಪತ್ರಕರ್ತರ ಸಂಘದ ರಾಜ್ಯ ಕಾರ್ಯಕಾರಿ ಸದಸ್ಯ ಕೆ.ಎಸ್.ಗಣೇಶ್ ವಿದ್ಯಾರ್ಥಿಗಳಿಗೆ ಕಿವಿಮಾತು ಹೇಳಿದರು.
ನಗರದ ವೆಂಕಟೇಶ್ವರ ವಾಣಿಜ್ಯ ಮತ್ತು ಕಂಪ್ಯೂಟರ್ ವಿದ್ಯಾಸಂಸ್ಥೆ ಆಶ್ರಯದಲ್ಲಿ ಗುರುವಾರ 2023ರ ಹೊಸ ವರ್ಷದ ಕ್ಯಾಲೆಂಡರ್ ಬಿಡುಗಡೆ ಮಾಡಿ ಅವರು ಮಾತನಾಡುತ್ತಿದ್ದರು.
ಕಲಿಕೆಗೆ ಅವಕಾಶ ಇರುವಾಗ ಸಮಯವನ್ನು ಸದ್ಬಳಕೆ ಮಾಡಿಕೊಳ್ಳಬೇಕು, ಕಾಲ ವ್ಯರ್ಥ ಮಾಡಬಾರದು ಎಂದ ಅವರು, ಸಾಧನೆಗೆ ಪ್ರತಿಕ್ಷಣವೂ ಪ್ರಾಮುಖ್ಯತೆಯನ್ನು ಪಡೆದಿದ್ದು, ಸಿಕ್ಕಿರುವ ಅವಕಾಶ ಬಳಸಿಕೊಳ್ಳಿ, ಶ್ರದ್ಧೆಯಿಂದ ಕಲಿತು ನಿಮ್ಮ ಜೀವನ ರೂಪಿಸಿಕೊಳ್ಳಿ ಎಂದರು.
ಹೊಸ ವರ್ಷದಲ್ಲಿ ಹೊಸ ಸಂಕಲ್ಪ ಮಾಡಿ, ಹಿಂದಿನ ವರ್ಷದಲ್ಲಿ ಮಾಡಿದ ತಪ್ಪುಗಳು ಮರುಕಳಿಸದಂತೆ ಸರಿದಾರಿಯಲ್ಲಿ ನಡೆಯುವ ಆಲೋಚನೆ ಮಾಡಿ, ಸಮಾಜಮುಖಿಯಾಗಿ ಕೆಲಸ ಮಾಡುವ ದೃಢ ನಿರ್ಧಾರದೊಂದಿಗೆ ಹೆಜ್ಜೆ ಇಡಿ ಎಂದು ಕರೆ ನೀಡಿದರು.
ಕಂಪ್ಯೂಟರ್ ಶಿಕ್ಷಣ ಉಳಿಸಲು ಹೋರಾಟ
ಹಿಂದೆ ವಾಣಿಜ್ಯ ವಿದ್ಯಾಸಂಸ್ಥೆಗಳನ್ನು ಮುಚ್ಚುವ ಯತ್ನ ನಡೆದಾಗ ವೆಂಕಟೇಶ್ವರ ವಾಣಿಜ್ಯ ವಿದ್ಯಾಸಂಸ್ಥೆ ಅಧ್ಯಕ್ಷ ಸುಧಾಕರ್ ರಾಜ್ಯಮಟ್ಟದಲ್ಲಿ ಹೋರಾಟ ರೂಪಿಸಿ ಯಶಸ್ಸು ಸಾಧಿಸಿದರು. ಅವರ ಪ್ರಯತ್ನದಿಂದ ಇಂದು ಅಂಗೀಕೃತ ಪರೀಕ್ಷಾ ಮಂಡಳಿ ಆಶ್ರಯದಲ್ಲಿ ಕಂಪ್ಯೂಟರ್ ಶಿಕ್ಷಣ ವಿದ್ಯಾರ್ಥಿಗಳಿಗೆ ಸಿಗುವಂತಾಗಿದೆ. ಸುಮಾರು 30 ವರ್ಷಗಳಿಗೂ ಹೆಚ್ಚು ಕಾಲದಿಂದ ಅವರು ಈ ಸಂಸ್ಥೆಯನ್ನು ನಡೆಸಿಕೊಂಡು ಬಂದಿದ್ದು, ಈ ಸಂಸ್ಥೆಯಲ್ಲಿ ಕಲಿಕೆ ಮುಗಿಸಿದ ಸಾವಿರಾರು ಮಂದಿ ಜೀವನ ರೂಪಿಸಿಕೊಂಡಿದ್ದಾರೆ ಎಂದು ಅಭಿನಂದಿಸಿದರು.
ಸಂಸ್ಥೆಯ ಅಧ್ಯಕ್ಷ ಎಸ್.ವಿ.ಸುಧಾಕರ್ ಮಾತನಾಡಿ, ಸರ್ಕಾರದ ವಿವಿಧ ಇಲಾಖೆಗಳು ಮಾತ್ರವಲ್ಲ ಖಾಸಗಿ ಕಂಪನಿಗಳಲ್ಲೂ ಇಂದು ಕಂಪ್ಯೂಟರ್ ಜ್ಞಾನವಿಲ್ಲದೇ ಕೆಲಸ ಸಿಗುವುದಿಲ್ಲ, ಇದರ ಮಹತ್ವವನ್ನು ಅರಿತು ನಮ್ಮ ಸಂಸ್ಥೆ ಸಾವಿರಾರು ವಿದ್ಯಾರ್ಥಿಗಳಿಗೆ ಗಣಕ ಶಿಕ್ಷಣ ನೀಡುತ್ತಿದೆ, ಇದರ ಪ್ರಯೋಜನವನ್ನು ಅನೇಕರು ಪಡೆದುಕೊಂಡಿದ್ದಾರೆ ಎಂದರು.
ಹೊಸ ವರ್ಷದಲ್ಲಿ ಮತ್ತಷ್ಟು ಸುಸಜ್ಜಿತ ಸೌಲಭ್ಯಗಳೊಂದಿಗೆ ಗಣಕ ಶಿಕ್ಷಣ ನೀಡುವ ಆಲೋಚನೆ ಇದ್ದು, ಒಟ್ಟಾರೆ ನಮ್ಮ ಜಿಲ್ಲೆಯ ವಿದ್ಯಾರ್ಥಿಗಳ ಬದುಕು ಹಸನಾಗಿಸುವ ಸಣ್ಣ ಪ್ರಯತ್ನ ತಮ್ಮ ಸಂಸ್ಥೆಯದು ಎಂದರು.
ಕಾರ್ಯಕ್ರಮದಲ್ಲಿ ಸಂಸ್ಥೆ ಕಾರ್ಯದರ್ಶಿ ರತ್ನ ಸುಧಾಕರ್, ಲಕ್ಷ್ಮೀನಾರಾಯಣ, ತರಬೇತುದಾರ ಶಿಕ್ಷಕರಾದ ಲಾವಣ್ಯ, ವಿಜಯ, ಮಾಧುರಿ, ಸವಿತಾ, ಅಶ್ವಿನಿ, ಸುಖೇಶ್, ಬಿಂದು, ಸಿಂಧು, ಸುಕನ್ಯಾ ಮತ್ತಿತರರಿದ್ದರು.