ವರದಿ : ಶಬ್ಬೀರ್ ಅಹಮ್ಮದ್ ಶ್ರೀನಿವಾಸಪುರ
ಶ್ರೀನಿವಾಸಪುರ: ವಿದ್ಯಾರ್ಥಿಗಳು ಸರ್ಕಾರ ಹಾಗೂ ದಾನಿಗಳು ನೀಡುವ ಸೌಲಭ್ಯ ಪಡೆದುಕೊಂಡು ಶೈಕ್ಷಣಿಕ ಪ್ರಗತಿ ಸಾಧಿಸಬೇಕು ಎಂದು ಕ್ಷೇತ್ರ ಶಿಕ್ಷಣಾಧಿಕಾರಿ ವಿ.ಉಮಾದೇವಿ ಹೇಳಿದರು.
ತಾಲ್ಲೂಕಿನ ಗಾಂಡ್ಲಹಳ್ಳಿ ಗ್ರಾಮದ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಸ್ಥಳೀಯ ಚೌಡಮ್ಮ ಹಿರಣ್ಯಗೌಡ ಟ್ರಸ್ಟ್ ವತಿಯಿಂದ ಏರ್ಪಡಿಸಿದ್ದ ಸಮಾರಂಭದಲ್ಲಿ, ಗಾಂಡ್ಲಹಳ್ಳಿ ಹಾಗೂ ಕುಪ್ಪಳ್ಳಿ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಗಳ ೯೦ ಮಕ್ಕಳಿಗೆ ಟ್ರಾö್ಯಕ್ ಸೂಟ್ ವಿತರಿಸಿ ಮಾತನಾಡಿ, ಹಿರಣ್ಯಗೌಡರು ಮಾದರಿ ಶಿಕ್ಷಕರಾಗಿದ್ದರು. ಅವರ ಮಕ್ಕಳು ಐಎಎಸ್, ಐಪಿಎಸ್, ಐಎಫ್ಎಸ್ ಮಾಡಿದ್ದರು. ಆ ಮೂಲಕ ಅವರ ಕುಟುಂಬ ಜಿಲ್ಲೆಯಲ್ಲಿಯೇ ಹೆಸರುವಾಸಿಯಾಗಿತ್ತು. ಅವರ ಹೆಸರಲ್ಲಿ ವಿದ್ಯಾರ್ಥಿಗಳಿಗೆ ಕೊಡುಗೆ ನೀಡುತ್ತಿರುವುದು ಶ್ಲಾಘನೀಯ ಎಂದು ಹೇಳಿದರು.
ಡಾ.ಶಾರದ ವೇಣುಪ್ರಸಾದ್ ಮಾತನಾಡಿ, ಚೌಡಮ್ಮ ಹಿರಣ್ಯಗೌಡ ಟ್ರಸ್ಟ್ ವತಿಯಿಂದ ಸಮಾಜ ಸೇವಾ ಕಾರ್ಯ ಕೈಗೊಳ್ಳಲಾಗಿದೆ. ಮುಖ್ಯವಾಗಿ ಗ್ರಾಮೀಣ ವಿದ್ಯಾರ್ಥಿಗಳ ಶೈಕ್ಷಣಿಕ ಪ್ರಗತಿಗೆ ಪೂರಕವಾದ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳಲಾಗುತ್ತಿದೆ. ಮಕ್ಕಳ ವಿದ್ಯಾಭ್ಯಾಸ ಹಾಗೂ ಕ್ರೀಡಾಭ್ಯಾಸಕ್ಕೆ ಅಗತ್ಯವಾದ ವಸ್ತುಗಳನ್ನು ಕೊಡುಗೆಯಾಗಿ ನೀಡಲಾಗುತ್ತಿದೆ ಎಂದು ಹೇಳಿದರು.
ಟ್ರಸ್ಟ್ ಸದಸ್ಯರಾದ ಕೆ.ಎಚ್.ಶ್ರೀನಿವಾಸ್, ಕೆ.ಎಚ್.ಗೋವಿಂದ್, ಕೆ.ಎಚ್.ಸಂಪತ್ ಕುಮಾರ್, ಎಚ್.ಎನ್.ದರ್ಶನ್ ಕುಮಾರ್, ಸಿಆರ್ ಪಿ.ವೇಣುಗೋಪಾಲ್, ರಾಮಚಂದ್ರಪ್ಪ ಇದ್ದರು.