ಶ್ರೀನಿವಾಸಪುರ: ವಿದ್ಯಾರ್ಥಿಗಳು ಸೌರವ್ಯೂಹದ ವಿಶೇಷ ಅಧ್ಯಯನ ಮಾಡಿ ಹೊಸ ಬೆಳಕು ಚೆಲ್ಲಬೇಕು ಎಂದು ಇಸ್ರೋ ವಿಜ್ಞಾನಿ ಡಾ. ರಾಮಚಂದ್ರ ಹೇಳಿದರು.
ಪಟ್ಟಣದ ಭೈರವೇಶ್ವರ ವಿದ್ಯಾ ನಿಕೇತನದ ಆವರಣದಲ್ಲಿ ಬಿಜಿಎಸ್ ಸಮೂಹ ಶಿಕ್ಷಣ ಸಂಸ್ಥೆಗಳ ವತಿಯಿಂದ ಶುಕ್ರವಾರ ಏರ್ಪಡಿಸಿದ್ದ ಸಾಂಸ್ಕøತಿಕ ಹಾಗೂ ನೈತಿಕ ದಿನಾಚರಣೆ ಸಮಾರಂಭ ಉದ್ಘಾಟಿಸಿ ಮಾತನಾಡಿದ ಅವರು, ಬಾಹ್ಯಾಕಾಶ ಯುವ ವಿಜ್ಞಾನಿಗಳ ಆದ್ಯತಾ ಕ್ಷೇತ್ರವಾಗಿದೆ ಎಂದು ಹೇಳಿದರು.
ಭಾರತ ಕೈಗೊಂಡ ಚಂದ್ರಯಾನ-3 ವಿಶ್ವ ಮಟ್ಟದಲ್ಲಿ ದೇಶದ ಕೀರ್ತಿ ಪತಾಕೆ ಹಾರಿಸಿದೆ. ಚಂದ್ರಯಾನದ ಯಶಸ್ಸು ಇಸ್ರೋ ವಿಜ್ಞಾನಿಗಳ ಸಾಂಘಿಕ ಪ್ರಯತ್ನದ ಫಲ. ಯಶಸ್ಸಿನ ಗೌರವ ದೇಶದ ಎಲ್ಲ ನಾಗರಿಕರಿಗೆ ಸಲ್ಲುತ್ತದೆ. ಸೋಲು ಗೆಲುವಿನ ಮೆಟ್ಟಿಲು ಎಂಬುದಕ್ಕೆ ಚಂದ್ರಯಾನ-3 ಉತ್ತಮ ನಿದರ್ಶನವಾಗಿದೆ. ಯಾವುದೇ ರೀತಿಯ ಸೋಲಿಗೆ ಎದೆಗುಂದದೆ ಮುಂದುವರಿದಲ್ಲಿ ಗೆಲುವು ನಮ್ಮದಾಗುತ್ತದೆ ಎಂಬುದನ್ನು ಮರೆಯಬಾರದು ಎಂದು ಅಭಿಪ್ರಾಯಪಟ್ಟರು.
ಆದಿಚುಂಚನಗಿರಿ ಶಿಕ್ಷಣ ಟ್ರಸ್ಟ್‍ನ ಮುಖ್ಯ ಆಡಳಿತಾಧಿಕಾರಿ ಡಾ. ಎನ್.ಶಿವರಾಮರೆಡ್ಡಿ ಮಾತನಾಡಿ, ಶಿಕ್ಷಕ ಸಮುದಾಯ ಯೋಜಿತ ಶಿಕ್ಷಣ ಕಾರ್ಯಕ್ರಮ ರೂಪಿಸಿ ಮಕ್ಕಳನ್ನು ತೊಡಗಿಸಬೇಕು. ಮಕ್ಕಳಲ್ಲಿ ರಚನಾತ್ಮಕ ಕನಸುಗಳನ್ನು ಬಿತ್ತಬೇಕು. ಕನಸು ನನಸಾಗಲು ಅಗತ್ಯವಾದ ವಾತಾವರಣ ನಿರ್ಮಿಸಬೇಕು ಎಂದು ಹೇಳಿದರು.
ಬಿಜಿಎಸ್ ಸಮೂಹ ಶಿಕ್ಷಣ ಸಂಸ್ಥೆಗಳ ನಿರ್ದೇಶಕ ಎ.ವೆಂಕಟರೆಡ್ಡಿ ಮಾತನಾಡಿ, ವಿದ್ಯಾರ್ಥಿಗಳು ನೈತಿಕವಾಗಿ ಬೆಳೆಯಬೇಕು. ಮಾನವೀಯ ಮೌಲ್ಯ ಮೈಗೂಡಿಸಿಕೊಳ್ಳಬೇಕು. ಭಾರತೀಯ ಸಾಂಸ್ಕøತಿಕ ಪರಂಪರೆ ಮಸಕಾಗದಂತೆ ನೋಡಿಕೊಳ್ಳಬೇಕು ಎಂದು ಹೇಳಿದರು.
ಒಕ್ಕಲಿಕರ ಸಂಘದ ನಿರ್ದೇಶಕ ಡಾ. ಡಿ.ಕೆ.ರಮೇಶ್, ಬಿಜಿಎಸ್ ಸಮೂಹ ಶಿಕ್ಷಣ ಸಂಸ್ಥೆಗಳ ಕಾರ್ಯದರ್ಶಿ ಎಂ.ಶ್ರೀರಾಮರೆಡ್ಡಿ, ತಾಲ್ಲೂಕು ಒಕ್ಕಲಿಗರ ಸಂಘದ ಅಧ್ಯಕ್ಷ ವೇಣುಗೋಪಾಲರೆಡ್ಡಿ, ಮಾಜಿ ಅಧ್ಯಕ್ಷ ಚಿನ್ನಪ್ಪರೆಡ್ಡಿ, ಪ್ರಗತಿಪರ ರೈತ ಚಂದ್ರಶೇಖರ್, ಪ್ರಾಂಶುಪಾಲ ಗಂಗಾಧರ ಗೌಡ, ಮುಖ್ಯ ಶಿಕ್ಷಕ ವೆಂಕಟರಮಣರೆಡ್ಡಿ ಇದ್ದರು.