ಶ್ರೀನಿವಾಸಪುರ: ವಿದ್ಯಾರ್ಥಿಗಳು ತಮ್ಮ ದಿನ ನಿತ್ಯದ ವ್ಯವಹಾರದಲ್ಲಿ ಕನ್ನಡ ಬಳಕೆಗೆ ಆದ್ಯತೆ ನೀಡಬೇಕು. ಪೋಷಕರು ಮನೆಗಳಲ್ಲಿ ಕನ್ನಡ ಮಾತನಾಡಲು ಅಗತ್ಯವಾದ ಪ್ರೋತ್ಸಾಹ ನೀಡಬೇಕು ಎಂದು ವಿಐಪಿ ಶಾಲಾಧ್ಯಕ್ಷ ಡಾ. ಕೆ.ಎನ್.ವೇಣುಗೋಪಾಲ್ ಹೇಳಿದರು.
ಪಟ್ಟಣದ ಹೊರವಲಯದ ಯಚ್ಚನಹಳ್ಳಿ ಸಮೀಪದ ವಿಷನ್ ಇಂಡಿಯಾ ಪಬ್ಲಿಕ್ ಶಾಲೆಯಲ್ಲಿ ಶನಿವಾರ ಏರ್ಪಡಿಸಿದ್ದ ಕನ್ನಡ ರಾಜ್ಯೋತ್ಸವಕ್ಕೆ ಚಾಲನೆ ನೀಡಿ ಮಾತನಾಡಿದ ಅವರು, ಗಡಿ ಭಾಗದ ಜನರಲ್ಲಿ ಕನ್ನಡ ಪ್ರೇಮಕ್ಕೆ ಕೊರತೆಯಿಲ್ಲ. ಆದರೆ ಕನ್ನಡ ಮಾತನಾಡಲು ಮಡಿವಂತಿಕೆ ತೋರುವುದು ಸರಿಯಲ್ಲ ಎಂದು ಅಭಿಪ್ರಾಯಪಟ್ಟರು.
ಕನ್ನಡ ಕರ್ನಾಟಕದ ಹೆಮ್ಮೆ. ಕನ್ನಡಿಗರ ಹೃದಯ ಸಿಂಹಾಸನದ ಮೇಲೆ ಕನ್ನಡ ರಾರಾಜಿಸಬೇಕು. ಸಮೃದ್ಧ ಸಾಹಿತ್ಯಕ್ಕೆ ಕನ್ನಡ ಭಾಷೆ ಹೆಸರಾಗಿದೆ. ದೇಶದಲ್ಲಿ 8 ಜ್ಞಾನಪೀಠ ಪ್ರಶಸ್ತಿ ಪಡೆಯುವುದರ ಮೂಲಕ, ದೇಶ ಭಾಷೆಗಳಲ್ಲಿ ಮಕುಟ ಮಣಿಯಂತೆ ಕಂಗೊಳಿಸುತ್ತಿದೆ. ಅಂಥ ಪರಂಪರೆಗೆ ಸೇರಿದವರೆಂದು ಹೇಳಿಕೊಳ್ಳಲು ಹೆಮ್ಮೆಪಡಬೇಕು ಎಂದು ಹೇಳಿದರು.
ಈ ಸಂದರ್ಭದಲ್ಲಿ ಶಾಲಾ ವಿದ್ಯಾರ್ಥಿಗಳಿಂದ ನಾಡು ನುಡಿಗೆ ಸಂಬಂಧಿಸಿದ ಸಾಂಸ್ಕøತಿಕ ಕಾರ್ಯಕ್ರಮ ಏರ್ಪಡಿಸಲಾಗಿತ್ತು. ಕನ್ನಡ ಗೀತೆಗಳ ಗಾಯನ, ವೇಷ ಭೂಷಣ ಗಮನ ಸೆಳೆಯಿತು. ಪೋಷಕರಿಗೆ ಕನ್ನಡ ಭಾಷಾ ಜ್ಞಾನ ಕುರಿತು ರಸಪ್ರಶ್ನೆ ಕಾರ್ಯಕ್ರಮ ಏರ್ಪಡಿಸಲಾಗಿತ್ತು.
ವಿಐಪಿ ಶಾಲೆ ಕಾರ್ಯದರ್ಶಿ ಡಾ. ಎಂ.ಎಸ್.ಕವಿತಾ, ಪ್ರಾಂಶುಪಾಲೆ ಮಂಜೀತ್ ಕೌರ್, ಶಿಕ್ಷಕಿಯರಾದ ಶ್ವೇತ, ಸುಮತಿ, ಸಮೀನಾ, ಸಿರೀಶ, ಯಶೋಧ, ಮಜತ್, ಲಿಲ್ಲಿ, ಸುನಿತಾ ಇದ್ದರು.