ಕೋಲಾರ:- ಭಾರತ ಸೇವಾದಳ ಸ್ಥಾಪನೆಯ ಮೂಲಕ ದೇಶಪ್ರೇಮ ಸೇವಾ ಮನೋಭಾವವನ್ನು ಸಮಾಜದಲ್ಲಿ ಭಿತ್ತಿದ ನಾರಾಯಣ ಸುಬ್ಬರಾವ್ ಹರ್ಡೀಕರ್ ಅವರ ಆದರ್ಶವನ್ನು ವಿದ್ಯಾರ್ಥಿಗಳು ಪಾಲಿಸುವ ಮೂಲಕ ದೇಶದ ಆಸ್ತಿಯಾಗಿ ಉನ್ನತಿ ಸಾಧಿಸಬೇಕು ಎಂದು ಭಾರತ ಸೇವಾದಳ ಜಿಲ್ಲಾಧ್ಯಕ್ಷ ಕೆ.ಎಸ್.ಗಣೇಶ್ ಕರೆ ನೀಡಿದರು.
ನಗರದ ಹಳೇ ಮಾಧ್ಯಮಿಕ ಶಾಲೆ, ಉರ್ದು ಹಿರಿಯಪ್ರಾಥಮಿಕ ಶಾಲೆ, ಸರಕಾರಿ ಪ್ರಾಥಮಿಕ ಶಾಲಾ ಮಕ್ಕಳ ಸಮ್ಮುಖದಲ್ಲಿ ನಾ.ಸು.ಹರ್ಡೀಕರ್ ಅವರ 49ನೇ ಪುಣ್ಯ ಸ್ಮರಣೆ ಕಾರ್ಯಕ್ರಮದಲ್ಲಿ ಅವರು ಮಾತನಾಡುತ್ತಿದ್ದರು.
ಕರ್ನಾಟಕದಲ್ಲಿ ಜನಿಸಿ, ಚಿಕ್ಕಂದಿನಲ್ಲಿಯೇ ತಂದೆ ತಾಯಿಯನ್ನು ಕಳೆದುಕೊಂಡರೂ ಎದೆಗುಂದದೆ ಸೇವಾ ಮನೋಭಾವನೆ ಮೈಗೂಡಿಸಿಕೊಂಡು, ವೈದ್ಯರಾದ ನಂತರ ಸ್ವಾತಂತ್ರ್ಯ ಚಳವಳಿಗೆ ಧುಮುಕಿ ಬ್ರಿಟೀಷರ ವಿರುದ್ಧ ಸಮರಶೀಲವಾಗಿ ಹೋರಾಡಲು ಹಿಂದೂಸ್ತಾನಿ ಸೇವಾದಳ ಎಂಬ ಸಂಘಟನೆಯನ್ನು ಸ್ಥಾಪಿಸಿದ ಕೀರ್ತಿ ನಾ.ಸು.ಹರ್ಡೀಕರ್ ಅವರಿಗೆ ಸಲ್ಲುತ್ತದೆ ಎಂದರು.
ಸ್ವಾತಂತ್ರ್ಯ ನಂತರ ಹಿಂದೂಸ್ತಾನಿ ಸೇವಾದಳವು ಶಿಕ್ಷಣ ಇಲಾಖೆಯ ಭಾಗವಾಗಿ ಭಾರತ ಸೇವಾದಳವಾಗಿ ಬದಲಾಗಿದೆ, ಜಾತಿ, ಮತ, ಧರ್ಮಗಳ ಬೇಧವಿಲ್ಲದೆ ಪ್ರತಿಯೊಬ್ಬರೂ ಭಾರತೀಯರು, ರಾಷ್ಟ್ರಗೀತೆ, ರಾಷ್ಟ್ರಧ್ವಜಕ್ಕೆ ಗೌರವ ಸಲ್ಲಿಸುವ ವಿಧಾನಗಳ ಕುರಿತು ತರಬೇತಿ ನೀಡುವ ದೇಶದ ಏಕೈಕ ಸಂಸ್ಥೆಯಾಗಿ ಭಾರತ ಸೇವಾದಳ ಕಾರ್ಯನಿರ್ವಹಿಸುತ್ತಿದೆ ಎಂದು ವಿವರಿಸಿದರು.
ಭಾರತ ಸೇವಾದಳ ಜಿಲ್ಲಾ ಕಾರ್ಯದರ್ಶಿ ಎಸ್.ಸುಧಾಕರ್ ಮಾತನಾಡಿ, ಸೇವೆಗಾಗಿ ಬಾಳು ಎಂಬ ಧ್ಯೇಯವಾಕ್ಯದಡಿ ಭಾರತ ಸೇವಾದಳ ಕಾರ್ಯನಿರ್ವಹಿಸುತ್ತಿದ್ದು, ಸೇವಾದಳದ ಜಿಲ್ಲಾ ಗೌರವಾಧ್ಯಕ್ಷ ಸಿಎಂಆರ್ ಶ್ರೀನಾಥ್ ಉರ್ದು ಶಾಲಾ ಮಕ್ಕಳ ನಿತ್ಯ ಪ್ರಯಾಣಕ್ಕೆ ಆರಂಭಿಸಿದ್ದ ಉಚಿತ ಆಟೋ ಸೇವೆಯನ್ನು ಮತ್ತೇ ಮುಂದುವರೆಸುವುದಾಗಿ ಘೋಷಿಸಿದರು.
ಜಿಲ್ಲಾ ಸಮಿತಿ ಸದಸ್ಯ ಆರ್.ಶ್ರೀನಿವಾಸನ್ ಮಾತನಾಡಿ, ಸರಕಾರಿ ಶಾಲಾ ಮಕ್ಕಳು ವಿವಿಧ ಸೌಲಭ್ಯಗಳನ್ನು ಸದ್ಬಳಕೆ ಮಾಡಿಕೊಂಡು ಉತ್ತಮ ವಿದ್ಯಾಭ್ಯಾಸ ಮಾಡಬೇಕು, ಓದಲು ಹಾಗೂ ಬರೆಯುವುದನ್ನು ಚೆನ್ನಾಗಿ ಅಭ್ಯಾಸ ಮಾಡಿದರೆ ಓದಿನಲ್ಲಿ ಮುಂದುವರೆಯಲು ಸಹಕಾರಿಯಾಗುತ್ತದೆ ಎಂಬ ಕಿವಿಮಾತು ಹೇಳಿದರು.
ಮಕ್ಕಳಿಗೆ ಹರ್ಡೀಕರ್ ಸ್ಮರಣೆಯಲ್ಲಿ ಸಿಹಿ ವಿತರಿಸಿದ ಜಿಲ್ಲಾ ಸಮಿತಿ ಸದಸ್ಯ ಕೆ.ಜಯದೇವ್ ಮಾತನಾಡಿ, ಹರ್ಡೀಕರ್ ರೂಪಿಸಿದ ಶಿಸ್ತಿನ ಪಾಠಗಳು ಸ್ವಾತಂತ್ರ್ಯ ಹೋರಾಟದಲ್ಲಿ ಮಾತ್ರವಲ್ಲದೆ ಪ್ರಸ್ತುತ ಹಾಗೂ ಎಲ್ಲಾ ಕಾಲಕ್ಕೂ ವಿದ್ಯಾರ್ಥಿಗಳಿಗೆ ಅನುಕೂಲವಾಗುವುದರಿಂದ ಸೇವಾದಳ ಶಿಕ್ಷಣ ಪಡೆದುಕೊಳ್ಳಬೇಕೆಂದರು.
ವೇದಿಕೆಯಲ್ಲಿ ಸೇವಾದಳ ತಾಲೂಕು ಸಮಿತಿ ಕೋಶಾಧ್ಯಕ್ಷ ಶ್ರೀನಿವಾಸಮೂರ್ತಿ, ತಾಲೂಕು ಉಪಾಧ್ಯಕ್ಷ ಗೋಕುಲ ಚಲಪತಿ, ಹಳೇ ಮಾಧ್ಯಮಿಕ ಶಾಲೆಯ ಶಿಕ್ಷಕಿ ಯಶೋಧ, ಪ್ರಾಥಮಿಕ ಶಾಲೆಯ ಮುಖ್ಯ ಶಿಕ್ಷಕಿ ಮಮತ, ಉರ್ದು ಶಾಲೆಯ ಮುಖ್ಯ ಶಿಕ್ಷಕಿ ಅಪ್ಸರಿ ಹಾಗೂ ಶಿಕ್ಷಕಿ ಅಜ್ರಭಾನು ಉಪಸ್ಥಿತರಿದ್ದರು.
ಇದೇ ಸಂದರ್ಭದಲ್ಲಿ ನಾ.ಸು.ಹರ್ಡೀಕರ್ ಭಾವಚಿತ್ರಕ್ಕೆ ಅತಿಥಿಗಳು ಹಾಗೂ ವಿದ್ಯಾರ್ಥಿಗಳಿಂದ ಪುಷ್ಪಾರ್ಚನೆ ಮಾಡಲಾಯಿತು.
ಭಾರತ ಸೇವಾದಳ ಜಿಲ್ಲಾ ಸಂಘಟಕ ಎಂ.ಬಿ.ದಾನೇಶ್ ಕಾರ್ಯಕ್ರಮ ನಿರ್ವಹಿಸಿದರು. ಸರ್ವಧರ್ಮ ಪ್ರಾರ್ಥನೆಯಿಂದ ಆರಂಭವಾದ ಕಾರ್ಯಕ್ರಮ ರಾಷ್ಟ್ರಗೀತೆ ಗಾಯನದೊಂದಿಗೆಗ ಪೂರ್ಣಗೊಂಡಿತು.