ವಿದ್ಯಾರ್ಥಿಗಳು ತಾಯಿ ಬಗ್ಗೆ ಪೂಜ್ಯ ಭಾವನೆ ಹೊಂದಬೇಕು. ಅವರ ಮಾರ್ಗದರ್ಶನದಲ್ಲಿ ಬದುಕು ಕಟ್ಟಿಕೊಳ್ಳಬೇಕು:ಅಶ್ವತ್ಥನಾರಾಯಣ್

ಶ್ರೀನಿವಾಸಪುರ: ವಿದ್ಯಾರ್ಥಿಗಳು ತಾಯಿ ಬಗ್ಗೆ ಪೂಜ್ಯ ಭಾವನೆ ಹೊಂದಬೇಕು. ಅವರ ಮಾರ್ಗದರ್ಶನದಲ್ಲಿ ಬದುಕು ಕಟ್ಟಿಕೊಳ್ಳಬೇಕು ಎಂದು ತಾಲ್ಲೂಕು ಪ್ರಾಥಮಿಕ ಶಾಲಾ ಶಿಕ್ಷಕರ ಸಂಘದ ಅಧ್ಯಕ್ಷ ಅಶ್ವತ್ಥನಾರಾಯಣ್ ಹೇಳಿದರು.
ರಾಜಕಲ್ಲಹಳ್ಳಿ ಗ್ರಾಮದ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಸೋಮವಾರ ಏರ್ಪಡಿಸಿದ್ದ ಮಾತೃ ವಂದನಾ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, ವಿದ್ಯಾರ್ಥಿಗಳು ಶಿಸ್ತುಬದ್ಧ ಜೀವನ ನಡೆಸಬೇಕು. ಸಮಯ ಪಾಲನೆಗೆ ಹೆಚ್ಚು ಗಮನ ನೀಡಬೇಕು ಎಂದು ಹೇಳಿದರು.
ಶಾಲೆಯಲ್ಲಿ ಮಾತೃವಂದನಾ ಕಾರ್ಯಕ್ರಮ ಏರ್ಪಡಿಸಿರುವುದು ಶ್ಲಾಘನೀಯ. ತಮಗಾಗಿ ದುಡಿಯುವ ಪೋಷಕರ ಬಗ್ಗೆ ಮಕ್ಕಳಲ್ಲಿ ಅಭಿಮಾನ ಮೂಡಿಸುವುದು ಇಂದಿನ ಅಗತ್ಯವಾಗಿದೆ. ಬೆಳೆದ ಮೇಲೆ ತಂದೆ ತಾಯಿ ಸೇವೆ ಮಾಡಲು ಪ್ರೇರಣೆ ನೀಡಬೇಕಾಗಿದೆ ಎಂದು ಹೇಳಿದರು.
ಸಂಘದ ಕಾರ್ಯದರ್ಶಿ ಹಾಗೂ ಮುಖ್ಯ ಶಿಕ್ಷಕ ನಾರಾಯಣಸ್ವಾಮಿ ಮಾತನಾಡಿ, ಈ ಶಾಲೆ ರಾಜ್ಯ ಮಟ್ಟದಲ್ಲಿ ಮಾದರಿ ಶಾಲೆ ಎಂದು ಗುರುತಿಸಲ್ಪಟ್ಟಿದೆ. ಹಾಗಾಗಿ ಶಾಲಾಭಿವೃದ್ಧಿಗೆ ವಿಶೇಷ ಗಮನ ನೀಡಲಾಗುವುದು. ಮುಂದಿನ ಶೈಕ್ಷಣಿಕ ವರ್ಷದಿಂದ, ಕಾನ್ವೆಂಟ್ ಮಾದರಿಯಲ್ಲಿ ಶಾಲೆ ನಡೆಸಲಾಗುವುದು. ವಿದ್ಯಾರ್ಥಿಗಳನ್ನು ಕರೆತರಲು ಸರ್ಕಾರ ವ್ಯಾನ್ ಸೌಲಭ್ಯ ಕಲ್ಪಿಸಲಿದೆ. ಕನ್ನಡ ಮಾಧ್ಯಮದ ಜತೆಗೆ ಇಂಗ್ಲೀಷ್ ಮಾಧ್ಯಮದಲ್ಲೂ ಬೋಧನೆ ಮಾಡಲಾಗುವುದು ಎಂದು ಹೇಳಿದರು.
ಪೋಷಕರು ಮಕ್ಕಳ ಶೈಕ್ಷಣಿಕ ಅಭಿವೃದ್ಧಿಗೆ ಪೂರಕವಾಗಿ ನಡೆದುಕೊಳ್ಳಬೇಕು. ತಪ್ಪದೆ ಶಾಲೆಗೆ ಕಳಿಸುವುದರ ಜತೆಗೆ, ಮನೆಯಲ್ಲಿ ಶೈಕ್ಷಣಿಕ ಚಟುವಟಿಕೆಯಲ್ಲಿ ತೊಡಗುವಂತೆ ನೋಡಿಕೊಳ್ಳಬೇಕು ಎಂದು ಹೇಳಿದರು.
ಈ ಸಂದರ್ಭದಲ್ಲಿ ಶಿಕ್ಷಕ ಹಾಗೂ ದಾನಿ ಎಸ್.ಆರ್.ಧರ್ಮೇಶ್ ಶಾಲೆಗೆ ಮೈಕ್ ಸೆಟ್ ಕೊಡುಗೆ ನೀಡಿದರು. ನಾನು ಮಕ್ಕಳಲ್ಲಿ ದೇವರನ್ನು ಕಾಣುತ್ತೇನೆ. ಅವರ ಸೇವೆಗಾಗಿ ನನ್ನ ದುಡಿತದ ಸ್ವಲ್ಪ ಭಾಗವನ್ನು ವ್ಯಯಿಸುತ್ತಿದ್ದೇನೆ. ಸರ್ಕಾರಿ ಶಾಲಾ ಮಕ್ಕಳಿಗೆ ಏನೇ ನೆರವು ನೀಡಿದರೂ ಮನಸ್ಸಿಗೆ ಸಂತೋಷವಾಗುತ್ತದೆ. ಈ ಮಕ್ಕಳಿಗೆ ಸರ್ಕಾರದ ಸೌಲಭ್ಯಗಳ ಜತೆ ದಾನಿಗಳ ನೆರವಿನ ಅಗ್ಯವಿದೆ ಎಂದು ಅವರು ಹೇಳಿದರು.
ಬಿಆರ್‍ಪಿ ಮಲ್ಲಿಕಾರ್ಜುನ್ ಮಾತೃಸೇವೆ ಮಹತ್ವ ಹಾಗೂ ವಿಜ್ಞಾನದ ಕೊಡುಗೆ ಕುರಿತು ಮಾತನಾಡಿದರು. ಈ ಸಂದರ್ಭದಲ್ಲಿ ಅತಿಥಿಗಳನ್ನು ಸನ್ಮಾನಿಸಲಾಯಿತು.
ವಿದ್ಯಾರ್ಥಿಗಳಿಂದ ವಿಜ್ಞಾನ ವಸ್ತುಪ್ರದರ್ಶನ ಏರ್ಪಡಿಸಲಾಗಿತ್ತು. ಸಮಾರಂಭದಲ್ಲಿ ವಿದ್ಯಾರ್ಥಿಗಳಿಂದ ಸಾಂಸ್ಕøತಿ ಕಾರ್ಯಕ್ರಮ ಏರ್ಪಡಿಸಲಾಗಿತ್ತು. ವಿದ್ಯಾರ್ಥಿಗಳ ತಾಯಂದರಿಗೆ ಮಡಿಲು ತುಂಬಿ ಗೌರವಿಸಲಾಯಿತು. ವಿದ್ಯಾರ್ಥಿಗಳಿಂದ ತಾಯಂದಿರಿಗೆ ಪಾದ ಪೂಜೆ ಏರ್ಪಡಿಸಲಾಗಿತ್ತು.
ಅಕ್ಷರ ಸಾಸೋಹ ಯೋಜನೆ ಸಹಾಯಕ ನಿರ್ದೇಶಕ ಸುಬ್ರಮಣಿ, ಸಿಆರ್‍ಪಿ ಚಂದ್ರಶೇಖರ್, ಶಿಕ್ಷಕ ಮಂಜುನಾಥ್, ಸೋಮಶೇಖರ್, ನಾಗರಾಜ್, ಶ್ರೀನಿವಾಸ್, ಮಂಜುನಾಥ್, ವೆಂಕಟೇಶಪ್ಪ, ಆಂಜಿನಪ್ಪ, ಎಸ್‍ಡಿಎಂಸಿ ಅಧ್ಯಕೆ ಸುಮಾ, ಸದಸ್ಯರು ಹಾಗೂ ವಿದ್ಯಾರ್ಥಿಗಳ ತಾಯಂದಿರು ಇದ್ದರು.