ವರದಿ:ಶಬ್ಬೀರ್ ಅಹ್ಮದ್, ಶ್ರೀನಿವಾಸಪುರ (ಸಂಪಾದಕರು: ಬರ್ನಾಡ್ ಡಿ’ಕೋಸ್ತಾ)
ಶ್ರೀನಿವಾಸಪುರ: ವಿದ್ಯಾರ್ಥಿಗಳು ಸತತ ಪ್ರಯತ್ನ ಹಾಗೂ ಕಠಿಣ ಪರಿಶ್ರಮದ ಮೂಲಕ ಯಶಸ್ಸು ಪಡೆಯಬೇಕುಎಂದು ರೋಟರಿ ಶ್ರೀನಿವಾಸಪುರ ಸೆಂಟ್ರಲ್ ಅಧ್ಯಕ್ಷ ಡಾ. ವೈ.ವಿ.ವೆಂಕಟಾಚಲ ಹೇಳಿದರು.
ಪಟ್ಟಣದ ಆಜಾದ್ ರಸ್ತೆ ಸಮೀಪ ವೆಂಕಟೇಶ್ವರ ಗ್ರಾಮೀಣ ಆರೋಗ್ಯ ಶಿಕ್ಷಣ ಸಂಸ್ಥೆ ಹಾಗೂ ವಾಕಿಂಗ್ ಗೆಳೆಯರ ಬಳಗದ ವತಿಯಿಂದ ಬುಧವಾರ ಏರ್ಪಡಿಸಿದ್ದ ಸಮಾರಂಭದಲ್ಲಿ ಬೆಂಗಳೂರು ವಿಶ್ವ ವಿದ್ಯಾಲಯದಿಂದ ವಿಜ್ಞಾನ ವಿಭಾಗದಲ್ಲಿ ಚಿನ್ನದ ಪದಕ ಪಡೆದಿರುವ, ಸ್ಥಳೀಯ ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನ ವಿದ್ಯಾರ್ಥಿನಿ ಮಿಸ್ಬಾ ತಬಸ್ಸುಂ ಮತ್ತು ಅವರ ಪೋಷಕರನ್ನು ಸನ್ಮಾನಿಸಿ ಮಾತನಾಡಿದರು.
ಸರ್ಕಾರಿ ಶಾಲಾ ಕಾಲೇಜುಗಳ ಬಗ್ಗೆ ಹಗುರವಾಗಿ ಮಾತನಾಡುವ ಮಂದಿಗೆ ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನಲ್ಲಿ ಓದಿ, ವಿಜ್ಞಾನ ಪದವಿ ಪದವಿಯಲ್ಲಿ ಚಿನ್ನದ ಪದಕ ಪಡೆದಿರುವ ಮಿಸ್ಬಾ ತಬಸ್ಸುಂ ಸರಿಯಾದ ಉತ್ತರ ನೀಡಿದ್ದಾರೆ. ಸರ್ಕಾರಿ ವಿದ್ಯಾ ಸಂಸ್ಥೆಗಳಲ್ಲಿ ಓದುತ್ತಿರುವ ವಿದ್ಯಾರ್ಥಿಗಳು ಕೀಳರಿಮೆ ಹೊಂದುವ ಅಗತ್ಯವಿಲ್ಲ. ಅದಕ್ಕೆ ಮಿಸ್ಬಾ ತಬಸ್ಸುಂ ಮಾದರಿಯಾಗಿದ್ದಾರೆ. ಇತರ ವಿದ್ಯಾರ್ಥಿಗಳು ಅವರ ಆದರ್ಶ ಪಾಲಿಸಬೇಕು ಎಂದು ಹೇಳಿದರು.
ಹೆಣ್ಣೊಂದು ಕಲಿತರೆ ಶಾಲೆಯೊಂದನ್ನು ತೆರೆದಂತೆ ಎಂಬ ಮಾತು ಸತ್ಯ. ಪೋಷಕರು ಹೆಣ್ಣು ಮಕ್ಕಳನ್ನು ತಪ್ಪದೆ ಶಾಲೆಗೆ ಕಳುಹಿಸಬೇಕು. ಮಧ್ಯದಲ್ಲಿ ತಡೆಯದೆ ಉನ್ನತ ಶಿಕ್ಷಣ ಕೊಡಿಸಬೇಕು. ಪ್ರತಿಭಾವಂತ ವಿದ್ಯಾರ್ಥಿಗಳಿಗೆ ಅಗತ್ಯವಾದ ಸಹಾಯ ಮಾಡುವ ವ್ಯಕ್ತಿಗಳು ಹಾಗೂ ಸಂಸ್ಥೆಗಳು ಜೀವಂತವಾಗಿವೆ ಎಂದು ಹೇಳಿದರು.
ಮುಖಂಡ ಜಾವಿದ್ ಅನ್ಸಾರಿ ಮಾತನಾಡಿ, ಮುಸ್ಲಿಂ ಸಮುದಾಯ ಶೈಕ್ಷಣಿಕವಾಗಿ ಹಿಂದುಳಿದಿದೆ. ಶಾಲೆಗೆ ಹೋಗಬೇಕಾದ ಮಕ್ಕಳನ್ನು ದುಡಿತಕ್ಕೆ ಹಾಕುವುದು ಸರಿಯಲ್ಲ. ಪೋಷಕರು ತಮ್ಮ ಮಕ್ಕಳಲ್ಲಿ ಲಿಂಗ ಭೇದ ಮಾಡದೆ ಕಡ್ಡಾಯವಾಗಿ ಶಾಲೆಗೆ ಕಳುಹಿಸಬೇಕು ಎಂದು ಹೇಳಿದರು.
ಈ ಸಂದರ್ಭದಲ್ಲಿ ಬಾಲಕಿಯ ಶೈಕ್ಷಣಿಕ ಅಭಿವೃದ್ಧಿಗಾಗಿ ತನ್ವೀರ್ ಫ್ರೂಟ್ ಲಿಮಿಟೆಡ್ ವತಿಯಿಂದ ರೂ.25 ಸಾವಿರ ನೀಡಲಾಯಿತು. ಡಾ. ವೈ.ವಿ.ವೆಂಕಟಾಚಲ, ಜಾವಿದ್ ಅನ್ಸಾರಿ, ಅಕ್ಬರ್ ಷರೀಫ್ ಹಾಗೂ ಬಿ.ಜಿ.ಸೈಯದ್ ಖಾದರ್ ತಲಾ ರೂ.5000 ನೆರವು ನೀಡಿದರು.
ರೋಟರಿ ಶ್ರೀನಿವಾಸಪುರ ಸೆಂಟ್ರಲ್ ಕಾರ್ಯದರ್ಶಿ ನಾರಾಯಣಸ್ವಾಮಿ, ನಿರ್ದೇಶಕರಾದ ಸೀತರೆಡ್ಡಿ, ಶ್ರೀನಿವಾಸರೆಡ್ಡಿ, ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನ ಪ್ರಾಂಶುಪಾಲ ಎಸ್.ಸಣ್ಣವೀರಯ್ಯ, ಉಪನ್ಯಾಸಕರಾದ ಡಾ. ಮೃತ್ಯುಂಜಯ, ನವೀನ್ ಕುಮಾರ್, ಬಾಬು, ಕಲ್ಪನಾ, ಪ್ರತಿಮಾ, ಪುರಸಭೆ ಉಪಾಧ್ಯಕ್ಷೆ ಆಯಿಷಾ ನಯಾಜ್ ಇದ್ದರು.