ವರದಿ: ಶಬ್ಬೀರ್ ಅಹ್ಮದ್, ಶ್ರೀನಿವಾಸಪುರ
ಶ್ರೀನಿವಾಸಪುರ: ವಿದ್ಯಾರ್ಥಿಗಳು ಶಿಕ್ಷಣದ ಮೂಲಕ ಬದುಕು ಕಟ್ಟಿಕೊಳ್ಳಬೇಕು ಎಂದು ಬೆಂಗಳೂರು ರೌಂಡ್ ಟೇಬಲ್ ಸಂಸ್ಥೆಯ ವಿಭಾಗೀಯ ಅಧ್ಯಕ್ಷ ಸಂದೇಶ್ ಕುಮಾರ್ ಹೇಳಿದರು.
ತಾಲ್ಲೂಕಿನ ಗೋಪಾಲಪುರ ಗ್ರಾಮದಲ್ಲಿ ಬೆಂಗಳೂರು ಸೆಂಟ್ರಲ್ ರೌಂಡ್ ಟೇಬಲ್ ಹಾಗೂ ಬೆಂಗಳೂರು ಸೆಂಟ್ರಲ್ ಲೇಡೀಸ್ ಕ್ಲಬ್ ವತಿಯಿಂದ ಶನಿವಾರ ಏರ್ಪಡಿಸಿದ್ದ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯ ನೂತನ ಕಟ್ಟಡ ನಿರ್ಮಾಣ ಕಾಮಗಾರಿಗೆ ಗುದ್ದಲಿ ಪೂಜೆ ಕಾರ್ಯಕ್ರಮದಲ್ಲಿ ಮಾತನಾಡಿ, ಗ್ರಾಮಸ್ಥರ ಕೋರಿಕೆಯಂತೆ ರೂ.15 ಲಕ್ಷ ವೆಚ್ಚದಲ್ಲಿ ಶಾಲಾ ಕಟ್ಟಡ ನಿರ್ಮಿಸಲಾಗುತ್ತಿದೆ. ಪೋಷಕರು ತಮ್ಮ ಮಕ್ಕಳನ್ನು ಸರ್ಕಾರಿ ಶಾಲೆಗೆ ಸೇರಿಸುವುದರ ಮೂಲಕ ಶಾಲೆಯ ಅಭಿವೃದ್ಧಿಗೆ ಸಹಕರಿಸಬೇಕು ಎಂದು ಮನವಿ ಮಾಡಿದರು.
ಸಂಸ್ಥೆಯ ಸದಸ್ಯ ವೈಭವ್ ಮಾತನಾಡಿ, ಸರ್ಕಾರಿ ಶಾಲೆಯಲ್ಲಿ ಓದಿದ ಮಕ್ಕಳು ವಿವಿಧ ಕ್ಷೇತ್ರಗಳಲ್ಲಿ ಅತ್ಯುತ್ತಮ ಸಾಧನೆ ಮಾಡಿದ್ದಾರೆ. ಸರ್ಕಾರಿ ಶಾಲೆ ಬಗ್ಗೆ ಕೀಳರಿಮೆ ಬೇಡ. ಸರ್ಕಾರ ಹಾಗೂ ದಾನಿಗಳು ನೀಡುವ ಸೌಲಭ್ಯಗಳನ್ನು ಸದುಪಯೋಗ ಪಡಿಸಿಕೊಂಡು ಶೈಕ್ಷಣಿಕ ಕ್ಷೇತ್ರದಲ್ಲಿ ಮುನ್ನಡೆಯಬೇಕು ಎಂದು ಹೇಳಿದರು.
‘ನಮ್ಮ ಕ್ಲಬ್ ವತಿಯಿಂದ ಪ್ರತಿ ವರ್ಷ ಶಾಲೆಗಳಿಗೆ ಕಟ್ಟಡ ನಿರ್ಮಿಸಿ ಕೊಡಲಾಗುತ್ತಿದೆ. ದೇಶದಲ್ಲಿ ಪ್ರತಿ ಮಗುವೂ ಶಿಕ್ಷಣ ಪಡೆದಾಗ ಮಾತ್ರ ಪ್ರಜಾಪ್ರಭುತ್ವ ವ್ಯವಸ್ಥೆ ಸರಿದಾರಿಯಲ್ಲಿ ನಡೆಯಲು ಸಾಧ್ಯ. ಸಮಾಜ ಸೇವಾ ಸಂಸ್ಥೆಗಳು ಗ್ರಾಮೀಣ ಶಾಲೆಗಳ ಅಭಿವೃದ್ಧಿಗೆ ಒತ್ತು ನೀಡಬೇಕು ಎಂದು ಹೇಳಿದರು.
ಕ್ಲಬ್ ಪದಾಧಿಕಾರಿಗಳಾದ ಜಗದೀಶ್ ಭಂಡಾರಿ, ವೈಭವ್ ಅರೋರ, ಅಭಿಷೇಕ್, ಅನುಪನ್, ಅಗರ್ವಾಲ್, ಸರೋಜ ಅಗರ್ವಾಲ್, ವಿವೇಕ್, ನಿತೀಶ್ ಗುಪ್ತ, ರಾಜ್ ಕಿರಣ್, ವನಿಕ್ಷಿಕ, ಕೃಷ್ಣಮೂರ್ತಿ, ಗ್ರಾಮ ಪಂಚಾಯಿತಿ ಅಧ್ಯಕ್ಷೆ ಗೀತಾ ರಾಮಚಂದ್ರ, ಸದಸ್ಯೆ ಕಲಾವತಿ, ಎಸ್ಡಿಎಂಸಿ ಅಧ್ಯಕ್ಷ ತಿರುಮಲಪ್ಪ, ಮುಖಂಡರಾದ ಎನ್.ವೆಂಕಟರವಣಪ್ಪ, ಸಿ.ಎಂ.ವೆಂಕಟರವಣ, ಸಿಆರ್ಸಿ ರಾಮಚಂದ್ರ ಇದ್ದರು.