ಶ್ರೀನಿವಾಸಪುರ: ಭೂಮಿ ಎಲ್ಲರ ಆಸ್ತಿ, ರೋಟರಿ ಸಂಸ್ಥೆಯಿಂದ ಉಚಿತವಾಗಿ ನೀಡುತ್ತಿರುವ ತೆಂಗಿನ ಗಿಡವನ್ನು ಚೆನ್ನಾಗಿ ಬೆಳೆಸಿ, ಹಸಿರನ್ನು ಬೆಳೆಸಲು ಪ್ರೋತ್ಸಾಹ ನೀಡಿ, ನೀವು ಸಹ ಚೆನ್ನಾಗಿ ಬೆಳೆಯಿರಿ, ನೀವು ಬೆಳೆಸಿರುವ ಗಿಡವನ್ನು ನೋಡಿದ ನಿಮ್ಮ ಪೋಷಕರು ಸಹ ಸಂತೋಷಪಡುತ್ತಾರೆ ಎಂದು ವಿದ್ಯಾರ್ಥಿಗಳಿಗೆ ರೋಟರಿ ಜಿಲ್ಲಾಪಾಲಕರಾದಂತಹ ಶ್ರೀದರ್ ತಿಳಿಸಿದರು.
ತಾಲ್ಲೂಕಿನ ಲಕ್ಷ್ಮೀಸಾಗರದ ಶತಶೃಂಗ ಶಾಲೆಯಲ್ಲಿ ರೋಟರಿ ಶ್ರೀನಿವಾಸಪುರ ಸೆಂಟ್ರಲ್ ಮತ್ತು ರೋಟರಿ ಜಿಲ್ಲಾ ವತಿಯಿಂದ ಲಕ್ಷ ಕಲ್ಪವೃಕ್ಷ ನೆಡುವ ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದ ಜಿಲ್ಲಾಪಾಲಕರಾದಂತಹ ಶ್ರೀದರ್, ನಾನು ಹಳ್ಳಿ ಶಾಲೆಯಲ್ಲಿ ಓದಿದ್ದು, ನಾನು ಓದುತ್ತಿದ್ದ ಸಮಯದಲ್ಲಿ ಯಾರೂ ಇಂತಹ ಸಸಿಯನ್ನು ಉಚಿತವಾಗಿ ನೀಡಿಲ್ಲ, ಆಗ ಇಂತಹ ಸಸಿಯನ್ನು ನೀಡಿದ್ದರೆ ಇದೀಗ ತುಂಬಾ ದೊಡ್ಡ ಮರವಾಗುತ್ತಿತ್ತು. ನೀವುಗಳೆಲ್ಲರೂ ಅದೃಷ್ಟವಂತರು, ನಿಮಗೆ ಚಿಕ್ಕ ವಯಸ್ಸಿನಲ್ಲೇ ತೆಂಗಿನ ಸಸಿಯನ್ನು ನೆಡುವ ಭಾಗ್ಯ ದೊರೆತಿದೆ, ಸಸಿಯನ್ನು ಬೆಳೆಸಿ ದೊಡ್ಡ ಮರವನ್ನಾಗಿ ಬೆಳೆಸಿ ಎಂದು ತಿಳಿಸಿದರು.
ತೆಂಗಿನ ಸಸಿಯನ್ನು ಕ್ಮಲ್ಪವೃಕ್ಷ ಎನ್ನುತ್ತೇವೆ, ತೆಂಗಿನ ಸಿಸಿಯನ್ನು ನೆಡುವುದರಿಂದ ಪರಿಸರದ ಕಾಳಜಿಗೆ ಒತ್ತು ಕೊಟ್ಟಂತಾಗುತ್ತದೆ, ದಾನಿಗಳ ಸಹಕಾರದಿಂದ ಈ ತೆಂಗಿನ ಸಸಿಗಳನ್ನು ಉಚಿತವಾಗಿ ಶಾಲಾ ಮಕ್ಕಳಿಗೆ ನೀಡಲಾಗುತ್ತಿದೆ ತೆಂಗಿನ ಸಸಿಗಳನ್ನು ನಾಟಿ ಮಾಡಿ ಆ ಗಿಡವನ್ನು ತಾಯಿಯಂತೆ ಪ್ರೀತಿಯಿಂದ ಕಾಣಿ ಎಂದರು.
ರೋಟರಿ ಶ್ರೀನಿವಾಸಪುರ ಸೆಂಟ್ರಲ್ ಅಧ್ಯಕ್ಷರಾದ ಎಸ್.ಎನ್. ಮಂಜುನಾಥ್ರೆಡ್ಡಿ ಮಾತನಾಡಿ, ಕೆಳಗೆ ಉಪ್ಪು ನೀರು ಕುಡಿದು ಮೇಲೆ ಸಿಹಿ ನೀರನ್ನು ಕೊಡುವೆ, ತಾಂಬೂಲಕ್ಕೆ ನಾನೇ ಫಲ, ಪೂಜೆಗೆ ನಾನೆ ಮುಖ್ಯ ಎನ್ನುತ್ತದೆ ತೆಂಗಿನ ಮರ, ಆದ್ದರಿಂದ ತೆಂಗಿನ ಮರವನ್ನು ಬೆಳೆಸಿದರೆ ಎಲ್ಲ ರೀತಿಯಲ್ಲೂ ಉಪಯೋಗವಾಗುತ್ತದೆ ಎಂದರು.
ಜಿಲ್ಲಾ ಕಾರ್ಯಕ್ರಮಗಳ ನಿರ್ದೇಶಕರಾದ ರವೀಂದ್ರನಾಥ್ ಮಾತನಾಡಿ, ರೋಟರಿ ಜಿಲ್ಲಾ 3191 ವತಿಯಿಂದ ಪ್ರತಿ ವರ್ಷವೂ ಪರಿಸರಕ್ಕೆ ಹೆಚ್ಚಿನ ಆಧ್ಯತೆ ನೀಡಲಾಗುತ್ತಿದ್ದು, ಅದರಲ್ಲಿ ಕೋಟಿ ವೃಕ್ಷ ಎಂಬ ಕಾರ್ಯಕರ್ಮಾವನ್ನು ಯಶಸ್ವಿಯಾಗಿದೆ. ತದನಂತರ ಲಕ್ಷ ಕಲ್ಪವೃಕ್ಷ ಕಾರ್ಯಕ್ರವನ್ನು ಹಮ್ಮಿಕೊಂಡಿದ್ದು, ತೆಂಗಿನ ಸಸಿಗಳನ್ನು ಶಾಲ ಮಕ್ಕಳಿಗೆ ನೀಡಿ ಅವರ ಮನೆಯಬಳಿ ನಾಟಿ ಮಾಡಿ ಬೆಳೆಸುವಂತ ಕಾರ್ಯಕ್ರಮವಾಗಿದೆ. ಈ ಹಿಂದೆ ಕಾಮದೇನು ಕಾರ್ಯಕ್ರಮ ಸೇರಿದಂತೆ ಹಲವಾರು ಕಾರ್ಯಕ್ರಮಗಳನ್ನು ಹಮ್ಮಿಕೊಂಡಿರುತ್ತೇವೆ. ಇದೀಗ ಶಾಲಾ ಮಕ್ಕಳಿಗಾಗಿ ಶಿಕ್ಷಣ, ಪಠ್ಯಪುಸ್ತಕ, ಗಣಕಯಂತ್ರಗಳನ್ನು ಉಚಿತವಾಗಿ ನೀಡಲು ಹೆಚ್ಚಿನ ಆಧ್ಯತೆಯನ್ನು ರೋಟರಿ ಸಂಸ್ಥೆಯಿಂದ ನೀಡಲಾಗುತ್ತಿದೆ.
ಈ ಬಾರಿ ಕೋಲಾರ ಜಿಲ್ಲೆಗೆ ಸುಮಾರು 10 ಸಾವಿರ ತೆಂಗಿನ ಸಸಿಗಳನ್ನು ವಿತರಿಸಲು ನಿರ್ಧರಿಸಲಾಗಿದ್ದು, ಅದರ ಮೊದಲ ಪ್ರಯತ್ನವಾಗಿ ಶ್ರೀನಿವಾಸಪುರ ತಾಲ್ಲೂಕಿನ ರೋಟರಿ ಶ್ರೀನಿವಾಸಪುರ ಸೆಂಟ್ರಲ್ ಮುಖಾಂತರ ಯಲ್ದೂರು ಹೋಬಳಿಯ ಲಕ್ಷ್ಮೀಸಾಗರ ಶತಶೃಂಗ ವಿದ್ಯಾಶಾಲೆ, ಯಲ್ದೂರಿನ ಶ್ರೀನಿವಾಸ ವಿದ್ಯಾಶಾಲೆ, ನ್ಯಾಶನಲ್ ವಿದ್ಯಾ ಶಾಲೆ ಹಾಗೂ ಸರ್ಕಾರಿ ಪ್ರೌಢಶಾಲೆಯ ವಿದ್ಯಾರ್ಥಿನಿಯರಿಗೆ ಉಚಿತವಾಗಿ ಒಂದು ಸಾವಿರ ತೆಂಗಿನ ಸಸಿಗಳನ್ನು ನೀಡಲಾಗುತ್ತಿದೆ.
ಒಬ್ಬ ವಿದ್ಯಾಥಿಯ ಹೆಸರಿನಲ್ಲಿ ಒಂದು ತೆಂಗಿನ ಗಿಡವನ್ನು ನೆಡಬೇಕು, ನೀವು ನಿಮ್ಮ ತಾಯಿಗೆ ಎಷ್ಟು ಪ್ರೀತಿಯಿಂದ ನೋಡುತ್ತೀರೋ ಅಷ್ಟೇ ಪ್ರೀತಿಯಿಂದ ಗಿಡವನ್ನು ಸಂರಕ್ಷಿಸಿ, ಅಷ್ಟೇ ಪ್ರಾಮುಖ್ಯತೆಯನ್ನು ತೆಂಗಿನ ಗಿಡಕ್ಕೆ ನೀಡಿ, ತೆಂಗಿನ ಗಿಡವನ್ನು ಬೆಳೆಸಿ ನಿಮ್ಮ ಮುಂದಿನ ಪೀಳಿಗೆಗೆ ಮುಂದುವರೆ¸ಬೇಕು ಎಂಬುದು ನಮ್ಮ ಮುಖ್ಯವಾದ ಉದ್ದೇಶ ಎಂದರು.
ರೋಟರಿ ಸ್ಪಂದನ ಬೆಂಗಳೂರಿನ ಶ್ರೀಮತಿ ಲಕ್ಷ್ಮಿ ಶಾಸ್ತ್ರಿ ಮಾತನಾಡಿ, ಶಾಲೆಗಳಲ್ಲಿ ವಿದ್ಯಾರ್ಥಿಗಳಿಗೆ ವಿದ್ಯಾರ್ಜನೆಗೆ ಬೇಕಾದಂತಹ ಅನುಕೂಲಗಳನ್ನು ರೋಟರಿ ಸಂಸ್ಥೆಯಿಂದ ಹಮ್ಮಿಕೊಳ್ಳಲಾಗಿದ್ದು, ಹಾಗೆಯೇ ಶಾಲೆಯ ಉಪಾಧ್ಯಾಯರಿಗೂ ಸ್ಪೋಕನ್ ಇಂಗ್ಲೀಷ್ ಭೋದಿಸುವ ತರಭೇತಿಯ ಕಾರ್ಯಕ್ರಮವನ್ನು ಹಮ್ಮಿಕೊಳ್ಳಲಾಗುವುದು, ತೆಂಗಿನ ಸಸಿಗಳನ್ನು ಉಚಿತವಾಗಿ ಕೊಡುವ ಉದ್ದೇಶವೇನೆಂದರು ಈ ತೆಂಗಿನ ಮರದ ಪ್ರತಿಯೊಂದು ಭಾಗವೂ ಉಪಯೋಗಕ್ಕೆ ಬರುವಂತಹುದು, ನಾವು ತೆಂಗಿನ ಮರವನ್ನು ಕಾಪಾಡಿದರೆ ಅದು ನಮ್ಮನ್ನು ಕಾಪಾಡುತ್ತದೆ. ಆದ್ದರಿಂದ ಈ ತೆಂಗಿನ ಗಿಡವನ್ನು ತಾಯಿಗೆ ಹೋಲಿಸಲಾಗಿದ್ದು, ತಾಯಿಯ ಪ್ರೀತಿಯನ್ನು ಈ ತೆಂಗಿನ ಗಿಡಕ್ಕೆ ನೀಡಿ ಎಂದು ತಿಳಿಸಿದರು.
ಈ ಸಮಯದಲ್ಲಿ ರೋಟರಿ ಬೆಂಗಳೂರು ಸೆಂಟ್ರಲ್ ನ ಶ್ರೀನಿವಾಸ್, ನಾಗರಾಜ್, ರೋಟರಿ ಶ್ರೀನಿವಾಸಪುರ ಸೆಂಟ್ರಲ್ ಕಾರ್ಯದರ್ಶಿಯಾದ ಎನ್. ಕೃಷ್ಣಮೂರ್ತಿ, ಶಾಲೆಯ ಮುಖ್ಯೋಪಾಧ್ಯಾಯರು, ಶಿಕ್ಷಕರು, ಪುಟಾಣಿ ಮಕ್ಕಳು ಹಾಜರಿದ್ದರು.