JANANUDI.COM NETWORK
ಉಡುಪಿ: ನಿರ್ದಿಷ್ಠ ಗುರಿ ಮತ್ತು ಕನಸಿದ್ದರೆ ವಿದ್ಯಾರ್ಥಿಗಳು ಜೀವನದಲ್ಲಿ ಯಶಸ್ಸು ಗಳಿಸಬಹುದು ಈ ನಿಟ್ಟಿನಲ್ಲಿ ನಿರಂತರ ಪ್ರಯತ್ನ ಅಗತ್ಯವಿದೆ ಎಂದು ಉಡುಪಿ ಧರ್ಮಪ್ರಾಂತ್ಯದ ಧರ್ಮಾಧ್ಯಕ್ಷರಾದ ಪರಮ ಪೂಜ್ಯ ಡಾ|ಜೆರಾಲ್ಡ್ ಐಸಾಕ್ ಲೋಬೊ ಹೇಳಿದರು.
ಅವರು ಬುಧವಾರ ಕಥೊಲಿಕ್ ಸಭಾ ಉಡುಪಿ ಪ್ರದೇಶ ಮತ್ತು ಜೋನ್ ಡಿʼಸಿಲ್ವಾ ಫೌಂಡೇಶನ್ ಜಂಟಿಯಾಗಿ ಕಾರ್ಕಳ ಕ್ರೈಸ್ಟ್ ಕಿಂಗ್ ಚರ್ಚಿನ ಸಭಾಂಗಣದಲ್ಲಿ ಆಯೋಜಿಸಿದ್ದ ಪ್ರತಿಭಾವಂಥ ಕ್ರೈಸ್ತ ವಿದ್ಯಾರ್ಥಿಗಳ ಪ್ರತಿಭಾ ಪುರಸ್ಕಾರ ಕಾರ್ಯಕ್ರಮದಲ್ಲಿ ವಿದ್ಯಾರ್ಥಿಗಳನ್ನು ಅಭಿನಂದಿಸಿ ಮಾತನಾಡಿದರು.
ಕ್ರೈಸ್ತ ಸಮುದಾಯದ ವಿದ್ಯಾರ್ಥಿಗಳಲ್ಲಿ ಉತ್ತಮವಾದ ಪ್ರತಿಭೆಗಳಿದ್ದು ಅದನ್ನು ಸೂಕ್ತ ರೀತಿಯಲ್ಲಿ ಉಪಯೋಗಿಸುವ ಅಗತ್ಯವಿದೆ. ಪ್ರಸ್ತುತ ನಾವು ಸ್ಮರ್ಧಾತ್ಮಕ ಸಮಾಜದಲ್ಲಿ ಬದುಕುತ್ತಿರುವಾಗ ಪ್ರತಿಯೊಂದು ವಿಚಾರದಲ್ಲಿ ಕೂಡ ಸ್ಪರ್ಧೆ ಸಾಮಾನ್ಯವಾಗಿದ್ದು ಶಿಕ್ಷಣ ಕ್ಷೇತ್ರ ಕೂಡ ಅದರಿಂದ ಹೊರತಾಗಿಲ್ಲ. ಆದ್ದರಿಂದ ಮಕ್ಕಳ ಪೋಷಕರು ತಮ್ಮ ಮಕ್ಕಳಿಗೆ ಬಾಲ್ಯದಲ್ಲಿಯೇ ನಿರ್ದಿಷ್ಠ ಗುರಿ ಮತ್ತು ಕನಸು ಹೊಂದುವಂತೆ ಪ್ರೇರೆಪಿಸಬೇಕು. ಮುಂದಿನ ದಿನಗಳಲ್ಲಿ ಸಮುದಾಯದ ವಿದ್ಯಾರ್ಥಿಗಳು ಸರಕಾರಿ ಸೇವೆಗಳಲ್ಲಿ ಪ್ರಜ್ವಲಿಸುವಂತಾಗಲಿ ಎಂದು ಶುಭ ಹಾರೈಸಿದರು.
ಈ ಸಂದರ್ಭದಲ್ಲಿ ಕಲ್ಯಾಣಪುರ, ಉಡುಪಿ, ಶಿರ್ವ, ಕುಂದಾಪುರ ಹಾಗೂ ಕಾರ್ಕಳ ವಲಯದ ಎಸ್ಸೆಸ್ಸೆಲ್ಸಿ ಮತ್ತು ಪಿಯುಸಿ ಪರೀಕ್ಷೆಯಲ್ಲಿ ಅತೀ ಹೆಚ್ಚು ಅಂಕ ಪಡೆದ ವಿದ್ಯಾರ್ಥಿಗಳಿಗೆ ನಗದು ಪುರಸ್ಕಾರ ನೀಡಿ ಗೌರವಿಸಲಾಯಿತು.
ಕಾರ್ಯಕ್ರಮದಲ್ಲಿ ಜೋನ್ ಡಿಸಿಲ್ವಾ ಫೌಂಡೇಶನ್ ಅಧ್ಯಕ್ಷರಾದ ಜಾನ್ ಗ್ಲ್ಯಾಡಿಸ್ ಡಿʼಸಿಲ್ವಾ, ಕಥೊಲಿಕ್ ಸಭಾ ಉಡುಪಿ ಪ್ರದೇಶ ಇದರ ಅಧ್ಯಕ್ಷರಾದ ಮೇರಿ ಡಿʼಸೋಜಾ, ನಿಕಟಪೂರ್ವ ಅಧ್ಯಕ್ಷರಾದ ರೋಬರ್ಟ್ ಮಿನೇಜಸ್, ಕಾರ್ಯಕ್ರಮದ ಸಂಚಾಲಕರಾದ ಡಾ|ಜೆರಾಲ್ಡ್ ಪಿಂಟೊ, ಕೋಶಾಧಿಕಾರಿ ಜೆರಾಲ್ಡ್ ರೊಡ್ರಿಗಸ್, ಚರ್ಚ್ ಪಾಲನಾ ಸಮಿತಿಯ ಉಪಾಧ್ಯಕ್ಷರಾದ ಎಂಟನಿ ಆರಾನ್ಹಾ ಉಪಸ್ಥಿತರಿದ್ದರು.
ಮೇರಿ ಡಿʼಸೋಜಾ ಸ್ವಾಗತಿಸಿ ಕಾರ್ಯದರ್ಶಿ ಗ್ರೆಗರಿ ಪಿಕೆ ಡಿಸೋಜಾ ವಂದಿಸಿದರು, ಒಲಿವೀಯಾ ಡಿಮೆಲ್ಲೊ ಕಾರ್ಯಕ್ರಮ ನಿರೂಪಿಸಿದರು.