

ಶ್ರೀನಿವಾಸಪುರ 1 : ವಿದ್ಯಾರ್ಥಿ ಜೀವನ ಎನ್ನುವುದು ವಿದ್ಯಾರ್ಥಿಗಳ ಬದುಕನ್ನು ರೂಪಿಸುವ ಅಮೂಲ್ಯವಾದ ಕ್ಷಣಗಳಾಗಿದ್ದು, ಈ ಸಮಯದಲ್ಲಿ ವಿದ್ಯಾಥಿಗಳು ಹೆಚ್ಚಿನ ಸಮಯವನ್ನು ಜ್ಞಾನಾರ್ಜನೆಗೆ ಮೀಸಲಿಟ್ಟು ಶ್ರಮಪಟ್ಟು ವ್ಯಾಸಂಗ ಮಾಡಿದರೆ ಸುಂದರವಾದ ಭವಿಷ್ಯವನ್ನು ಕಟ್ಟಿಕೊಳ್ಳುವುದು ಸಾಧ್ಯ. ಎಂದು ಉನ್ನತ ಶಿಕ್ಷಣ ಸಚಿವರ ಆಪ್ತ ಕಾರ್ಯದರ್ಶಿ ರಾಮೇಗೌಡ ವಿದ್ಯಾರ್ಥಿಗಳಿಗೆ ಹೇಳಿದರು.
ತಾಲೂಕಿನ ದಳಸನೂರು ಪ್ರೌಡಶಾಲೆಯಲ್ಲಿ ಶನಿವಾರ ಕಂಕರಿ ಮಹಿಳಾ ಸ್ವಯಂ ಸೇವಾ ಸಂಸ್ಥೆವತಿಯಿಂದ ಎಸ್ಎಸ್ಎಲ್ಸಿ ವಿದ್ಯಾರ್ಥಿಗಳೊಂದಿಗೆ ಸಂವಾದ ನಡೆಸಿ ಮಾತನಾಡಿದರು.
ಕಂಕರಿ ಮಹಿಳಾ ಸ್ವಯಂ ಸೇವಾ ಸಂಸ್ಥೆವತಿಯಿಂದ ವಿಶೇಷವಾಗಿ ಗ್ರಾಮೀಣ ಭಾಗದ ಎಸ್ಎಸ್ಎಲ್ಸಿ ವಿದ್ಯಾರ್ಥಿಗಳೊಂದಿಗೆ ಸಂವಾದ ನಡೆಸಿ ವಾರ್ಷಿಕ ಪರೀಕ್ಷೆಯ ಸಿದ್ದತೆ ಬಗ್ಗೆ ಹೆಚ್ಚಿನ ಆಸಕ್ತಿ ವಹಿಸಿರುವುದು ಶ್ಲಾಘನೀಯ ಎಂದರು.
ಕ್ಷೇತ್ರ ಶಿಕ್ಷಣಾಧಿಕಾರಿ ಬಿ.ಸಿ. ಮುನಿಲಕ್ಷ್ಮಯ್ಯ ಮಾತನಾಡಿ ವಿದ್ಯಾರ್ಥಿಗಳು ಸತತ ಅಭ್ಯಾಸ ,ಪುನರಾವರ್ತನೆ ಮತ್ತು ನಿಯಮಿತ ಓದಿನಿಂದ ಸ್ಮರಣ ಶಕ್ತಿಯನ್ನು ವೃದ್ಧಿಸಿಕೊಳ್ಳುಬಹುದು, ಪರೀಕ್ಷೆ ಬಗ್ಗೆ ಭಯ ಮತ್ತು ಅತಂಕಗಳನ್ನು ಹೋಗಲಾಡಿಸಿಕೊಂಡು ಆತ್ಮವಿಶ್ವಾಸದಿಂದ ಎದುರಿಸುವಂತೆ ವಿದ್ಯಾರ್ಥಿಗಳಿಗೆ ಕರೆನೀಡಿದರು.
ಶಿಕ್ಷಕರಿಂದ ಶ್ರಮದಿಂದ ಹಾಗು ವಿದ್ಯಾರ್ಥಿಗಳ ಶ್ರದ್ಧೆಯಿಂದ ಈ ಹಿಂದೆ ಶ್ರೀನಿವಾಸಪುರ ತಾಲೂಕು ಜಿಲ್ಲೆಗೆ ಎಸ್ಎಸ್ಎಲ್ಸಿ ಪರೀಕ್ಷೆಯಲ್ಲಿ ಪ್ರಥಮ ಸ್ಥಾನ ಪಡೆಯುತ್ತಲೇ ಇದ್ದು, ಮುಂದಿನ ಪರೀಕ್ಷೆಯಲ್ಲಿಯೂ ಸಹ ಇದೇ ರೀತಿ ಪ್ರಥಮ ಸ್ಥಾನವನ್ನು ಪಡೆಯಬಹುದು ಎಂದು ಭರವಸೆ ಇದೆ ಎಂದು ಹೇಳಿದರು. ಪ್ರಸ್ತುತ ವಿದ್ಯಾರ್ಥಿಗಳು ಶ್ರದ್ಧೆ ಹಾಗು ಶ್ರಮಪಟ್ಟು ಓದುವಂತೆ ವಿದ್ಯಾರ್ಥಿಗಳಿಗೆ ಸಲಹೆ ನೀಡಿದರು.
ಈ ಒಂದು ಸಂವಾದ ಕಾರ್ಯಕ್ರಮದಲ್ಲಿ ದಳಸನೂರು, ಅಡ್ಡಗಲ್ ಹಾಗೂ ಮಾಸ್ತೇನಹಳ್ಳಿ ಶಾಲೆಯ ವಿದ್ಯಾರ್ಥಿಗಳು ಪಾಲ್ಗುಂಡಿದ್ದರು. ಬೆಂಗಳೂರಿನ ಆರ್ವಿ ಕಾಲೇಜಿನ ಪ್ರೋ|| ಉಮಾಶ್ರೀ, ನಿವೃತ್ತ ಪ್ರೋ|| ನಾಗರಾಜ್, ಸರ್ವಜ್ಞ ಬಿಇಎಡ್ ಕಾಲೇಜಿನ ಉಪನ್ಯಾಸಕಿ ಪವಿತ್ರ ರಾಮೇಗೌಡ, ಟಿಪಿಇಒ ವೆಂಕಟಸ್ವಾಮಿ, ಇಸಿಒಗಳಾದ ಕೋದಂಡಪ್ಪ, ಟಿ.ಆಂಜಪ್ಪ, ಸಿಆರ್ಪಿ ಚೆನ್ನಪ್ಪ, ಶಾಲೆಯ ಮುಖ್ಯ ಶಿಕ್ಷಕಿ ದಿವ್ಯಜಂಗಿಮಠ ಇದ್ದರು.

